ಟಿಬಿ ಡ್ಯಾಂ ಸೇತುವೆ ಬಳಿ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಲಾರಿ ಒಂದೇ ಕುಟುಂಬದ 6 ಮಂದಿ ಸಾವು.

*ಕೂಡ್ಲಗಿಯಿಂದ ಹುಲಿಗೆಮ್ಮನ ಜಾತ್ರೆಗೆ ತೆರಳುತ್ತಿದ್ದ ಟ್ರಾಕ್ಟರ್ ಗೆ ಲಾರಿ ಡಿಕ್ಕಿ!
ಕಿಷ್ಕಿಂಧವಾಣಿ ಸುದ್ದಿ
ಕೊಪ್ಪಳ: ಹಿಂಬದಿಯಿಂದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ವೊಂದು ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ 6 ಜನರು ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಗಡಿಯಲ್ಲಿನ ತುಂಗಭದ್ರಾ ಡ್ಯಾಂ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತರನ್ನು ಸಂಡೂರು ತಾಲೂಕಿನ ಯಶವಂತ ನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಕೆಂಚಪ್ಪ (35), ಮಹಾಂತೇಶ್ (18) ಭರತ್ (01), ಸವಿತಾ (12) ಮಾರೇಶ್ ಹಾಗೂ ಗೌರಮ್ಮ ಎಂಬವರು ಸಾವನ್ನಪ್ಪಿದ್ದಾರೆ.
ಇವೆರಲ್ಲರೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ.
ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಜರುಗಿದೆ. ಟ್ರಾಕ್ಟರ್‌ಗೆ ಹಿಂದಿನಿಂದ ಬಂದ ಟ್ಯಾಂಕರ್ ಲಾರಿ ಗುದ್ದಿದ ಪರಿಣಾಮ ನಿಯಂತ್ರಣ ತಪ್ಪಿದ ಎರಡೂ ವಾಹನಗಳು ಸೇತುವೆಯಿಂದ ಕೆಳಕ್ಕೆ ಉರುಳಿವೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಹೊಸಪೇಟೆ ಹಾಗೂ ಕೊಪ್ಪಳದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರು ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಘಟನಾ ಸ್ಥಳ ಹಾಗೂ ಹೊಸಪೇಟೆ ಆಸ್ಪತ್ರೆ ಶವಾಗಾರಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಕೆ.ಪಿ.ಮುರುಳಿಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಹಾಗೂ ಜನರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು

