*ನ್ಯಾಯಾಲಯದ ಆದೇಶದ ಹೊರತಾಗಿ ಇತರ ಚಟುವಟಿಕೆ ನಡೆಸಿದರೆ ಕಾನೂನು ಕ್ರಮ: ಜಿಲ್ಲಾಡಳಿತದ ಎಚ್ಚರಿಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ವಿದ್ಯಾದಾಸ ಬಾಬಾ ಅವರಿಗೆ ಕೊಪ್ಪಳ ಜಿಲ್ಲಾಡಳಿತ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಪೂಜೆ ಸಲ್ಲಿಸುವುದು, ಸಹಾಯಕರನ್ನು ಇರಿಸಿಕೊಳ್ಳುವುದು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಹೊರತಾಗಿ ಬೇರೆ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 2026ರ ಅಕ್ಟೋಬರ್ 13ರಂದು ವಿದ್ಯಾದಾಸ ಬಾಬಾ ಅವರಿಗೆ ಅಧಿಕೃತ ಪತ್ರ ನೀಡಲಾಗಿದೆ.
ನ್ಯಾಯಾಲಯದ ಆದೇಶದಂತೆ ಸೌಲಭ್ಯ
ವಿದ್ಯಾದಾಸ ಬಾಬಾ ಅವರು ಅಕ್ಟೋಬರ್ 12ರಂದು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಜಿಲ್ಲಾಡಳಿತ, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ವಿದ್ಯಾದಾಸ ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಅವಕಾಶವಿದೆ. ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ದೇವಸ್ಥಾನದ ಆವರಣದಲ್ಲಿ ಇರಲು ಒಂದು ಕೊಠಡಿ ಒದಗಿಸುವುದು ಹಾಗೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ದೇವಸ್ಥಾನದ ಗರ್ಭಗುಡಿಗೆ ವಿದ್ಯಾದಾಸ ಬಾಬಾ ಅವರೊಂದಿಗೆ ಒಬ್ಬ ಸಹಾಯಕ ಅಥವಾ ಶಿಷ್ಯನಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿತ್ತು.
ಆದೇಶ ಪಾಲನೆಗೆ ಜಿಲ್ಲಾಡಳಿತ ಸೂಚನೆ:
ಕರ್ನಾಟಕ ಉಚ್ಚ ನ್ಯಾಯಾಲಯದ ವಿವಿಧ ರಿಟ್ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪುಗಳ ಹಿನ್ನೆಲೆಯಲ್ಲಿ ವಿದ್ಯಾದಾಸ ಬಾಬಾ ಅವರಿಗೆ ಈಗಾಗಲೇ ಪೂಜಾ ಕಾರ್ಯಗಳನ್ನು ನಿರ್ವಹಿಸಲು, ವಾಸ್ತವ್ಯಕ್ಕೆ ಒಂದು ಕೊಠಡಿ ಬಳಸಲು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತದ ಪತ್ರದಲ್ಲಿ ತಿಳಿಸಲಾಗಿದೆ.
ಆದ್ದರಿಂದ ನ್ಯಾಯಾಲಯದ ಆದೇಶದ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಆದೇಶದಲ್ಲಿ ತಿಳಿಸಿರುವ ಅವಕಾಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಗಂಗಾವತಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ದೊರಕಿಸಿಕೊಡುವ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದರೂ, ಈ ನಿಟ್ಟಿನಲ್ಲಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮತ್ತು ಇತರ ಜನಪ್ರತಿನಿಧಿಗಳು ಇನ್ನಷ್ಟು ಸಂಘಟಿತವಾಗಿ ಹೋರಾಟ ನಡೆಸದೇ ಮೌನ ವಹಿಸಿದ್ದು ಇಡೀ ಸಮಾಜವನ್ನು ಕತ್ತಲಿನಲ್ಲಿಸಿದೆ.ಕೂಡಲೇ ಕನಕ ಗುರು ಪೀಠದ ಪೂಜ್ಯ ಗುರುಗಳು ನೇತೃತ್ವ ವಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಣ್ಣು ತೆರೆಸುವ ಕಾರ್ಯ ಮಾಡಬೇಕಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಮುಖಂಡರಾದ ಪರಶುರಾಮ ಇಟಗಿ,ಕೆ.ಕೃಷ್ಣ ಹಾಗೂ ಮಲ್ಲಪ ಮಡ್ಲಿಗೇರಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಒಟ್ಟು ಮೀಸಲಾತಿಯನ್ನು ಶೇ.೫೬ಕ್ಕೆ ಹೆಚ್ಚಿಸಿದ ಕಾನೂನಿನ ರಕ್ಷಣೆಗೆ ವಾಲ್ಮೀಕಿ ಸಮಾಜದ ಮುಖಂಡರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವುದು, ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡುವುದು, ಕಾನೂನು ಹೋರಾಟಕ್ಕೆ ಒತ್ತಾಯಿಸುವುದು ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಅತ್ಯುತ್ತಮ ಕಾರ್ಯವಾಗಿದೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನಿನ ಪ್ರಮುಖ ನಿಬಂಧನೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರ ಪ್ರಕಟಿಸಿದೆ. ಈ ಬೆಳವಣಿಗೆಯ ನಡುವೆಯೂ ಮೀಸಲಾತಿ ಹೆಚ್ಚಳದ ಪರವಾಗಿ ಕಾನೂನು ಹೋರಾಟವನ್ನು ಬಲಪಡಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಒತ್ತಾಯಿಸುತ್ತಿದ್ದಾರೆ.
ವಾಲ್ಮೀಕಿ ಸಮಾಜದ ಹೋರಾಟದಿಂದ ಪಾಠ ಕಲಿಯಬೇಕಿದೆ:ಮೀಸಲಾತಿಯಂತಹ ಮಹತ್ವದ ವಿಚಾರದಲ್ಲಿ ಸಮಾಜದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗಿ ಹೋರಾಡಬೇಕೆಂಬ ಸಂದೇಶವನ್ನು ವಾಲ್ಮೀಕಿ ಸಮಾಜದ ಮುಖಂಡರ ಪ್ರಯತ್ನಗಳು ಮುಂದಿಡುತ್ತಿವೆ. ಸರ್ಕಾರದ ಮಟ್ಟದಲ್ಲಿ ನಿರಂತರ ಮನವಿ ಸಲ್ಲಿಸುವುದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ಮೀಸಲಾತಿ ವಿಚಾರದಲ್ಲಿ ಜನಜಾಗೃತಿ ಮೂಡಿಸುವುದು ಮತ್ತು ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸುವುದು ಅಗತ್ಯವಾಗಿದೆ.
ಇದೇ ಮಾದರಿಯಲ್ಲಿ ಕುರುಬ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಕೇವಲ ಸಭೆ-ಸಮಾರಂಭಗಳಲ್ಲಿ ಭರವಸೆ ನೀಡುವುದಕ್ಕಿಂತ, ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಹೋರಾಟ ನಡೆಸುವುದು ಮುಖ್ಯವಾಗಿದೆ.
ಮೀಸಲಾತಿ ಬೇಡಿಕೆಗೆ ಸಂಘಟಿತ ಪ್ರಯತ್ನ ಅಗತ್ಯ
ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಅಧ್ಯಯನ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ದಾಖಲೆಗಳು ಮತ್ತು ಕಾನೂನುಬದ್ಧ ಮಾನದಂಡಗಳ ಆಧಾರದಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಿದೆ.ಸಮಾಜದ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯಬೇಕು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸೂಕ್ತ ಕ್ರಮಗಳು ಕೈಗೊಳ್ಳಬೇಕು. ಈ ಉದ್ದೇಶಗಳ ಸಾಧನೆಗಾಗಿ ಮೀಸಲಾತಿ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸುವ ಜವಾಬ್ದಾರಿ ಸಮಾಜದ ಮುಖಂಡರ ಮೇಲಿದೆ.
ಸಮಾಜದ ನಿರೀಕ್ಷೆಗೆ ಜನಪ್ರತಿನಿಧಿಗಳು ಸ್ಪಂದಿಸಲಿ:
ವಾಲ್ಮೀಕಿ ಸಮಾಜದ ಜನಪ್ರತಿನಿಧಿಗಳು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನಗಳಂತೆಯೇ, ಕುರುಬ ಸಮಾಜದ ಜನಪ್ರತಿನಿಧಿಗಳೂ ತಮ್ಮ ಸಮಾಜದ ಬೇಡಿಕೆಗೆ ಆದ್ಯತೆ ನೀಡಬೇಕಿದೆ.
ಕುರುಬ ಸಮಾಜದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಒಗ್ಗಟ್ಟಿನ ನಿಲುವು ರೂಪಿಸಬೇಕಿದೆ. ಸರ್ಕಾರದೊಂದಿಗೆ ನಿರಂತರ ಸಂವಾದ ನಡೆಸಿ, ಸಂಬಂಧಪಟ್ಟ ಆಯೋಗಗಳು ಹಾಗೂ ಕಾನೂನು ತಜ್ಞರ ಸಲಹೆ ಪಡೆದು, ಎಸ್ಟಿ ಮೀಸಲಾತಿ ಬೇಡಿಕೆಯ ಕುರಿತು ಕಾನೂನುಬದ್ಧವಾಗಿ ಮುಂದುವರಿಯಬೇಕಿದೆ.
ಸಮಾಜದ ಹಕ್ಕುಗಳಿಗಾಗಿ ಹೋರಾಡುವುದು ಜನಪ್ರತಿನಿಧಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ. ಕುರುಬ ಸಮಾಜದ ಎಸ್ಟಿ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸಂಘಟಿತ ಕ್ರಮ ಕೈಗೊಳ್ಳಲಿದೆ ಎಂದು ಒತ್ತಾಯಿಸಿದ್ದಾರೆ.