88 ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಹಿಟ್ ಅಂಡ್ ರನ್ ಕೇಸ್ ನಡೆಸಿದ ವಾಹನ ಪತ್ತೆ !


*ವಲ್ಲಭಾಪೂರ ಹತ್ತಿರ ನಡೆದಿದ್ದ ಹಿಟ್ ಅಂಡ್ ರನ್.
*ಹಗರಿಬೊಮ್ಮನಹಳ್ಳಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ.
ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ತಾಲೂಕಿನ ವಲ್ಲಭಾಪುರ ಗ್ರಾಮದ ಸಮೀಪ ಮೇ 07, 2026 ರಂದು ಮಧ್ಯಾಹ್ನ ಸುಮಾರು 4 ಗಂಟೆ ವೇಳೆ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣವನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಹಳೆ ಊರಿನ ನಿವಾಸಿ ಮುಂಡರಗಿ ನಾಗರಾಜ್ ಅವರು ವಲ್ಲಭಾಪೂರ ಗ್ರಾಮದ ಹತ್ತಿರ
ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ವಾಹನ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಪಿ. ಲಮಾಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಂಡದಲ್ಲಿ ಪಿಎಸ್ಐ ಶ್ರೀ ಉಮಾಪತಿ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮಲ್ಲೇಶ್ ನಾಯ್ಕ್, ಸಿದ್ದೇಶ್, ಶಂಕರ್ ನಾಯ್ಕ್, ಭೋಜ್ಯ ನಾಯ್ಕ್, ಪರಶುರಾಮ್ ವೈ., ದೊಡ್ಡ ಬಸುರಾಜ್, ಯಮುನಪ್ಪ ಬಂಡೆ ಸೇರಿದಂತೆ ಹಲವರು ಕಾರ್ಯನಿರ್ವಹಿಸಿದರು.
ತಂಡವು ಸತತ 8 ದಿನಗಳ ಕಾಲ ನಿರಂತರ ಪರಿಶ್ರಮ ಪಟ್ಟು ಸುಮಾರು 88 ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಪಘಾತಕ್ಕೆ ಕಾರಣವಾದ ವಾಹನವನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ತನಿಖೆ ವೇಳೆ ಕೊಟ್ಟೂರು ತಿರುಮಲ ಟ್ರೇಡರ್ಸ್‌ಗೆ ಆ ವಾಹನ ಗೊಬ್ಬರ ತಂದಿದ್ದು ಗಮನಿಸಿ ವಾಹನವನ್ನು ಬಳ್ಳಾರಿಯಲ್ಲಿ ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಈ ಕರ್ತವ್ಯನಿಷ್ಠೆ ಹಾಗೂ ಶ್ರಮವನ್ನು ಮೆಚ್ಚಿದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹೊಸಪೇಟೆ ಹಾಗೂ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನೆ ಅವರು ವಿಶೇಷ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಗರಿಬೊಮ್ಮನಹಳ್ಳಿ ಸಾರ್ವಜನಿಕ ವಲಯದಲ್ಲಿಯೂ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅಪಘಾತ ಪ್ರಕರಣವನ್ನು ಭೇದಿಸಿದ ಪೊಲೀಸರ ತ್ವರಿತ ಕಾರ್ಯಾಚರಣೆಯನ್ನು ಇಲ್ಲಿನ ಜನರು ಪ್ರಶಂಸಿಸಿದ್ದಾರೆ.

