Breaking News
ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರ ಅಂಜನಾದ್ರಿ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಜನಾರ್ದನ ರೆಡ್ಡಿ ಆರೋಪ.

*ಧಾರ್ಮಿಕ ದತ್ತಿ ಇಲಾಖೆ,ಕಂದಾಯ ಸಚಿವರು ಬೆಂಗಳೂರು ಬಿಟ್ಟು ಅಂಜನಾದ್ರಿ ಗೆ ಕೂಡಲೇ ಬರಲಿ.

*₹೨೪೦ ಕೋಟಿ ಅನುದಾನ ಮಂಜೂರಾದರೂ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯೇಕೆ?

*ಕೇಂದ್ರಕ್ಕೆ ₹೧,೩೫೦ ಕೋಟಿ ಅನುದಾನದ ಬೇಡಿಕೆ

*ಮಾಲೀಕತ್ವದ ಗೊಂದಲಕ್ಕೆ ನ್ಯಾಯಾಲಯವೇ ಅಂತಿಮ ತೆರೆ ಎಳೆಯಲಿ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕೋಟ್ಯಂತರ ಹಿಂದೂಗಳ ಆರಾಧನಾ ಹಾಗೂ ಶ್ರದ್ಧಾಕೇಂದ್ರವಾಗಿರುವ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಅಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಒಟ್ಟಾರೆ ₹೨೪೦ ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೆ, ಕ್ಷೇತ್ರದ ಮತ್ತಷ್ಟು ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ₹೧,೩೫೦ ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಷ್ಟೆಲ್ಲ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಜಿಲ್ಲಾಡಳಿತದ ಕಾರ್ಯವೈಖರಿಯೇ ಕಾರಣವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಅರಣ್ಯ ಇಲಾಖೆ ನಿಯಮಗಳ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿ!:

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಬಳಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬೆಟ್ಟದ ಮಾಲೀಕತ್ವ ಹಾಗೂ ಪೂಜಾ ಕಾರ್ಯಗಳ ವಿಚಾರ ಬಂದಾಗ ೧೯೫೦ರ ದಾಖಲೆಗಳನ್ನು ಮುಂದಿಟ್ಟುಕೊಂಡು ಅಂಜನಾದ್ರಿ ಬೆಟ್ಟ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದೆ ಎಂದು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುತ್ತಿದೆ. ಹಾಗಾದರೆ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಮಾತ್ರ ಅರಣ್ಯ ಇಲಾಖೆಯ ನಿಯಮಗಳ ನೆಪವೇಕೆ? ಜಿಲ್ಲಾಡಳಿತದ ಈ ದ್ವಂದ್ವ ನಿಲುವಿಗೆ ಅಧಿಕಾರಿಗಳು ಉತ್ತರಿಸಬೇಕು ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.

ವಿದ್ಯಾದಾಸ ಬಾಬಾ ಅವರಿಗೆ ಪೂಜಾ ಕಾರ್ಯಗಳ ಜವಾಬ್ದಾರಿ ವಹಿಸಿ

ಅಂಜನಾದ್ರಿ ಕ್ಷೇತ್ರದ ಧಾರ್ಮಿಕ ಪರಂಪರೆ ಹಾಗೂ ಪೂಜಾ ಪದ್ಧತಿಗಳಿಗೆ ಗೌರವ ನೀಡಬೇಕು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಬೇಕು. ಧಾರ್ಮಿಕ ಕಾರ್ಯಗಳು ಹಾಗೂ ಪೂಜಾ ಕೈಂಕರ್ಯಗಳನ್ನು ವಿದ್ಯಾದಾಸ ಬಾಬಾ ಅವರಿಗೆ ವಹಿಸಬೇಕು. ವಿದ್ಯಾದಾಸ ಬಾಬಾ ಹಾಗೂ ಅವರ ಆಪ್ತರ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸುವುದು ಸರಿಯಲ್ಲ. ಧಾರ್ಮಿಕ ಕ್ಷೇತ್ರದ ವಿಚಾರಗಳನ್ನು ಸಂಯಮದಿಂದ ಹಾಗೂ ಕಾನೂನುಬದ್ಧವಾಗಿ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಲೀಕತ್ವ ವಿವಾದಕ್ಕೆ ನ್ಯಾಯಾಲಯವೇ ಅಂತಿಮ ತೀರ್ಮಾನ ಕೈಗೊಳ್ಳಲಿ:

ಅಂಜನಾದ್ರಿ ಬೆಟ್ಟದ ಮಾಲೀಕತ್ವದ ಕುರಿತು ಉಂಟಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಮತ್ತೊಮ್ಮೆ ನೋಟಿಫಿಕೇಶನ್ ಹೊರಡಿಸಲು ನ್ಯಾಯಾಲಯ ಅವಕಾಶ ನೀಡಿದ್ದು, ಕಾನೂನು ಪ್ರಕ್ರಿಯೆಯಂತೆ ನೋಟಿಫಿಕೇಶನ್ ಹೊರಡಿಸುವ ಮೂಲಕ ಮಾಲೀಕತ್ವದ ವಿಚಾರವನ್ನು ಸ್ಪಷ್ಟಪಡಿಸಬೇಕು.

ನ್ಯಾಯಾಲಯವೇ ಮಧ್ಯಪ್ರವೇಶಿಸಿ ಅಂಜನಾದ್ರಿ ಬೆಟ್ಟದ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದನ್ನು ದಾಖಲೆಗಳ ಆಧಾರದಲ್ಲಿ ನಿರ್ಧರಿಸಲಿ. ನ್ಯಾಯಾಲಯದ ಅಂತಿಮ ತೀರ್ಪು ವಿದ್ಯಾದಾಸ ಬಾಬಾ ಹಾಗೂ ಜಿಲ್ಲಾಡಳಿತ ಇಬ್ಬರಿಗೂ ಸಮಾಧಾನವಾಗುವ ರೀತಿಯಲ್ಲಿ ಇರಲಿ. ನ್ಯಾಯಾಲಯ ಕೈಗೊಳ್ಳುವ ತೀರ್ಮಾನಕ್ಕೆ ವಿದ್ಯಾದಾಸ ಬಾಬಾ ಸೇರಿದಂತೆ ಎಲ್ಲರೂ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಸಚಿವರು ಬೆಂಗಳೂರಿನಿಂದ ಅಂಜನಾದ್ರಿಗೆ ಬರಲಿ:

ಕಂದಾಯ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವರು ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳ ವರದಿಗಳನ್ನು ಆಧರಿಸುವ ಬದಲು ಅಂಜನಾದ್ರಿ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಬೇಕು. ಕ್ಷೇತ್ರದ ವಾಸ್ತವ ಸ್ಥಿತಿ, ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಡೆತಡೆಗಳು, ಧಾರ್ಮಿಕ ಕಾರ್ಯಗಳ ನಿರ್ವಹಣೆ ಹಾಗೂ ಮಾಲೀಕತ್ವದ ಗೊಂದಲಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸರ್ಕಾರಕ್ಕೆ ಅಸಡ್ಡೆ

ಅಂಜನಾದ್ರಿ ಕ್ಷೇತ್ರ ಕೇವಲ ಒಂದು ಬೆಟ್ಟವಲ್ಲ. ಇದು ಕೋಟ್ಯಂತರ ಭಕ್ತರ ನಂಬಿಕೆ, ಧಾರ್ಮಿಕ ಭಾವನೆ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಮಹತ್ವದ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರುತ್ತಿದೆ. ರಾಜಕೀಯ ಭೇದಭಾವ ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಂಜೂರಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!