Breaking News
ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ ಸಲ್ಲಿಕೆ ನಿರೀಕ್ಷೆ ಸ್ಥಳೀಯರ ಪಾಲ್ಗೊಳ್ಳುವಿಕೆ, ಪರಂಪರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಒತ್ತು

 

 

ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು: ವಿಶ್ವವಿಖ್ಯಾತ ಹಂಪಿ ವಿಶ್ವ ಪರಂಪರೆ ತಾಣದ ಸ್ಮಾರಕಗಳ ಸಂರಕ್ಷಣಾ ಸ್ಥಿತಿ ಹಾಗೂ ಸಂರಕ್ಷಣಾ ಕಾರ್ಯಗಳ ಬಗ್ಗೆ ಯುನೆಸ್ಕೋ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಹಾಗೂ ಇತರ ಸಂಬಂಧಿತ ಇಲಾಖೆಗಳ ನಡುವಿನ ಸಮನ್ವಯಕ್ಕೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ತಂಡವು, ತನ್ನ ಅಂತಿಮ ವರದಿಯನ್ನು ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಹಂಪಿ ವಿಶ್ವ ಪರಂಪರೆ ತಾಣದ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಿದ ಯುನೆಸ್ಕೋ ತಜ್ಞರ ತಂಡವು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ತನ್ನ ಪ್ರಾಥಮಿಕ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿತು.
ಹಂಪಿಯ ಪರಂಪರೆ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ (HWHAMA) ಅಗತ್ಯ ತಜ್ಞ ಮಾನವ ಸಂಪನ್ಮೂಲ ಹಾಗೂ ಆರ್ಥಿಕ ನೆರವು ಒದಗಿಸುವುದು ಮತ್ತು ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಯ್ದುಕೊಳ್ಳುವುದು ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟರು.
ಅಲ್ಲದೆ, ಹಂಪಿ ಪ್ರದೇಶದಲ್ಲಿ ಕೈಗೊಳ್ಳುವ ಮುಂದಿನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಯೋಜನೆಗಳಿಗೆ ಪರಂಪರೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಮೌಲ್ಯಮಾಪನ (ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್) ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಅವರು ಹಂಪಿಯನ್ನು ಜಾಗತಿಕ ಮಹತ್ವದ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿದರು. ಇಲ್ಲಿನ ಸ್ಮಾರಕಗಳ ಸ್ಥಿತಿ ಹಾಗೂ ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಹಂಪಿಯ ಭವಿಷ್ಯದ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯವನ್ನು ಕೇಂದ್ರವಾಗಿರಿಸಬೇಕು ಎಂದು ಹೇಳಿದರು.
ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಸುಸ್ಥಿರ ಪರಂಪರೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ತಜ್ಞರ ತಂಡವು ತನಿಖಾಧಿಕಾರಿಗಳಾಗಿ ಅಲ್ಲ, ಸ್ಮಾರಕದ ಅಭಿವೃದ್ಧಿಗೆ ಸಹಕರಿಸುವ ಸ್ನೇಹಿತರು ಮತ್ತು ಪಾಲುದಾರರಾಗಿ ಭೇಟಿ ನೀಡಿದೆ ಎಂದು ತಿಳಿಸಿದರು.
ಜೀವಂತ ಸಾಂಸ್ಕೃತಿಕ ತಾಣವಾಗಿ ಹಂಪಿ ಅಭಿವೃದ್ಧಿ
ಜಪಾನ್‌ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಮಾತನಾಡಿ, ಹಂಪಿಯನ್ನು ಕೇವಲ ಐತಿಹಾಸಿಕ ಸ್ಮಾರಕಗಳ ಸಮೂಹವಾಗಿ ನೋಡದೆ, ಜೀವಂತ ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಜನರ ದೈನಂದಿನ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಪರಂಪರೆ ಮೌಲ್ಯ ಸಂರಕ್ಷಣೆಗೆ ಸರ್ಕಾರ ಬದ್ಧ
ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಹಂಪಿಯ ಅಸಾಧಾರಣ ಸಾರ್ವತ್ರಿಕ ಮೌಲ್ಯವನ್ನು (Outstanding Universal Value) ಯಾವುದೇ ರಾಜಿ ಇಲ್ಲದೆ ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ಪರಂಪರೆ ಸಂರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯದ ಸಹಭಾಗಿತ್ವ, ತಜ್ಞರ ಮಾರ್ಗದರ್ಶನ ಹಾಗೂ ಬಲವಾದ ಸಾಂಸ್ಥಿಕ ವ್ಯವಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಪರಂಪರೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಕೈಗೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಮುಂದಿನ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅನ್ನು ಅವಿಭಾಜ್ಯ ಅಂಗವನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳ ಭಾಗಿ
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಭಾರತೀಯ ಪುರಾತತ್ವ ಸಮೀಕ್ಷೆಯ ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ ಮತ್ತು ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಸೇರಿದಂತೆ ಎಎಸ್‌ಐ, ಕೊಪ್ಪಳ ಜಿಲ್ಲಾಡಳಿತ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುನೆಸ್ಕೋ ತಜ್ಞರ ಅಂತಿಮ ವರದಿ ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಉಲ್ಲೇಖವಾಗುವ ಶಿಫಾರಸುಗಳು ಹಂಪಿಯ ಮುಂದಿನ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಸಮುದಾಯದ ಹಿತಾಸಕ್ತಿಗಳ ದೃಷ್ಟಿಯಿಂದ ಮಹತ್ವ ಪಡೆಯಲಿವೆ.

Leave a Reply

Your email address will not be published. Required fields are marked *

error: Content is protected !!