Breaking News
ಕಿಷ್ಕಿಂಧಾ ಅಂಜನಾದ್ರಿ ದೇವಸ್ಥಾನದ ಕಚೇ‌ರಿ‌ ಸೇರಿ ಇತರೆ ಕೊಠಡಿಗಳಿಗೆ ವಿದ್ಯಾದಾಸ ಬಾಬಾ ಹಾಕಿದ್ದ ಬೀಗ ತೆರವುಗೊಳಿಸಿದ ಜಿಲ್ಲಾಡಳಿತ.

*30 ಜನ ಖಾಸಗಿ ಸಿಬ್ಬಂದಿಯ ವಿಳಾಸವನ್ನು ಬರೆದುಕೊಂಡು ಕೆಳಗೆ ಇಳಿಸಿದ ಪೊಲೀಸರು.

ಮುಚ್ವಿದ್ದ ಕಾಣಿಕೆ ಹುಂಡಿ ಪೆಟ್ಟಿಗೆಗಳನ್ನು ಬಾಬಾ ಆಕ್ಷೇದ ಮಧ್ಯೆ ಮೊದಲಿದ್ದ ಜಾಗದಲ್ಲಿರಿದ ಅಧಿಕಾರಿಗಳು.

 ಮುಜರಾಯಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

ಅಧಿಕಾರಿಗಳೊಂದಿಗೆ ಬಾಬಾ ವಾಗ್ವಾದ;

 ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಖಡಕ್ ಸೂಚನೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ

  ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಮಹಾಂತ ವಿದ್ಯಾದಾಸ್ ಬಾಬಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಬುಧವಾರ ಜಿಲ್ಲಾಡಳಿತದ ಅಧಿಕಾರಿಗಳ ತಂಡ ದೇವಸ್ಥಾನದ ಆಫೀಸ್ ಸೇರಿದಂತೆ ವಿವಿಧ ಕೊಠಡಿಗಳಿಗೆ ವಿದ್ಯಾದಾಸ್ ಬಾಬಾ ಹಾಕಿದ್ದ ಬೀಗಗಳನ್ನು ತೆರವುಗೊಳಿಸಿ, ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ದೇವಸ್ಥಾನದ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತು.

ಸಹಾಯಕ ಆಯುಕ್ತ ಮಹೆಬೂಬ್ ಜಿಲಾನಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ ಹಾಗೂ ತಹಶೀಲ್ದಾರ್ ವಿನಾಯಕ ಗೋಡಬಲೆ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ೧೨ ಗಂಟೆ ಸುಮಾರಿಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿತು.

ದೇವಸ್ಥಾನದ ಆಡಳಿತ ಕಚೇರಿ, ಉಗ್ರಾಣ, ನೀರು ಸಂಗ್ರಹ ಕೊಠಡಿ, ವೇದಪಾಠ ಶಾಲೆ ಹಾಗೂ ಲಡ್ಡು ಕೌಂಟರ್‌ಗಳಿಗೆ ಹಾಕಲಾಗಿದ್ದ ಬೀಗಗಳನ್ನು ತೆರವುಗೊಳಿಸಲಾಯಿತು. ಬಳಿಕ ಮುಜರಾಯಿ ಇಲಾಖೆಯ ಸಿಬ್ಬಂದಿ ಕೊಠಡಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರ್ತವ್ಯಕ್ಕೆ ಹಾಜರಾದರು.

ಕಾಣಿಕೆ ಪೆಟ್ಟಿಗೆ ಸ್ಥಳಾಂತರಕ್ಕೆ ವಿರೋಧ

ನಂತರ ೪೭೧ ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನದ ಗರ್ಭಗುಡಿಗೆ ತೆರಳಿದ ಅಧಿಕಾರಿಗಳ ತಂಡ ಮಂಗಳಾರತಿ ಸ್ವೀಕರಿಸಿತು. ಕಾಣಿಕೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಮುಚ್ಚಲಾಗಿದ್ದ ಕಾಣಿಕೆ ಪೆಟ್ಟಿಗೆಗಳ ಮೇಲಿನ ಬಟ್ಟೆಗಳನ್ನು ತೆರವುಗೊಳಿಸಿ, ಅವುಗಳನ್ನು ಮೊದಲಿದ್ದ ಸ್ಥಳಗಳಲ್ಲಿ ವ್ಯವಸ್ಥಿತವಾಗಿ ಇರಿಸಲು ಕ್ರಮ ಕೈಗೊಂಡಿತು.

ಆದರೆ, ದೊಡ್ಡ ಕಾಣಿಕೆ ಪೆಟ್ಟಿಗೆಯನ್ನು ಮೊದಲಿದ್ದ ಸ್ಥಳದಲ್ಲಿ ಇರಿಸುವ ವಿಚಾರದಲ್ಲಿ ವಿದ್ಯಾದಾಸ್ ಬಾಬಾ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಈ ವಿಚಾರವಾಗಿ ಚರ್ಚೆ ನಡೆಯಿತು. ಹಿಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ತೋರಿಸಿದ ಬಳಿಕ ದೊಡ್ಡ ಕಾಣಿಕೆ ಪೆಟ್ಟಿಗೆಯನ್ನು ಗರ್ಭಗುಡಿಯ ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಇರಿಸಲು ಬಾಬಾ ಒಪ್ಪಿಕೊಂಡರು ಎಂದು ತಿಳಿದುಬಂದಿದೆ.

ನ್ಯಾಯಾಲಯದ ಆದೇಶದ ಬಗ್ಗೆ ವಾಗ್ವಾದ

ಗರ್ಭಗುಡಿಯಲ್ಲಿ ಅಧಿಕಾರಿಗಳು ಮತ್ತು ವಿದ್ಯಾದಾಸ್ ಬಾಬಾ ನಡುವೆ ನ್ಯಾಯಾಲಯದ ಆದೇಶದ ಪಾಲನೆ ಕುರಿತು ಮಾತಿನ ಚಕಮಕಿ ನಡೆಯಿತು. ಹೈಕೋರ್ಟ್ ಆದೇಶವನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಬಾಬಾ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ನ್ಯಾಯಾಲಯದ ಆದೇಶದಲ್ಲಿನ ಅಂಶಗಳನ್ನು ವಿವರಿಸಿದರು.

ಜಿಲ್ಲಾಡಳಿತವು ಅಕ್ಟೋಬರ್ ೧೩ರಂದು ಬಾಬಾ ಅವರಿಗೆ ನೀಡಿದ್ದ ನಿಯಮ ಪಾಲನಾ ನೋಟಿಸ್‌ನ್ನೂ ಅಧಿಕಾರಿಗಳು ತೋರಿಸಿದರು. ಆದರೂ ಬಾಬಾ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸಹಾಯಕ ಆಯುಕ್ತ ಮಹೆಬೂಬ ಜಿಲಾನಿ ಮಾತನಾಡಿ,, ಅಂಜನಾದ್ರಿ ದೇವಸ್ಥಾನದಲ್ಲಿ ವಿದ್ಯಾದಾಸ್ ಬಾಬಾ ಅವರು ಅರ್ಚಕರಾಗಿ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮಾತ್ರ ದೇವಸ್ಥಾನದಲ್ಲಿ ಇರಬೇಕು. ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸೂಚಿಸಿದರು. ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ತಾಲೂಕು ಆಡಳಿತ ದೇವಸ್ಥಾನದ ವ್ಯವಸ್ಥೆಗಳನ್ನು ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.

ಅನುಯಾಯಿಗಳಿಗೆ ಎಚ್ಚರಿಕೆ:

ದೇವಸ್ಥಾನದ ಬೆಟ್ಟದ ಮೇಲೆ ಸೇವೆಯ ಹೆಸರಿನಲ್ಲಿ ವಾಸ್ತವ್ಯ ಹೂಡಿರುವವರ ವಿವರಗಳನ್ನು ಡಿವೈಎಸ್ಪಿ ಜಯಪ್ಪ ನ್ಯಾಮಗೌಡ ಪಡೆದುಕೊಂಡರು. ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಸ್ವಾಮೀಜಿಗಳು ಹಾಗೂ ಇತರರು ತಮ್ಮ ವಾಸ್ತವ್ಯದ ವ್ಯವಸ್ಥೆಯನ್ನು ಬೇರೆಡೆ ಮಾಡಿಕೊಳ್ಳಬೇಕು. ಸಂಜೆ ೬ ಗಂಟೆಯೊಳಗೆ ಬೆಟ್ಟದಿಂದ ತೆರಳಬೇಕು ಎಂದು ಸೂಚಿಸಿದರು.

ವಿದ್ಯಾದಾಸ್ ಬಾಬಾ ಅವರು ಅಡುಗೆ ತಯಾರಿಕೆ, ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸಗಳಿಗೆ ನೇಮಿಸಿದ್ದ ಸುಮಾರು ೩೦ಕ್ಕೂ ಹೆಚ್ಚು ಸಿಬ್ಬಂದಿಯ ಹೆಸರು ಮತ್ತು ವಿಳಾಸಗಳನ್ನು ಅಧಿಕಾರಿಗಳು ಪಡೆದುಕೊಂಡರು. ಇನ್ನು ಮುಂದೆ ದೇವಸ್ಥಾನದಲ್ಲಿ ಕೆಲಸಕ್ಕೆ ಹಾಜರಾಗಬಾರದು. ಸೂಚನೆ ಉಲ್ಲಂಘಿಸಿ ಮತ್ತೆ ಕೆಲಸಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಅವರನ್ನು ಮನೆಗೆ ಕಳುಹಿಸಲಾಯಿತು.

ಬಾಬಾ ಅವರ ಭಾವಚಿತ್ರವಿದ್ದ ಫಲಕ ತೆರವು:

ದೇವಸ್ಥಾನದ ಆವರಣದಲ್ಲಿ ವಿದ್ಯಾದಾಸ್ ಬಾಬಾ ಅವರ ಭಾವಚಿತ್ರವಿದ್ದ ಎರಡು ನಾಮಫಲಕಗಳು ಹಾಗೂ ಗರ್ಭಗುಡಿಯ ಹೊರಭಾಗದ ಗೋಡೆಗೆ ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಮುಜರಾಯಿ ಇಲಾಖೆಯ ಸಿಬ್ಬಂದಿ ತೆರವುಗೊಳಿಸಿದರು.

ವೇದಪಾಠ ಶಾಲೆಯನ್ನು ಪುನರಾರಂಭಿಸುವಂತೆ ಓರ್ವ ಸ್ವಾಮೀಜಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ದೇವಸ್ಥಾನದಲ್ಲಿ ಯಾರಾದರೂ ಅನುಚಿತವಾಗಿ ವರ್ತಿಸಿದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತದ ಸಿಬ್ಬಂದಿಗೆ ಸೂಚಿಸಲಾಯಿತು.

ಮೂರು ಗಂಟೆಗಳ ಕಾಲ ಪರಿಶೀಲನೆ

ಬೆಳಗ್ಗೆ ೧೨ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಅಧಿಕಾರಿಗಳ ತಂಡ ಅಂಜನಾದ್ರಿ ಬೆಟ್ಟದ ಮೇಲಿನ ಹಾಗೂ ಕೆಳಗಿನ ವಿವಿಧ ಕೊಠಡಿಗಳನ್ನು ಪರಿಶೀಲಿಸಿತು. ದೇವಸ್ಥಾನದ ಆಡಳಿತ ಮತ್ತು ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಯಿತು.

ಕಾರ್ಯಾಚರಣೆಯಲ್ಲಿ ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ರಂಗಪ್ಪ ದೊಡ್ಡಮನಿ, ಶಿರಸ್ತೇದಾರ್ ಮಹೇಶ್ ದಲಾಲ್, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ್, ಗ್ರಾಮ ಆಡಳಿತಾಧಿಕಾರಿ ಹನುಮಂತಪ್ಪ ವಟಾರ್ ಸೇರಿದಂತೆ ೨೫ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

 ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಜಿಲ್ಲಾಡಳಿತದ ಕ್ರಮಕ್ಕೆ ವಿದ್ಯಾದಾಸ್ ಬಾಬಾ ಆಕ್ಷೇಪ

ಜಿಲ್ಲಾಡಳಿತದ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ, ಹೈಕೋರ್ಟ್ ಜಿಲ್ಲಾಡಳಿತದ ಹಿಂದಿನ ಕ್ರಮಗಳನ್ನು ರದ್ದುಗೊಳಿಸಿದ್ದು, ತಮ್ಮ ಟ್ರಸ್ಟ್‌ಗೆ ಅಂಜನಾದ್ರಿಯ ಸಂಪೂರ್ಣ ಆಡಳಿತ ನಿರ್ವಹಣೆ ನೀಡುವಂತೆ ಆದೇಶಿಸಿದೆ ಎಂದು ಪ್ರತಿಪಾದಿಸಿದರು.

ಆದರೂ ಕೊಪ್ಪಳ ಜಿಲ್ಲಾಡಳಿತ ಅಧಿಕಾರ ದುರುಪಯೋಗ ಮಾಡುತ್ತಿದೆ. ದೇವಸ್ಥಾನದ ಅಭಿವೃದ್ಧಿಗಿಂತ ವೈಯಕ್ತಿಕ ಪ್ರತಿಷ್ಠೆಯ ವಿಚಾರಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು.

 ಅಂಜನಾದ್ರಿ ದೇವಸ್ಥಾನದ ಆಡಳಿತದ ಮೇಲಿನ ಹಿಡಿತದ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ವಿದ್ಯಾದಾಸ್ ಬಾಬಾ ನಡುವಿನ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ ಸಲ್ಲಿಕೆ ನಿರೀಕ್ಷೆ ಸ್ಥಳೀಯರ ಪಾಲ್ಗೊಳ್ಳುವಿಕೆ, ಪರಂಪರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಒತ್ತು

 

 

ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು: ವಿಶ್ವವಿಖ್ಯಾತ ಹಂಪಿ ವಿಶ್ವ ಪರಂಪರೆ ತಾಣದ ಸ್ಮಾರಕಗಳ ಸಂರಕ್ಷಣಾ ಸ್ಥಿತಿ ಹಾಗೂ ಸಂರಕ್ಷಣಾ ಕಾರ್ಯಗಳ ಬಗ್ಗೆ ಯುನೆಸ್ಕೋ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಹಾಗೂ ಇತರ ಸಂಬಂಧಿತ ಇಲಾಖೆಗಳ ನಡುವಿನ ಸಮನ್ವಯಕ್ಕೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ತಂಡವು, ತನ್ನ ಅಂತಿಮ ವರದಿಯನ್ನು ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಹಂಪಿ ವಿಶ್ವ ಪರಂಪರೆ ತಾಣದ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಿದ ಯುನೆಸ್ಕೋ ತಜ್ಞರ ತಂಡವು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ತನ್ನ ಪ್ರಾಥಮಿಕ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿತು.
ಹಂಪಿಯ ಪರಂಪರೆ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ (HWHAMA) ಅಗತ್ಯ ತಜ್ಞ ಮಾನವ ಸಂಪನ್ಮೂಲ ಹಾಗೂ ಆರ್ಥಿಕ ನೆರವು ಒದಗಿಸುವುದು ಮತ್ತು ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಯ್ದುಕೊಳ್ಳುವುದು ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟರು.
ಅಲ್ಲದೆ, ಹಂಪಿ ಪ್ರದೇಶದಲ್ಲಿ ಕೈಗೊಳ್ಳುವ ಮುಂದಿನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಯೋಜನೆಗಳಿಗೆ ಪರಂಪರೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಮೌಲ್ಯಮಾಪನ (ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್) ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಅವರು ಹಂಪಿಯನ್ನು ಜಾಗತಿಕ ಮಹತ್ವದ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿದರು. ಇಲ್ಲಿನ ಸ್ಮಾರಕಗಳ ಸ್ಥಿತಿ ಹಾಗೂ ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಹಂಪಿಯ ಭವಿಷ್ಯದ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯವನ್ನು ಕೇಂದ್ರವಾಗಿರಿಸಬೇಕು ಎಂದು ಹೇಳಿದರು.
ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಸುಸ್ಥಿರ ಪರಂಪರೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ತಜ್ಞರ ತಂಡವು ತನಿಖಾಧಿಕಾರಿಗಳಾಗಿ ಅಲ್ಲ, ಸ್ಮಾರಕದ ಅಭಿವೃದ್ಧಿಗೆ ಸಹಕರಿಸುವ ಸ್ನೇಹಿತರು ಮತ್ತು ಪಾಲುದಾರರಾಗಿ ಭೇಟಿ ನೀಡಿದೆ ಎಂದು ತಿಳಿಸಿದರು.
ಜೀವಂತ ಸಾಂಸ್ಕೃತಿಕ ತಾಣವಾಗಿ ಹಂಪಿ ಅಭಿವೃದ್ಧಿ
ಜಪಾನ್‌ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಮಾತನಾಡಿ, ಹಂಪಿಯನ್ನು ಕೇವಲ ಐತಿಹಾಸಿಕ ಸ್ಮಾರಕಗಳ ಸಮೂಹವಾಗಿ ನೋಡದೆ, ಜೀವಂತ ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಜನರ ದೈನಂದಿನ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಪರಂಪರೆ ಮೌಲ್ಯ ಸಂರಕ್ಷಣೆಗೆ ಸರ್ಕಾರ ಬದ್ಧ
ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಹಂಪಿಯ ಅಸಾಧಾರಣ ಸಾರ್ವತ್ರಿಕ ಮೌಲ್ಯವನ್ನು (Outstanding Universal Value) ಯಾವುದೇ ರಾಜಿ ಇಲ್ಲದೆ ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ಪರಂಪರೆ ಸಂರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯದ ಸಹಭಾಗಿತ್ವ, ತಜ್ಞರ ಮಾರ್ಗದರ್ಶನ ಹಾಗೂ ಬಲವಾದ ಸಾಂಸ್ಥಿಕ ವ್ಯವಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಪರಂಪರೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಕೈಗೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಮುಂದಿನ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅನ್ನು ಅವಿಭಾಜ್ಯ ಅಂಗವನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳ ಭಾಗಿ
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಭಾರತೀಯ ಪುರಾತತ್ವ ಸಮೀಕ್ಷೆಯ ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ ಮತ್ತು ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಸೇರಿದಂತೆ ಎಎಸ್‌ಐ, ಕೊಪ್ಪಳ ಜಿಲ್ಲಾಡಳಿತ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುನೆಸ್ಕೋ ತಜ್ಞರ ಅಂತಿಮ ವರದಿ ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಉಲ್ಲೇಖವಾಗುವ ಶಿಫಾರಸುಗಳು ಹಂಪಿಯ ಮುಂದಿನ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಸಮುದಾಯದ ಹಿತಾಸಕ್ತಿಗಳ ದೃಷ್ಟಿಯಿಂದ ಮಹತ್ವ ಪಡೆಯಲಿವೆ.

error: Content is protected !!