Breaking News
ಆನೆಗೊಂದಿ ಮತ್ತು ಋಷಿಮುಖ ಪರ್ವತ ಪ್ರದೇಶ ಹೊರತುಪಡಿಸಿ ಉಳಿದ ಗ್ರಾಮಗಳನ್ನು ಹಂಪಿ ಪ್ರಾಧಿಕಾರದಿಂದ ಕೈಬಿಡಲು ಕ್ರಮ. ಮುಂದಿನ ಅಧಿವೇಶನದಲ್ಲಿ ನಿಯಮ ತಿದ್ದುಪಡಿಗೆ ಸರ್ಕಾರಕ್ಕೆ ಮನವಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಥಳೀಯರ ಬದುಕು, ವ್ಯಾಪಾರ ಮತ್ತು ಕೃಷಿ ಆಧಾರಿತ ಪ್ರವಾಸೋದ್ಯಮಕ್ಕೆ ಆದ್ಯತೆ

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿರುವ ಆನೆಗೊಂದಿ ಭಾಗದ 15 ಗ್ರಾಮಗಳ ಜನರು ಪ್ರಾಧಿಕಾರದ ಕಠಿಣ ನಿಯಮಗಳಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ವ್ಯಾಪಾರ ವಹಿವಾಟು ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಗೊಂದಿ ಮತ್ತು ಋಷಿಮುಖ ಪರ್ವತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ನಿಯಮಾವಳಿಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಹಂಪಿ ವಿಶ್ವ ಪರಂಪರೆಯ ತಾಣವಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಈ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಈ ಭಾಗದ ಜನರ ಬದುಕು ಮತ್ತು ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಸ್ಥಳೀಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂಬುದು ಅವರ ನಿಲುವಾಗಿದೆ.

15 ಗ್ರಾಮಗಳ ಜನರಿಗೆ ನಿಯಮಗಳಿಂದ ತೊಂದರೆ

2002ರಲ್ಲಿ ವಿಶ್ವ ಪರಂಪರೆಯ ತಾಣದ ಸಂರಕ್ಷಣೆಯ ಉದ್ದೇಶದಿಂದ ಹಂಪಿಯಿಂದ ದೂರದಲ್ಲಿರುವ ಸಂಗಾಪುರ, ಮಲ್ಲಾಪುರ, ಸಾಣಾಪುರ ಸೇರಿದಂತೆ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದಾಗಿ ಈ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಸ್ಥಳೀಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಆನೆಗೊಂದಿ ಮತ್ತು ಋಷಿಮುಖ ಪರ್ವತ ಪ್ರದೇಶಗಳಲ್ಲಿ ಪುರಾತತ್ವ ಮಹತ್ವದ ಸ್ಮಾರಕಗಳಿದ್ದರೂ, ಉಳಿದ ಗ್ರಾಮಗಳಲ್ಲಿಯೂ ಪ್ರಾಧಿಕಾರದ ನಿಯಮಗಳು ಅನ್ವಯಿಸುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಪ್ರಮುಖ ಆಕ್ಷೇಪವಾಗಿದೆ.

ಮನೆ ನಿರ್ಮಾಣ, ಕಟ್ಟಡ ಕಾಮಗಾರಿ, ಸಣ್ಣಪುಟ್ಟ ವ್ಯಾಪಾರ ಹಾಗೂ ಪ್ರವಾಸಿಗರಿಗೆ ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸುವುದಕ್ಕೂ ಹಲವು ನಿರ್ಬಂಧಗಳು ಅಡ್ಡಿಯಾಗುತ್ತಿವೆ ಎಂಬ ದೂರುಗಳಿವೆ.

ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ

ಆನೆಗೊಂದಿ ಭಾಗದ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಇಲಾಖೆಯ ಸಚಿವರೊಂದಿಗೆ ಈ ವಿಷಯ ಚರ್ಚಿಸಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ಆನೆಗೊಂದಿ ಮತ್ತು ಋಷಿಮುಖ ಪರ್ವತ ಪ್ರದೇಶಗಳ ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವನ್ನು ಉಳಿಸಿಕೊಂಡು, ಉಳಿದ ಗ್ರಾಮಗಳ ಜನರಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಜೀವನೋಪಾಯ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಬೇಕಿದೆ.

ಈ ಭಾಗದ ಮೂಲ ಪರಿಸರವನ್ನು ಸಂರಕ್ಷಿಸುವುದರ ಜತೆಗೆ ಕೃಷಿ, ಕೃಷಿ ಆಧಾರಿತ ಪ್ರವಾಸೋದ್ಯಮ, ಹೋಂಸ್ಟೇ ಹಾಗೂ ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ನೀಡುವ ವಿಶೇಷ ನಿಯಮಗಳನ್ನು ಜಾರಿಗೆ ತರಬೇಕಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ.

 ಆನೆಗೊಂದಿ ಪ್ರದೇಶಕ್ಕೆ ಯುನೆಸ್ಕೋ–ಐಕೋಮೋಸ್ ಮೇಲ್ವಿಚಾರಣಾ ತಂಡ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ಮಾರಕಗಳ ಸಂರಕ್ಷಣಾ ಕ್ರಮಗಳನ್ನು ಪರಿಶೀಲಿಸುತ್ತಿದೆ.

ಈ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳನ್ನು ತಂಡದ ಗಮನಕ್ಕೆ ತಂದು, ಪ್ರಾಧಿಕಾರದ ನಿಯಮಗಳನ್ನು ಸಡಿಲಿಸುವಂತೆ ಶಿಫಾರಸು ಮಾಡಲು ಮನವಿ ಸಲ್ಲಿಸಬೇಕೇ ಎಂಬ ಕುರಿತು ಗ್ರಾಮಸ್ಥರಲ್ಲಿ ಚರ್ಚೆಗಳು ನಡೆದಿವೆ.

ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರವೇ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ತರಬೇಕಿದೆ. ಹೀಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕಾನೂನುಬದ್ಧವಾಗಿ ಅಗತ್ಯ ಬದಲಾವಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.

ಪರಂಪರೆ ಸಂರಕ್ಷಣೆಯೊಂದಿಗೆ ಜನರ ಬದುಕಿಗೂ ಆದ್ಯತೆ

ಹಂಪಿ ವಿಶ್ವ ಪರಂಪರೆಯ ತಾಣದ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಆನೆಗೊಂದಿ ಭಾಗದ ಜನರ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ. ಐತಿಹಾಸಿಕ ಸ್ಮಾರಕಗಳು ಮತ್ತು ನೈಸರ್ಗಿಕ ಪರಿಸರವನ್ನು ಉಳಿಸಿಕೊಂಡು, ಸ್ಥಳೀಯರು ಕೃಷಿ ಹಾಗೂ ಪ್ರವಾಸೋದ್ಯಮದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಮತ್ತು ನಿಯಮಾವಳಿಗಳನ್ನು ಮರುಪರಿಶೀಲಿಸಿ, ಆನೆಗೊಂದಿ ಭಾಗದ ಗ್ರಾಮಸ್ಥರ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಆನೆಗೊಂದಿ–ಕಿಷ್ಕಿಂಧಾ ಭಾಗದ ಸ್ಥಳೀಯರ ಸಮಸ್ಯೆ ಆಲಿಸಲು ಯುನೆಸ್ಕೋ ತಂಡದೊಂದಿಗೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಚ್.ಆರ್. ಶ್ರೀನಾಥ ಮನವಿ

 

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ–ಆನೆಗೊಂದಿ ಕಿಷ್ಕಿಂಧಾ ಪ್ರದೇಶದ ಮೇಲ್ವಿಚಾರಣೆಗಾಗಿ ಆಗಮಿಸುತ್ತಿರುವ ಯುನೆಸ್ಕೋ ಹಾಗೂ ಐಕೋಮೋಸ್ ತಂಡದೊಂದಿಗೆ ಆನೆಗೊಂದಿ ಭಾಗದ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಂಬಂಧಿತ ಪಾಲುದಾರರಿಗೆ (ಸ್ಟೇಕ್‌ಹೋಲ್ಡರ್‌ಗಳು) ತಮ್ಮ ಅಹವಾಲುಗಳನ್ನು ಮಂಡಿಸಲು ಅವಕಾಶ ಕಲ್ಪಿಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ.

ಆನೆಗೊಂದಿ–ಕಿಷ್ಕಿಂಧಾ ಪ್ರದೇಶವು ಐತಿಹಾಸಿಕ, ಪುರಾತತ್ವ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ವಿಶಿಷ್ಟ ಪ್ರದೇಶವಾಗಿದೆ. ಈ ಭಾಗದ ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ದೇವಾಲಯಗಳು, ಪಾರಂಪರಿಕ ನೆಲೆಗಳು ಹಾಗೂ ನೈಸರ್ಗಿಕ ಪರಿಸರದ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ.

ಈ ಹಿನ್ನೆಲೆಯಲ್ಲಿ ವಿಶ್ವ ಪರಂಪರೆಯ ತಾಣದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಯುನೆಸ್ಕೋ ತಂಡದ ಭೇಟಿ ಮಹತ್ವ ಪಡೆದುಕೊಂಡಿದೆ.

ಆದರೆ, ವಿಶ್ವ ಪರಂಪರೆಯ ತಾಣದ ಸಂರಕ್ಷಣೆಯ ಹೆಸರಿನಲ್ಲಿ ಜಾರಿಗೊಳಿಸುವ ನಿಯಮಗಳು ಸ್ಥಳೀಯ ಜನರ ದೈನಂದಿನ ಬದುಕು, ಮನೆ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ವ್ಯಾಪಾರ-ವಹಿವಾಟು ಹಾಗೂ ಪ್ರವಾಸೋದ್ಯಮ ಆಧಾರಿತ ಜೀವನೋಪಾಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

 ಸ್ಥಳೀಯ ಜನರ ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ಅರಿತುಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ.

ಸ್ಥಳೀಯರ ಅಹವಾಲುಗಳಿಗೆ ಅವಕಾಶ ನೀಡಿ

ಯುನೆಸ್ಕೋ ತಂಡವು ಹಂಪಿ ವಿಶ್ವ ಪರಂಪರೆಯ ಪ್ರದೇಶದ ಮೇಲ್ವಿಚಾರಣೆ ನಡೆಸುವ ಸಂದರ್ಭದಲ್ಲಿ ಆನೆಗೊಂದಿ ಹಾಗೂ ಕಿಷ್ಕಿಂಧಾ ಭಾಗದ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕು.

ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಸ್ಥಳೀಯರಿಗೆ ತಂಡದೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಬೇಕೆಂದು ಹೆಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ.

ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದರ ಜತೆಗೆ, ವಿಶ್ವ ಪರಂಪರೆಯ ತಾಣದ ಸಂರಕ್ಷಣೆ ಮತ್ತು ಸ್ಥಳೀಯರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ಈ ಭಾಗದ ಜನರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅಭಿವೃದ್ಧಿ ಹಾಗೂ ಸಂರಕ್ಷಣಾ ಯೋಜನೆಗಳನ್ನು ರೂಪಿಸುವುದು ಮುಖ್ಯವಾಗಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ಸಂರಕ್ಷಣೆಯ ಜತೆಗೆ ಜನರ ಬದುಕಿಗೂ ಆದ್ಯತೆ ಅಗತ್ಯ

ಹಂಪಿ–ಆನೆಗೊಂದಿ ಪ್ರದೇಶವು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಐತಿಹಾಸಿಕ ತಾಣವಾಗಿದೆ.

 ಇಲ್ಲಿನ ಪ್ರವಾಸೋದ್ಯಮವನ್ನು ಅವಲಂಬಿಸಿ ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಸಣ್ಣ ವ್ಯಾಪಾರಿಗಳು, ಪ್ರವಾಸಿ ಮಾರ್ಗದರ್ಶಕರು, ವಾಹನ ಚಾಲಕರು, ಹೋಟೆಲ್ ಮತ್ತು ವಸತಿ ವ್ಯವಸ್ಥೆ ಒದಗಿಸುವವರು ಸೇರಿದಂತೆ ಹಲವು ವರ್ಗದ ಜನರು ಪ್ರವಾಸೋದ್ಯಮದಿಂದ ಜೀವನೋಪಾಯ ಕಂಡುಕೊಂಡಿದ್ದಾರೆ.

ಹೀಗಾಗಿ, ವಿಶ್ವ ಪರಂಪರೆಯ ತಾಣದ ಮೂಲ ಸ್ವರೂಪ ಮತ್ತು ಐತಿಹಾಸಿಕ ಮಹತ್ವವನ್ನು ಕಾಪಾಡುವ ಜತೆಗೆ ಸ್ಥಳೀಯರ ಬದುಕು ಹಾಗೂ ಉದ್ಯೋಗಾವಕಾಶಗಳಿಗೂ ಸೂಕ್ತ ರಕ್ಷಣೆ ದೊರೆಯಬೇಕು. ಯಾವುದೇ ನಿಯಮಗಳು ಅಥವಾ ನಿರ್ಬಂಧಗಳನ್ನು ಜಾರಿಗೊಳಿಸುವಾಗ ಸ್ಥಳೀಯ ಜನರ ಅಭಿಪ್ರಾಯಗಳನ್ನು ಪರಿಗಣಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಕಾರ್ಯನಿರ್ವಹಿಸಬೇಕೆಂಬುದು ಈ ಮನವಿಯ ಪ್ರಮುಖ ಉದ್ದೇಶವಾಗಿದೆ.

ಯುನೆಸ್ಕೋ ತಂಡದ ಭೇಟಿಯು ಸ್ಥಳೀಯರ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ಒಂದು ಅವಕಾಶವಾಗಿದ್ದು, ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಸಹಕರಿಸಬೇಕೆಂದು ಎಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆನೆಗೊಂದಿ ಭಾಗದ ಸ್ಥಳೀಯರು ಉಪಸ್ಥಿತರಿದ್ದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ 19 ಗ್ರಾಮಗಳನ್ನು ಕೈಬಿಡಲು ಆಗ್ರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ! ಅವೈಜ್ಞಾನಿಕ ವಲಯ ವಿಂಗಡಣೆಯಿಂದ ಸ್ಥಳೀಯರ ಬದುಕಿಗೆ ಸಂಕಷ್ಟ: ಗ್ರಾಮಸ್ಥರ ಆಕ್ಷೇಪ ಅ. 25ರಂದು ಯುನೆಸ್ಕೋ ತಂಡದ ಭೇಟಿ ಹಿನ್ನೆಲೆ ಸಮಸ್ಯೆಗಳನ್ನು ಗಮನಕ್ಕೆ ತರಲು ನಿರ್ಧಾರ

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ(ಆನೆಗೊಂದಿ): ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನೆಗೊಂದಿ ಭಾಗದ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವ ಕ್ರಮ ಹಾಗೂ ಕೋರ್‌ ಜೋನ್‌, ಬಫರ್‌ ಜೋನ್‌ ಮತ್ತು ಯೆಲ್ಲೋ ಜೋನ್‌ ವಿಂಗಡಣೆಯ ನಿಯಮಗಳನ್ನು ಖಂಡಿಸಿರುವ ಆನೆಗೊಂದಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳ 19 ಗ್ರಾಮಗಳ ನಿವಾಸಿಗಳು, ತಮ್ಮ ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

2002 ರಲ್ಲಿ ಆನೆಗೊಂದಿ ಭಾಗದ ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾಧಿಕಾರದ ವಿವಿಧ ನಿಯಮಗಳು ಹಾಗೂ ನಿರ್ಬಂಧಗಳಿಂದ ಸ್ಥಳೀಯರ ದೈನಂದಿನ ಬದುಕು, ಜೀವನೋಪಾಯ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.

ಪಾರಂಪರಿಕ ತಾಣಗಳ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆನೆಗೊಂದಿ, ಕಿಷ್ಕಿಂಧಾ ಹಾಗೂ ಅಂಜನಾದ್ರಿ ಪ್ರದೇಶಗಳು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿವೆ. ಈ ಪ್ರದೇಶಗಳ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳ ಹಕ್ಕುಗಳಿಗೆ ಧಕ್ಕೆಯಾಗಬಾರದು.

ತಲೆತಲಾಂತರಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರ ಬದುಕು ಮತ್ತು ಜೀವನೋಪಾಯಕ್ಕೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಅಕ್ಟೋಬರ್ 25ರಂದು ವಿಶ್ವಸಂಸ್ಥೆಯ ಯುನೆಸ್ಕೋ ತಂಡವು ಆನೆಗೊಂದಿ, ಕಿಷ್ಕಿಂಧಾ ಅಂಜನಾದ್ರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಪಾಲುದಾರರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದ್ದು, ಆನೆಗೊಂದಿ ಭಾಗದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ತಂಡದ ಗಮನಕ್ಕೆ ತರಲು ಮುಂದಾಗಿದ್ದಾರೆ.

2002 ರಲ್ಲಿ ಹೊಸಪೇಟೆ ಭಾಗದ ಹೋಟೆಲ್ ಮಾಲೀಕರ ಹಿತಾಸಕ್ತಿಗೆ ಅನುಕೂಲವಾಗುವಂತೆ ಆನೆಗೊಂದಿ ಭಾಗದ 19 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಗ್ರಾಮಗಳ ಸೇರ್ಪಡೆಯ ನಿರ್ಧಾರವನ್ನು ಮರುಪರಿಶೀಲಿಸಿ, ಸ್ಥಳೀಯರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
19 ಗ್ರಾಮಗಳನ್ನು ಕೈಬಿಡಲು ಒತ್ತಾಯ
ಆನೆಗೊಂದಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಬರುವ 19 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕು. ಕೋರ್‌ ಜೋನ್‌, ಬಫರ್‌ ಜೋನ್‌ ಮತ್ತು ಯೆಲ್ಲೋ ಜೋನ್‌ ವಿಂಗಡಣೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು.

ಸ್ಥಳೀಯರ ಬದುಕುವ ಹಕ್ಕು, ಮನೆ ನಿರ್ಮಾಣ, ವ್ಯಾಪಾರ ಹಾಗೂ ಜೀವನೋಪಾಯಕ್ಕೆ ಅಡ್ಡಿಯಾಗದಂತೆ ನಿಯಮಗಳನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯುನೆಸ್ಕೋ ತಂಡದ ಭೇಟಿ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು. ಆನೆಗೊಂದಿ ಭಾಗದ ಜನರ ಹಿತಾಸಕ್ತಿಯನ್ನು ಪರಿಗಣಿಸಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಯುನೆಸ್ಕೋ ಮೇಲ್ವಿಚಾರಣೆ ಸಭೆಗೆ ರಾಜಮನೆತನ ಸೇರಿ ಸ್ಥಳೀಯರನ್ನು ಆಹ್ವಾನಿಸುವಲ್ಲಿ ನಿರ್ಲಕ್ಷ್ಯ ಆಕ್ರೋಶ

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ; ಕಿಷ್ಕಿಂಧಾ ಅಂಜನಾದ್ರಿ ಹಾಗೂ ಆನೆಗೊಂದಿ ಭೇಟಿ ನೀಡಲಿರುವ ಯುನೆಸ್ಕೋ ಮೇಲ್ವಿಚಾರಣೆ ತಂಡಕ್ಕೆ ಅಗತ್ಯ ಮಾಹಿತಿ ನೀಡಲು ಅ.25ರಂದು ಕಿಷ್ಕಿಂಧಾ ಅಂಜನಾದ್ರಿ ಬಳಿ ಆಯೋಜನೆ ಮಾಡಿರುವ ಸಭೆಗೆ ಆನೆಗೊಂದಿ ರಾಜಮನೆತನದ ಲಲಿತರಾಣಿ ಶ್ರೀರಂಗದೇವರಾಯಲು, ರಾಮದೇವರಾಯಲು,ಹರಿಹರದೇವರಾಯಲು, ಕುಪ್ಪರಾಜು ಹಾಗೂ ಆನೆಗೊಂದಿ ಭಾಗದ ಪ್ರವಾಸೋದ್ಯಮ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದಿ ಕಿಷ್ಕಿಂಧಾ ಟ್ರಸ್ಟ್ ಮುಖ್ಯಸ್ಥೆ ಶಮಾ ಪವಾರ್ ಸೇರಿ ಗ್ರಾ.ಪಂ.ಗಳ ಮಾಜಿ ಅಧ್ಯಕ್ಷರುಗಳು,ಉಪಾಧ್ಯಕ್ಷರುಗಳು, ಹಿರಿಯರನ್ನು, ಆನೆಗೊಂದಿ, ಸಾಣಾಪೂರ ಭಾಗದ ಹೊಟೇಲ್ ಮಾಲೀಕರನ್ನು, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸದೇ ಗಂಗಾವತಿ, ಸೇರಿ‌ ಬೇರೆ ಊರುಗಳ ವಾಸಿಗಳನ್ನು ಸಭೆ ಕೊಪ್ಪಳ ಜಿಲ್ಲಾಡಳಿತ ಆಹ್ವಾನಿರುವುದಕ್ಜೆ ರಾಜವಂಶಸ್ಥರಾದ ಹರಿಹರದೇವರಾಯಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳಿಂದ ಆನೆಗೊಂದಿ ಭಾಗದ ಸ್ಮಾರಕಗಳು ಮತ್ತು ದೇವಸ್ಥಾನಗಳು ಮತ್ತು ಪರಿಸರವನ್ನು ಕಾಪಾಡುವಲ್ಲಿ ರಾಜ ಮನೆತನದವರು ಮತ್ತು ಪ್ರಮುಖವಾಗಿ ಬೇರೆ ಬೇರೆ ಊರುಗಳ ಮುಖಂಡರು ರೈತರು, ಕೃಷಿಕಾರ್ಮಿಕರು ಮತ್ತು ಗೈಡ್ಗಳು ಅರ್ಚಕರು ಕಾರಣರಾಗಿದ್ದಾರೆ. ಇವರೆಲ್ಲರನ್ನು ಬಿಟ್ಟು ಜಿಲ್ಲಾಡಳಿತವು ಕೆಲವರಿಗೆ ಮಾತ್ರ ಆಹ್ವಾನ ನೀಡಿದೆ. ಜೊತೆಗೆ ಗಂಗಾವತಿಯ ಸಂಘ, ಸಂಸ್ಥೆ ಅವರಿಗೆ ಆಹ್ವಾನ ನೀಡುವ ಅವಶ್ಯಕತೆ ಇರಲಿಲ್ಲ. ಆನೆಗೊಂದಿ, ಸಾಣಾಪೂರ, ಮಲ್ಲಾಪುರ ಮತ್ತು ಸಂಗಾಪುರ ಈ ಭಾಗದವರನ್ನು ಆಹ್ವಾನಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಜೊತೆಗೆ ಈಗಿರುವ ಸ್ಮಾರಕಗಳು, ಪರಿಸರವನ್ನು ಸಂರಕ್ಷಣೆ ಮಾಡುವ ಸಲಹೆ ನೀಡಬೇಕಿತ್ತು. ಕೂಡಲೇ ಜಿಲ್ಲಾಡಳಿತದವರು ಪುನಃ ಮತ್ತೊಂದು ಬಾರಿ ಸ್ಥಳೀಯರನ್ನು ಸಭೆಗೆ ಕರೆಯುವಂತೆ ಹರಿಹರದೇವರಾಯಲು ಒತ್ತಾಯಿಸಿದ್ದಾರೆ.

ನಕಲಿ ಸ್ಟಿಂಗ್‌ ಆಪರೇಷನ್‌ ಕೃತ್ಯದ ಕಾರಣೀಪುರುಷನ ಪತ್ತೆಗಾಗಿ ಕೇಸ್ ದಾಖಲು: ಮಾಜಿ ಸಿಎಂ ಸಿದ್ದರಾಮಯ್ಯ

*ತಪ್ಪೇ ಮಾಡದ ನನಗೆ ಬೇಸರವೂ ಇಲ್ಲ, ಭಯವೂ ಇಲ್ಲ. ನ್ಯಾಯಯುತ ತನಿಖೆ ನಡೆಯಲಿ ಎಂದಷ್ಟೇ ಒತ್ತಾಯಿಸುತ್ತೇನೆ

*ನನ್ನ ಬಳಿ ಅಧಿಕಾರ ಇಲ್ಲದಾಗ ಷಡ್ಯಂತ್ರ ಮಾಡಿದ್ದಾರೆ. ಅವರ ಉದ್ದೇಶ ಸಫಲವಾಗಲ್ಲ – ಸಿದ್ದರಾಮಯ್ಯ.

 

ಕಿಷ್ಕಿಂಧವಾಣಿ ಸುದ್ದಿ

ಮೈಸೂರು:

ಮೈಸೂರು ದಸರಾ ಉಸ್ತುವಾರಿಯನ್ನು ಹಲವು ಮಂದಿ ಸಚಿವರಿಗೆ ಹಂಚಿಕೆ ಮಾಡಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾ ಆಚರಣೆಗಾಗಿ ಪ್ರತಿ ನಿತ್ಯವೂ 3 ಮಂದಿ ಸಚಿವರಿಗೆ ಉಸ್ತುವಾರಿ ವಹಿಸಲಾಗಿತ್ತು, ಆದರೆ ಈ ಸಚಿವರೇ ಸರಿಯಾಗಿ ಬಂದಿರಲಿಲ್ಲ. ನನ್ನ ಪ್ರಕಾರ ಈ ರೀತಿ ಜವಾಬ್ದಾರಿ ಹಂಚಿಕೆ ಮಾಡುವ ಅಗತ್ಯವಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿ ಮಾಡಿದ್ದರು. ಈಗ ಸರ್ಕಾರವು ಬೇರೆ, ಮುಖ್ಯಮಂತ್ರಿಗಳು ಬೇರೆ ಎಂದು ಮಾಜಿ ಸಿಎಂ ಹಾಗೂ ಸಿಡ್ಲೂಸಿ ಸದಸ್ಯ ಸಿದ್ದರಾಮಯ್ಯ ತಿಳಿಸಿದರು.

ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಮ್ಮ ವಿರುದ್ಧ ನಡೆದ ನಕಲಿ ಸ್ಟಿಂಗ್‌ ಆಪರೇಷನ್‌ ವೀಡಿಯೋಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಸುಳ್ಳು ಕೇಸ್. ನನ್ನನ್ನು ಬ್ಲಾಕ್‌ ಮೇಲ್‌ ಮಾಡುವ ಉದ್ದೇಶದಿಂದ ಮಾಡಿದ್ದ ಪ್ರಕರಣವಿದು. ಆದ್ದರಿಂದ ಸತ್ಯ ಹೊರಗೆ ಬರಲಿ ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು ಜೊತೆಗೆ ಇದರ ಹಿಂದೆ ಯಾರಿದ್ದಾರೆ ಎಂದು ಸಹ ಗೊತ್ತಾಬೇಕು. ಇದೊಂದು ಸುಳ್ಳು ಸೃಷ್ಟಿ ಎಂಬುದು ಗೊತ್ತಿರುವುದಕ್ಕೆ ನಾನು ದೂರು ನೀಡಿದ್ದೇನೆ ಹಾಗೂ ಈ ಸುಳ್ಳು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್‌ ಕೋರ್ಟ್‌ ನಿಂದ ತಡೆಯಾಜ್ಞೆ ತಂದಿದ್ದೇನೆ. ನಾನು 8 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದೆ, ಆಗ ನನ್ನ ಮೇಲೆ ಬ್ಲಾಕ್‌ ಮೇಲ್‌ ಮಾಡುವ ಯಾವುದೇ ಘಟನೆಗಳು ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರವಿಲ್ಲ.

ದಕ್ಷಿಣ ಕನ್ನಡದ ಕೃಪಾ ಆಳ್ವಾ ಎನ್ನುವ ಮಹಿಳೆ ಹಾಗೂ ರಾಕೇಶ್‌ ಶೆಟ್ಟಿ ಈ ಇಬ್ಬರೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ತಾವೇ ಮಾಡಿದ್ದು ಎಂದು ರಾಕೇಶ್‌ ಶೆಟ್ಟಿ ಸಹ ಒಪ್ಪಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ತಾವು ಸಿದ್ದರಾಮಯ್ಯ ಅವರ ಪರ ನಿಲ್ಲುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ಜಾರಿಯಲ್ಲಿದೆ. ಈ ವಿಚಾರದಲ್ಲಿ ಯಾರೂ ನನ್ನ ಪರ ನಿಲ್ಲಬೇಕಾದ ಅಗತ್ಯವಿಲ್ಲ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು, ಇಷ್ಟು ಮಾತ್ರ ಆಗಬೇಕಿರುವುದು. ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಜನ ಅದನ್ನು ಒಪ್ಪುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸ್‌ ತನಿಖೆಯ ಬಗ್ಗೆ ನಿಮಗೆ ವಿಶ್ವಾಸವಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ತನಿಖೆಯ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನ್ಯಾಯಯುತವಾಗಿ ನಡೆಯಬೇಕು ಎನ್ನುವುದು ನನ್ನ ಒತ್ತಾಯವೆಂದು ತಿಳಿಸಿದರು. ಈ ಪ್ರಕರಣದ ತನಿಖೆಗೆ ಎಸ್‌ ಐ ಟಿ ರಚಿಸುವ ಅಗತ್ಯವೇನೂ ಇಲ್ಲ. ಈಗ ನಡೆಯುತ್ತಿರುವ ತನಿಖೆಯನ್ನೇ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.

ಈ ಸ್ಟಿಂಗ್‌ ಷಡ್ಯಂತ್ರದ ಹಿಂದೆ ಕಾಂಗ್ರೆಸ್‌ ನಾಯಕರ ಕೈವಾಡವಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಯಾರಿದ್ದಾರೆ, ನಮ್ಮ ಪಕ್ಷದವರು ಇದ್ದಾರಾ? ಬೇರೆ ಪಕ್ಷದವರು ಇದ್ದಾರ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕು ಎಂದು ಅವರು ತಿಳಿಸಿದರು.

ಈ ವಿಚಾರ ಯಾವಾಗ ನಿಮ್ಮ ಗಮನಕ್ಕೆ ಬಂದಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಗಮನಕ್ಕೆ ಬಂದಿದ್ದು ಸೆಪ್ಟಂಬರ್‌ 26ರಂದು. ನಾನು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದಮೇಲೆ ನನಗೆ ಬೇಸರವಾಗುವ ಪ್ರಶ್ನೆಯಿಲ್ಲ. ತೇಜೋವಧೆ ಮಾಡಲು ಯಾರೇ ಹೊರಟರೂ ಸತ್ಯ ಏನೆಂದು ನನಗೆ ಗೊತ್ತಿರುತ್ತದೆ. ನಾನು ಬೇಜಾರಾಗುವ ಅಥವಾ ಹೆದರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈ ಪ್ರಕರಣವಂತೂ ನೂರಕ್ಕೆ ನೂರು ಸೃಷ್ಟಿ ಮಾಡಿರುವುದು. ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದುದ್ದು. ಅಂದಿನಿಂದ ಇಂದಿನ ವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ಆಗಲೂ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ ಎಂಬುದಂತು ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗಂಗಾವತಿಯಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡದಂತೆ ವಿವಿಧ ಸಂಘಟನೆಗಳ ಆಗ್ರಹ ನ. 3ರಂದು ನಡೆಯಲಿರುವ ಸಮಾವೇಶದಿಂದ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗುವ ಆತಂಕ: ಜಿಲ್ಲಾಡಳಿತಕ್ಕೆ ಬಸಾಭಿಮಾನಿಗಳಿಂಸ ಮನವಿ ಸಲ್ಲಿಕೆ.

 

 

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದದಲ್ಲಿ ನವೆಂಬರ್ 3ರಂದು ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಸವಪರ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ನಗರದ ಶ್ರೀಕೃಷ್ಣದೇವರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಒತ್ತಾಯಿಸಿದರು.
ಬಸವಕೇಂದ್ರ ಗಂಗಾವತಿ ಅಧ್ಯಕ್ಷ ಕೆ. ಬಸವರಾಜ ಹಾಗೂ ಬಸವಾಭಿಮಾನಿಗಳಾದ ಶ್ರೀಶೈಲಪಟ್ಟಣಶೆಟ್ಟಿ,ವಿರೇಶ, ಎ.ಕೆ.ಮಹೇಶ
ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೀಡಿರುವ ಮನವಿಯಲ್ಲಿ, ಸಮಾವೇಶದಲ್ಲಿ ಭಾಗವಹಿಸಲಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಹಿಂದಿನ ಹೇಳಿಕೆಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿ, ಗಂಗಾವತಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಉಲ್ಲೇಖ
2025ರಲ್ಲಿ ಕರ್ನಾಟಕದಾದ್ಯಂತ ನಡೆದ ಬಸವ ಸಂಸ್ಕೃತಿ ಅಭಿಯಾನವು ಬಸವತತ್ವಗಳ ಪ್ರಸಾರ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ವಿವಿಧ ಸಮಾಜಗಳ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಬಸವಭಕ್ತರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆದರೆ, ಬಳಿಕ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಬಸವ ಸಂಸ್ಕೃತಿ ಅಭಿಯಾನದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪವಿದೆ. ಇಂತಹ ಹೇಳಿಕೆಗಳು ಬಸವಭಕ್ತರು ಹಾಗೂ ಮಠಾಧೀಶರ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಮನವಿದಾರರು ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳ ಘಟನೆಗಳ ಪ್ರಸ್ತಾಪ
ಧಾರವಾಡ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸ್ವಾಮೀಜಿಯವರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿರುವುದು ಹಾಗೂ ನ್ಯಾಯಾಲಯದ ಆದೇಶಗಳ ಕುರಿತು ವರದಿಯಾಗಿರುವ ಬೆಳವಣಿಗೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಸವಕಲ್ಯಾಣದಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಸ್ವಾಮೀಜಿಯವರ ಭಾಷಣಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು ಎಂಬುದನ್ನೂ ಪ್ರಸ್ತಾಪಿಸಿರುವ ಮುಖಂಡರು, ಗದಗದಲ್ಲಿ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರ ಕುರಿತು ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂಬ ಆರೋಪವನ್ನೂ ಮುಂದಿಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಗಂಗಾವತಿಯಲ್ಲಿ ನಡೆಯಲಿರುವ ಸಮಾವೇಶದಿಂದ ಅನಗತ್ಯ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾವೈಕ್ಯತೆಗೆ ಹೆಸರಾದ ಗಂಗಾವತಿ
ಗಂಗಾವತಿ ಹಿಂದಿನಿಂದಲೂ ಧಾರ್ಮಿಕ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರಾದ ನಗರವಾಗಿದೆ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿರುವುದನ್ನು ಮನವಿಯಲ್ಲಿ ಸ್ಮರಿಸಲಾಗಿದೆ.
ಪಂಚಪೀಠಾಧಿಪತಿಗಳ ಕಾರ್ಯಕ್ರಮಗಳು, ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ, ಈದ್ ಮಿಲಾದ್ ಆಚರಣೆ, ಗದುಗಿನ ಲಿಂ. ಪುಟ್ಟರಾಜ ಗವಾಯಿಗಳ ತುಲಾಭಾರ ಕಾರ್ಯಕ್ರಮ, ಕನ್ನಡದಲ್ಲಿ ಕುರಾನ್ ಪ್ರವಚನ ಹಾಗೂ ಮಹರ್ಷಿ ವಾಲ್ಮೀಕಿಯವರ ರಾಮಾಯಣದ ಕಿಷ್ಕಿಂಧಾ ಕಾಂಡದ ಪ್ರವಚನಗಳು ನಗರದ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿವೆ ಎಂದು ತಿಳಿಸಿದ್ದಾರೆ.
ಇಂತಹ ಭಾವೈಕ್ಯತೆಯ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೀಗಾಗಿ ಸಮಾಜದಲ್ಲಿ ಭಿನ್ನಾಭಿಪ್ರಾಯ ಹಾಗೂ ಉದ್ವಿಗ್ನತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ನವೆಂಬರ್ 3ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಮನವಿದಾರರು ಆಗ್ರಹಿಸಿದ್ದಾರೆ.
ವಿವಿಧ ಸಂಘಟನೆಗಳ ಮುಖಂಡರ ಸಹಿ
ಮನವಿ ಪತ್ರಕ್ಕೆ ಬಸವಕೇಂದ್ರ ಗಂಗಾವತಿ ಅಧ್ಯಕ್ಷ ಕೆ. ಬಸವರಾಜ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ದಿಲೀಪಕುಮಾರ ವಂದಾಲ, ಗಣಾಚಾರದಳದ ರಾಜ್ಯಾಧ್ಯಕ್ಷ ವಿದೇಶ ಅಸರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ. ನಾಗರಾಜ, ರಾಷ್ಟ್ರೀಯ ವೀರಗಣಾಚಾರ ಸಂಘದ ಎ.ಕೆ. ಮಹೇಶಕುಮಾರ, ಜಿಲ್ಲಾ ಲಿಂಗಾಯತ ಹಡಪದ ಸಮಾಜದ ಅಧ್ಯಕ್ಷ ಎಚ್. ಹನುಮಂತಪ್ಪ ಸರಿಗಮ, ನಿರುಪಾದಿ ಎಚ್. ಹಡಪದ, ಬಸವ ನೀಲಾಂಬಿಕಾ ಮಹಿಳಾ ಸಂಘದ ಅಧ್ಯಕ್ಷೆ ರತ್ನಮ್ಮ ಅರೆಗಾರ, ಲಿಂಗಾಯತ ಮಹಾಸಭಾದ ಓ.ಎಂ. ಬಳ್ಳೋಳ್ಳಿ, ಶಾಂತಿ ತತ್ವ ಬಳಗದ ಜಿ. ಭಾರತೀಜು, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಅಧ್ಯಕ್ಷೆ ಚನ್ನಬಸಮ್ಮ ಕಂಪ್ಲಿ ಹಾಗೂ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸಿ. ಮಹಾಲಕ್ಷ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಹಿ ಹಾಕಿದ್ದಾರೆ.

ಆಧ್ಯಾತ್ಮ ಶಕ್ತಿಯಿಂದ ಉನ್ನತ ಸಾಧನೆ ಸಾಧ್ಯ: ಎಂ. ಮಲ್ಲಿಕಾರ್ಜುನ ನಾಗಪ್ಪ ಇಸ್ಲಾಂಪುರದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನೂತನ ಡಿಸಿಸಿ ಅಧ್ಯಕ್ಷರಿಗೆ ಸನ್ಮಾನ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆಧ್ಯಾತ್ಮ ಶಕ್ತಿಯನ್ನು ನಂಬಿದ ವ್ಯಕ್ತಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ದೇವರು ಮತ್ತು ಧರ್ಮದ ಮೇಲೆ ನಂಬಿಕೆ ಇಟ್ಟು, ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಇತರರಿಗೆ ಮಾರ್ಗದರ್ಶಕರಾಗಬೇಕು ಎಂದು ಮಾಜಿ ಸಚಿವ ಹಾಗೂ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.
ನಗರದ ಇಸ್ಲಾಂಪುರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 60 ವರ್ಷಗಳಿಂದ ಇಸ್ಲಾಂಪುರದಲ್ಲಿ ಹಿರಿಯರು ನಿರ್ಮಿಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಜನರಲ್ಲಿ ದೇವರ ಮೇಲಿನ ಭಕ್ತಿ, ಆಧ್ಯಾತ್ಮದ ಮಹತ್ವ ಮತ್ತು ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸುತ್ತಿದೆ. ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಅಮಾವಾಸ್ಯೆ, ಹುಣ್ಣಿಮೆ ಹಾಗೂ ದಸರಾ ಸಂದರ್ಭದಲ್ಲಿ ವಿಶೇಷ ಪೂಜೆ, ಪುರಾಣ ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಈ ದೇವಸ್ಥಾನದಲ್ಲಿ ವಿಶೇಷ ಪವಾಡ ಶಕ್ತಿ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ. ಶ್ರೀ ಗಂಗಮ್ಮ ತಾಯಿಯವರ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ದೇವಸ್ಥಾನವು ಅಭಿವೃದ್ಧಿಯತ್ತ ಸಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ವರ್ತಕರು ಕೂಡ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಎಂ. ಮಲ್ಲಿಕಾರ್ಜುನ ನಾಗಪ್ಪ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗಂಗಮ್ಮ ತಾಯಿಯವರು, ಅಶೋಕ ಗೌಡ, ವೀರೇಶ ಮೈಲಿ, ಬಸವರಾಜ ಕುರುಗೋಡು, ಚನ್ನಪ್ಪ ಕುರುಗೋಡು, ನಾಗರಾಜ ಮೇದಾರ್, ಮಲ್ಲಪ್ಪ, ಅಶೋಕ ಶ್ಯಾವಿ, ವೆಂಕಟೇಶ ಕುಡುತಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಿಷೇಧಿತ ಹರಿಗೋಲುಗಳ ವಿರುದ್ಧ ಅಧಿಕಾರಿಗಳ ದಾಳಿ ಕಿಷ್ಕಿಂಧವಾಣಿ ವರದಿಗೆ ಎಚ್ಚೆತ್ತ ಆಡಳಿತ; 8 ಹರಿಗೋಲು ವಶಕ್ಕೆ. ಅಕ್ರಮ ನಡೆಸುವವರಿಗೆ ನೋಟಿಸ್ ನವವೃಂದಾವನ, ತಳವಾರಘಟ್ಟದಲ್ಲಿ ಜಂಟಿ ಕಾರ್ಯಾಚರಣೆ;  ರಾಮಲಕ್ಷ್ಮಣ ಗುಡಿ–ಋಷಿಮುಖ ಪರ್ವತದ ಬಳಿ ಅಧಿಕಾರಿಗಳು ಬರುವ ಮುನ್ನವೇ ಹರಿಗೋಲು ಮಾಯ!

 

 

ಕಿಷ್ಕಿಂಧವಾಣಿ ವಿಶೇಷ

ಗಂಗಾವತಿ: ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ಸಾಗಿಸುವ ಹಾಗೂ ನದಿಯಲ್ಲಿ ಸುತ್ತಾಡಿಸುವ ಅಕ್ರಮ ಚಟುವಟಿಕೆಗಳ ವಿರುದ್ಧ ಕೊನೆಗೂ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕಿಷ್ಕಿಂಧವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಸರಣಿ ವರದಿಗಳಿಗೆ ಎಚ್ಚೆತ್ತ ಬುಕ್ಕಸಾಗರ ಮತ್ತು ಆನೆಗೊಂದಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಶನಿವಾರ ಬೆಳಗ್ಗೆ ಜಂಟಿ ದಾಳಿ ನಡೆಸಿ ಒಟ್ಟು ಎಂಟು ಹರಿಗೋಲುಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಹರಿಗೋಲು ನಡೆಸುತ್ತಿದ್ದವರಿಗೆ ನೋಟಿಸ್ ನೀಡಲಾಗಿದೆ.

ಹೊಸಪೇಟೆ ತಾಲೂಕಿನ ಬುಕ್ಕಸಾಗರ, ನವವೃಂದಾವನ ಹಾಗೂ ತಳವಾರಘಟ್ಟ ಮತ್ತು ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪುರ, ರಾಮಲಕ್ಷ್ಮಣ ಗುಡಿ ಹಾಗೂ ಋಷಿಮುಖ ಪರ್ವತದ ಸುತ್ತಮುತ್ತ ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ಸಾಗಿಸುವ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಕಿಷ್ಕಿಂಧವಾಣಿ ಪತ್ರಿಕೆ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ನದಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಗಂಗಾವತಿ ಮತ್ತು ಹೊಸಪೇಟೆ ತಾಲೂಕು ಆಡಳಿತಗಳ ಗಮನ ಸೆಳೆಯಲಾಗಿತ್ತು.

ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಕಾರ್ಯಾಚರಣೆ

ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ಮನ್ನಿಕೇರಿ ಅವರು ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಪಂಚಾಯಿತಿಗಳ ಅಧಿಕಾರಿಗಳಿಗೆ ನಿಷೇಧಿತ ಹರಿಗೋಲುಗಳ ಬಳಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಬುಕ್ಕಸಾಗರ ಗ್ರಾಮ ಪಂಚಾಯಿತಿ ಪಿಡಿಒ ಬೀರಪ್ಪ ಹಾಗೂ ಆನೆಗೊಂದಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಿಕಾರ್ಜುನ ಕಡಿವಾಳ ಅವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವವೃಂದಾವನದ ಬಳಿ ಮೂರು ಹರಿಗೋಲುಗಳನ್ನು ಹಾಗೂ ಆನೆಗೊಂದಿ ವ್ಯಾಪ್ತಿಯ ತಳವಾರಘಟ್ಟದ ಬಳಿ ಐದು ಹರಿಗೋಲುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಹರಿಗೋಲುಗಳ ಮೂಲಕ ಪ್ರಯಾಣಿಕರನ್ನು ಸಾಗಿಸುತ್ತಿದ್ದವರಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳು ಬರುವಷ್ಟರಲ್ಲಿ ಹರಿಗೋಲು ಮಾಯ!

ರಾಮಲಕ್ಷ್ಮಣ ಗುಡಿ ಮತ್ತು ಋಷಿಮುಖ ಪರ್ವತದ ಸಮೀಪವೂ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ನದಿಯಲ್ಲಿ ಸುತ್ತಾಡಿಸುವ ದಂಧೆ ನಡೆಯುತ್ತಿರುವ ಆರೋಪಗಳಿವೆ. ಆದರೆ, ಅಧಿಕಾರಿಗಳು ದಾಳಿ ನಡೆಸಲು ಸ್ಥಳಕ್ಕೆ ತೆರಳುವ ವಿಷಯ ತಿಳಿಯುತ್ತಿದ್ದಂತೆ ಹರಿಗೋಲುಗಳನ್ನು ಬಚ್ಚಿಡಲಾಗಿದೆ ಎನ್ನಲಾಗಿದೆ. ಅಧಿಕಾರಿಗಳು ಸ್ಥಳದಿಂದ ತೆರಳಿದ ಬಳಿಕ ಮತ್ತೆ ಹರಿಗೋಲುಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ನಿರಂತರ ತಪಾಸಣೆ ಹಾಗೂ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಸಾಣಾಪುರದಲ್ಲಿ ಅಕ್ರಮಕ್ಕೆ ಕಡಿವಾಣ ಯಾವಾಗ?

ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ನದಿಯಲ್ಲಿ ಸುತ್ತಾಡಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂಬ ಆರೋಪಗಳಿವೆ. ಇಂತಹ ಚಟುವಟಿಕೆಗಳನ್ನು ತಡೆಯಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.

ಯಾಂತ್ರೀಕೃತ ದೋಣಿ ಸೇವೆಗೆ ಟೆಂಡರ್ ಪ್ರಸ್ತಾವನೆ

ತಳವಾರಘಟ್ಟದ ಬಳಿ ನದಿ ದಾಟಲು ಸುರಕ್ಷಿತ ಯಾಂತ್ರೀಕೃತ ದೋಣಿ ಸೇವೆ ಆರಂಭಿಸುವ ಉದ್ದೇಶದಿಂದ ಬುಕ್ಕಸಾಗರ ಮತ್ತು ಆನೆಗೊಂದಿ ಗ್ರಾಮ ಪಂಚಾಯಿತಿಗಳು ಟೆಂಡರ್ ಕರೆಯುವ ಕುರಿತು ಚಿಂತನೆ ನಡೆಸಿವೆ.

ಈ ಕುರಿತು ಕಿಷ್ಕಿಂಧವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಬುಕ್ಕಸಾಗರ ಗ್ರಾಮ ಪಂಚಾಯಿತಿ ಪಿಡಿಒ ಬೀರಪ್ಪ, ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಅಗತ್ಯ ಅರ್ಹತೆ ಹೊಂದಿರುವ ವ್ಯಕ್ತಿಗಳಿಂದ ಟೆಂಡರ್ ಆಹ್ವಾನಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆ, ತುಂಗಭದ್ರಾ ನದಿಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನಿಷೇಧಿತ ಹರಿಗೋಲುಗಳ ಬಳಕೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿರುವುದು ಗಮನಾರ್ಹ. ಆದರೆ, ಒಂದೆರಡು ದಿನಗಳ ಕಾರ್ಯಾಚರಣೆಗೆ ಸೀಮಿತವಾಗದೆ ನಿರಂತರ ನಿಗಾ ವಹಿಸಿ, ಅಕ್ರಮ ಚಟುವಟಿಕೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.

ಹೇಮಗುಡ್ಡ ಕೆರೆ ಪ್ರದೇಶದಲ್ಲಿ ಅಪರೂಪದ ಕಡವೆ ಪತ್ತೆ! ಏಳುಗುಡ್ಡ ಪ್ರದೇಶದಲ್ಲಿ ವನ್ಯಜೀವಿಗಳ ಇರುವಿಕೆಗೆ ಮತ್ತೊಂದು ಸಾಕ್ಷಿ; ಕಡವೆ ಸಂರಕ್ಷಣೆಗೆ ಹೆಚ್.ಆರ್. ಶ್ರೀನಾಥ್ ಆಗ್ರಹ

 

 

ಕಿಷ್ಕಿಂಧವಾಣಿ ವಿಶೇಷ

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಹೇಮಗುಡ್ಡ ಕೆರೆ ಪ್ರದೇಶದಲ್ಲಿ ಅಪರೂಪದ ಕಡವೆ ಪ್ರಾಣಿಯೊಂದು ಕಾಣಿಸಿಕೊಂಡಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಶನಿವಾರ ಬೆಳಿಗ್ಗೆ ಕುರಿಗಾಯಿಗಳ ನಾಯಿಗಳು ಪ್ರಾಣಿಯೊಂದನ್ನು ಬೆನ್ನಟ್ಟುತ್ತಿದ್ದುದನ್ನು ಗಮನಿಸಿದ ಕುರಿಗಾಯಿ ಹುಡುಗರು, ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಡವೆ ಪ್ರಾಣಿ ಎಂಬುದು ಗೊತ್ತಾಗಿದೆ.

ಹಿಂದೆ ಕಡವೆಗಳ ನೆಲೆವೀಡಾಗಿದ್ದ ಏಳುಗುಡ್ಡ

1950ರಿಂದ 1970ರ ದಶಕದವರೆಗೆ ಕಿಷ್ಕಿಂಧಾ ಏಳುಗುಡ್ಡ ಪ್ರದೇಶದಲ್ಲಿ ಕಡವೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜನವಸತಿ, ವಾಹನ ಸಂಚಾರ, ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಣಾಮವಾಗಿ ಈ ಭಾಗದ ನೈಸರ್ಗಿಕ ಪರಿಸರದಲ್ಲಿ ಬದಲಾವಣೆಗಳಾಗಿವೆ. ಇದರಿಂದ ಕಡವೆ ಹಾಗೂ ಹುಲಿಯಂತಹ ವನ್ಯಜೀವಿಗಳ ಇರುವಿಕೆ ಕ್ರಮೇಣ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮಲೆನಾಡು, ಬಂಡೀಪುರ, ಭದ್ರಾ ಅಭಯಾರಣ್ಯ ಹಾಗೂ ಶಿವಮೊಗ್ಗ ಭಾಗಗಳಲ್ಲಿ ವನ್ಯಜೀವಿಗಳ ಆವಾಸಸ್ಥಾನಗಳಿದ್ದು, ಇದೀಗ ಹೇಮಗುಡ್ಡ ಕೆರೆ ಪ್ರದೇಶದಲ್ಲಿ ಕಡವೆ ಕಾಣಿಸಿಕೊಂಡಿರುವುದು ಏಳುಗುಡ್ಡದ ನೈಸರ್ಗಿಕ ಪರಿಸರದ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿದೆ.

ಅರಣ್ಯ ಇಲಾಖೆಯ ಗಮನಕ್ಕೆ ತಂದ ಹೆಚ್.ಆರ್. ಶ್ರೀನಾಥ್

ದಸರಾ ಹಬ್ಬದ ಆಚರಣೆಗಾಗಿ ಹೇಮಗುಡ್ಡದಲ್ಲಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ವನ್ಯಜೀವಿ ಪ್ರೇಮಿ ಹೆಚ್.ಆರ್. ಶ್ರೀನಾಥ್ ಅವರ ಗಮನಕ್ಕೆ ಕುರಿಗಾಯಿಗಳು ಈ ವಿಷಯವನ್ನು ತಂದಿದ್ದಾರೆ. ತಕ್ಷಣ ಸ್ಪಂದಿಸಿದ ಶ್ರೀನಾಥ ಅವರು ಅರಣ್ಯ ಇಲಾಖೆ ಹಾಗೂ ಕಿಷ್ಕಿಂಧವಾಣಿ ಕನ್ನಡ ದಿನಪತ್ರಿಕೆಯ ಗಮನಕ್ಕೆ ಘಟನೆ ತಂದಿದ್ದಾರೆ.

ಈಗಾಗಲೇ ಏಳುಗುಡ್ಡ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ವರದಿಗಳ ಬೆನ್ನಲ್ಲೇ ಕಡವೆ ಪತ್ತೆಯಾಗಿರುವುದು ಈ ಪ್ರದೇಶ ಹಿಂದೆ ವನ್ಯಜೀವಿಗಳ ನೆಲೆವೀಡಾಗಿತ್ತು ಎಂಬುದನ್ನು ನೆನಪಿಸುತ್ತದೆ. ಅರಣ್ಯ ಇಲಾಖೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕಡವೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅದರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹುಲಿಯನ್ನು ಸೆರೆಹಿಡಿಯುವ ಬದಲು ಆವಾಸಸ್ಥಾನದ ಸಂರಕ್ಷಣೆಗೆ ಒತ್ತು

ಏಳುಗುಡ್ಡ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಸೆರೆಹಿಡಿಯುವುದಕ್ಕಿಂತ, ವನ್ಯಜೀವಿಗಳು ಸ್ವತಂತ್ರವಾಗಿ ಬದುಕಲು ಅನುಕೂಲವಾಗುವಂತಹ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಬೇಕು. ಬೆಟ್ಟ ಪ್ರದೇಶದ ಸುತ್ತಲೂ ಸೂಕ್ತ ಸಂರಕ್ಷಣಾ ತಂತಿ ಬೇಲಿ ನಿರ್ಮಿಸುವ ಮೂಲಕ ವನ್ಯಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀನಾಥ ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ, ಏಳುಗುಡ್ಡ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು. ವನ್ಯಜೀವಿಗಳ ಸಂರಕ್ಷಣೆಯ ಜೊತೆಗೆ ಸ್ಥಳೀಯ ಜನರ ಬದುಕು ಮತ್ತು ಹಕ್ಕುಗಳಿಗೂ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಪ್ಪತ್ತಗುಡ್ಡ ಅಥವಾ ಶಿವಮೊಗ್ಗದಿಂದ ಬಂದಿರುವ ಸಾಧ್ಯತೆ

ಹೇಮಗುಡ್ಡದಲ್ಲಿ ಕಾಣಿಸಿಕೊಂಡಿರುವ ಕಡವೆ ಸಮೀಪದ ಕಪ್ಪತ್ತಗುಡ್ಡ ಅಥವಾ ಶಿವಮೊಗ್ಗದ ಅರಣ್ಯ ಪ್ರದೇಶದಿಂದ ಬಂದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಆದರೆ ಕಡವೆ ಎಲ್ಲಿಂದ ಬಂದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಒಟ್ಟಿನಲ್ಲಿ, ಹೇಮಗುಡ್ಡ ಕೆರೆ ಪ್ರದೇಶದಲ್ಲಿ ಕಡವೆ ಕಾಣಿಸಿಕೊಂಡಿರುವುದು ಏಳುಗುಡ್ಡದ ವನ್ಯಜೀವಿ ಸಂಪತ್ತಿನ ಸಂರಕ್ಷಣೆಯ ಅಗತ್ಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರಣ್ಯ ಇಲಾಖೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಕಡವೆ ಪ್ರಾಣಿಯ ಸುರಕ್ಷತೆ ಹಾಗೂ ನೈಸರ್ಗಿಕ ಆವಾಸಸ್ಥಾನದ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ.

ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿಲ್ಲವೇ? ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳದ್ದೇ ದರ್ಬಾರ್! ಯಾಂತ್ರೀಕೃತ ದೋಣಿಗೆ ಟೆಂಡರ್ ಪಡೆದು ಹರಿಗೋಲಿನಲ್ಲಿ ಪ್ರವಾಸಿಗರ ಸಾಗಾಟ! ಪ್ರತಿ ಪ್ರಯಾಣಿಕರಿಂದ ₹500 ವಸೂಲಿ ಆರೋಪ; ಪ್ರವಾಸಿಗರ ಜೀವಕ್ಕೆ ಕುತ್ತು ತಂದರೂ ಅಧಿಕಾರಿಗಳು ಮೌನ! ಕಿಷ್ಕಿಂಧವಾಣಿ ವರದಿಗೆ ಜಿಲ್ಲಾಧಿಕಾರಿಗಳ ಸ್ಪಂದನೆ; ಕ್ರಮಕ್ಕೆ ಸೂಚನೆ ನೀಡಿದರೂ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಆರೋಪ

 

 

ಕಿಷ್ಕಿಂಧವಾಣಿ ವಿಶೇಷ ವರದಿ | ಕೆ. ನಿಂಗಜ್ಜ

ಗಂಗಾವತಿ: ಪ್ರವಾಸಿಗರ ಸುರಕ್ಷತೆಗಿಂತ ಹಣದ ಗಳಿಕೆಯೇ ಮುಖ್ಯವಾಯಿತೇ? ಜಿಲ್ಲಾಧಿಕಾರಿಗಳ ಸೂಚನೆಗೂ ಬೆಲೆ ಇಲ್ಲವೇ? ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾದರೆ ಹೊಣೆ ಹೊರುವವರು ಯಾರು? ಇಂತಹ ಗಂಭೀರ ಪ್ರಶ್ನೆಗಳು ಈಗ ತುಂಗಭದ್ರಾ ನದಿ ಪಾತ್ರದಲ್ಲಿ ಕೇಳಿಬರುತ್ತಿವೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಹಾಗೂ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಾಂತ್ರೀಕೃತ ದೋಣಿ ಬಳಸಿ ಪ್ರಯಾಣಿಕರನ್ನು ಸಾಗಿಸಲು ಟೆಂಡರ್ ಪಡೆದಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ಹರಿಗೋಲು ಬಳಸಿ ಪ್ರವಾಸಿಗರನ್ನು ನದಿಯಲ್ಲಿ ಸುತ್ತಾಡಿಸಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿದ್ದರೂ, ನೆಲಮಟ್ಟದಲ್ಲಿ ಪರಿಸ್ಥಿತಿ ಬದಲಾಗಿಲ್ಲ ಎಂಬ ಆರೋಪ ಅಧಿಕಾರಿಗಳ ಕಾರ್ಯವೈಖರಿಯತ್ತ ಬೆರಳು ತೋರಿಸಿದೆ.

ಟೆಂಡರ್ ಯಾಂತ್ರೀಕೃತ ದೋಣಿಗೆ, ಕಾರ್ಯಾಚರಣೆ ಮಾತ್ರ ಹರಿಗೋಲಿನಲ್ಲಿ!

ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ನವವೃಂದಾವನಗಡ್ಡಿಗೆ ಪ್ರವಾಸಿಗರನ್ನು ಸಾಗಿಸಲು ಯಾಂತ್ರೀಕೃತ ದೋಣಿ ಬಳಸುವ ಷರತ್ತಿನೊಂದಿಗೆ ವ್ಯಕ್ತಿಯೊಬ್ಬರು ಟೆಂಡರ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಟೆಂಡರ್ ಷರತ್ತಿನಂತೆ ಯಾಂತ್ರೀಕೃತ ದೋಣಿ ಬಳಸುವ ಬದಲು ಹರಿಗೋಲು ಮೂಲಕ ಪ್ರವಾಸಿಗರನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿ ಪ್ರಯಾಣಿಕರಿಂದ ಸುಮಾರು 500 ರೂಪಾಯಿ ಪಡೆದು ಹರಿಗೋಲಿನಲ್ಲಿ ನದಿಯ ಸುತ್ತಾಟ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಈ ವ್ಯವಹಾರದ ಸತ್ಯಾಸತ್ಯತೆ ಹಾಗೂ ಟೆಂಡರ್ ಷರತ್ತುಗಳ ಪಾಲನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.

ಇನ್ನೊಂದೆಡೆ, ತಳವಾರಘಟ್ಟದ ಬಳಿಯೂ ಟೆಂಡರ್ ಇಲ್ಲದೆ ಹರಿಗೋಲು ಬಳಸಿ ಪ್ರವಾಸಿಗರನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ನಿಯಮಾನುಸಾರ ಅನುಮತಿ ಪಡೆದು ಸುರಕ್ಷಿತವಾಗಿ ಪ್ರವಾಸಿಗರನ್ನು ಸಾಗಿಸಬೇಕಾದ ವ್ಯವಸ್ಥೆಯಲ್ಲಿ ಇಂತಹ ಉಲ್ಲಂಘನೆಗಳು ನಡೆಯುತ್ತಿದ್ದರೆ, ಅದನ್ನು ತಡೆಯುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.

ಜಿಲ್ಲಾಧಿಕಾರಿಗಳ ಸೂಚನೆಗೂ ಏಕೆ ಸ್ಪಂದನೆ ಇಲ್ಲ?

ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಜನರನ್ನು ಸಾಗಿಸುವುದರಿಂದ ಸಂಭವಿಸಬಹುದಾದ ಅಪಾಯಗಳ ಕುರಿತು ಕಿಷ್ಕಿಂಧವಾಣಿ ಪತ್ರಿಕೆ ಈ ಹಿಂದೆ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಜಿಲ್ಲಾಧಿಕಾರಿಗಳು, ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಜಿಲ್ಲಾಧಿಕಾರಿಗಳ ಸೂಚನೆಯ ನಂತರವೂ ಹರಿಗೋಲುಗಳ ಬಳಕೆ ಮುಂದುವರಿದಿದೆ ಎಂಬ ಆರೋಪ ಕೇಳಿಬರುತ್ತಿರುವುದು ಆಡಳಿತಾತ್ಮಕ ವ್ಯವಸ್ಥೆಯ ಕಾರ್ಯನಿರ್ವಹಣೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೊಸಪೇಟೆ ಮತ್ತು ಗಂಗಾವತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಬುಕ್ಕಸಾಗರ, ಆನೆಗೊಂದಿ ಮತ್ತು ಸಾಣಾಪುರ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಜಿಲ್ಲಾಧಿಕಾರಿಗಳ ಸೂಚನೆಗಳು ಕೇವಲ ಕಡತಗಳಿಗೆ ಸೀಮಿತವಾಗಿವೆಯೇ? ಸ್ಥಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ತಡೆಯುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಗಳು ಉತ್ತರಿಸಬೇಕಿದೆ.

ಪ್ರವಾಸಿಗರ ಜೀವದ ಜತೆ ಚೆಲ್ಲಾಟವಾಡಲು ಅವಕಾಶವಿದೆಯೇ?

ನವವೃಂದಾವನಗಡ್ಡಿ ಸೇರಿದಂತೆ ತುಂಗಭದ್ರಾ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸ್ಥಳಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ. ನದಿಯ ನೀರಿನ ಮಟ್ಟ, ಹರಿವಿನ ವೇಗ ಹಾಗೂ ಹವಾಮಾನ ಪರಿಸ್ಥಿತಿಗಳು ಬದಲಾಗುವ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಜನರನ್ನು ಸಾಗಿಸುವುದು ಅಪಾಯಕಾರಿ.

ಹರಿಗೋಲು ಬಳಕೆಗೆ ನಿಷೇಧ ಅಥವಾ ನಿರ್ದಿಷ್ಟ ನಿರ್ಬಂಧಗಳಿದ್ದರೆ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಸಾಗಿಸುತ್ತಿರುವುದು ಪರಿಶೀಲನೆಯಲ್ಲಿ ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಿದೆ.

ಒಂದು ವೇಳೆ ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ಅಪಾಯವನ್ನು ತಡೆಗಟ್ಟುವುದು ಆಡಳಿತದ ಜವಾಬ್ದಾರಿಯಾಗಿದೆ.

ಸರ್ಕಾರದ ಆದಾಯಕ್ಕೆ ನಷ್ಟ, ಖಾಸಗಿ ವ್ಯಕ್ತಿಗಳಿಗೆ ಲಾಭ?

ಯಾಂತ್ರೀಕೃತ ದೋಣಿ ಬಳಕೆಯ ಷರತ್ತಿನೊಂದಿಗೆ ಟೆಂಡರ್ ಪಡೆದು ಬೇರೆ ವ್ಯವಸ್ಥೆಯಲ್ಲಿ ಪ್ರವಾಸಿಗರನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಸತ್ಯವಾಗಿದ್ದರೆ, ಅದು ಟೆಂಡರ್ ಷರತ್ತುಗಳ ಉಲ್ಲಂಘನೆಯ ಪ್ರಶ್ನೆಯನ್ನೂ ಮುನ್ನೆಲೆಗೆ ತರುತ್ತದೆ.

ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿರುವ ಹಣ, ಟೆಂಡರ್ ಷರತ್ತುಗಳು, ಅನುಮತಿ ಪಡೆದಿರುವ ವಿಧಾನ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ನಿಯಮಬಾಹಿರ ಚಟುವಟಿಕೆಗಳಿಂದ ಸರ್ಕಾರದ ಆದಾಯಕ್ಕೆ ನಷ್ಟವಾಗುತ್ತಿದೆಯೇ ಎಂಬುದನ್ನೂ ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಬೇಕಾಗಿದೆ.

ಈಗಲಾದರೂ ಎಚ್ಚೆತ್ತುಕೊಳ್ಳುವರೇ ಅಧಿಕಾರಿಗಳು?

ಕಿಷ್ಕಿಂಧವಾಣಿ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿದ್ದರೂ,ತುಂಗಭದ್ರಾ ನದಿ ಪಾತ್ರದಲ್ಲಿ ಹರಿಗೋಲು ಬಳಕೆ ಮುಂದುವರಿದಿದೆ ಎಂಬ ಆರೋಪ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳ ಸೂಚನೆಗೆ ಗೌರವ ನೀಡಿ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವರೇ? ನಿಷೇಧಿತ ಹರಿಗೋಲುಗಳ ಬಳಕೆಗೆ ಕಡಿವಾಣ ಹಾಕುವರೇ? ಟೆಂಡರ್ ಷರತ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವರೇ? ಅಥವಾ ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾಗುವವರೆಗೂ ಕಾಯುವರೇ?

ಈ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಗಳ ಕ್ರಮವೇ ಉತ್ತರ ನೀಡಬೇಕಿದೆ. ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸುವುದು, ನಿಯಮ ಉಲ್ಲಂಘನೆ ತಡೆಯುವುದು ಹಾಗೂ ಕರ್ತವ್ಯಲೋಪದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಈಗ ತುರ್ತು ಅಗತ್ಯವಾಗಿದೆ.

error: Content is protected !!