Breaking News
ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ತುಂಬಾ ಕೇಸರಿ ಕಲಿಗಳ ಕಲರವ!

*ಹನುಮಜಯಂತಿಯಂದು ಹನುಮಮಾಲಾಧಾರಿಗಳಿಂದ ಇರುಮುಡಿ ವಿಸರ್ಜನೆ.

* ಅಂಜನಾದ್ರಿಯಲ್ಲಿ ಹನುಮ ಜಯಂತಿ: ಪವಮಾನ ಹೋಮ, ಯಶಸ್ವಿ ಧಾರ್ಮಿಕ ಕಾರ್ಯಕ್ರಮಗಳು

* ರಾಜ್ಯದ ವಿವಿಧತೆಗಳಿಂದ ಹನುಮ ಮಾಲಾಧಾರಿಗಳಿಂದ ಅಂಜನಾದ್ರಿಯ ದರ್ಶನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಶ್ರೀ ರಾಮನ ಬಂಟ ಹನುಮಂತ ಜನಿಸಿನ ದಿನ ಹನುಮ ಜಯಂತಿ ಆಚರಣೆಯನ್ನು ದೇಶಾದ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಲಾಗುತ್ತದೆ. ಹನುಮ ಭಕ್ತರು ವಿಶೇಷವಾಗಿ ಹನುಮಮಾಲೆ ಧರಿಸಿ ಹನುಮ ಜಯಂತಿಯಂದು ಇರುಮುಡಿ ವಿಸರ್ಜನೆ ಮತ್ತುಮಾಲಾ ವಿಸರ್ಜನೆಯನ್ನು ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಮಾಡುವುದು ಸಾಂಪ್ರದಾಯವಾಗಿದೆ. ಗುರುವಾರ ಹನುಮ ಜಯಂತಿಯಂದು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರು ತಮ್ಮ ಹನುಮ ಮಾಲೆಯನ್ನು ಇರುಮುಡಿಯನ್ನು ಅಂಜನಾದ್ರಿಯಲ್ಲಿ ವಿಸರ್ಜಿಸಿ ಹೋಮ,ಹವನದಲ್ಲಿ ಪಾಲ್ಗೊಂಡು ಪುನೀತರಾದರು. ಪೊಲೀಸ್ ಇಲಾಖೆಯ ಮಾಹಿತಿಯಂತೆ50,000 ಕ್ಕೂ ಹೆಚ್ಚು ಹನುಮ ಭಕ್ತರು ಅಂಜನಾದ್ರಿಯಲ್ಲಿ ಸೇರಿ ಧಾರ್ಮಿಕ ಆಚರಣೆಯ ಮೂಲಕ ಹನುಮ ಮಾಲೆಯ ವೃತಾಚರಣೆ ಅಂತಿಮಗೊಳಿಸಿದರು. ದೇವಸ್ಥಾನ ಕಮಿಟಿಯವರು ಹನುಮ ಮಾಲೆ ವಿಸರ್ಜನೆ ಮತ್ತು ಇರುಮುಡಿ ವಿಸರ್ಜನೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಗಳನ್ನು ವ್ಯವಸ್ಥೆ ಮಾಡಿ ಪವಮಾನ ಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದ್ದರು.

ಹನುಮ ಜಯಂತಿಯಂದು ಶ್ರೀ ಆಂಜನೇಯನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಶ್ರೀ ಆಂಜನೇಯನ ದೇವಸ್ಥಾನ ಹಾಗೂ ಬೆಟ್ಟಕ್ಕೆ ದೀಪಾಲಂಕಾರದ ಮೂಲಕ ಶೃಂಗರಿಸಲಾಗಿತ್ತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರ ವಾಹನಗಳ ನಿಲುಗಡೆಗೆ ಮತ್ತು ಸಂಚಾರಿ ವ್ಯವಸ್ಥೆಯನ್ನು ಗ್ರಾಮೀಣ ಪೊಲೀಸರು ವ್ಯವಸ್ಥಿತವಾಗಿ ಮಾಡಿದ್ದರು.

ಹನುಮ ಜಯಂತಿಯಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಹನುಮ ಭಕ್ತರು ಅಂಜನಾದ್ರಿಯನ್ನ ಹತ್ತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದಕ್ಕೆ ಸಿದ್ದರಾಮಯ್ಯನವರು ನಮ್ಮ ವಿರೋಧಿಸುತ್ತಿದ್ದಾರೆ:ಪೂಜ್ಯ ಪ್ರಣವಾನಂದ ಸ್ವಾಮೀಜಿ.

https://youtu.be/szFuAJuDMcc?si=bos6FtIEZlQdqxNo

 

 

*ಈಡಿಗ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ 750 ಕಿ.ಮೀ.ಬೆಂಗಳೂರು ಪಾದಯಾತ್ರೆ ಸ್ಪಂದಿಸದ ರಾಜ್ಯ ಸರಕಾರ ಸ್ವಾಮೀಜಿ ಆಕ್ರೋಶ.

*ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ತಂಗಡಗಿಯವರನ್ನು ಹೋಗದಂತೆ ಸಚಿವ ಮಧುಬಂಗಾರಪ್ಪ ತಡೆದು ಸಿಎಂ ಕಿವಿ ಚುಚ್ವುವ ಮಾತನಾಡಿದ್ದಾರೆ:ಆರೋಪ

*ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಇದ್ದಂತೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಲಿ ಎಂದು ಅತ್ಯಂತ ಹಿಂದುಳಿದ ಮಠಾಧೀಶರ ವೇದಿಕೆಯ ಪರವಾಗಿ ಬೆಂಬಲ ನೀಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ಹಾಗೂ ಆರ್ಯ ಈಡಿಗ ಸಮಾಜವನ್ನು ವಿರೋಧಿಸಲು ಪ್ರಮುಖ ಕಾರಣವಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಈಡಿಗ ಸಮಾಜದವರು ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಆರ್ಯ ಈಡಿಗರ ಸಮಾಜದ ಜಗದ್ಗುರು ಪೂಜ್ಯ ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ಗಂಗಾವತಿಯ ಸರ್ವೇಶ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆರ್ಯ ಈಡಿಗ ಸಮಾಜದವರು ರಾಜ್ಯದಲ್ಲಿ

ಶೇ. 95 ರಷ್ಟು ಅತ್ಯಂತ ಬಡತನದಲ್ಲಿದ್ದು ಈಡಿಗರ ಸಮಾಜವನ್ನು ಮೇಲೆತ್ತುವ ಸಲುವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಮತ್ತು ಕಲಬುರ್ಗಿಯಿಂದ ಬೆಂಗಳೂರಿಗೆ ಎರಡು ಬಾರಿ ಪಾದಯಾತ್ರೆ ಮಾಡಿ ಸರಕಾರದ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಕಲಬುರ್ಗಿಯಿಂದ 750 ಕಿಲೋಮೀಟರ್ ಬೆಂಗಳೂರು ಪಾದಯಾತ್ರೆ ನಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಮ್ಮ ಮನವಲಿಸಲು ಮುಂದೆ ಬಂದರು. ಆದರೆ ತಮ್ಮ ಬೇಡಿಕೆಗಳು ಮುಖ್ಯಮಂತ್ರಿಯವರು ಈಡೇರಿಸುವ ಭರವಸೆಗಳಾಗಿದ್ದು ತಮ್ಮ ನೇತೃತ್ವದಲ್ಲಿ ಆರ್ಯ ಈಡಿಗ ಸಮಾಜದ ಕೆಲ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳೊಂದಿಗೆ ನಡೆಸಲು ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿ ಅವರ ಮೂಲಕ ಹೇಳಿ ಕಳಿಸಲಾಗಿತ್ತು, ಆರ್ಯ ಈಡಿಗ ಸಮಾಜದವರೇ ಆಗಿರುವ ಸಚಿವ ಮಧು ಬಂಗಾರಪ್ಪ ಸೇರಿದಂತೆ ಆರು ಜನ ಎಂಎಲ್ಎಗಳು ಸ್ವಾಮೀಜಿಗಳನ್ನು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಬರಬಾರದು ಎಂದು ತಾಕೀತು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಯ ಈಡಿಗ ಸಮಾಜದ ಸಚಿವ ಮಧು ಬಂಗಾರಪ್ಪ ಮತ್ತು ಆರು ಜನ ಶಾಸಕರು ನಮ್ಮ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಮ್ಮ ಸಮಾಜದ ಆರು ಜನ ಶಾಸಕರಿಗೆ ಸರಿಯಾದ ಬುದ್ದಿ ಕಲಿಸಲು ಯೋಜನೆ ರೂಪಿಸಲಾಗಿದ್ದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಯ ಈಡಿಗ ಜಾಗೃತಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಾಗುತ್ತದೆ. ಏಪ್ರೀಲ್ ಮೊದಲ ವಾರದಲ್ಲಿ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ನಿವಾಸದ ಹತ್ತಿರ ಆರ್ಯ ಈಡಿಗರ ಶಕ್ತಿ ಸಮಾವೇಶ ನಡೆಸಿ ಲಕ್ಷಾಂತರ ಈಡಿಗ ಸಮಾಜದವರನ್ನು ಕರೆಸಿ, ಶಕ್ತಿಪ್ರದರ್ಶನ ಮಾಡಲಾಗುತ್ತದೆ.

ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಪೂಜ್ಯ ಆರೋಪ:

ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣ ಎನ್ನುವ ವ್ಯಕ್ತಿ ಇಡೀ ಸಮಾಜಕ್ಕೆ ಮಾರಕವಾಗುವ ಕೃತ್ಯಗಳನ್ನು ಮಾಡಿ ಬಸವಣ್ಣನವರಿಗೆ ಸಂಕಷ್ಟ ತಂದಿಟ್ಟಿದ್ದರು. ಅದರಂತೆ ಆರ್ಯ ಈಡಿಗ ಸಮಾಜದಲ್ಲಿ ರೆಡ್ಡಿ ಶ್ರೀನಿವಾಸ ಅವರು ಕೊಂಡಿ ಮಂಚಣ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ತಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ 2023ನೇ ಇಸ್ವಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಶಿವರಾಜ ತಂಗಡಗಿ ಅವರನ್ನು ಮಂತ್ರಿ ಮಾಡಲು ತಮ್ಮನ್ನು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಸಚಿವರನ್ನಾಗಿ ಮಾಡಿಸುವಾಗ ತಮ್ಮ ನೆರವನ್ನು ಪಡೆದುಕೊಂಡ ಶಿವರಾಜ್ ತಂಗಡಗಿ ಹಾಗೂ ರೆಡ್ಡಿ ಶ್ರೀನಿವಾಸ್ ಇದೀಗ ತಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಮತ್ತು ಗುತ್ತಿಗೆ ಕಾಮಗಾರಿ ಪಡೆಯಲು ಶಿವರಾಜ್ ತಂಗಡಗಿಯವರನ್ನು ಓಲೈಸಲು ರೆಡ್ಡಿ ಶ್ರೀನಿವಾಸ್ ಮುಂದಾಗಿದ್ದು ಇಂತಹ ಸಮಾಜ ದ್ರೋಹಿಗಳಿಗೆ ಮುಂಬರುವ ದಿನಗಳಲ್ಲಿ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಕಾಶಿವಿಶ್ವನಾಥ ಬಿಚ್ಚಾಲಿ ಮುಖಂಡರಾದ

ಯರಡೋಣಿ ನಾಗಪ್ಪ, ಪರಮೇಶ್ವರ,ವಿರೇಶ,ಶಾಮಣ್ಣ, ಅಂಬುಜಮ್ಮ,ಸುಭಾಷ್, ಆನಂದಬಾಬು,ಶ್ರವಣ ಸೇರಿ ಹಲವರಿದ್ದರು.

 

 

***

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ, ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನ ಮಟ್ಟು ಸೇರಿದಂತೆ ಕೆಲವು ಪ್ರಮುಖ ಆರ್ಯ ಈಡಿಗ ಸಮಾಜದ ಹಿರಿಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರುವ ಶಕ್ತಿ ಇದ್ದರೂ ಅವರು ವೇದಿಕೆ ಮುಂಭಾಗದಲ್ಲಿ ಒಂದು ತರಹ ವೇದಿಕೆ ಹಿಂಭಾಗದಲ್ಲಿ ಒಂದು ತರ ಇರುತ್ತಾರೆ. ಆದ್ದರಿಂದ ಅವರ ಹತ್ತಿರ ಸಮಾಜದ ಬೇಡಿಕೆಗಳ ಕುರಿತು ತಾವು ಚರ್ಚೆ ಮಾಡಿಲ್ಲ. ಬಿ.ಕೆ.ಹರಿಪ್ರಸಾದ ಅವರಿಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ. ದಿನೇಶ ಅಮ್ಮಿನಮಟ್ಟು ಅವರ ಹೆಸರು ವಿಧಾನಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಆಗಿದ್ದರೂ ಯಾಕೆ ಆ ಸ್ಥಾನ ಬೇರೆಯವರಿಗೆ ಯಾಕೆ ಹೋಯಿತು.

ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಕೋಟ ಶ್ರೀನಿವಾಸ ಪೂಜಾರಿ ಸುನಿಲ್ ಕುಮಾರ್ ಸೇರಿದಂತೆ ಪ್ರಮುಖರ ವಿರುದ್ಧ ತಾವು ಹೋರಾಟ ಮಾಡಿದ್ದು ಆರ್ಯ ಈಡಿಗ ಸಮಾಜಕ್ಕಾಗಿ ನಿರಂತರ ಹೋರಾಟ ಮಾಡಲಾಗುತ್ತದೆ.

-ಪೂಜ್ಯ ಪ್ರಣವಾನಂದ ಸ್ವಾಮೀಜಿ.

ಜನರನ್ನು ಬೆಸೆಯಲು ಪ್ರತಿ ಧರ್ಮದಲ್ಲಿ ಹಬ್ಬಗಳು ಇವೆ:ಗಾಲಿ ಜನಾರ್ದನ ರೆಡ್ಡಿ

* ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಪ್ರತಿ ಧರ್ಮದಲ್ಲೂ ಜನರನ್ನು ಪರಸ್ಪರ ಬೆಸೆಯಲು ಹಬ್ಬಗಳು ಇವೆ, ಆದ್ದರಿಂದ ಜಾತಿ,ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಸಲ್ಲದು, ಪವಿತ್ರ ರಂಜಾನ್ ಐಕ್ಯತೆಯನ್ನು ಹೇಳುತ್ತದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿ ನಿಂದಲೂ ಧರ್ಮ,ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ, ಅಭಿವೃದ್ಧಿ ಮತ್ತು ಐಕ್ಯತೆ ಹೆಸರಿನಲ್ಲಿ ರಾಜಕೀಯ ಮಾಡಿ ಬಳ್ಳಾರಿ ಮತ್ತು ಗಂಗಾವತಿಯನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮುಸ್ಲಿಂ ಪ್ರತಿಯೊಬ್ಬರು ದೇಶಭಕ್ತರಾಗಿ ದೇಶ,ಧರ್ಮಕ್ಕೆ ಮೊದಲು ಆದ್ಯತೆ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿ ಮತ್ತು ವೈಯಕ್ತಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗುರುಗಳಾದ ಕಮಲ್ ಮುಸ್ತಾಪ್ ಹಾಗೂ ಈದ್ಗಾ ಕಮೀಟಿಯ ಪದಾಧಿಕಾರಿಗಳು ಮುಸ್ಲಿಂ ಸಮಾಜದ ಗುರುಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಹೊಸ ವರ್ಷದ ಯುಗಾದಿ ಮುಳ್ಳಿನ ಪವಾಡ!

 

*ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಮಹೋತ್ಸವ.
*ಶತಮಾನಗಳಿಂದ ವೈಶಿಷ್ಟ್ಯಪೂರ್ಣ
ಯುಗಾದಿ ಆಚರಣೆ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹೊಸ ವರ್ಷ ಯುಗಾದಿ ಹಬ್ಬ ಕನ್ನಡ ನಾಡಿನದ್ಯಂತ ವೈಶಿಷ್ಟ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ.
ಆದರೆ ತುಂಗಭದ್ರಾ ಡ್ಯಾಂ ನಿರ್ಮಾಣ ನಂತರ ಡ್ಯಾಮಿನ ಸುತ್ತಲಿರುವ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಹಗರಿಬೊಮ್ಮನಹಳ್ಳಿ, ಹಡಗಲಿ,ಕೊಪ್ಪಳ ತಾಲೂಕು ಸೇರಿ ಇತರೆ ಭಾಗದಲ್ಲಿ ಯುಗಾದಿ ಹಬ್ಬವನ್ನು ಯುಗಾದಿ ಅಮಾವಾಸ್ಯೆ ಯುಗಾದಿ ಪಾಡ್ಯ ನಂತರದ ದಿನವನ್ನು ಯುಗಾದಿ ಮುಳ್ಳಿನ ಪವಾಡ ದಿನ ಅಥವಾ ಬ್ಯಾಟಿ ಗಿಡ ಎಂದು ಕರೆಯುವ ಮೂಲಕ ಮೂರು ದಿನಗಳ ಕಾಲ ಹೊಸ ವರ್ಷ ಯುಗಾದಿವನ್ನು ಆಚರಣೆ ಮಾಡುತ್ತಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಪುರ ಚಿಂತಪಲ್ಲಿ ಈ ಗ್ರಾಮಗಳಲ್ಲಿ ಯುಗಾದಿ ಪಾಡ್ಯದ
ಮರುದಿನ ಬ್ಯಾಟಿ ಗಿಡ ಹಬ್ಬವನ್ನು ಆಚರಿಸಲಾಗುತ್ತದೆ. ಬ್ಯಾಟಿ ಗಿಡದಂದು ಊರ ಹೊರಗಿನ ಬಹಳ ಮುಳ್ಳಿನಿಂದ ಕೂಡಿದ ಕಾರಿ ಗಿಡಗಳನ್ನು ತಂದು ರಾಶಿ ಹಾಕಿ ಇದಕ್ಕೆ ನೀರನ್ನು ಸುರಿದು ಶ್ರೀ ಆಂಜನೇಯ ಮೂರ್ತಿ ಇರುವ ಪಲ್ಲಕ್ಕಿ ಹೊತ್ತು ಮೆರವಣಿಗೆಯಲ್ಲಿ ಸಾಗುವವರಿಗೆ ಡೊಳ್ಳು,ಹಲಗೆ,ತಾಷಾ ಹೀಗೆ ಜನಪದ ಮೆರವಣಿಗೆ ಸಾಥ್ ನೀಡುತ್ತದೆ. ಈ ಸಂದರ್ಭದಲ್ಲಿ ದೇವರು ಮೈಮೇಲೆ ಬಂದವರು ಈ ಮುಳ್ಳಿನ ರಾಶಿಯ ಮೇಲೆ ಹಾರುತ್ತಾರೆ. ಕೂಡಲೇ ಇವರ ಮೇಲೆ ನೀರನ್ನು ಸುರಿದು ಇವರನ್ನು ತೆಗೆದುಕೊಂಡು ಹೋಗಿ ಶ್ರೀ ಆಂಜನೇಯನ ಗರ್ಭಗುಡಿಯ ಮುಂದಿನ ಜಾಗದಲ್ಲಿ ಹಾಕಲಾಗುತ್ತದೆ. ಪಲ್ಲಕ್ಕಿ ದೇವಸ್ಥಾನ ಪ್ರವೇಶದ ನಂತರ ಇಡೀ ಗ್ರಾಮಸ್ಥರು ಒಂದೆಡೆ ಸೇರಿ ದೇವಸ್ಥಾನದ ಧ್ವಜ (ಪಟಾಕ್ಷಿ) ಕಾಣಿಕೆ ಪೆಟ್ಟಿಗೆ ಸೇರಿದಂತೆ ದೇವರ ವಸ್ತುಗಳನ್ನು ಹರಾಜಿನ ಮೂಲಕ ಹರಾಜು ಮಾಡಿ ಈ ಹಣವನ್ನು ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳಿಗೆ ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾತಿ, ಭೇದ, ರಾಜಕೀಯ ಎಲ್ಲವನ್ನೂ ಮರೆತು ಎಲ್ಲರೂ ಒಂದೆಡೆ ಸೇರಿ ಶ್ರೀ ಆಂಜನೇಯನಿಗೆ ಜೈಕಾರವನ್ನು ಹಾಕುತ್ತಾರೆ. ನಂತರ ಯುಗಾದಿ ಹಬ್ಬ ಮುಕ್ತಾಯವಾದಂತೆ ಸರಿ ಇಂತ ವೈಶಿಷ್ಟ್ಯ ಪೂರ್ಣ ಆಚರಣೆಗಳ ಮೂಲಕ ಯುಗಾದಿ ಹಬ್ಬ ಹಗರಿಬೊಮ್ಮನಹಳ್ಳಿ ತಾಲೂಕಿನ ಅತ್ಯಂತ ಸಡಗರ ಸಂಭ್ರಮವನ್ನು ಸಾರುತ್ತದೆ

ಶ್ರೀಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ.

*ಆರ್ಟ್ ಆಫ್ ಲಿವ್ಹಿಂಗ್ ವ್ಯವಸ್ಥೆ

*ಜ್ಯೋತಿರ್ಲಿಂಗ ದರ್ಶನ ಪಡೆದ ಸಾವಿರಾರು ಭಕ್ತರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ ರವಿವಾರ ಸಂಜೆ ಕಾರ್ಯಕ್ರಮ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಒಂದು ಸಾವಿರ ವರ್ಷಗಳ ಹಿಂದೆ ಮೊಗಲರ ಆಕ್ರಮಣದಿಂದಾಗಿ ಲುಪ್ತವಾಗಿದ್ದ ಸೋಮನಾಥದ ಮೂಲ ಜ್ಯೋತಿರ್ಲಿಂಗವನ್ನು ಗುರುದೇವ ಶ್ರೀ ಶ್ರೀ ರವಿಶಂಕರರು ಪುನಃ ಪ್ರತಿಷ್ಠಾಪಿಸಿದರು. ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ: ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು ಮತ್ತು ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತೀಯ ಶಕ್ತಿಯಿಂದ ಕೂಡಿದೆ. ಕ್ರಿ.ಶ1026ರಲ್ಲಿ ಮೊಹಮ್ಮದ್ ಘಜನಿಯು ದೇವಾಲಯದ ಮೇಲೆ ಆಕ್ರಮಣ ಮಾಡಿ ಈ ಜ್ಯೋತಿರ್ಲಿಂಗವನ್ನು ಆದ್ರಗೊಳಿಸಿದನು. ಶಾಶ್ವತವಾಗಿ ನಷ್ಟವಾಗಿದೆ ಎಂದುಕೊಂಡಂತಹ ಈ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು. ಈ ಶಿವಲಿಂಗಗಳನ್ನು ಪೂಜಿಸುವಾಗ ಅಗ್ನಿಹೋತ್ರಿಗಳು ಒಂದು ಅಪರೂಪದ ವಿದ್ಯಮಾನವನ್ನು ಗಮನಿಸಿದರು. ಈ ಶಿಲೆಗಳು ಅಯಸ್ಕಾಂತೀಯ ಗುಣವನ್ನು ಹೊಂದಿದ್ದವು. ಸಾಮಾನ್ಯವಾಗಿ ವಸ್ತುವಿನ ಧ್ರುವಗಳಲ್ಲಿ ಕಾಂತೀಯ ಶಕ್ತಿಯು ಕಂಡುಬರುತ್ತದೆ ಆದರೆ, ಅಪರೂಪವಾಗಿ ಈ ಶಿಲೆಯ ಕೇಂದ್ರದಲ್ಲಿ ಬಲವಾದ ಕಾಂತೀಯತೆ ಇರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ಖಚಿತವಾಯಿತು. ಭೂ ವಿಜ್ಞಾನಿಗಳು ಇಂತಹ ವಸ್ತುವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆರ್ಟ್ ಆಫ್ ಲಿವ್ಹಿಂಗ್ ನ ರಘು ಪವರ್, ಸತ್ಯಂ ,ಮಹೇಶ,ಮಂಜುನಾಥ, ಬಸವನಗೌಡ ಪಾಟೀಲ್, ಅಮರೇಗೌಡ,ದರೋಜಿ‌ ಸತ್ಯನಾರಾಯಣ, ಗುರುರಾಜ ಕಾರಂತ,ಸದಾನಂದ ಶೆಟ್,ರೂಪರಾಣಿ ರಾಯಚೂರು, ಸುನೀತಾ, ರಜನೀ ಕೊಟ್ಟಾಲ್,ರವೀಂದ್ರ ಹೂಲಗೇರಿ, ನ್ಯಾಯವಾದಿ ಸಿದ್ದನಗೌಡ ಪಾಟೀಲ್, ಚಂದ್ರಗೌಡ ಪಾಟೀಲ್, ಚನ್ನಬಸಯ್ಯಸ್ವಾಮಿ,ರುದ್ರಯ್ಯ ಸ್ವಾಮೀ ಅಯೋಧ್ಯೆ,ಸೂಗೂರಪ್ಪ ವಲ್ಕಂದಿನ್ನಿ ಸೇರಿ ಅನೇಕರಿದ್ದರು.

ಕನಕಗಿರಿ ಕನಕಾಚಲಪತಿ ಮಹಾರಥೋತ್ಸವಕ್ಕೆ ಸಾಕ್ಷಿಯಾಯ್ತು ಲಕ್ಷಾಂತರ ಭಕ್ತ ಸಮೂಹ!

*ಐತಿಹಾಸಿಕ ಹಿನ್ನೆಲೆಯ ಕನಕಗಿರಿ ಜಾತ್ರೆ

ಕಿಷ್ಕಿಂಧವಾಣಿ

ಕನಕಗಿರಿ: ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪ್ರಸಿದ್ಧ ಕನಕಗಿರಿಯ ಸುಕ್ಷೇತ್ರದ

ಕನಕಾಚಲಪತಿ ಲಕ್ಷ್ಮೀ ನರಸಿಂಹಸ್ವಾಮಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ

ಶ್ರದ್ಧೆ, ಭಕ್ತಿಯಿಂದ ಬುಧವಾರ ಸಂಜೆ ಜರುಗಿತು.

ರಥೋತ್ಸವದ ನಿಮಿತ್ತ ಬೆಳಗ್ಗೆ ಕನಕಾಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ, ಅನ್ನಬಲಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ರಥಕ್ಕೆ ಹಸಿರು ತರಿಳು ತೋರಣ, ಗೊಂಬೆ, ಹೂ, ಬಾವುಟ, ಐದು ಪ್ರಕಾರದ ಚಟ್ಟುಗಳನ್ನು ಕಟ್ಟಿದ ರಥಕ್ಕೆ ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು. ಭಕ್ತಗಣ ರಥದ ಗಾಲಿಗೆ ತೆಂಗಿನಕಾಯಿ ಹೋಡೆದು ಹರಕೆ ತಿರಿಸಿದರು.

ರಥ ಸಂಜೆ 4.20ಕ್ಕೆ ಆರಂಭಗೊಂಡಿತು. ಕೆಲ ನಿಮಿಷಗಳಲ್ಲಿ ಮೊದಲು ತನ್ನ ದಾರಿ ಬದಲಿಸಿದ ರಥ ಮುಂದೆ ಹೋಗದಿದ್ದಾಗ ಮತ್ತೆ ಹಿಂದಕ್ಕೆ ಎಳೆದು ನಂತರ ರಥವನ್ನು ಎಳೆಯಲಾಗಿತು. ಕೆಲ ನಿಮಿಷಗಳಲ್ಲಿ ಮತ್ತೆ ರಥ ಅಡ್ಡ ನಿಂತಾಗ ಮತ್ತೆ ಹಿಂದಕ್ಕೆ ಎಳೆದು ಮುಂದಕ್ಕೆ ಎಳೆಯಲಾಯಿತು. ನಂತರ ಎದಿರು ಹನುಮಪ್ಪನ ದೇವಸ್ಥಾನಕ್ಕೆ ತೆರಳಿ ನಂತರ 1.20 ನಿಮಿಷದಲ್ಲಿ ರಾಜಗಾಂಭಿರ್ಯದಂತೆ ತನ್ನ ಮೂಲಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಲಕ್ಷಾಂತರ ಭಕ್ತರು ಕೆಕೆ ಹಾಕಿ ಸಂಭ್ರಮಿಸಿದರು. ಕೆಲ ಭಕ್ತರು ತಂಗಿದ್ದ ಸ್ಥಳದಿಂದ ದೇವಸ್ಥಾನದ ವರಗೆ ದೀಡ್ ಸ್ಕಾರ ಹಾಕಿ ಬೇಡಿಕೊಂಡ ಹರಕೆಗಳನ್ನು ತೀರಿಸಿದರು.ಸಿಹಿ ತಿನಿಸು ಸಮರ್ಪಣೆ ಮಾಡಿದರು. ಭಾಜಾ ತಾಷಾ, ವಾಧ್ಯಮೇಳ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದವು. ಭಕ್ತರು ಮನೆಯ ಮಾಳಿಗೆ, ರಾಜಬೀದಿಯಲ್ಲಿ ನಿಂತು ರಥೋತ್ಸವವನ್ನು ವೀಕ್ಷಿಸಿದರು. ಜಿಲ್ಲೆ, ರಾಜ್ಯ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ಭಾಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.

ಜಾತ್ರಾಮಹೋತ್ಸವದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರಡಿ, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ತನುಶ್ರೀ, ಉಪಾಧ್ಯಕ್ಷ ಕಂಠಿರಂಗ ನಾಯಕ, ಶಾಸಕ ರಮೇಶ ಜಾರಕಿಹೋಳಿ ಪುತ್ರ ಅಮರನಾಥ ಜಾರಕಿಹೋಳಿ ಸೇರಿದಂತೆ ಹಲವು ಗಣ್ಯರು ಇದ್ದರು

ವಾಲ್ಮೀಕಿಶ್ರೀಗಳ ಕ್ಷೇಮ ವಿಚಾರಿಸಿದ ಕೆಎಂಎಫ್ ಬಳ್ಳಾರಿ ಮಾಜಿ ಅಧ್ಯಕ್ಷ ಭೀಮ್ ನಾಯ್ಕ್

ಹಗರಿಬೊಮ್ಮನಹಳ್ಳಿ:
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಡಾ.ಪ್ರಸನ್ನಾನಂದಪುರಿ ಮಹಾ ಸ್ವಾಮೀಜಿಯವರ ಆರೋಗ್ಯ -ಕ್ಷೇಮವನ್ನು ಮಡಿವಾಳ ಗುರುಪೀಠದ ಪೀಠಾಧಿಪತಿ ಬಸವಮಾಚಿದೇವ ಪರಾಮಪೂಜ್ಯರ ದಿವ್ಯ ಉಪಸ್ಥಿತಿಯಲ್ಲಿ ಕೆಎಂಎಫ್ ಬಳ್ಳಾರಿಯ ಮಾಜಿ ಅಧ್ಯಕ್ಷ ಭೀಮ್ ನಾಯ್ಕ್ ಕುಶಲೋಪಚರಿ ವಿಚಾರಿಸಿ ಉಭಯ ಶ್ರೀಗಳನ್ನು ಸತ್ಕರಿಸಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪೂಜ್ಯ ವಾಲ್ಮೀಕಿ ಶ್ರೀಗಳು ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು,ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಶ್ರೀಗಳು ವಾಲ್ಮೀಕಿ ಸಮುದಾಯ ಸೇರಿದಂತೆ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟು ಶ್ರಮಿಸಿ ಭಕ್ತ ವೃಂದಕ್ಕೆ ಹಾಗೂ ಸಮುದಾಯದ ಸೇವೆಗೆ ಶ್ರೀಗಳ ಮಾರ್ಗದರ್ಶನ ಅವಶ್ಯಕತೆ ಇದ್ದು ಮಹಾ ಸ್ವಾಮೀಜಿಗಳು ಆದಷ್ಟು ಬೇಗ ಪೂರ್ಣ ಗುಣಮುಖರಾಗಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮರಿರಾಮಪ್ಪ ಸೇರಿ ಹಗರಿಬೊಮ್ಮನಹಳ್ಳಿ
ವಾಲ್ಮೀಕಿ ಸಮುದಾಯದ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸಮುದಾಯದ ಹಿರಿಯರು ಹಾಗೂ ಎಲ್ಲಾ ಸಮುದಾಯದ ಮುಖಂಡರು ಸೇರಿದಂತೆ ಹಿರಿಯರಿದ್ದರು.

134ನೇ ಬೆಟ್ಟದ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ 134ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮಾರ್ಚ್-11 ರಂದು ಜರುಗಲಿದೆ.

ಮಾರ್ಚ್-10 ರಂದು 134ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಮಾರ್ಚ್-11 ಫಾಲ್ಗುಣ ಬಹುಳ ಅಷ್ಠಮಿ ಬುಧವಾರ ಬೆಳಗಿನ ಜಾವ 5:30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, 11:30 ರಿಂದ 12:30 ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ 5:00 ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ಜರುಗಲಿವೆ.

ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು,ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಗಾಲಿ ಜನಾರ್ಧನರೆಡ್ಡಿ,ಮಾಜಿ ಶಾಸಕ ಪರಣ್ಣ ಮುನವಳ್ಳಿ ಪಾಲ್ಗೊಳ್ಳಲಿದ್ದಾರೆ.

ಮಾ.

12 ರಂದು ಸಾಯಂಕಾಲ ಕಡುಬಿನ ಕಾಳಗ ನಡೆಯಲಿದೆ. ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಹಿರೇಬೆಣಕಲ್‌ನ ಭಕ್ತಾದಿಗಳು ವಿನಂತಿಸಿದ್ದಾರೆ.

ಮಾ.03 ರಂದು ಚಂದ್ರ ಗ್ರಹಣ: ಅರ್ಧ ದಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಗುಡಿ ಬಂದ್

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ಚಂದ್ರ ಗ್ರಹಣದ ಪ್ರಯುಕ್ತ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ಜಿಲ್ಲೆಗೆ ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಹುಣ್ಣಿಮೆ ದಿನವಾದ ಮಾ.03 ರಂದು ಮಧ್ಯಾಹ್ನ 12 ಗಂಟೆಯೊಳಗೆ ಮಾತ್ರ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶ್ರೀ ವಿಶ್ವಾವಸು ನಾಮ ಸಂವತ್ಸರ ಪಾಲ್ಗುಣ ಶುಕ್ಲ ಹುಣ್ಣಿಮೆ ಮಾ. 3ರ ಮಂಗಳವಾರ ಪೂರ್ವ ನಕ್ಷತ್ರ ಸಿಂಹರಾಶಿ ಗ್ರದ್ಯೋದಿತ ಚಂದ್ರ ಗ್ರಹಣ ಇರುವುದರಿಂದ ಅಂದು ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಭಕ್ತರಿಗೆ ಶ್ರೀ ಹುಲಿಗೆಮ್ಮ ದೇವಿಯವರ ದರ್ಶನದ ವ್ಯವಸ್ಥೆ ಇರುತ್ತದೆ. ನಂತರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಆಚರಣೆ ಇರುವುದರಿಂದ ದೇವರ ದರ್ಶನ ಇರುವುದಿಲ್ಲ. ಗ್ರಹಣ ಮೋಕ್ಷವಾದ ಅಂದು ಸಂಜೆ 7 ಗಂಟೆಯ ನಂತರ ದೇವಾಲಯದ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ನೆರವೇರುತ್ತವೆ ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ನವ ಬೃಂದಾವನ ಗಡ್ಡಿಯ ಯತಿವರ್ಯರ ದರ್ಶನಕ್ಕೆ ಆಗಮಿಸಿದ ನವರಸ ನಾಯಕ,ರಾಜ್ಯಸಭಾ ಸದಸ್ಯ ಜಗ್ಗೇಶ್.

*ನಟ ಅಪ್ಪಟ ರಾಯರ ಭಕ್ತ

*ರಾಯರನ್ನು ನಂಬಿದರೆ ಕಷ್ಟಗಳು ದೂರ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕನ್ನಡ ಚಿತ್ರರಂಗದ ನವರಸ ನಾಯಕ ಎಂದು ಖ್ಯಾತಿ ಪಡೆದ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವೃಂದಾವನಗಡ್ಡಿಗೆ ಆಗಮಿಸಿ ಯತಿವರ್ಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾದೈವ ಅವರು, ನಾನು ಚಿಕ್ಕಂದಿನಿಂದಲೂ ರಾಯರ ಭಕ್ತನಾಗಿದ್ದು ನಬೃಂದಾವನ ಗಡ್ಡಿಯಲ್ಲಿರುವ 9 ಯತಿಗಳ ದರ್ಶನ ಮಾಡುವ ಬಯಕೆ ಬಹಳ ವರ್ಷಗಳಿಂದ ಇದ್ದು,ಇಂದು ಆಸೆ ಈಡೇರಿದೆ ಪ್ರತಿಯೊಬ್ಬರೂ ಭಕ್ತಿಯ ಹಾದಿಯಲ್ಲಿ ನಡೆದು ದೇವರ ಸ್ಮರಣೆಯ ಮೂಲಕ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಧರ್ಮದ ದಾರಿ ಬಿಟ್ಟು ನಡೆದರೆ ದೇವರು ಮೆಚ್ಚುವುದಿಲ್ಲ ನವ ಬೃಂದಾವನ ಗಡ್ಡಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು 9 ಯತಿಗಳು ಇಲ್ಲಿ ಲೀನರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ ಇಲ್ಲಿಗೆ ಬಂದಿದ್ದು ಬಹಳ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಸದ ಎನ್. ಪದ್ಮನಾಭರಾಜು, ಗೋಪಿನಾಥ್, ಹೆಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರದೀಪ್ ಹೊಸಪೇಟೆ ಇತರರಿದ್ದರು.