Breaking News
ಆರ್.ಆರ್. ಬ್ರದರ್ಸ್‌ಗೆ ಮುಖ ತಿರುಗಿಸಿದ್ರಾ ಸಿದ್ದರಾಮಯ್ಯ? ಆಪ್ತರಾಗಿದ್ದ ನಾಯಕರ ನಡುವೆ ಅಂತರ ಹೆಚ್ಚಾಯಿತೇ? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋ ವೈರಲ್;

 

*ಕೊಪ್ಪಳ ರಾಜಕೀಯದಲ್ಲಿ ಹೊಸ ಚರ್ಚೆ!

 

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೊಪ್ಪಳದ ಆರ್.ಆರ್. (ರಾ..ರಾ..) ಬ್ರದರ್ಸ್ ಎಂದೇ ಖ್ಯಾತರಾದ ಸಂಸದ ಕೆ. ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕುಟುಂಬದೊಂದಿಗೆ ಇದೀಗ ಎಲ್ಲವೂ ಸರಿಯಿಲ್ಲವೇ? ಎಂಬ ಪ್ರಶ್ನೆ ಕೊಪ್ಪಳದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹಿಟ್ನಾಳ ಕುಟುಂಬದ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬೆಂಗಳೂರಿನ ನಿವಾಸಕ್ಕೆ ತೆರಳಿದ್ದ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮದುವೆಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಆರ್.ಆರ್. ಬ್ರದರ್ಸ್ ಕಡೆಗೆ ಮುಖ ಮಾಡದೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಹಾಗೂ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ದೃಶ್ಯಗಳನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಹಿಟ್ನಾಳ ಕುಟುಂಬದ ನಡುವಿನ ಆತ್ಮೀಯತೆ ಕಡಿಮೆಯಾಗಿದೆಯೇ? ರಾಜಕೀಯವಾಗಿ ಇಬ್ಬರ ನಡುವೆ ಅಂತರ ಸೃಷ್ಟಿಯಾಗಿದೆಯೇ? ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿವೆ.

ಮಾನಸ ಪುತ್ರನೊಂದಿಗಿನ ಸಂಬಂಧಕ್ಕೆ ಬಿರುಕು?:

ಒಂದು ಕಾಲದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಸಿದ್ದರಾಮಯ್ಯ ಅವರ ಮಾನಸ ಪುತ್ರ ಎಂದೇ ರಾಜಕೀಯ ವಲಯದಲ್ಲಿ ಬಣ್ಣಿಸಲಾಗುತ್ತಿತ್ತು. ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರಾಘವೇಂದ್ರ ಹಿಟ್ನಾಳ ರಾಜ್ಯ ರಾಜಕಾರಣದಲ್ಲಿಯೂ ಪ್ರಭಾವಿ ಶಾಸಕರಾಗಿ ಗುರುತಿಸಿಕೊಂಡಿದ್ದರು. ಅವರ ರಾಜಕೀಯ ಸಲಹೆಗಳಿಗೆ ಸಿದ್ದರಾಮಯ್ಯ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬ ಮಾತುಗಳೂ ಕೇಳಿಬರುತ್ತಿದ್ದವು.

ಆದರೆ ಇತ್ತೀಚಿನ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಇದರ ಜತೆಗೆ ಕೊಪ್ಪಳದಲ್ಲಿ ನಡೆದ ಕೆಲವು ಕಾರ್ಯಕ್ರಮಗಳ ಬ್ಯಾನರ್‌ಗಳಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಕಾಣಿಸದಿದ್ದುದೂ ಈ ಹಿಂದೆಯೇ ರಾಜಕೀಯ ಚರ್ಚೆಗೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ಕಾವು!

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಈ ಭೇಟಿ ನಡೆದಿರುವುದು ಕುತೂಹಲ ಹೆಚ್ಚಿಸಿದೆ. ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳಿಗೆ ಕೆಲವರು ರಾಜಕೀಯ ಅರ್ಥ ಕಲ್ಪಿಸುತ್ತಿದ್ದರೆ, ಇನ್ನು ಕೆಲವರು ಇದು ಸಹಜ ಭೇಟಿಯ ಸಂದರ್ಭದ ದೃಶ್ಯವಷ್ಟೇ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಒಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಹಿಟ್ನಾಳ ಕುಟುಂಬದ ನಡುವಿನ ಹಿಂದಿನ ಆತ್ಮೀಯ ಸಂಬಂಧಕ್ಕೆ ಈಗ ರಾಜಕೀಯ ಗ್ರಹಣ ಹಿಡಿದಿದೆಯೇ? ಸಚಿವ ಸ್ಥಾನದ ಅಸಮಾಧಾನವೇ ಈ ಅಂತರಕ್ಕೆ ಕಾರಣವೇ? ಅಥವಾ ಸಾಮಾಜಿಕ ಜಾಲತಾಣಗಳ ಚರ್ಚೆಯಷ್ಟೇ ಇದೆಯೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ನಾಯಕರ ಸ್ಪಷ್ಟನೆಯೇ ಉತ್ತರ ನೀಡಬೇಕಿದೆ.

ಆದರೆ, ಆಪ್ತರಾಗಿದ್ದವರ ನಡುವಿನ ಈ ಬೆಳವಣಿಗೆ ಕೊಪ್ಪಳದ ಕಾಂಗ್ರೆಸ್ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸತ್ಯ!

Leave a Reply

Your email address will not be published. Required fields are marked *

error: Content is protected !!