Breaking News
ವೆಂಕಟಗಿರಿ ವ್ಯಾಪ್ತಿಯ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರ ಪಟ್ಟ ಹಂಚಿಕೆ: ಶಾಸಕ ಗಾಲಿ ಜನಾರ್ದನ ರೆಡ್ಡಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವೆಂಕಟಗಿರಿ ಹೋಬಳಿಯ ಹಲವು ಗ್ರಾಮಗಳಲ್ಲಿ ಹಲವು ದಶಕಗಳಿಂದ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆ ಅಡಿ ಶೀಘ್ರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಹೇಳಿದರು.

ಅವರು ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿ, ಅಕ್ರಮ ಸಕ್ರಮ ಕಮಿಟಿಯ ಸಭೆಯಲ್ಲಿ ಪಾಲ್ಗೊಂಡು ವೆಂಕಟಗಿರಿ ಭಾಗದ ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ನಿಯಮಾನುಸಾರ ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಾನೂನಿನ ಅನ್ವಯ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ವಿತರಣೆಗೆ ಕಾನೂನು ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ರೈತರು ತಾವು ಇದುವರೆಗೂ ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಅಧಿಕಾರಿಗಳಿಂದ ಬಂದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಾಗುವಳಿ ಚೀಟಿ ಪಡೆಯಲು ಸಿದ್ದರಾಗುವಂತೆ ತಿಳಿಸಿದರು.

ಕುಡಿಯುವ ನೀರಿನ‌ ವ್ಯವಸ್ಥೆಗೆ ಸೂಚನೆ:ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು. ಹಣದ ಕೊರತೆ ಇದ್ದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಬೋರ್ವೆಲ್ ಕೊರೆಸುವ ಮತ್ತು ರೈತರಿಂದ ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅನುಕೂಲ ಕಲ್ಪಿಸಬೇಕೆಂದರು.

ಸಭೆಯಲ್ಲಿ ಗಂಗಾವತಿ ತಹಸೀಲ್ದಾರ್ ವಿಶ್ವನಾಥ್ ವಿಶ್ವನಾಥ್ ಮುರುಡಿ, ಕೊಪ್ಪಳ ತಹಸೀಲ್ದಾರ್ ಬಸವರಾಜ್, ಉಪತಹಶೀಲ್ದಾರ ಮಹಾಂತಗೌಡ ಪಾಟೀಲ್, ಶಿರಸ್ತೇದಾರ್ ಪ್ರಕಾಶ ನಾಯಕ,ಎಇಇ ಹೊನ್ನಪ್ಪ, ಇ.ಓ ರಾಮ್ ರೆಡ್ಡಿ, ಎ ಡಿ ಎಲ್ ಆರ್ ರಾಜಶೇಖರ್ ಹಾಗೂ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಗಲಕೋಟೆ ಉಪಚುನಾವಣೆ: ಗಡ್ಡದವರನ್ನು ಹಾಗೂ ಟೂರ್ ನವರನ್ನು ಹಣಿಯಬೇಕು ಸಿಸಿ ಪಾಟೀಲ್ ಆಕ್ಷೇಪಾರ್ಹ ಹೇಳಿಕೆ.ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್!

 

*ವೀರಶೈವ ಲಿಂಗಾಯತರು ಒಳಪಂಗಡ ಮರೆತು ಚರಂತಿಮಠ ಅವರನ್ನು ಬೆಂಬಲಿಸಲು ಪಾಟೀಲ್ ಕರೆ.

ಕಿಷ್ಕಿಂಧವಾಣಿ ಸುದ್ದಿ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಅವರು ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಹೇಳಿರುವ ಆಕ್ಷೇಪಾರ್ಹ ಮಾತುಗಳನ್ನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು ವ್ಯಾಪಕ ಟೀಕೆಗಳು ಕೇಳಿಬಂದಿವೆ. ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡುವಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸದೃಢ ಅಭ್ಯರ್ಥಿಯಾಗಿದ್ದು ವೀರಶೈವ ಲಿಂಗಾಯತ ಸಮಾಜದ ಒಳಪಂಗಡ ಮರೆತು ಎಲ್ಲರೂ ಅವರನ್ನು ಬೆಂಬಲಿಸಬೇಕು. ಜೊತೆಗೆ ಗಡ್ಡದವರನ್ನು ಮತ್ತು ಟೂರ್
ನವರನ್ನು ಹಣೆಯಲು ಅಥವಾ ತಡೆಹಿಡಿಯುವ ಶಕ್ತಿ ವೀರಣ್ಣ ಚರಂತಿ ಮಠ ಅವರಿಗಿದೆ. ಆದ್ದರಿಂದ ಇವರನ್ನು ಹಣೆಯಲು ಸರ್ವರೂ ಬಿಜೆಪಿ ಅಭ್ಯರ್ಥಿಯನ್ನು ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ಬೆಂಬಲಿಸಬೇಕು. ನಾನು ದಾವಣಗೆರೆಯ ಬಿಜೆಪಿ ಉಸ್ತುವಾರಿಯಾಗಿದ್ದರೂ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಹಿರಿಯರಾದ ಬಸವರಾಜ ಪಾಟೀಲ್ ಯತ್ನಾಳ್ ಸೂಚನೆ ಮೇರೆಗೆ ದಾವಣಗೆರೆಯಿಂದ ಇಲ್ಲಿಗೆ ಬಂದು ವೀರಶೈವ ಲಿಂಗಾಯತ ಸಮಾಜದ ಸಭೆಯನ್ನು ನಡೆಸುತ್ತಿದ್ದೇನೆ, ಆದ್ದರಿಂದ ಈ ಉಪಚುನಾವಣೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸಲು ಭ್ರಷ್ಟ ಸರ್ಕಾರವನ್ನು ಕಿತ್ತುಹೊಗೆಯಲು
ಒಳ್ಳೆಯ ಅವಕಾಶವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸ
ಬೇಕು ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಸಿ ಸಿ ಪಾಟೀಲ್ ಅವರ ವಿಡಿಯೋ ಹಾಕಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಂಸರನ್ನು ಮತ್ತು ಕುರುಬ ಸಮಾಜದವರನ್ನು ಪಾಟೀಲರು ಟೀಕೆ ಮಾಡಿದ್ದಾರೆ ಅವರಿಗೆ ಧಿಕ್ಕಾರ ಎನ್ನುವ ಸ್ಟೇಟಸ್ಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.

ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಹಳೆಯ ಚೈನ್ ಗಳಲ್ಲಿ ಮರುಜೋಡಣೆಗೆ ಆಕ್ಷೇಪ, ರೈತರಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿಗೆ ಮನವಿ!

*ಸಿಂಧನೂರು ಕಾರ್ಯಕ್ರಮಕ್ಕೆ ತೆರಳಿದ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಅದ್ಧೂರಿ ಸ್ವಾಗತ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಡ್ಯಾಂ ನ ಕ್ರಸ್ಟ್ ಗೇಟ್ಗಳನ್ನು ಹಳೆಯ ಚೈನುಗಳಲ್ಲಿ ಮರುಜೋಡಣೆ ಮಾಡುತ್ತಿದ್ದು ಇದರಿಂದ ಶಾಶ್ವತ ದುರಸ್ತಿ ಅನುಮಾನವಾಗಿದೆ. ಕೂಡಲೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಹೊಸ ಚೈನುಗಳ ಮೂಲಕ ಕ್ರಸ್ಟ್ ಗೇಟ್ಗಳನ್ನು ಮರುಜೊಡಣೆ ಮಾಡುವಂತೆ ಆದೇಶ ಮಾಡಬೇಕೆಂದು ರೈತರು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿಯವರು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಹೊಸಚೈನ್ ಹಾಕಲು ಸೂಚನೆ ನೀಡಲಾಗುತ್ತದೆ.

ಜೊತೆಗೆ ಎಲ್ಲಾ 32 ಕ್ರಸ್ಟ್‌ ಗೇಟ್ಗಳನ್ನು ಮರುಜೊಡನೆ ಮಾಡುವ ಸಂದರ್ಭದಲ್ಲಿ ಚೈನ್ ಗಳನ್ನು ಹೊಸದಾಗಿ ಅಳವಡಿಸಲು ಟೆಂಡರ್ ನಲ್ಲಿ ಅವಕಾಶವಿದ್ದರೆ ಕೂಡಲೇ ಅದನ್ನು ಮಾಡುವಂತೆ ತಿಳಿಸುವುದಾಗಿ ಅವರು ಹೇಳಿದರು.

ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಂಧನೂರಿಗೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಗಂಗಾವತಿಯಲ್ಲಿ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ

ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಸೇರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ.ಜೆಡಿಎಸ್ ಮುಖಂಡ ರಾಜುನಾಯಕ,ವೆಂಕಟೇಶ ಚಲುವಾದಿ,

ಬಿಜೆಪಿಯ ಮಾಜಿ ನಗರಸಭೆ ಸದಸ್ಯರಾದ ವಾಸುದೇವ ನವಲಿ,ನೀಲಕಂಠಪ್ಪ ಕಟ್ಟಿಮನಿ ಸೇರಿದಂತೆ ಸ್ಥಳೀಯ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು. ಉಪಸ್ಥಿತರಿದ್ದರು.

ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದಕ್ಕೆ ಸಿದ್ದರಾಮಯ್ಯನವರು ನಮ್ಮ ವಿರೋಧಿಸುತ್ತಿದ್ದಾರೆ:ಪೂಜ್ಯ ಪ್ರಣವಾನಂದ ಸ್ವಾಮೀಜಿ.

https://youtu.be/szFuAJuDMcc?si=bos6FtIEZlQdqxNo

 

 

*ಈಡಿಗ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ 750 ಕಿ.ಮೀ.ಬೆಂಗಳೂರು ಪಾದಯಾತ್ರೆ ಸ್ಪಂದಿಸದ ರಾಜ್ಯ ಸರಕಾರ ಸ್ವಾಮೀಜಿ ಆಕ್ರೋಶ.

*ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ತಂಗಡಗಿಯವರನ್ನು ಹೋಗದಂತೆ ಸಚಿವ ಮಧುಬಂಗಾರಪ್ಪ ತಡೆದು ಸಿಎಂ ಕಿವಿ ಚುಚ್ವುವ ಮಾತನಾಡಿದ್ದಾರೆ:ಆರೋಪ

*ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಇದ್ದಂತೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಲಿ ಎಂದು ಅತ್ಯಂತ ಹಿಂದುಳಿದ ಮಠಾಧೀಶರ ವೇದಿಕೆಯ ಪರವಾಗಿ ಬೆಂಬಲ ನೀಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ಹಾಗೂ ಆರ್ಯ ಈಡಿಗ ಸಮಾಜವನ್ನು ವಿರೋಧಿಸಲು ಪ್ರಮುಖ ಕಾರಣವಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಈಡಿಗ ಸಮಾಜದವರು ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಆರ್ಯ ಈಡಿಗರ ಸಮಾಜದ ಜಗದ್ಗುರು ಪೂಜ್ಯ ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ಗಂಗಾವತಿಯ ಸರ್ವೇಶ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆರ್ಯ ಈಡಿಗ ಸಮಾಜದವರು ರಾಜ್ಯದಲ್ಲಿ

ಶೇ. 95 ರಷ್ಟು ಅತ್ಯಂತ ಬಡತನದಲ್ಲಿದ್ದು ಈಡಿಗರ ಸಮಾಜವನ್ನು ಮೇಲೆತ್ತುವ ಸಲುವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಮತ್ತು ಕಲಬುರ್ಗಿಯಿಂದ ಬೆಂಗಳೂರಿಗೆ ಎರಡು ಬಾರಿ ಪಾದಯಾತ್ರೆ ಮಾಡಿ ಸರಕಾರದ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಕಲಬುರ್ಗಿಯಿಂದ 750 ಕಿಲೋಮೀಟರ್ ಬೆಂಗಳೂರು ಪಾದಯಾತ್ರೆ ನಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಮ್ಮ ಮನವಲಿಸಲು ಮುಂದೆ ಬಂದರು. ಆದರೆ ತಮ್ಮ ಬೇಡಿಕೆಗಳು ಮುಖ್ಯಮಂತ್ರಿಯವರು ಈಡೇರಿಸುವ ಭರವಸೆಗಳಾಗಿದ್ದು ತಮ್ಮ ನೇತೃತ್ವದಲ್ಲಿ ಆರ್ಯ ಈಡಿಗ ಸಮಾಜದ ಕೆಲ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳೊಂದಿಗೆ ನಡೆಸಲು ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿ ಅವರ ಮೂಲಕ ಹೇಳಿ ಕಳಿಸಲಾಗಿತ್ತು, ಆರ್ಯ ಈಡಿಗ ಸಮಾಜದವರೇ ಆಗಿರುವ ಸಚಿವ ಮಧು ಬಂಗಾರಪ್ಪ ಸೇರಿದಂತೆ ಆರು ಜನ ಎಂಎಲ್ಎಗಳು ಸ್ವಾಮೀಜಿಗಳನ್ನು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಬರಬಾರದು ಎಂದು ತಾಕೀತು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಯ ಈಡಿಗ ಸಮಾಜದ ಸಚಿವ ಮಧು ಬಂಗಾರಪ್ಪ ಮತ್ತು ಆರು ಜನ ಶಾಸಕರು ನಮ್ಮ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಮ್ಮ ಸಮಾಜದ ಆರು ಜನ ಶಾಸಕರಿಗೆ ಸರಿಯಾದ ಬುದ್ದಿ ಕಲಿಸಲು ಯೋಜನೆ ರೂಪಿಸಲಾಗಿದ್ದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಯ ಈಡಿಗ ಜಾಗೃತಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಾಗುತ್ತದೆ. ಏಪ್ರೀಲ್ ಮೊದಲ ವಾರದಲ್ಲಿ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ನಿವಾಸದ ಹತ್ತಿರ ಆರ್ಯ ಈಡಿಗರ ಶಕ್ತಿ ಸಮಾವೇಶ ನಡೆಸಿ ಲಕ್ಷಾಂತರ ಈಡಿಗ ಸಮಾಜದವರನ್ನು ಕರೆಸಿ, ಶಕ್ತಿಪ್ರದರ್ಶನ ಮಾಡಲಾಗುತ್ತದೆ.

ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಪೂಜ್ಯ ಆರೋಪ:

ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣ ಎನ್ನುವ ವ್ಯಕ್ತಿ ಇಡೀ ಸಮಾಜಕ್ಕೆ ಮಾರಕವಾಗುವ ಕೃತ್ಯಗಳನ್ನು ಮಾಡಿ ಬಸವಣ್ಣನವರಿಗೆ ಸಂಕಷ್ಟ ತಂದಿಟ್ಟಿದ್ದರು. ಅದರಂತೆ ಆರ್ಯ ಈಡಿಗ ಸಮಾಜದಲ್ಲಿ ರೆಡ್ಡಿ ಶ್ರೀನಿವಾಸ ಅವರು ಕೊಂಡಿ ಮಂಚಣ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ತಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ 2023ನೇ ಇಸ್ವಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಶಿವರಾಜ ತಂಗಡಗಿ ಅವರನ್ನು ಮಂತ್ರಿ ಮಾಡಲು ತಮ್ಮನ್ನು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಸಚಿವರನ್ನಾಗಿ ಮಾಡಿಸುವಾಗ ತಮ್ಮ ನೆರವನ್ನು ಪಡೆದುಕೊಂಡ ಶಿವರಾಜ್ ತಂಗಡಗಿ ಹಾಗೂ ರೆಡ್ಡಿ ಶ್ರೀನಿವಾಸ್ ಇದೀಗ ತಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಮತ್ತು ಗುತ್ತಿಗೆ ಕಾಮಗಾರಿ ಪಡೆಯಲು ಶಿವರಾಜ್ ತಂಗಡಗಿಯವರನ್ನು ಓಲೈಸಲು ರೆಡ್ಡಿ ಶ್ರೀನಿವಾಸ್ ಮುಂದಾಗಿದ್ದು ಇಂತಹ ಸಮಾಜ ದ್ರೋಹಿಗಳಿಗೆ ಮುಂಬರುವ ದಿನಗಳಲ್ಲಿ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಕಾಶಿವಿಶ್ವನಾಥ ಬಿಚ್ಚಾಲಿ ಮುಖಂಡರಾದ

ಯರಡೋಣಿ ನಾಗಪ್ಪ, ಪರಮೇಶ್ವರ,ವಿರೇಶ,ಶಾಮಣ್ಣ, ಅಂಬುಜಮ್ಮ,ಸುಭಾಷ್, ಆನಂದಬಾಬು,ಶ್ರವಣ ಸೇರಿ ಹಲವರಿದ್ದರು.

 

 

***

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ, ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನ ಮಟ್ಟು ಸೇರಿದಂತೆ ಕೆಲವು ಪ್ರಮುಖ ಆರ್ಯ ಈಡಿಗ ಸಮಾಜದ ಹಿರಿಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರುವ ಶಕ್ತಿ ಇದ್ದರೂ ಅವರು ವೇದಿಕೆ ಮುಂಭಾಗದಲ್ಲಿ ಒಂದು ತರಹ ವೇದಿಕೆ ಹಿಂಭಾಗದಲ್ಲಿ ಒಂದು ತರ ಇರುತ್ತಾರೆ. ಆದ್ದರಿಂದ ಅವರ ಹತ್ತಿರ ಸಮಾಜದ ಬೇಡಿಕೆಗಳ ಕುರಿತು ತಾವು ಚರ್ಚೆ ಮಾಡಿಲ್ಲ. ಬಿ.ಕೆ.ಹರಿಪ್ರಸಾದ ಅವರಿಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ. ದಿನೇಶ ಅಮ್ಮಿನಮಟ್ಟು ಅವರ ಹೆಸರು ವಿಧಾನಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಆಗಿದ್ದರೂ ಯಾಕೆ ಆ ಸ್ಥಾನ ಬೇರೆಯವರಿಗೆ ಯಾಕೆ ಹೋಯಿತು.

ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಕೋಟ ಶ್ರೀನಿವಾಸ ಪೂಜಾರಿ ಸುನಿಲ್ ಕುಮಾರ್ ಸೇರಿದಂತೆ ಪ್ರಮುಖರ ವಿರುದ್ಧ ತಾವು ಹೋರಾಟ ಮಾಡಿದ್ದು ಆರ್ಯ ಈಡಿಗ ಸಮಾಜಕ್ಕಾಗಿ ನಿರಂತರ ಹೋರಾಟ ಮಾಡಲಾಗುತ್ತದೆ.

-ಪೂಜ್ಯ ಪ್ರಣವಾನಂದ ಸ್ವಾಮೀಜಿ.

ಬಾಗಲಕೋಟೆಯ ಎಲ್ಲಾ ಸಮುದಾಯಗಳ ಬೆಂಬಲ ಚರಂತಿಮಠ ಅವರಿಗಿದೆ :ಬಿ ಶ್ರೀರಾಮುಲು.

*ನೇಕಾರ ಮತ್ತು ಗುಜರಾತ್ ಸಮುದಾಯದವರ ಜತೆ ಸಭೆ.

ಕಿಷ್ಕಿಂಧವಾಣಿ ಸುದ್ದಿ

ಬಾಗಲಕೋಟೆ,: ಬಾಗಲಕೋಟೆಯ ಎಲ್ಲಾ ಸಮುದಾಯಗಳ ಬೆಂಬಲ ಆಶೀರ್ವಾದ ಚರಂತಿಮಠ ಅವರಿಗೆ ಇದೆ. ಆದ್ದರಿಂದ ಉಪಚುನಾವಣೆಯಲ್ಲಿ ಅವರು ಅತ್ಯಧಿಕ ಮತಗಳಿಂದ ಗೆಲುವು ಪಡೆಯಲಿದ್ದಾರೆ. ಕಾಂಗ್ರೆಸ್ ನವರ ಕಪಟ ನಾಟಕ ಈ ಉಪಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಿ. ಶ್ರೀರಾಮುಲು ಹೇಳಿದರು.

ಅವರು ಬಾಗಲಕೋಟೆ ನಗರದಲ್ಲಿ

ನೇಕಾರ ಸಮುದಾಯ ಹಾಗೂ ಗುಜರಾತಿ ಸಮುದಾಯದ ಪ್ರಮುಖರ ಜೊತೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕೊಡ ತುಂಬಿದೆ ಗ್ಯಾರಂಟಿ ನೆಪದಲ್ಲಿ ಸುಳ್ಳು ಯೋಜನೆಯನ್ನು ಪ್ರಕಟಿಸಿ ಜನರನ್ನು ಮರಳು ಮಾಡಿ ಗೆದ್ದು ಸರ್ಕಾರ ರಚನೆ ಮಾಡಿದ ಕಾಂಗ್ರೆಸ್ ಪಕ್ಷ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಿತ್ಯವೂ ಕಾಳಗವಾಡುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನಸಾಮಾನ್ಯರ ಕಷ್ಟವನ್ನು ಯಾರೂ ಕೇಳುತ್ತಿಲ್ಲ,

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ರಾಜ್ಯದ ಜನರು ಬುದ್ಧಿ ಹೇಳುವ ಚುನಾವಣೆಗಳಾಗಿದ್ದು ಎರಡು ಕಡೆ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಪಡೆಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್, ಅಭ್ಯರ್ಥಿ ವೀರಣ್ಣ ಚರಂತಿ ಮಠ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡೆ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು….

ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ವರಿಷ್ಠರ ಒತ್ತಡವಿದೆ:ಬಿ.ಶ್ರೀರಾಮುಲು.

*ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕುರ್ಚಿ ಗುದ್ದಾಟ, ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ.

ಕಿಷ್ಕಿಂಧವಾಣಿ ಸುದ್ದಿ

ಮಸ್ಕಿ: 2028 ಇಸ್ವಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಸ್ಕಿಯ ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಕ್ಷದ ಅಂತಿಮ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಅವರು ಮಸ್ಕಿ

ಪಟ್ಟಣದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ನೆಕ್ಕುಂಟಿ ಇವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಡುವಿನ ಕುರ್ಚಿ ಗುದ್ದಾಟದಿಂದ ಅಭಿವೃದ್ಧಿ ನಿಲುಗಡೆಯಾಗಿದ್ದು ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಮತದಾರ ಬಿಜೆಪಿ ಅಭ್ಯರ್ಥಿಗಳ ಪರ ಇದ್ದು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಲಿದೆ.

ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಲಿದೆ.

ರಾಜ್ಯ ಸರ್ಕಾರದ ದುರ್ಬಲ ಆಡಳಿತ ಹಾಗೂ ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೆಚ್ಚಿಸಿರುವುದರಿಂದ ಜನರು ಬೇಸತ್ತು ಹೋಗಿದ್ದು

ಇದರ ಪರಿಣಾಮವಾಗಿ ಉಪಚುನಾವಣೆಯಲ್ಲಿ ಬಿಜೆಪಿ ಪರ ಮತದಾನ ಹೆಚ್ಚಾಗಲಿದೆ.

ತುಂಗಭದ್ರಾ ಎಡದಂಡೆ ಕಾಲುವೆ ವಿಚಾರದಲ್ಲಿಯೂ ಸರ್ಕಾರ ಈ ಭಾಗದ ರೈತರೊಂದಿಗೆ ಚೆಲಾಟವಾಡುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಕಾಲುವೆಗೆ ನೀರು ಬಿಡಲಾಗಿದ್ದು, ಪರಿಣಾಮವಾಗಿ ಕಾಲುವೆ ಹಾನಿಗೊಳಗೊಂಡಿದೆ.

ಕೂಡಲೇ ಕಾಲುವೆಯನ್ನು ದುರಸ್ತಿ ಮಾಡಿ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕು.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ವರಿಷ್ಠರು ತಮಗೆ ನೀಡಿದ್ದು, 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾಗದಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ನೆಕ್ಕುಂಟಿ, ಆರ್.ಕೆ. ನಾಯಕ, ಶರಣು, ಬಸವರಾಜ ಹಾಲ್ದವರ್ ಸೇರಿ ಬಿಜೆಪಿ ಮುಖಂಡರು ಹಾಗೂ ವಾಲ್ಮೀಕಿ ನಾಯಕ ಸಮಾಜದವರಿದ್ದರು.

ಹೊಸ ಜಾಹೀರಾತು ನೀತಿ:ಜಿಲ್ಲಾ ಮಟ್ಟದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ಎಂಎಲ್ಸಿ ಕೆ. ಶಿವಕುಮಾರ.

* ವಿಧಾನ ಪರಿಷತ್ತಿನ ಅಧಿವೇಶದಲ್ಲಿ ಜಾಹೀರಾತು ನೀತಿ ಕುರಿತು ಪ್ರಸ್ತಾಪ.

* ಹೊಸ ಜಾಹೀರಾತು ನೀತಿಯಲ್ಲಿ ನ್ಯೂನ್ಯತೆಗಳಿದ್ದು ಸರಿಪಡಿಸುವಂತೆ ಸಲಹೆ.

* ನಿವೃತ್ತಿ ಹೊಂದುವ ಪತ್ರಕರ್ತರಿಗೆ ಮಾಶಾಸನ ಸರಳೀಕರಣಕ್ಕೆ ಮನವಿ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ 2026 ನೇ ಸಾಲಿನ ನೂತನ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು,ಈ ಜಾಹೀರಾತಿನಲ್ಲಿ ಇರುವ ಕೆಲ ಅಂಶಗಳಿಂದ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿರುವ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡುವ ಮೊದಲು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಅವರು ಮಂಗಳವಾರ ವಿಧಾನಪರಿಷತ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದರು.

ಪ್ರಸ್ತುತ ನೂತನ ಜಾಹೀರಾತು ನೀತಿ ಸ್ವಾಗತಾರ್ಹವಾಗಿದ್ದರೂ ಇದರಲ್ಲಿ ಕೆಲವು ಅಂಶಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಈ ನೀತಿಗಳ ಕುರಿತು ಪರಿಶೀಲನೆ ಮಾಡಬೇಕು. ಜೊತೆಗೆ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಮಾಡಿದ ನಂತರ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ತಾಲೂಕ ಮಠದ ಪತ್ರಿಕೆಗಳಿಗೆ ನೆರವಾಗುವಂತಹ ನೀತಿಯನ್ನು ಅನುಷ್ಠಾನ ಮಾಡಬೇಕು. ಜೊತೆಗೆ ನಿವೃತ್ತಿಯಾಗುವ ಹಿರಿಯ ಪತ್ರಕರ್ತರಿಗೆ ರಾಜ್ಯ ಸರ್ಕಾರ ನೀಡುವ ಮಾಶಾಸನ ಪಡೆಯಲು ಅತ್ಯಂತ ಕಠಿಣವಾದ ನಿಯಮಗಳಿದ್ದು ಅವುಗಳನ್ನು ಸರಳೀಕರಣ ಮಾಡುವ ಮೂಲಕ ಸೇವಾ ಭದ್ರತೆ ಇಲ್ಲದ ಪತ್ರಕರ್ತರಿಗೆ ನೆರವಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ದುರಂಧರ್ ದಿ ರಿವೆಂಜ್ ಸಿನೆಮಾ ವೀಕ್ಷಿಸಿದ ಗಾಲಿ ಜನಾರ್ದನ ರೆಡ್ಡಿ ಮೆಚ್ಚುಗೆ.

*ಯುವಜನರಲ್ಲಿ ದೇಶದ ಇತಿಹಾಸ ಮತ್ತು ದೇಶಭಕ್ತಿ ಮೂಡಿಸುವ ಚಿತ್ರವಾಗಿದೆ.

*ವಿಶ್ವದಾದ್ಯಂತ ಖ್ಯಾತಿ ಪಡೆದ “ದುರಂಧರ್ – ದಿ ರಿವೆಂಜ್” ಚಿತ್ರವನ್ನು ಬೆಂಗಳೂರಿನ ಒರಾಯಿನ್ ಮಾಲ್‌ನಲ್ಲಿ ರೆಡ್ಡಿ ವೀಕ್ಷಣೆ.

*ಚಿತ್ರೀಕರಣ ಮತ್ತು ತಾಂತ್ರಿಕ ಬಳಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಗಂಗಾವತಿಯ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಗಾಲಿ ಜನಾರ್ದನ್ ರೆಡ್ಡಿ ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ದುರಂದರ್ ದಿ ರಿಮೆಂಜ್ ಚಲನಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಿಷ್ಕಿಂಧವಾಣಿ ಜತೆ ಅವರು ಮಾತನಾಡಿ, ಚಿತ್ರ ನಿಜವಾಗಿಯೂ ಅದ್ಭುತ ಅನುಭವ ನೀಡಿತು. ತಾಂತ್ರಿಕವಾಗಿ ಚಿತ್ರವು ಉನ್ನತ ಮಟ್ಟದಲ್ಲಿದೆ. ಛಾಯಾಗ್ರಹಣವು ಚಿತ್ರದ ಗಂಭೀರ ಮತ್ತು ಕರಾಳತೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ನಾಯಕ ರಣವೀರ್ ಸಿಂಗ್ ಪಾತ್ರವು ಮೆಚ್ಚುವಂತಿದೆ ಅವರ ನೋಟ ಮತ್ತು ಆಕ್ರೋಶ ಪಾತ್ರಕ್ಕೆ ಜೀವ ತುಂಬಿದೆ.

ದೇಶಭಕ್ತಿ ಭಾವನೆಯ ದೃಶ್ಯಗಳು, ಗಡಿಯಲ್ಲಿ ಕಾಯುವ ಸೈನಿಕರಿರಲಿ ಅಥವಾ ದೇಶದ ಒಳಗಿರುವ ದೇಶಪ್ರೇಮಿಗಳಿರಲಿ, ರಾಷ್ಟ್ರದ ರಕ್ಷಣೆಗಾಗಿ ನಿಲ್ಲುವ ಪ್ರತಿಯೊಬ್ಬನೂ ‘ದುರಂಧ‌ರ್’ ಎಂಬ ಸಂದೇಶವನ್ನು ಈ ಚಿತ್ರ ಸಾರುತ್ತದೆ. ಶತ್ರು ದೇಶಗಳ ಕುತಂತ್ರವನ್ನು ಮೆಟ್ಟಿ ನಿಲ್ಲುವ ನಾಯಕನ ಸಾಹಸಗಳು ಪ್ರೇಕ್ಷಕರಲ್ಲಿ ಹೆಮ್ಮೆಯ ಭಾವ ಮೂಡಿಸುತ್ತವೆ. ಈ ಸಿನಿಮಾ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕೆಂದು ಬಯಸುತ್ತೇನೆ.

ಚಿತ್ರತಂಡದ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು ತಿಳಿಸುತ್ತೇನೆ ಎಂದಿದ್ದಾರೆ.

ಜನರನ್ನು ಬೆಸೆಯಲು ಪ್ರತಿ ಧರ್ಮದಲ್ಲಿ ಹಬ್ಬಗಳು ಇವೆ:ಗಾಲಿ ಜನಾರ್ದನ ರೆಡ್ಡಿ

* ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಪ್ರತಿ ಧರ್ಮದಲ್ಲೂ ಜನರನ್ನು ಪರಸ್ಪರ ಬೆಸೆಯಲು ಹಬ್ಬಗಳು ಇವೆ, ಆದ್ದರಿಂದ ಜಾತಿ,ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಸಲ್ಲದು, ಪವಿತ್ರ ರಂಜಾನ್ ಐಕ್ಯತೆಯನ್ನು ಹೇಳುತ್ತದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿ ನಿಂದಲೂ ಧರ್ಮ,ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ, ಅಭಿವೃದ್ಧಿ ಮತ್ತು ಐಕ್ಯತೆ ಹೆಸರಿನಲ್ಲಿ ರಾಜಕೀಯ ಮಾಡಿ ಬಳ್ಳಾರಿ ಮತ್ತು ಗಂಗಾವತಿಯನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮುಸ್ಲಿಂ ಪ್ರತಿಯೊಬ್ಬರು ದೇಶಭಕ್ತರಾಗಿ ದೇಶ,ಧರ್ಮಕ್ಕೆ ಮೊದಲು ಆದ್ಯತೆ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿ ಮತ್ತು ವೈಯಕ್ತಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗುರುಗಳಾದ ಕಮಲ್ ಮುಸ್ತಾಪ್ ಹಾಗೂ ಈದ್ಗಾ ಕಮೀಟಿಯ ಪದಾಧಿಕಾರಿಗಳು ಮುಸ್ಲಿಂ ಸಮಾಜದ ಗುರುಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ಸ್ಥಳಕ್ಕೆ ಸಚಿವ ತಂಗಡಗಿ ಭೇಟಿ.

*ನಿರ್ಲಕ್ಷ್ಯಕ್ಕೆ ತೋರಿದವರನ್ನು ಸಸ್ಪೆಂಡ್ ಮಾಡಲು ಸೂಚನೆ

*ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರದ ವ್ಯವಸ್ಥೆಗೆ ಸೂಚನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸಮೀಪದ ಬಸಾಪುರದ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ, ಒಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಹಾಗೂ ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸುದ್ದಿಗಾರರೊಂದಿಗೆ ಮಾತನಾಡಿ ಬಸ್ಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಳೆದ ಒಂದು ತಿಂಗಳಿನಿಂದ ಆಗುತ್ತಿರುವ ಬಗ್ಗೆ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿರುವ ಕುರಿತು ರೈತರು ತಿಳಿಸಿದ್ದಾರೆ. ನಿರ್ಲಕ್ಷ ತೋರಿದ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡು ಸಸ್ಪೆಂಡ್ ಮಾಡಲಾಗುತ್ತದೆ. 15 ದಿನದೊಳಗೆ ಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ನೀರು ನುಗ್ಗಿ ನಷ್ಟ ಅನುಭವಿಸಿರುವ ಬಸಾಪುರ,ಹರ್ಲಾಲಪುರ, ತಿರುಮಲಾಪುರ ರೈತರಿಗೆ ಸೂಕ್ತ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ರೈತರ ಹಿತ ಮರೆಯಲು ಸಾಧ್ಯವಿಲ್ಲ ರೈತರಿಗೆ ನಮ್ಮ ಸರ್ಕಾರ ಸದಾ ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತರು ಮತ್ತು ರೆಸಾರ್ಟ್ ಮಾಲೀಕರು ಸಚಿವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಹಿಟ್ನಾಳ, ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಸೇರಿದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳೀಯ ರಾಜಕೀಯ ಮುಖಂಡರು ಇದ್ದರು.