Breaking News
ಡ್ಯಾಂಗಳಲ್ಲಿ ನೀರಿದ್ದರೂ ರೈತರ ಹೊಲಗಳಿಗೆ ನೀರಿಲ್ಲ:ಮಾಜಿ ಸಚಿವ ಶಿವನಗೌಡ ನಾಯಕ

 

 

*ಕಂಪನಿಗಳಿಗೆ, ನೆರೆಯ ರಾಜ್ಯಗಳಿಗೆ ನೀರು; ಅನ್ನದಾತರ ಬೆಳೆಗಳಿಗೆ ಮಾತ್ರ ಅಭಾವವೇ?

*ನ. ೨೨ರ ಗಡುವು ನೀಡಿದ ಮಾಜಿ ಸಚಿವ ಕೆ. ಶಿವನಗೌಡ ನಾಯಕ

ಕಿಷ್ಕಿಂಧವಾಣಿ ಸುದ್ದಿ

ರಾಯಚೂರು: ಕೃಷ್ಣಾ–ತುಂಗಭದ್ರಾ ಎಂಬ ಎರಡು ಪ್ರಮುಖ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರ ಹೊಲಗಳಿಗೆ ಸಮರ್ಪಕ ನೀರು ಹರಿಯದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನೀರಾವರಿ ಸೌಲಭ್ಯವಿದ್ದರೂ ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳು ನೀರಿಲ್ಲದೆ ಒಣಗುವ ಆತಂಕ ಎದುರಾಗಿದೆ. ಅನ್ನದಾತರ ಬೆಳೆ ಉಳಿಸಲು ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿ ಮತ್ತು ಭಾಗಶಃ ಕಲಬುರಗಿ ಜಿಲ್ಲೆಗಳ ರೈತರಿಗೆ ನೀರು ಒದಗಿಸಲು ಅಗತ್ಯ ನೀರಿನ ಲಭ್ಯತೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿಲ್ಲ. ಬದಲಾಗಿ ಜಿಂದಾಲ್ ಮತ್ತು ಬೈಡೋಟಾ ಕಂಪನಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ನೀರು ಹರಿಸಲಾಗುತ್ತಿದೆ. ಆದರೆ ಸ್ಥಳೀಯ ರೈತರು ಮಾತ್ರ ತಮ್ಮ ಬೆಳೆಗಳಿಗೆ ನೀರಿಲ್ಲದೆ ಕಂಗಾಲಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೆಗಳ ಹಿತಾಸಕ್ತಿ ಹಾಗೂ ಹೊರರಾಜ್ಯಗಳ ನೀರಿನ ಬೇಡಿಕೆಗಿಂತ ಮೊದಲು ಸ್ಥಳೀಯ ರೈತರ ಕೃಷಿ ಅಗತ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಬೆಳೆಗಳು ಒಣಗಿ ಹೋದ ಬಳಿಕ ನೀರು ಹರಿಸಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಕಂಪನಿಗಳಿಗೆ ಹಾಗೂ ನೆರೆಯ ರಾಜ್ಯಗಳಿಗೆ ನೀರು ಹರಿಸುವ ವಿಚಾರದಲ್ಲಿ ಮರುಪರಿಶೀಲನೆ ನಡೆಸಿ, ಮೊದಲು ರೈತರ ಬೆಳೆಗಳಿಗೆ ಅಗತ್ಯ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಐದು ಜಿಲ್ಲೆಗಳ ರೈತರ ಹಿತಕ್ಕಾಗಿ ನವಲಿ, ತಿಂಥಣಿ ಜಲಾಶಯ ನಿರ್ಮಿಸಿ

ಕೃಷ್ಣಾ–ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ನವಲಿ ಜಲಾಶಯ ಹಾಗೂ ತಿಂಥಣಿ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಐದು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದ್ದು, ನೀರಾವರಿ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಪಕ್ಷಭೇದ ಮರೆತು ರೈತರ ಪರ ನಿಲ್ಲಿ

ರೈತರ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮೌನವಾಗಿರದೆ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಜಕೀಯ ಲೆಕ್ಕಾಚಾರಕ್ಕಿಂತ ರೈತರ ಬದುಕು, ಕೃಷಿ ಮತ್ತು ಅನ್ನದಾತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ನೀರಾವರಿ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಧ್ವನಿ ಎತ್ತಬೇಕಿದೆ ಎಂದು ಹೇಳಿದ್ದಾರೆ.

ನವೆಂಬರ್ ೨೨ರೊಳಗೆ ಪರಿಹಾರಕ್ಕೆ ಗಡುವು

ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಕೇವಲ ಮನವಿಗಳಿಗೆ ಸೀಮಿತಗೊಳಿಸದೆ ಗಂಭೀರವಾಗಿ ಪರಿಗಣಿಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸದೆ ಮಾನವೀಯ ನೆಲೆಯಲ್ಲಿ ತುರ್ತು ನಿರ್ಧಾರ ಕೈಗೊಳ್ಳಬೇಕು. ನವೆಂಬರ್ ೨೨ರೊಳಗಾಗಿ ನೀರಾವರಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಿ, ಬೆಳೆಗಳನ್ನು ಉಳಿಸಲು ಅಗತ್ಯ ನೀರು ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!