ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗಳನ್ನು ನವೆಂಬರ್ ೩೦ರವರೆಗೆ ಸಂರಕ್ಷಿಸುವ ಉದ್ದೇಶದಿಂದ ಆಂಧ್ರಪ್ರದೇಶದ ಪಾಲಿನ ನದಿ ಸಹಾಯ (River Assistance) ಕೋಟಾದಡಿ ಉಳಿಕೆಯಾಗಿರುವ ೪ ಟಿಎಂಸಿ ನೀರನ್ನು ಕರ್ನಾಟಕದ ಕಾಲುವೆಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಮುಂಗಾರು ಬೆಳೆಗಳ ಸಂರಕ್ಷಣೆಗೆ ನೀರಿನ ಅಗತ್ಯವಿದ್ದು, ನವೆಂಬರ್ ೩೦ರವರೆಗೆ ಬೆಳೆಗಳಿಗೆ ಸಮರ್ಪಕ ನೀರು ಪೂರೈಸುವುದು ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಾಲಿನ ನದಿ ಸಹಾಯ ಕೋಟಾದಡಿ ಬಳಕೆಯಾಗದೆ ಉಳಿದಿರುವ ೪ ಟಿಎಂಸಿ ನೀರನ್ನು ಕರ್ನಾಟಕದ ಕಾಲುವೆಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಸಚಿವರು ಪತ್ರದಲ್ಲಿ ಕೋರಿದ್ದಾರೆ.
ರಾಜ್ಯದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀರಿನ ಲಭ್ಯತೆ ಮತ್ತು ಹಂಚಿಕೆ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೀರಿನ ಕೊರತೆಯಿಂದ ರೈತರ ಬೆಳೆಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಉಳಿಕೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳ ಸಂರಕ್ಷಣೆ ಹಾಗೂ ಕೃಷಿ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಸರ್ಕಾರದ ಗಮನ ಸೆಳೆದಿರುವುದು ರೈತರಲ್ಲಿ ನಿರೀಕ್ಷೆ ಮೂಡಿಸಿದೆ.