Breaking News
ಕಿಷ್ಕಿಂಧಾ ಅಂಜನಾದ್ರಿ ದೇವಸ್ಥಾನದಲ್ಲಿ ನ್ಯಾಯಾಲಯದ ಆದೇಶದಂತೆ ಪೂಜೆ ಸಲ್ಲಿಸಲು ಮಾತ್ರ ಸೂಚನೆ.

 

*ಪೂಜೆ ಮತ್ತು ಸಂಸ್ಕೃತ ಪಾಠಶಾಲೆ ನಡೆಸಲು ಮಾತ್ರ ಅವಕಾಶ.

*ನ್ಯಾಯಾಲಯದ ಆದೇಶದ ಹೊರತಾಗಿ ಇತರ ಚಟುವಟಿಕೆ ನಡೆಸಿದರೆ ಕಾನೂನು ಕ್ರಮ: ಜಿಲ್ಲಾಡಳಿತದ ಎಚ್ಚರಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ವಿದ್ಯಾದಾಸ ಬಾಬಾ ಅವರಿಗೆ ಕೊಪ್ಪಳ ಜಿಲ್ಲಾಡಳಿತ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಪೂಜೆ ಸಲ್ಲಿಸುವುದು, ಸಹಾಯಕರನ್ನು ಇರಿಸಿಕೊಳ್ಳುವುದು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಹೊರತಾಗಿ ಬೇರೆ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 2026ರ ಅಕ್ಟೋಬರ್ 13ರಂದು ವಿದ್ಯಾದಾಸ ಬಾಬಾ ಅವರಿಗೆ ಅಧಿಕೃತ ಪತ್ರ ನೀಡಲಾಗಿದೆ.
ನ್ಯಾಯಾಲಯದ ಆದೇಶದಂತೆ ಸೌಲಭ್ಯ
ವಿದ್ಯಾದಾಸ ಬಾಬಾ ಅವರು ಅಕ್ಟೋಬರ್ 12ರಂದು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಜಿಲ್ಲಾಡಳಿತ, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ವಿದ್ಯಾದಾಸ ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಅವಕಾಶವಿದೆ. ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ದೇವಸ್ಥಾನದ ಆವರಣದಲ್ಲಿ ಇರಲು ಒಂದು ಕೊಠಡಿ ಒದಗಿಸುವುದು ಹಾಗೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ದೇವಸ್ಥಾನದ ಗರ್ಭಗುಡಿಗೆ ವಿದ್ಯಾದಾಸ ಬಾಬಾ ಅವರೊಂದಿಗೆ ಒಬ್ಬ ಸಹಾಯಕ ಅಥವಾ ಶಿಷ್ಯನಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿತ್ತು.
ಆದೇಶ ಪಾಲನೆಗೆ ಜಿಲ್ಲಾಡಳಿತ ಸೂಚನೆ:
ಕರ್ನಾಟಕ ಉಚ್ಚ ನ್ಯಾಯಾಲಯದ ವಿವಿಧ ರಿಟ್ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪುಗಳ ಹಿನ್ನೆಲೆಯಲ್ಲಿ ವಿದ್ಯಾದಾಸ ಬಾಬಾ ಅವರಿಗೆ ಈಗಾಗಲೇ ಪೂಜಾ ಕಾರ್ಯಗಳನ್ನು ನಿರ್ವಹಿಸಲು, ವಾಸ್ತವ್ಯಕ್ಕೆ ಒಂದು ಕೊಠಡಿ ಬಳಸಲು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತದ ಪತ್ರದಲ್ಲಿ ತಿಳಿಸಲಾಗಿದೆ.
ಆದ್ದರಿಂದ ನ್ಯಾಯಾಲಯದ ಆದೇಶದ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಆದೇಶದಲ್ಲಿ ತಿಳಿಸಿರುವ ಅವಕಾಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಂತ‌ ವಿದ್ಯಾದಾಸ ಬಾಬಾ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!