*ಕಂಪನಿಗಳಿಗೆ, ನೆರೆಯ ರಾಜ್ಯಗಳಿಗೆ ನೀರು; ಅನ್ನದಾತರ ಬೆಳೆಗಳಿಗೆ ಮಾತ್ರ ಅಭಾವವೇ?
*ನ. ೨೨ರ ಗಡುವು ನೀಡಿದ ಮಾಜಿ ಸಚಿವ ಕೆ. ಶಿವನಗೌಡ ನಾಯಕ
ಕಿಷ್ಕಿಂಧವಾಣಿ ಸುದ್ದಿ
ರಾಯಚೂರು: ಕೃಷ್ಣಾ–ತುಂಗಭದ್ರಾ ಎಂಬ ಎರಡು ಪ್ರಮುಖ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರ ಹೊಲಗಳಿಗೆ ಸಮರ್ಪಕ ನೀರು ಹರಿಯದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನೀರಾವರಿ ಸೌಲಭ್ಯವಿದ್ದರೂ ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳು ನೀರಿಲ್ಲದೆ ಒಣಗುವ ಆತಂಕ ಎದುರಾಗಿದೆ. ಅನ್ನದಾತರ ಬೆಳೆ ಉಳಿಸಲು ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿ ಮತ್ತು ಭಾಗಶಃ ಕಲಬುರಗಿ ಜಿಲ್ಲೆಗಳ ರೈತರಿಗೆ ನೀರು ಒದಗಿಸಲು ಅಗತ್ಯ ನೀರಿನ ಲಭ್ಯತೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿಲ್ಲ. ಬದಲಾಗಿ ಜಿಂದಾಲ್ ಮತ್ತು ಬೈಡೋಟಾ ಕಂಪನಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ನೀರು ಹರಿಸಲಾಗುತ್ತಿದೆ. ಆದರೆ ಸ್ಥಳೀಯ ರೈತರು ಮಾತ್ರ ತಮ್ಮ ಬೆಳೆಗಳಿಗೆ ನೀರಿಲ್ಲದೆ ಕಂಗಾಲಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗಳ ಹಿತಾಸಕ್ತಿ ಹಾಗೂ ಹೊರರಾಜ್ಯಗಳ ನೀರಿನ ಬೇಡಿಕೆಗಿಂತ ಮೊದಲು ಸ್ಥಳೀಯ ರೈತರ ಕೃಷಿ ಅಗತ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಬೆಳೆಗಳು ಒಣಗಿ ಹೋದ ಬಳಿಕ ನೀರು ಹರಿಸಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಕಂಪನಿಗಳಿಗೆ ಹಾಗೂ ನೆರೆಯ ರಾಜ್ಯಗಳಿಗೆ ನೀರು ಹರಿಸುವ ವಿಚಾರದಲ್ಲಿ ಮರುಪರಿಶೀಲನೆ ನಡೆಸಿ, ಮೊದಲು ರೈತರ ಬೆಳೆಗಳಿಗೆ ಅಗತ್ಯ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಐದು ಜಿಲ್ಲೆಗಳ ರೈತರ ಹಿತಕ್ಕಾಗಿ ನವಲಿ, ತಿಂಥಣಿ ಜಲಾಶಯ ನಿರ್ಮಿಸಿ
ಕೃಷ್ಣಾ–ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ನವಲಿ ಜಲಾಶಯ ಹಾಗೂ ತಿಂಥಣಿ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಐದು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದ್ದು, ನೀರಾವರಿ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಪಕ್ಷಭೇದ ಮರೆತು ರೈತರ ಪರ ನಿಲ್ಲಿ
ರೈತರ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮೌನವಾಗಿರದೆ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಜಕೀಯ ಲೆಕ್ಕಾಚಾರಕ್ಕಿಂತ ರೈತರ ಬದುಕು, ಕೃಷಿ ಮತ್ತು ಅನ್ನದಾತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ನೀರಾವರಿ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಧ್ವನಿ ಎತ್ತಬೇಕಿದೆ ಎಂದು ಹೇಳಿದ್ದಾರೆ.
ನವೆಂಬರ್ ೨೨ರೊಳಗೆ ಪರಿಹಾರಕ್ಕೆ ಗಡುವು
ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಕೇವಲ ಮನವಿಗಳಿಗೆ ಸೀಮಿತಗೊಳಿಸದೆ ಗಂಭೀರವಾಗಿ ಪರಿಗಣಿಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸದೆ ಮಾನವೀಯ ನೆಲೆಯಲ್ಲಿ ತುರ್ತು ನಿರ್ಧಾರ ಕೈಗೊಳ್ಳಬೇಕು. ನವೆಂಬರ್ ೨೨ರೊಳಗಾಗಿ ನೀರಾವರಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಿ, ಬೆಳೆಗಳನ್ನು ಉಳಿಸಲು ಅಗತ್ಯ ನೀರು ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಗಂಗಾವತಿ: ನಗರದಲ್ಲಿ ಇಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಹೇಮಗುಡ್ಡದ ಬಳಿಯ ಟೋಲ್ ಗೇಟ್ ಬಳಿ ಭಕ್ತಿಭಾವದಿಂದ ಬರಮಾಡಿಕೊಂಡರು.
ಶಾಸಕರು ಸ್ವಾಮೀಜಿಗಳಿಗೆ ಆತ್ಮೀಯವಾಗಿ ಸ್ವಾಗತ ಕೋರಿ ಗೌರವ ಸಲ್ಲಿಸಿದರು. ಈ ವೇಳೆ ಮಾಜಿ ಸಂಸದ ಶಿವರಾಮ ಗೌಡ,ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾರಿ ಉತ್ಸಾಹದಿಂದ ಉಪಸ್ಥಿತರಿದ್ದು, ಶ್ರೀಗಳ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದರು.
*ಧಾರ್ಮಿಕ ದತ್ತಿ ಇಲಾಖೆ,ಕಂದಾಯ ಸಚಿವರು ಬೆಂಗಳೂರು ಬಿಟ್ಟು ಅಂಜನಾದ್ರಿ ಗೆ ಕೂಡಲೇ ಬರಲಿ.
*₹೨೪೦ ಕೋಟಿ ಅನುದಾನ ಮಂಜೂರಾದರೂ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯೇಕೆ?
*ಕೇಂದ್ರಕ್ಕೆ ₹೧,೩೫೦ ಕೋಟಿ ಅನುದಾನದ ಬೇಡಿಕೆ
*ಮಾಲೀಕತ್ವದ ಗೊಂದಲಕ್ಕೆ ನ್ಯಾಯಾಲಯವೇ ಅಂತಿಮ ತೆರೆ ಎಳೆಯಲಿ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೋಟ್ಯಂತರ ಹಿಂದೂಗಳ ಆರಾಧನಾ ಹಾಗೂ ಶ್ರದ್ಧಾಕೇಂದ್ರವಾಗಿರುವ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಅಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಒಟ್ಟಾರೆ ₹೨೪೦ ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೆ, ಕ್ಷೇತ್ರದ ಮತ್ತಷ್ಟು ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ₹೧,೩೫೦ ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಷ್ಟೆಲ್ಲ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಜಿಲ್ಲಾಡಳಿತದ ಕಾರ್ಯವೈಖರಿಯೇ ಕಾರಣವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಅರಣ್ಯ ಇಲಾಖೆ ನಿಯಮಗಳ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿ!:
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಬಳಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬೆಟ್ಟದ ಮಾಲೀಕತ್ವ ಹಾಗೂ ಪೂಜಾ ಕಾರ್ಯಗಳ ವಿಚಾರ ಬಂದಾಗ ೧೯೫೦ರ ದಾಖಲೆಗಳನ್ನು ಮುಂದಿಟ್ಟುಕೊಂಡು ಅಂಜನಾದ್ರಿ ಬೆಟ್ಟ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದೆ ಎಂದು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುತ್ತಿದೆ. ಹಾಗಾದರೆ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಮಾತ್ರ ಅರಣ್ಯ ಇಲಾಖೆಯ ನಿಯಮಗಳ ನೆಪವೇಕೆ? ಜಿಲ್ಲಾಡಳಿತದ ಈ ದ್ವಂದ್ವ ನಿಲುವಿಗೆ ಅಧಿಕಾರಿಗಳು ಉತ್ತರಿಸಬೇಕು ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ವಿದ್ಯಾದಾಸ ಬಾಬಾ ಅವರಿಗೆ ಪೂಜಾ ಕಾರ್ಯಗಳ ಜವಾಬ್ದಾರಿ ವಹಿಸಿ
ಅಂಜನಾದ್ರಿ ಕ್ಷೇತ್ರದ ಧಾರ್ಮಿಕ ಪರಂಪರೆ ಹಾಗೂ ಪೂಜಾ ಪದ್ಧತಿಗಳಿಗೆ ಗೌರವ ನೀಡಬೇಕು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಬೇಕು. ಧಾರ್ಮಿಕ ಕಾರ್ಯಗಳು ಹಾಗೂ ಪೂಜಾ ಕೈಂಕರ್ಯಗಳನ್ನು ವಿದ್ಯಾದಾಸ ಬಾಬಾ ಅವರಿಗೆ ವಹಿಸಬೇಕು. ವಿದ್ಯಾದಾಸ ಬಾಬಾ ಹಾಗೂ ಅವರ ಆಪ್ತರ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸುವುದು ಸರಿಯಲ್ಲ. ಧಾರ್ಮಿಕ ಕ್ಷೇತ್ರದ ವಿಚಾರಗಳನ್ನು ಸಂಯಮದಿಂದ ಹಾಗೂ ಕಾನೂನುಬದ್ಧವಾಗಿ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾಲೀಕತ್ವ ವಿವಾದಕ್ಕೆ ನ್ಯಾಯಾಲಯವೇ ಅಂತಿಮ ತೀರ್ಮಾನ ಕೈಗೊಳ್ಳಲಿ:
ಅಂಜನಾದ್ರಿ ಬೆಟ್ಟದ ಮಾಲೀಕತ್ವದ ಕುರಿತು ಉಂಟಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಮತ್ತೊಮ್ಮೆ ನೋಟಿಫಿಕೇಶನ್ ಹೊರಡಿಸಲು ನ್ಯಾಯಾಲಯ ಅವಕಾಶ ನೀಡಿದ್ದು, ಕಾನೂನು ಪ್ರಕ್ರಿಯೆಯಂತೆ ನೋಟಿಫಿಕೇಶನ್ ಹೊರಡಿಸುವ ಮೂಲಕ ಮಾಲೀಕತ್ವದ ವಿಚಾರವನ್ನು ಸ್ಪಷ್ಟಪಡಿಸಬೇಕು.
ನ್ಯಾಯಾಲಯವೇ ಮಧ್ಯಪ್ರವೇಶಿಸಿ ಅಂಜನಾದ್ರಿ ಬೆಟ್ಟದ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದನ್ನು ದಾಖಲೆಗಳ ಆಧಾರದಲ್ಲಿ ನಿರ್ಧರಿಸಲಿ. ನ್ಯಾಯಾಲಯದ ಅಂತಿಮ ತೀರ್ಪು ವಿದ್ಯಾದಾಸ ಬಾಬಾ ಹಾಗೂ ಜಿಲ್ಲಾಡಳಿತ ಇಬ್ಬರಿಗೂ ಸಮಾಧಾನವಾಗುವ ರೀತಿಯಲ್ಲಿ ಇರಲಿ. ನ್ಯಾಯಾಲಯ ಕೈಗೊಳ್ಳುವ ತೀರ್ಮಾನಕ್ಕೆ ವಿದ್ಯಾದಾಸ ಬಾಬಾ ಸೇರಿದಂತೆ ಎಲ್ಲರೂ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸಚಿವರು ಬೆಂಗಳೂರಿನಿಂದ ಅಂಜನಾದ್ರಿಗೆ ಬರಲಿ:
ಕಂದಾಯ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವರು ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳ ವರದಿಗಳನ್ನು ಆಧರಿಸುವ ಬದಲು ಅಂಜನಾದ್ರಿ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಬೇಕು. ಕ್ಷೇತ್ರದ ವಾಸ್ತವ ಸ್ಥಿತಿ, ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಡೆತಡೆಗಳು, ಧಾರ್ಮಿಕ ಕಾರ್ಯಗಳ ನಿರ್ವಹಣೆ ಹಾಗೂ ಮಾಲೀಕತ್ವದ ಗೊಂದಲಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸರ್ಕಾರಕ್ಕೆ ಅಸಡ್ಡೆ
ಅಂಜನಾದ್ರಿ ಕ್ಷೇತ್ರ ಕೇವಲ ಒಂದು ಬೆಟ್ಟವಲ್ಲ. ಇದು ಕೋಟ್ಯಂತರ ಭಕ್ತರ ನಂಬಿಕೆ, ಧಾರ್ಮಿಕ ಭಾವನೆ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಮಹತ್ವದ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರುತ್ತಿದೆ. ರಾಜಕೀಯ ಭೇದಭಾವ ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಂಜೂರಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿಧಿ, ಪ್ರಶಸ್ತಿಗಳನ್ನು ಸ್ಥಾಪಿಸಿವೆ.
ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಅಭಿಮಾನಿ ಪ್ರಶಸ್ತಿ”, ಮೈಸೂರಿನ “ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ‘ಮಾನವೀಯ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ಅಂಕಣ/ಸಂಪಾದಕೀಯ/ಪರಿಣಾಮಕಾರಿ ವರದಿಗೆ “ಅಭಿಮನ್ಯು ಪ್ರಶಸ್ತಿ”, ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ “ಪ್ರಜಾ ಸಂದೇಶ ದತ್ತಿ ಪ್ರಶಸ್ತಿ”, ಹಾಗೂ ಹಿರಿಯ ಪತ್ರಕರ್ತರ ಹೆಸರಿನ ಸ್ಥಾಪಿಸಲಾದ ಕೃಷಿವಲಯದಲ್ಲಿ ಅತ್ಯುತ್ತಮ ವರದಿ/ಅಂಕಣ/ಲೇಖನ “ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ” ಗಳನ್ನು ಸ್ಥಾಪಿಸಿವೆ. ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ ನಗದು ಬಹುಮಾನ ಒಳಗೊಂಡಿವೆ.
ಈ ಪ್ರಶಸ್ತಿಗಳಿಗೆ ಆಸಕ್ತ ಪತ್ರಕರ್ತರು 01-01-2026 ರಿಂದ 30-10-2026ರ ವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ-ವರದಿಯನ್ನು ಕಳುಹಿಸಬಹುದು.
ಕನ್ನಡ ದೈನಿಕ-ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
ಲೇಖನ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ‘ಅಭಿಮಾನಿ ಪ್ರಶಸ್ತಿ-2026’, ‘ಮೈಸೂರು ದಿಗಂತ ಪ್ರಶಸ್ತಿ-2026’, “ಅಭಿಮನ್ಯು ಪ್ರಶಸ್ತಿ-2026* “ಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2026” ಹಾಗೂ “ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ-2026” ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಇದೇ 21-11-2026ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಪ್ರಶಸ್ತಿಗಳ ಆಯ್ಕೆ ಸಂಬಂಧ ಅಕಾಡೆಮಿಯು ಕೈಗೊಳ್ಳುವಾ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾವತಿ: ನವೆಂಬರ್ 1ರಂದು ಗಂಗಾವತಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವತಿಯಿಂದ ಪಥಸಂಚಲನ ನಡೆಯಲಿದ್ದು, ಪಥಸಂಚಲನದಲ್ಲಿ ತಾಯಿ ಭುವನೇಶ್ವರಿ ಹಾಗೂ ಕನ್ನಡ ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಬೇಕು ಎಂದು ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಸಂಘಟಕರಲ್ಲಿ ಮನವಿ ಮಾಡಿದ್ದಾರೆ.
ಕಳೆದ ವರ್ಷ ಆರೆಸ್ಸೆಸ್ ಸಂಘಟನೆಯ ಶತಮಾನೋತ್ಸವದ ಅಂಗವಾಗಿ ಪಥಸಂಚಲನ ಆಯೋಜಿಸಲಾಗಿತ್ತು. ಈ ವರ್ಷವೂ ನವೆಂಬರ್ 1ರಂದು ಪಥಸಂಚಲನ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಆದರೆ, ಅಂದು ಕನ್ನಡಿಗರ ಹೆಮ್ಮೆಯ ಹಬ್ಬವಾದ ಕನ್ನಡ ರಾಜ್ಯೋತ್ಸವವೂ ಇರುವುದರಿಂದ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ತಿಳಿಸಿದ್ದಾರೆ.
ಪಥಸಂಚಲನದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಕನ್ನಡ ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಬೇಕು. ಇದರಿಂದ ನಾಡಿನ ಗೌರವ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಮತ್ತಷ್ಟು ಪ್ರೋತ್ಸಾಹ ದೊರೆಯಲಿದೆ ಎಂದು ಕೆ. ಬಸವರಾಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
*ನ್ಯಾಯಾಲಯದ ಆದೇಶದ ಹೊರತಾಗಿ ಇತರ ಚಟುವಟಿಕೆ ನಡೆಸಿದರೆ ಕಾನೂನು ಕ್ರಮ: ಜಿಲ್ಲಾಡಳಿತದ ಎಚ್ಚರಿಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ವಿದ್ಯಾದಾಸ ಬಾಬಾ ಅವರಿಗೆ ಕೊಪ್ಪಳ ಜಿಲ್ಲಾಡಳಿತ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಪೂಜೆ ಸಲ್ಲಿಸುವುದು, ಸಹಾಯಕರನ್ನು ಇರಿಸಿಕೊಳ್ಳುವುದು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಹೊರತಾಗಿ ಬೇರೆ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 2026ರ ಅಕ್ಟೋಬರ್ 13ರಂದು ವಿದ್ಯಾದಾಸ ಬಾಬಾ ಅವರಿಗೆ ಅಧಿಕೃತ ಪತ್ರ ನೀಡಲಾಗಿದೆ.
ನ್ಯಾಯಾಲಯದ ಆದೇಶದಂತೆ ಸೌಲಭ್ಯ
ವಿದ್ಯಾದಾಸ ಬಾಬಾ ಅವರು ಅಕ್ಟೋಬರ್ 12ರಂದು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಜಿಲ್ಲಾಡಳಿತ, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ವಿದ್ಯಾದಾಸ ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಅವಕಾಶವಿದೆ. ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ದೇವಸ್ಥಾನದ ಆವರಣದಲ್ಲಿ ಇರಲು ಒಂದು ಕೊಠಡಿ ಒದಗಿಸುವುದು ಹಾಗೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ದೇವಸ್ಥಾನದ ಗರ್ಭಗುಡಿಗೆ ವಿದ್ಯಾದಾಸ ಬಾಬಾ ಅವರೊಂದಿಗೆ ಒಬ್ಬ ಸಹಾಯಕ ಅಥವಾ ಶಿಷ್ಯನಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿತ್ತು.
ಆದೇಶ ಪಾಲನೆಗೆ ಜಿಲ್ಲಾಡಳಿತ ಸೂಚನೆ:
ಕರ್ನಾಟಕ ಉಚ್ಚ ನ್ಯಾಯಾಲಯದ ವಿವಿಧ ರಿಟ್ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪುಗಳ ಹಿನ್ನೆಲೆಯಲ್ಲಿ ವಿದ್ಯಾದಾಸ ಬಾಬಾ ಅವರಿಗೆ ಈಗಾಗಲೇ ಪೂಜಾ ಕಾರ್ಯಗಳನ್ನು ನಿರ್ವಹಿಸಲು, ವಾಸ್ತವ್ಯಕ್ಕೆ ಒಂದು ಕೊಠಡಿ ಬಳಸಲು ಹಾಗೂ ವೇದ ಪಾಠಶಾಲೆಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತದ ಪತ್ರದಲ್ಲಿ ತಿಳಿಸಲಾಗಿದೆ.
ಆದ್ದರಿಂದ ನ್ಯಾಯಾಲಯದ ಆದೇಶದ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಆದೇಶದಲ್ಲಿ ತಿಳಿಸಿರುವ ಅವಕಾಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಗಂಗಾವತಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ದೊರಕಿಸಿಕೊಡುವ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದರೂ, ಈ ನಿಟ್ಟಿನಲ್ಲಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮತ್ತು ಇತರ ಜನಪ್ರತಿನಿಧಿಗಳು ಇನ್ನಷ್ಟು ಸಂಘಟಿತವಾಗಿ ಹೋರಾಟ ನಡೆಸದೇ ಮೌನ ವಹಿಸಿದ್ದು ಇಡೀ ಸಮಾಜವನ್ನು ಕತ್ತಲಿನಲ್ಲಿಸಿದೆ.ಕೂಡಲೇ ಕನಕ ಗುರು ಪೀಠದ ಪೂಜ್ಯ ಗುರುಗಳು ನೇತೃತ್ವ ವಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಣ್ಣು ತೆರೆಸುವ ಕಾರ್ಯ ಮಾಡಬೇಕಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಮುಖಂಡರಾದ ಪರಶುರಾಮ ಇಟಗಿ,ಕೆ.ಕೃಷ್ಣ ಹಾಗೂ ಮಲ್ಲಪ ಮಡ್ಲಿಗೇರಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಒಟ್ಟು ಮೀಸಲಾತಿಯನ್ನು ಶೇ.೫೬ಕ್ಕೆ ಹೆಚ್ಚಿಸಿದ ಕಾನೂನಿನ ರಕ್ಷಣೆಗೆ ವಾಲ್ಮೀಕಿ ಸಮಾಜದ ಮುಖಂಡರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವುದು, ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡುವುದು, ಕಾನೂನು ಹೋರಾಟಕ್ಕೆ ಒತ್ತಾಯಿಸುವುದು ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಅತ್ಯುತ್ತಮ ಕಾರ್ಯವಾಗಿದೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನಿನ ಪ್ರಮುಖ ನಿಬಂಧನೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರ ಪ್ರಕಟಿಸಿದೆ. ಈ ಬೆಳವಣಿಗೆಯ ನಡುವೆಯೂ ಮೀಸಲಾತಿ ಹೆಚ್ಚಳದ ಪರವಾಗಿ ಕಾನೂನು ಹೋರಾಟವನ್ನು ಬಲಪಡಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಒತ್ತಾಯಿಸುತ್ತಿದ್ದಾರೆ.
ವಾಲ್ಮೀಕಿ ಸಮಾಜದ ಹೋರಾಟದಿಂದ ಪಾಠ ಕಲಿಯಬೇಕಿದೆ:ಮೀಸಲಾತಿಯಂತಹ ಮಹತ್ವದ ವಿಚಾರದಲ್ಲಿ ಸಮಾಜದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗಿ ಹೋರಾಡಬೇಕೆಂಬ ಸಂದೇಶವನ್ನು ವಾಲ್ಮೀಕಿ ಸಮಾಜದ ಮುಖಂಡರ ಪ್ರಯತ್ನಗಳು ಮುಂದಿಡುತ್ತಿವೆ. ಸರ್ಕಾರದ ಮಟ್ಟದಲ್ಲಿ ನಿರಂತರ ಮನವಿ ಸಲ್ಲಿಸುವುದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ಮೀಸಲಾತಿ ವಿಚಾರದಲ್ಲಿ ಜನಜಾಗೃತಿ ಮೂಡಿಸುವುದು ಮತ್ತು ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸುವುದು ಅಗತ್ಯವಾಗಿದೆ.
ಇದೇ ಮಾದರಿಯಲ್ಲಿ ಕುರುಬ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಕೇವಲ ಸಭೆ-ಸಮಾರಂಭಗಳಲ್ಲಿ ಭರವಸೆ ನೀಡುವುದಕ್ಕಿಂತ, ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಹೋರಾಟ ನಡೆಸುವುದು ಮುಖ್ಯವಾಗಿದೆ.
ಮೀಸಲಾತಿ ಬೇಡಿಕೆಗೆ ಸಂಘಟಿತ ಪ್ರಯತ್ನ ಅಗತ್ಯ
ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಅಧ್ಯಯನ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ದಾಖಲೆಗಳು ಮತ್ತು ಕಾನೂನುಬದ್ಧ ಮಾನದಂಡಗಳ ಆಧಾರದಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಿದೆ.ಸಮಾಜದ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯಬೇಕು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸೂಕ್ತ ಕ್ರಮಗಳು ಕೈಗೊಳ್ಳಬೇಕು. ಈ ಉದ್ದೇಶಗಳ ಸಾಧನೆಗಾಗಿ ಮೀಸಲಾತಿ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸುವ ಜವಾಬ್ದಾರಿ ಸಮಾಜದ ಮುಖಂಡರ ಮೇಲಿದೆ.
ಸಮಾಜದ ನಿರೀಕ್ಷೆಗೆ ಜನಪ್ರತಿನಿಧಿಗಳು ಸ್ಪಂದಿಸಲಿ:
ವಾಲ್ಮೀಕಿ ಸಮಾಜದ ಜನಪ್ರತಿನಿಧಿಗಳು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನಗಳಂತೆಯೇ, ಕುರುಬ ಸಮಾಜದ ಜನಪ್ರತಿನಿಧಿಗಳೂ ತಮ್ಮ ಸಮಾಜದ ಬೇಡಿಕೆಗೆ ಆದ್ಯತೆ ನೀಡಬೇಕಿದೆ.
ಕುರುಬ ಸಮಾಜದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಒಗ್ಗಟ್ಟಿನ ನಿಲುವು ರೂಪಿಸಬೇಕಿದೆ. ಸರ್ಕಾರದೊಂದಿಗೆ ನಿರಂತರ ಸಂವಾದ ನಡೆಸಿ, ಸಂಬಂಧಪಟ್ಟ ಆಯೋಗಗಳು ಹಾಗೂ ಕಾನೂನು ತಜ್ಞರ ಸಲಹೆ ಪಡೆದು, ಎಸ್ಟಿ ಮೀಸಲಾತಿ ಬೇಡಿಕೆಯ ಕುರಿತು ಕಾನೂನುಬದ್ಧವಾಗಿ ಮುಂದುವರಿಯಬೇಕಿದೆ.
ಸಮಾಜದ ಹಕ್ಕುಗಳಿಗಾಗಿ ಹೋರಾಡುವುದು ಜನಪ್ರತಿನಿಧಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ. ಕುರುಬ ಸಮಾಜದ ಎಸ್ಟಿ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸಂಘಟಿತ ಕ್ರಮ ಕೈಗೊಳ್ಳಲಿದೆ ಎಂದು ಒತ್ತಾಯಿಸಿದ್ದಾರೆ.
*30 ಜನ ಖಾಸಗಿ ಸಿಬ್ಬಂದಿಯ ವಿಳಾಸವನ್ನು ಬರೆದುಕೊಂಡು ಕೆಳಗೆ ಇಳಿಸಿದ ಪೊಲೀಸರು.
ಮುಚ್ವಿದ್ದ ಕಾಣಿಕೆ ಹುಂಡಿ ಪೆಟ್ಟಿಗೆಗಳನ್ನು ಬಾಬಾ ಆಕ್ಷೇದ ಮಧ್ಯೆ ಮೊದಲಿದ್ದ ಜಾಗದಲ್ಲಿರಿದ ಅಧಿಕಾರಿಗಳು.
ಮುಜರಾಯಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
ಅಧಿಕಾರಿಗಳೊಂದಿಗೆ ಬಾಬಾ ವಾಗ್ವಾದ;
ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಖಡಕ್ ಸೂಚನೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ
ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಮಹಾಂತ ವಿದ್ಯಾದಾಸ್ ಬಾಬಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಬುಧವಾರ ಜಿಲ್ಲಾಡಳಿತದ ಅಧಿಕಾರಿಗಳ ತಂಡ ದೇವಸ್ಥಾನದ ಆಫೀಸ್ ಸೇರಿದಂತೆ ವಿವಿಧ ಕೊಠಡಿಗಳಿಗೆ ವಿದ್ಯಾದಾಸ್ ಬಾಬಾ ಹಾಕಿದ್ದ ಬೀಗಗಳನ್ನು ತೆರವುಗೊಳಿಸಿ, ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ದೇವಸ್ಥಾನದ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತು.
ಸಹಾಯಕ ಆಯುಕ್ತ ಮಹೆಬೂಬ್ ಜಿಲಾನಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ ಹಾಗೂ ತಹಶೀಲ್ದಾರ್ ವಿನಾಯಕ ಗೋಡಬಲೆ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ೧೨ ಗಂಟೆ ಸುಮಾರಿಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿತು.
ದೇವಸ್ಥಾನದ ಆಡಳಿತ ಕಚೇರಿ, ಉಗ್ರಾಣ, ನೀರು ಸಂಗ್ರಹ ಕೊಠಡಿ, ವೇದಪಾಠ ಶಾಲೆ ಹಾಗೂ ಲಡ್ಡು ಕೌಂಟರ್ಗಳಿಗೆ ಹಾಕಲಾಗಿದ್ದ ಬೀಗಗಳನ್ನು ತೆರವುಗೊಳಿಸಲಾಯಿತು. ಬಳಿಕ ಮುಜರಾಯಿ ಇಲಾಖೆಯ ಸಿಬ್ಬಂದಿ ಕೊಠಡಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರ್ತವ್ಯಕ್ಕೆ ಹಾಜರಾದರು.
ಕಾಣಿಕೆ ಪೆಟ್ಟಿಗೆ ಸ್ಥಳಾಂತರಕ್ಕೆ ವಿರೋಧ
ನಂತರ ೪೭೧ ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನದ ಗರ್ಭಗುಡಿಗೆ ತೆರಳಿದ ಅಧಿಕಾರಿಗಳ ತಂಡ ಮಂಗಳಾರತಿ ಸ್ವೀಕರಿಸಿತು. ಕಾಣಿಕೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಮುಚ್ಚಲಾಗಿದ್ದ ಕಾಣಿಕೆ ಪೆಟ್ಟಿಗೆಗಳ ಮೇಲಿನ ಬಟ್ಟೆಗಳನ್ನು ತೆರವುಗೊಳಿಸಿ, ಅವುಗಳನ್ನು ಮೊದಲಿದ್ದ ಸ್ಥಳಗಳಲ್ಲಿ ವ್ಯವಸ್ಥಿತವಾಗಿ ಇರಿಸಲು ಕ್ರಮ ಕೈಗೊಂಡಿತು.
ಆದರೆ, ದೊಡ್ಡ ಕಾಣಿಕೆ ಪೆಟ್ಟಿಗೆಯನ್ನು ಮೊದಲಿದ್ದ ಸ್ಥಳದಲ್ಲಿ ಇರಿಸುವ ವಿಚಾರದಲ್ಲಿ ವಿದ್ಯಾದಾಸ್ ಬಾಬಾ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಈ ವಿಚಾರವಾಗಿ ಚರ್ಚೆ ನಡೆಯಿತು. ಹಿಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ತೋರಿಸಿದ ಬಳಿಕ ದೊಡ್ಡ ಕಾಣಿಕೆ ಪೆಟ್ಟಿಗೆಯನ್ನು ಗರ್ಭಗುಡಿಯ ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಇರಿಸಲು ಬಾಬಾ ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ನ್ಯಾಯಾಲಯದ ಆದೇಶದ ಬಗ್ಗೆ ವಾಗ್ವಾದ
ಗರ್ಭಗುಡಿಯಲ್ಲಿ ಅಧಿಕಾರಿಗಳು ಮತ್ತು ವಿದ್ಯಾದಾಸ್ ಬಾಬಾ ನಡುವೆ ನ್ಯಾಯಾಲಯದ ಆದೇಶದ ಪಾಲನೆ ಕುರಿತು ಮಾತಿನ ಚಕಮಕಿ ನಡೆಯಿತು. ಹೈಕೋರ್ಟ್ ಆದೇಶವನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಬಾಬಾ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ನ್ಯಾಯಾಲಯದ ಆದೇಶದಲ್ಲಿನ ಅಂಶಗಳನ್ನು ವಿವರಿಸಿದರು.
ಜಿಲ್ಲಾಡಳಿತವು ಅಕ್ಟೋಬರ್ ೧೩ರಂದು ಬಾಬಾ ಅವರಿಗೆ ನೀಡಿದ್ದ ನಿಯಮ ಪಾಲನಾ ನೋಟಿಸ್ನ್ನೂ ಅಧಿಕಾರಿಗಳು ತೋರಿಸಿದರು. ಆದರೂ ಬಾಬಾ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಸಹಾಯಕ ಆಯುಕ್ತ ಮಹೆಬೂಬ ಜಿಲಾನಿ ಮಾತನಾಡಿ,, ಅಂಜನಾದ್ರಿ ದೇವಸ್ಥಾನದಲ್ಲಿ ವಿದ್ಯಾದಾಸ್ ಬಾಬಾ ಅವರು ಅರ್ಚಕರಾಗಿ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮಾತ್ರ ದೇವಸ್ಥಾನದಲ್ಲಿ ಇರಬೇಕು. ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸೂಚಿಸಿದರು. ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ತಾಲೂಕು ಆಡಳಿತ ದೇವಸ್ಥಾನದ ವ್ಯವಸ್ಥೆಗಳನ್ನು ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.
ಅನುಯಾಯಿಗಳಿಗೆ ಎಚ್ಚರಿಕೆ:
ದೇವಸ್ಥಾನದ ಬೆಟ್ಟದ ಮೇಲೆ ಸೇವೆಯ ಹೆಸರಿನಲ್ಲಿ ವಾಸ್ತವ್ಯ ಹೂಡಿರುವವರ ವಿವರಗಳನ್ನು ಡಿವೈಎಸ್ಪಿ ಜಯಪ್ಪ ನ್ಯಾಮಗೌಡ ಪಡೆದುಕೊಂಡರು. ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಸ್ವಾಮೀಜಿಗಳು ಹಾಗೂ ಇತರರು ತಮ್ಮ ವಾಸ್ತವ್ಯದ ವ್ಯವಸ್ಥೆಯನ್ನು ಬೇರೆಡೆ ಮಾಡಿಕೊಳ್ಳಬೇಕು. ಸಂಜೆ ೬ ಗಂಟೆಯೊಳಗೆ ಬೆಟ್ಟದಿಂದ ತೆರಳಬೇಕು ಎಂದು ಸೂಚಿಸಿದರು.
ವಿದ್ಯಾದಾಸ್ ಬಾಬಾ ಅವರು ಅಡುಗೆ ತಯಾರಿಕೆ, ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸಗಳಿಗೆ ನೇಮಿಸಿದ್ದ ಸುಮಾರು ೩೦ಕ್ಕೂ ಹೆಚ್ಚು ಸಿಬ್ಬಂದಿಯ ಹೆಸರು ಮತ್ತು ವಿಳಾಸಗಳನ್ನು ಅಧಿಕಾರಿಗಳು ಪಡೆದುಕೊಂಡರು. ಇನ್ನು ಮುಂದೆ ದೇವಸ್ಥಾನದಲ್ಲಿ ಕೆಲಸಕ್ಕೆ ಹಾಜರಾಗಬಾರದು. ಸೂಚನೆ ಉಲ್ಲಂಘಿಸಿ ಮತ್ತೆ ಕೆಲಸಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಅವರನ್ನು ಮನೆಗೆ ಕಳುಹಿಸಲಾಯಿತು.
ಬಾಬಾ ಅವರ ಭಾವಚಿತ್ರವಿದ್ದ ಫಲಕ ತೆರವು:
ದೇವಸ್ಥಾನದ ಆವರಣದಲ್ಲಿ ವಿದ್ಯಾದಾಸ್ ಬಾಬಾ ಅವರ ಭಾವಚಿತ್ರವಿದ್ದ ಎರಡು ನಾಮಫಲಕಗಳು ಹಾಗೂ ಗರ್ಭಗುಡಿಯ ಹೊರಭಾಗದ ಗೋಡೆಗೆ ಅಂಟಿಸಲಾಗಿದ್ದ ಪೋಸ್ಟರ್ಗಳನ್ನು ಮುಜರಾಯಿ ಇಲಾಖೆಯ ಸಿಬ್ಬಂದಿ ತೆರವುಗೊಳಿಸಿದರು.
ವೇದಪಾಠ ಶಾಲೆಯನ್ನು ಪುನರಾರಂಭಿಸುವಂತೆ ಓರ್ವ ಸ್ವಾಮೀಜಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ದೇವಸ್ಥಾನದಲ್ಲಿ ಯಾರಾದರೂ ಅನುಚಿತವಾಗಿ ವರ್ತಿಸಿದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತದ ಸಿಬ್ಬಂದಿಗೆ ಸೂಚಿಸಲಾಯಿತು.
ಮೂರು ಗಂಟೆಗಳ ಕಾಲ ಪರಿಶೀಲನೆ
ಬೆಳಗ್ಗೆ ೧೨ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಅಧಿಕಾರಿಗಳ ತಂಡ ಅಂಜನಾದ್ರಿ ಬೆಟ್ಟದ ಮೇಲಿನ ಹಾಗೂ ಕೆಳಗಿನ ವಿವಿಧ ಕೊಠಡಿಗಳನ್ನು ಪರಿಶೀಲಿಸಿತು. ದೇವಸ್ಥಾನದ ಆಡಳಿತ ಮತ್ತು ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ರಂಗಪ್ಪ ದೊಡ್ಡಮನಿ, ಶಿರಸ್ತೇದಾರ್ ಮಹೇಶ್ ದಲಾಲ್, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ್, ಗ್ರಾಮ ಆಡಳಿತಾಧಿಕಾರಿ ಹನುಮಂತಪ್ಪ ವಟಾರ್ ಸೇರಿದಂತೆ ೨೫ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಲ್ಲಾಡಳಿತದ ಕ್ರಮಕ್ಕೆ ವಿದ್ಯಾದಾಸ್ ಬಾಬಾ ಆಕ್ಷೇಪ
ಜಿಲ್ಲಾಡಳಿತದ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ, ಹೈಕೋರ್ಟ್ ಜಿಲ್ಲಾಡಳಿತದ ಹಿಂದಿನ ಕ್ರಮಗಳನ್ನು ರದ್ದುಗೊಳಿಸಿದ್ದು, ತಮ್ಮ ಟ್ರಸ್ಟ್ಗೆ ಅಂಜನಾದ್ರಿಯ ಸಂಪೂರ್ಣ ಆಡಳಿತ ನಿರ್ವಹಣೆ ನೀಡುವಂತೆ ಆದೇಶಿಸಿದೆ ಎಂದು ಪ್ರತಿಪಾದಿಸಿದರು.
ಆದರೂ ಕೊಪ್ಪಳ ಜಿಲ್ಲಾಡಳಿತ ಅಧಿಕಾರ ದುರುಪಯೋಗ ಮಾಡುತ್ತಿದೆ. ದೇವಸ್ಥಾನದ ಅಭಿವೃದ್ಧಿಗಿಂತ ವೈಯಕ್ತಿಕ ಪ್ರತಿಷ್ಠೆಯ ವಿಚಾರಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು.
ಅಂಜನಾದ್ರಿ ದೇವಸ್ಥಾನದ ಆಡಳಿತದ ಮೇಲಿನ ಹಿಡಿತದ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ವಿದ್ಯಾದಾಸ್ ಬಾಬಾ ನಡುವಿನ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು: ವಿಶ್ವವಿಖ್ಯಾತ ಹಂಪಿ ವಿಶ್ವ ಪರಂಪರೆ ತಾಣದ ಸ್ಮಾರಕಗಳ ಸಂರಕ್ಷಣಾ ಸ್ಥಿತಿ ಹಾಗೂ ಸಂರಕ್ಷಣಾ ಕಾರ್ಯಗಳ ಬಗ್ಗೆ ಯುನೆಸ್ಕೋ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಹಾಗೂ ಇತರ ಸಂಬಂಧಿತ ಇಲಾಖೆಗಳ ನಡುವಿನ ಸಮನ್ವಯಕ್ಕೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ತಂಡವು, ತನ್ನ ಅಂತಿಮ ವರದಿಯನ್ನು ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಹಂಪಿ ವಿಶ್ವ ಪರಂಪರೆ ತಾಣದ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಿದ ಯುನೆಸ್ಕೋ ತಜ್ಞರ ತಂಡವು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ತನ್ನ ಪ್ರಾಥಮಿಕ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿತು.
ಹಂಪಿಯ ಪರಂಪರೆ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ (HWHAMA) ಅಗತ್ಯ ತಜ್ಞ ಮಾನವ ಸಂಪನ್ಮೂಲ ಹಾಗೂ ಆರ್ಥಿಕ ನೆರವು ಒದಗಿಸುವುದು ಮತ್ತು ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಯ್ದುಕೊಳ್ಳುವುದು ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟರು.
ಅಲ್ಲದೆ, ಹಂಪಿ ಪ್ರದೇಶದಲ್ಲಿ ಕೈಗೊಳ್ಳುವ ಮುಂದಿನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಯೋಜನೆಗಳಿಗೆ ಪರಂಪರೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಮೌಲ್ಯಮಾಪನ (ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್) ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಅವರು ಹಂಪಿಯನ್ನು ಜಾಗತಿಕ ಮಹತ್ವದ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿದರು. ಇಲ್ಲಿನ ಸ್ಮಾರಕಗಳ ಸ್ಥಿತಿ ಹಾಗೂ ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಹಂಪಿಯ ಭವಿಷ್ಯದ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯವನ್ನು ಕೇಂದ್ರವಾಗಿರಿಸಬೇಕು ಎಂದು ಹೇಳಿದರು.
ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಸುಸ್ಥಿರ ಪರಂಪರೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ತಜ್ಞರ ತಂಡವು ತನಿಖಾಧಿಕಾರಿಗಳಾಗಿ ಅಲ್ಲ, ಸ್ಮಾರಕದ ಅಭಿವೃದ್ಧಿಗೆ ಸಹಕರಿಸುವ ಸ್ನೇಹಿತರು ಮತ್ತು ಪಾಲುದಾರರಾಗಿ ಭೇಟಿ ನೀಡಿದೆ ಎಂದು ತಿಳಿಸಿದರು.
ಜೀವಂತ ಸಾಂಸ್ಕೃತಿಕ ತಾಣವಾಗಿ ಹಂಪಿ ಅಭಿವೃದ್ಧಿ
ಜಪಾನ್ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಮಾತನಾಡಿ, ಹಂಪಿಯನ್ನು ಕೇವಲ ಐತಿಹಾಸಿಕ ಸ್ಮಾರಕಗಳ ಸಮೂಹವಾಗಿ ನೋಡದೆ, ಜೀವಂತ ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಜನರ ದೈನಂದಿನ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಪರಂಪರೆ ಮೌಲ್ಯ ಸಂರಕ್ಷಣೆಗೆ ಸರ್ಕಾರ ಬದ್ಧ
ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಹಂಪಿಯ ಅಸಾಧಾರಣ ಸಾರ್ವತ್ರಿಕ ಮೌಲ್ಯವನ್ನು (Outstanding Universal Value) ಯಾವುದೇ ರಾಜಿ ಇಲ್ಲದೆ ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ಪರಂಪರೆ ಸಂರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯದ ಸಹಭಾಗಿತ್ವ, ತಜ್ಞರ ಮಾರ್ಗದರ್ಶನ ಹಾಗೂ ಬಲವಾದ ಸಾಂಸ್ಥಿಕ ವ್ಯವಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಪರಂಪರೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಕೈಗೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಮುಂದಿನ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅನ್ನು ಅವಿಭಾಜ್ಯ ಅಂಗವನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳ ಭಾಗಿ
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಭಾರತೀಯ ಪುರಾತತ್ವ ಸಮೀಕ್ಷೆಯ ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ ಮತ್ತು ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಸೇರಿದಂತೆ ಎಎಸ್ಐ, ಕೊಪ್ಪಳ ಜಿಲ್ಲಾಡಳಿತ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುನೆಸ್ಕೋ ತಜ್ಞರ ಅಂತಿಮ ವರದಿ ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಉಲ್ಲೇಖವಾಗುವ ಶಿಫಾರಸುಗಳು ಹಂಪಿಯ ಮುಂದಿನ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಸಮುದಾಯದ ಹಿತಾಸಕ್ತಿಗಳ ದೃಷ್ಟಿಯಿಂದ ಮಹತ್ವ ಪಡೆಯಲಿವೆ.
ಗಂಗಾವತಿ(ಮುಸ್ಟೂರು): ಕಾರಟಗಿ ತಾಲೂಕಿಗೆ ಸೇರಿರುವ ಮುಸ್ಟೂರು ಗ್ರಾಮವನ್ನು ಪುನಃ ಗಂಗಾವತಿ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುಸ್ಟೂರು ಗ್ರಾಮವು ಗಂಗಾವತಿ ಪಟ್ಟಣದಿಂದ ಸುಮಾರು ೧೩ ಕಿ.ಮೀ. ದೂರದಲ್ಲಿದೆ. ಆದರೆ ಕಾರಟಗಿ ತಾಲೂಕಿಗೆ ಸೇರಿರುವುದರಿಂದ ಗ್ರಾಮಸ್ಥರು ಸರ್ಕಾರಿ ಕಚೇರಿಗಳ ಕೆಲಸಗಳಿಗಾಗಿ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಮುಸ್ಟೂರಿನಿಂದ ಕಾರಟಗಿಗೆ ನೇರ ಬಸ್ ಸೌಲಭ್ಯವಿಲ್ಲದ ಕಾರಣ ಗಂಗಾವತಿ ಮೂಲಕ ಸುತ್ತುವರಿದು ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಕೆಲಸಗಳು, ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಸ್ಟೂರು ಗ್ರಾಮವು ಗಂಗಾವತಿಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಆದ್ದರಿಂದ ಗ್ರಾಮಸ್ಥರ ಅನುಕೂಲಕ್ಕಾಗಿ ಮುಸ್ಟೂರು ಗ್ರಾಮವನ್ನು ಪುನಃ ಗಂಗಾವತಿ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಜಿಲ್ಲಾಧಿಕಾರಿಗಳು ಅಗತ್ಯ ವರದಿ ಪಡೆದು ಕಂದಾಯ ಇಲಾಖೆಯ ಮೂಲಕ ಸರ್ಕಾರಕ್ಕೆ ಶೀಘ್ರ ಶಿಫಾರಸು ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಈ ಬೇಡಿಕೆಯ ಕುರಿತು ಚರ್ಚಿಸಲಾಗಿದ್ದು, ಸರ್ಕಾರವು ಶೀಘ್ರ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದರ ಜತೆಗೆ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಮುಸ್ಟೂರು ಗ್ರಾಮವನ್ನು ಪುನಃ ಗಂಗಾವತಿ ತಾಲೂಕಿಗೆ ಸೇರ್ಪಡೆಗೊಳಿಸುವ ಮೂಲಕ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.