Breaking News
ಯುವಜನರನ್ನು ಕಾರ್ಯಶೀಲರನ್ನಾಗಿಸಲು ಭಾರತ ಜೋಡೋ ಯುವ ಸಂಘಗಳ ಸ್ಥಾಪನೆ:ಆರ್.ವಿರೂಪಾಕ್ಷಮೂರ್ತಿ

 

*ಗಂಗಾವತಿಯ 35 ವಾರ್ಡುಗಳ ಪೈಕಿ 13 ಯುವ ಸಂಘ ಸ್ಥಾಪನೆ,100ಕ್ಕೂ ಹೆಚ್ಚು ಸದಸ್ಯರು,15 ಪದಾಧಿಕಾರಿಗಳ ನೇಮಕ

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಮಹತ್ವಾಕಾಂಕ್ಷೆಯ ಭಾರತ ಜೋಡೋ ಯುವಸಂಘಗಳ ಸ್ಥಾಪನೆಗೆ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯ ಆರಂಭಿಸಿದ್ದು ಪ್ರತಿ ಎರಡು ವಾರ್ಡುಗಳನ್ನು ಜೋಡಿಸಿ ಒಟ್ಟು 13 ಭಾರತಜೋಡೋ ಯುವ ಸಂಘಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ನಗರಸಭೆಯ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.

ಅವರು ನಗರಸಭೆಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಸರ್ಕಾರವು ರಾಜ್ಯದ ಯುವಜನತೆಯ ಸಬಲೀಕರಣಕ್ಕಾಗಿ ‘ಭಾರತ್ ಜೋಡೋ ಯುವ ಸಂಘ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಡಿ ರಾಜ್ಯಾದ್ಯಂತ 10,000 ಯುವ ಸಂಘಗಳನ್ನು ಸ್ಥಾಪಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ಆರ್ಥಿಕ ಸಹಾಯ: ಅನುಮೋದನೆ ಪಡೆದ ಪ್ರತಿಯೊಬ್ಬ ಭಾರತ್ ಜೋಡೋ ಯುವ ಸಂಘಕ್ಕೆ ವಾರ್ಷಿಕವಾಗಿ ₹10 ಲಕ್ಷ ಅನುದಾನವನ್ನು 3 ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ.

ಪ್ರತಿ ಸಂಘದ ಒಬ್ಬ ತರಬೇತುದಾರರಿಗೆ (ತರಬೇತಿದಾರ) ವಾರ್ಷಿಕವಾಗಿ ₹ 24,000 ಗೌರವಧನ (ಟಿಂಗೆಗಳಿಗೆ ₹ 2,000) ವೆಚ್ಚವಾಗುತ್ತದೆ.

ಈ ಬೃಹತ್ ಯೋಜನೆಗಾಗಿ ಕರ್ನಾಟಕ ಸರ್ಕಾರವು ₹1,010 ಕೋಟಿ ಹಣವನ್ನು ಮೀಸಲಿಟ್ಟಿದೆ.

16 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಈ ಸಂಘದ ಸದಸ್ಯರಾಗಬಹುದು. ಪ್ರತಿ ಯುವ ಸಂಘದಲ್ಲಿ ಕನಿಷ್ಠ 100 ರಿಂದ 250 ಸದಸ್ಯರು ಇರಬೇಕು. ಸಂಘವನ್ನು ಮುನ್ನಡೆಸಲು 15 ಜನರ ಕಾರ್ಯಕಾರಿ ಸಮಿತಿ ಇರುತ್ತದೆ. ಇದರಲ್ಲಿ ಕನಿಷ್ಠ 5 ಜನ ಮಹಿಳೆಯರು ಇರಬೇಕು ಮತ್ತು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗಳಲ್ಲಿ ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಪ್ರತಿ ಸಂಘವನ್ನು ‘ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960’ ರ ಅಡಿಯಲ್ಲಿ ರಿಜಿಸ್ಟರ್ ಮಾಡಲಾಗಿದೆ. 1. ಆನ್ಲೈನ್ ಮೂಲಕ: ನೀವು ಅಧಿಕೃತ ಬಿಜೆಯೆಸ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಬಳಕೆ ಬರದಿದ್ದರೆ ನಿಮ್ಮ ಹತ್ತಿರದ ಗ್ರಾಮ್ ಒನ್ (ಗ್ರಾಮ್ ಒನ್), ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.

ನೋಂದಣಿಗೆ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಪ್ರತಿ ಸದಸ್ಯನ ನೋಂದಣಿಗೆ ಕೇವಲ ₹10 ನೋಂದಣಿ ಶುಲ್ಕ ಇರುತ್ತದೆ. ಇದರೊಂದಿಗೆ ಸದಸ್ಯರಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ಕೂಡ ಸಿಗುತ್ತದೆ. ಸರ್ಕಾರ ನೀಡುವ ₹10 ಲಕ್ಷ ಹಣವನ್ನು ಕೇವಲ ಕ್ರೀಡೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಮೂಲಸೌಕರ್ಯಗಳಿಗೆ ಮಾತ್ರ ಬಳಸಬೇಕು. ಗ್ರಾಮೀಣ ಕ್ರೀಡಾಕೂಟಗಳು, ಯೋಗ ಶಿಬಿರಗಳು ಮತ್ತು ಸಾಂಪ್ರದಾಯಿಕ ಆಟಗಳ ಆಯೋಜನೆ ಮಾಡಬೇಕು. ಕೆರೆ-ಕಲ್ಯಾಣಿಗಳ ಸ್ವಚ್ಛತೆ ಮತ್ತು ಸ್ವಚ್ಛತಾ ಜಾಗೃತಿಯ ಅಭಿಯಾನಗಳು. ಸಸಿ ನೆಡುವುದು ಮತ್ತು ಪರಿಸರ ಸಂರಕ್ಷಣೆ ಜಾಗೃತಿ. ರಕ್ತದಾನ ಶಿಬಿರಗಳು ಮತ್ತು ಉಚಿತ ಆರೋಗ್ಯ ತಪಾಸಣೆ. ಯುವಕರಿಗೆ ಡಿಜಿಟಲ್ ಸಾಕ್ಷರತೆ, ಕಂಪ್ಯೂಟರ್ ತರಬೇತಿ ಮತ್ತು ಜೀವನ ಕೌಶಲ್ಯಗಳ ಅಭಿವೃದ್ಧಿ. ಮಾದಕ ವಸ್ತುಗಳ ವಿರೋಧಿ ಅಭಿಯಾನಗಳನ್ನು ನಡೆಸುವುದು.

ವಾರ್ಡ್ನಲ್ಲಿ ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜಮುಖಿ ಕೆಲಸ ಮಾಡಲು ಇದು ಅತ್ಯುತ್ತಮ ಅವಕಾಶವಾಗಿದೆ.ಪ್ರತಿ ಸಂಘಕ್ಕೂ ನಗರಸಭೆಯ ಅಧಿಕಾರಿಗಳು ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆಂದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ಷಣ್ಮುಖಪ್ಪ, ಸಮುದಾಯ ಅಧಿಕಾರಿ ವಿಜಯಲಕ್ಷಿö್ಮ ಸೇರಿ ನಗರಸಭೆಯ ಅಧಿಕಾರಿಗಳಿದ್ದರು.

ಜಂಗ್ಲಿ ರಂಗಾಪೂರ ಬೆಟ್ಟದಲ್ಲಿ ಹಸುವಿನ ಮೇಲೆ ಕಾಡು ಪ್ರಾಣಿಗಳ‌ ದಾಳಿ!ಚಿರತೆ ಅಥವಾ ಹುಲಿ ದಾಳಿ ಸ್ಥಳೀಯರ ಸಂಶಯ!

 

 

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ತಾಲೂಕಿನ ಜಂಗ್ಲಿ ರಂಗಾಪುರ ಬೆಟ್ಟ ಪ್ರದೇಶದಲ್ಲಿ ನಿರಂತರವಾಗಿ ಕುರಿ,ಮೇಕೆ,ನಾಯಿ ಮತ್ತು ಹಸುವಿನ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿ ಹೊತ್ತುಕೊಂಡು ಹೋಗಿ ತಿನ್ನುತ್ತಿದ್ದು,ಸ್ಥಳೀಯರು ಸಾಕು ಪ್ರಾಣಿಗಳ ಮೇಲೆ ಭೀಕರ ದಾಳಿ ನಡೆಸಿ ತಿನ್ನುತ್ತಿರುವುದು ಚಿರತೆ ಅಥವಾ ಹುಲಿ ಎನ್ನುವ ಸಂಶಯ ಮೂಡಿದ್ದು ಕಳೆದ ಒಂದು ತಿಂಗಳಿಂದ ಸ್ಥಳೀಯರು ಹಾಗೂ ಕುರಿಗಾಯಿಗಳು ತೀವ್ರ ಆತಂಕದಲ್ಲಿ ದಿನ‌ ಕಳೆಯುವಂತಾಗಿದೆ.

ಕಳೆದ ಭಾನುವಾರ ಜಂಗ್ಲಿ ರಂಗಾಪೂರ ಗ್ರಾಮದ ಹಸು ಒಂದು ಬೆಟ್ಟ ಪ್ರದೇಶದಲ್ಲಿ ಮೇಯಲು ಹೋದ ಸಂದರ್ಭದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿ ಹೊತ್ತುಕೊಂಡು ಹೋಗಿ ಇಡೀ ಹಸುವನ್ನು ತಿಂದು ಹಾಕಿ ಹಸುವಿನ ಸ್ವಲ್ಪ ಭಾಗವನ್ನು ಮಾತ್ರ ಉಳಿಸಿದೆ. ಕಳೆದ 50-60 ವರ್ಷಗಳಿಂದ ಆನೆಗೊಂದಿ, ಬೆಣಕಲ್,ಮುಕ್ಕುಂಪಿ,ಜಬ್ಬಲಗುಡ್ಡ ಬೆಟ್ಟಪ್ರದೇಶದಲ್ಲಿ ಕುರಿ,ದನ ಮೇಯಿಸಲಾಗುತ್ತಿದ್ದು ಸ್ಥಳೀಯ ಚಿರತೆಗಳು ಇಷ್ಟು ಭಯಂಕರವಾಗಿ ಸಾಕು ಪ್ರಾಣಿಗಳನ್ನು ತಿಂದು ಹಾಕುವುದಿಲ್ಲ ಮತ್ತು ಒಂದು ಪ್ರಾಣಿಯನ್ನು ಚಿರತೆ ಕೊಲ್ಲಿದ ನಂತರ ಎರಡು ದಿನಗಳ ವರೆಗೆ ಅದನ್ನು ತಿನ್ನುತ್ತದೆ. ಕಳೆದ ಒಂದು ತಿಂಗಳಿಂದ ವಿವಿಧ ಗ್ರಾಮಗಳ ಕುರಿ,ದನ ಹಾಗೂ ಇತರೆ ಪ್ರಾಣಿಗಳನ್ನು ಹಿಡಿದುಕೊಂಡು ಹೋಗುವ ಕಾಡು ಪ್ರಾಣಿ ದನದ ಇಡೀ ದೇಹದ ಮುಕ್ಕಾಲು ಭಾಗವನ್ನು ತಿನ್ನುತ್ತಿದ್ದು ಇದರಿಂದ ಪ್ರಾಣಿಗಳನ್ನು ಕೊಲ್ಲುತ್ತಿರುವುದು ಚಿರತೆ ಅಲ್ಲ ಅದು ಹುಲಿ ಇರಬಹುದು ಎಂದು ಸ್ಥಳೀಯರು ಮತ್ತೊಮ್ಮೆ ಸಂಶಯ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯವರು ಇನ್ನಷ್ಟು ಕಾರ್ಯಾಚರಣೆ ಮಾಡುವ ಮೂಲಕ ಏಳು ಗುಡ್ಡಪ್ರದೇಶದಲ್ಲಿ ಇರುವುದು ಚಿರತೆ ಅಥವಾ ಹುಲಿ ಎನ್ನುವುದನ್ನು ಸಾರ್ವಜನಕರಿಗೆ ಮಾಹಿತಿ ನೀಡಬೇಕಿದೆ.

ನಮ್ಮ ಏಳು ಗುಡ್ಡ ಪ್ರದೇಶದಲ್ಲಿ ಹುಲಿ ಇರಲು ಸಾಧ್ಯವಿಲ್ಲ. ಬದಲಿಗೆ ಬೃಹತ್ ಗಾತ್ರದ ಚಿರತೆ ಬಂದಿರಬಹುದು,ಈಗಾಗಲೇ ಕಳೆದ ಒಂದು ತಿಂಗಳಿಂದ ಹುಲಿ ಇರುವ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ವಿವಿಧೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಾಲೂಕು ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ ಪೂಜಾರ ತಿಳಿಸಿದ್ದಾರೆ.

ಸಮುದಾಯದಿಂದ ಆಯ್ಕೆಯಾದ ಶಾಸಕರು, ಸಚಿವರು ಸಮಾಜದ ಕೆಲಸ ಮಾಡುತ್ತಿಲ್ಲ: ಹೆಚ್.ಎಂ.ರೇವಣ್ಣ ಕಳವಳ

 

ಕಿಷ್ಕಿಂಧವಾಣಿ ಸುದ್ದಿ

 

ಬೆಂಗಳೂರು: ಸಮಾಜದಿಂದ ಆಯ್ಕೆಯಾದ ನಮ್ಮ ಕುರುಬ ಸಮಾಜದ ಶಾಸಕರು, ಸಚಿವರು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂಬ ವಿಷಾದದ ಸಂಗತಿ. ಹಾವನೂರು ವರದಿಯಿಂದ ನಮ್ಮ ಸಮಾಜಕ್ಕೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಮಾನ ಸಿಗಲು ಸಾಧ್ಯವಾಯಿತು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಹೆಚ್. ಎಂ.ರೇವಣ್ಣ ತೀವ್ರ ಕಳವಳ ವ್ಯಕ್ತಪಡಿಸಿದರು.

ಅವರು ಬೆಂಗಳೂರು ಚಂದ್ರಲೇಔಟ್, ಕನಕ ಭವನದಲ್ಲಿ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೆಂಪೇಗೌಡ ಅಭಿವೃದ್ದಿ ನಿಗಮ ಮತ್ತು ಕೆಂಪೇಗೌಡರ ವಿವಿಧ ಕಾರ್ಯಕ್ರಮ ಮಾಡಲು ನಾನು ಮತ್ತು ಸಿದ್ದರಾಮಯ್ಯರವರ ಕಾರಣ.

ಸಮ ಸಮಾಜ ಚಿಂತನೆ ಕೊಲ್ಲೂರು ಮಲ್ಲಪ್ಪ, ಟಿ.ಮರಿಯಪ್ಪ ಸಂಘಟನೆಯಲ್ಲಿ ಹಾಕಿಕೊಟ್ಟ ಬುನಾದಿಯಿಂದ ಕುರುಬರು ಸಂಘಟಿತರಾದರು. ಕುರುಬ ಎಂದು ಹೆಮ್ಮೆಯಿಂದ ಹೇಳಿ. ಬಗರಿರವರು ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ಕೊಟ್ಟರು.

ಸಿದ್ದರಾಮಯ್ಯ, ಈಶ್ವರಪ್ಪ, ಬಂಡೆಪ್ಪ ಕಾಂಶಪ್ಪನವರ್ ಒಂದುಗೂಡಿಸಿ ಸಮಾಜ ಸಂಘಟನೆ ಒತ್ತು ನೀಡಲಾಯಿತು.

ಸಮಾಜದವರು ಯಾವ ಪಕ್ಷದಲ್ಲಿ ಇರಲಿ ಅವರು ನಾಯಕರಾಗಿ ಬೆಳಯಬೇಕು. ಎಂಬ ಆಶಯ ನಮ್ಮದು.ಕುರುಬರ ಸಮಾಜ ಉತ್ತಮ ಸಂಘಟನೆ ಇದೆ.

ಮಹಿಳೆಯರು ಮುಂದೆ ವಿಧಾನಸಭೆ, ಲೋಕಸಭೆ ಶೇಕಡ 33ರಷ್ಟು ಮಹಿಳೆಯರಿಗೆ ಸ್ಥಾನ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಟಿ.ಬಿ.ಬಳಗಾವಿ, ಭಾರತ್ ಎಲೆಕ್ಟ್ರಾನಿಕ್ಸ್ ಉಪ ಪ್ರಧಾನ ವ್ಯವಸ್ಥಾಪಕ ಗಿರೀಶ್ ಬಿ.ಇ., ರಾಜ್ಯ ಲೆಕ್ಕ ಇಲಾಖೆ ನಿವೃತ್ತ ಅಧಿಕಾರಿ ಆರ್.ಎಸ್.ಪೊಂಡೇ, ಸಮುದಾಯದ ಶಾಮಣ್ಣ, ಸೋಮಶೇಖರ್, ಖ್ಯಾತ ವೈದ್ಯ ಗಿರೀಶ್,ಬೀರಪ್ಪ ಹಂಡಿಗೆ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಅಧ್ಯಕ್ಷ ಜಿ.ನಾಗರಾಜ, ಸಂಸ್ಥಾಪಕ ಸಿ.ಬಸವರಾಜು, ಮಾಜಿ ಕಾರ್ಯದರ್ಶಿ ಎಸ್.ರಂಗರಾಜು ಇದ್ದರು.

ತುಂಗಭದ್ರಾ ಎಡದಂಡೆಯ ಕಾಲುವೆ ಇ.ಎಸ್.775 ವಿತರಣಾ ಕಾಲುವೆಯಲ್ಲಿ ನೀರಿನ ಸೋರಿಕೆ ಆತಂಕದಲ್ಲಿ ರೈತರು.

*ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ.

*ಈ ಹಿಂದೆ ಬಸಾಪೂರದಲ್ಲಿ ಆದಂತಹ ಘಟನೆಗೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು.

 

ಕಿಷ್ಕಿಂಧವಾಣಿ ವಿಶೇಷ

 

ಗಂಗಾವತಿ: ಕೊಪ್ಪಳ ಬಳ್ಳಾರಿ ವಿಜಯನಗರ ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಎಡದಂಡೆ ಕಾಲುವೆಗೆ 126 ನೇಯ ನೀರಾವರಿ ಸಲಹಾ ಸಮಿತಿಯ ಸಭೆಯ ನಂತರ ನೀರನ್ನು ಹರಿಸಲಾಗುತ್ತಿದ್ದು ತಾಲೂಕಿನ ಜಂಗ್ಲಿ ಗಾಂಧಿಬಾಬು ಕ್ಯಾಂಪ್ ಹತ್ತಿರ ಇ.ಎಸ್.775 ವಿತರಣಾ ಕಾಲುವೆಯ ಮೋರಿ ಪಕ್ಕದಲ್ಲಿ ಬೃಹತ್ ಪ್ರಮಾಣ ನೀರಿನ ಸೋರಿಕೆಯಾಗುತ್ತಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವಾರ

ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಎಡದಂಡೆಯ ಕಾಲುವೆಯಲ್ಲಿ ನೀರನ್ನು ಹರಿಸಿದ ಸಂದರ್ಭದಲ್ಲಿ ಜಂಗ್ಲಿ ಗಾಂಧಿಬಾಬು ಕ್ಯಾಂಪ್ ಬಳಿ ಇ.ಎಸ್

775 ವಿತರಣಾ ಕಾಲುವೆಯ ಮೋರಿ ಪಕ್ಕದಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತು ಜಂಗ್ಲಿ ಭಾಗದ ರೈತರು ಜಲಸಂಪನ್ಮೂಲ ಇಲಾಖೆ ಜೆಇ,ಎಇ ಹಾಗೂ ಎಇಇ ಅವರುಗಳ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಈ ಹಿಂದೆ ಸಮೀಪದ ಬಸಾಪೂರ ಬಳಿ ಮೈಲ್ 13 ಬಳಿ ಎಡದಂಡೆಯ ಕಾಲುವೆಯಲ್ಲಿ ಇದೇ ರೀತಿ ಸೋರಿಕೆಯಾಗಿ ಸುಮಾರು 300ಮೀಟರ್ ಕಾಲುವೆ ಕೊಚ್ಚಿಕೊಂಡು ಹೋಗಿ ರೈತರ 2000 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಕೊಚ್ಚಿಕೊಂಡು ಹೋಗಿ ರೈತರಿಗೆ ಅಪಾರ ನಷ್ಟವುಂಟಾಗಿತ್ತು.

ಇದೀಗ ಜಂಗ್ಲಿ ಗಾಂಧಿಬಾಬು ಕ್ಯಾಂಪ್ ಬಳಿ ಇರುವ ಇ.ಎಸ್.775 ಬಳಿ ಮೋರಿ ಪಕ್ಕದಲ್ಲಿ ಬೃಹತ್ ಪ್ರಮಾಣ ನೀರಿನ ಸೋರಿಕೆಯಾಗುತ್ತಿದೆ.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿ ತಾಸಿಗೆ 200 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಿ 4100 ಕ್ಯೂಸೆಕ್ಸ್ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸಬೇಕಿದೆ.

ಇ.ಎಸ್.775 ವಿತರಣಾ ಕಾಲುವೆಯಲ್ಲಿ ಕಂಡುಬಂದಿರುವ ನೀರಿನ‌ ಸೋರಿಕೆ ಎಡದಂಡೆಯ ಕಾಲುವೆಯಲ್ಲಿ ನೀರು ಹೆಚ್ಚಾದಂತೆ ಒತ್ತಡಕ್ಕೆ ಬೋಂಗಾ ಬೀಳುವ ಸಾಧ್ಯತೆ ಕುರಿತು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಲಸಂಪನ್ಮೂಲ ಎಇ ಅವರನ್ನು ಸಂಪರ್ಕಿಸಿದರೆ ಮೊಬೈಲ್ ಸ್ವಿಚ್ ಆಫ್ ಎಂದು ಸಂದೇಶ ಬರುತ್ತಿದೆ.

ಕಾಲುವೆಯಲ್ಲಿ 4100 ಕ್ಯೂಸೆಕ್ಸ್ ಪೂರ್ಣ ಪ್ರಮಾಣದ ನೀರು ಹರಿಸುವ ಮೊದಲು ನೀರಿನ ಸೋರಿಕೆ ತಡೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಈಗಾಗಲೇ ಬೇರೆ ಬೇರೆ ಕಾರಣದಿಂದ ಕಾಲುವೆಗಳಿಗೆ ನೀರು ಹರಿಸುವುದು ವಿಳಂಭವಾಗಿದ್ದು ಪುನಹ ಸೋರಿಕೆ ಬೃಹತ್ ಪ್ರಮಾಣದಲ್ಲಿ ಆದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.ಕೂಡಲೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಿದೆ

ತುಂಗಭದ್ರಾ ಯೋಜನೆಯ ರೈತರ ಹಿತ ಕಾಪಾಡುವಲ್ಲಿ ಸರಕಾರ ವಿಫಲ;ಮುನವಳ್ಳಿ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರ ಡ್ಯಾಂನ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಾಲುವೆಗಳಿಗೆ ನೀರು ಬಿಡುವ ನಿರ್ಧಾರ ಮೊದಲೇ ತೆಗೆದುಕೊಳ್ಳಬೇಕಿತ್ತು ಆದರೆ ಹೊರ ರಾಜ್ಯಗಳಿಗೆ ನೀರು ನಿಗದಿ ಮಾಡಿದ ಮೇಲೆ ರಾಜ್ಯದ ರೈತರು ಸರಕಾರಕ್ಕೆ ನೆನಪಾಗಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

.ಮುನಿರಾಬಾದ್ ಕಾಡ ಕಚೇರಿಯಲ್ಲಿ ಮಂಗಳವಾರ ನಡೆದ 126 ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ಕೇವಲ 90 ದಿನಗಳಿಗೆ ಮಾತ್ರ ನೀರು ಬಿಡುವದಾಗಿ ಸರಕಾರ ನಿರ್ಧರಿಸಿದೆ ಆದರೆ ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ 86 ಟಿಎಂಸಿ ನೀರು ಸಂಗ್ರಹವಾಗಿದ್ದು. ಪಶ್ಚಿಮ ಘಟ್ಟಗಳಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿರುವುದರಿಂದ ಇನ್ನೂ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿ ಯಾಗುವುದರ ಬಗ್ಗೆ ಸರ್ಕಾರದ ಗಮನಕ್ಕೆ ಇದ್ದರೂ ಹಾಗೂ ಇನ್ನೂ ಕೆಲ ರೈತರು ಸಸಿ ಮಡಿ ಹಾಕುವ ಹಂತದಲಿರುವ ಮಾಹಿತಿ ಇದ್ದರೂ, ಕೇವಲ 90 ದಿನಗಳಿಗೆ ನೀರು ಬಿಡುವುದನ್ನು ನಿರ್ಧರಿಸಿದ್ದು ಸರಿಯಲ್ಲ. ಕಾರಣ ಸರ್ಕಾರ ಕೂಡಲೇ ಅಧಿಕಾರಿಗಳಿಗೆ 120 ದಿನಗಳ ವರೆಗೆ ನೀರು ಬಿಡಲು ಆದೇಶ ಮಾಡಿ ರೈತರ ಹಿತಕಾಪಾಡಬೇಕೆಂದು ಪರಣ್ಣ ಮುನವಳ್ಳಿ ಒತ್ತಾಯಿಸಿದ್ದಾರೆ.

ತುಂಗಭದ್ರಾ ಯೋಜನೆ: ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಬಿಡುಗಡೆ ನಿರ್ಧಾರ

 

ಕಿಷ್ಕಿಂಧವಾಣಿ ವಿಶೇಷ

 

ಗಂಗಾವತಿ: ತುಂಗಭದ್ರಾ ಜಲಾಶಯ ಪ್ರದೇಶದಲ್ಲಿ ಮಳೆ ಅಭಾವ ಹಾಗೂ ‘ಎಲ್ ನಿನೊ’ ಪರಿಣಾಮದಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಅವಲೋಕಿಸಿ, 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಮತ್ತು ಬೇಸಿಗೆಯ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಲುವೆಗಳಿಗೆ ನೀರು ಹರಿಸಲು 126ನೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಿರ್ಧರಿಸಲಾಗಿದೆ.

ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರ ಸಮ್ಮುಖದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆಸಿದ ವಿಸ್ತೃತ ಚರ್ಚೆ ನಡೆಸಿದ ನಂತರ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಕಾಲುವೆವಾರು ನೀರು ಪೂರೈಕೆ ವೇಳಾಪಟ್ಟಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆಗಸ್ಟ್ 11 ರಿಂದ ನವೆಂಬರ್ 10ರವರೆಗೆ 4,100 ಕ್ಯೂಸೆಕ್ಸ್. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನ. 10ರವರೆಗೆ 1,200 ಕ್ಯೂಸೆಕ್ಸ್. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ. 11 ರಿಂದ ನ. 10 ರವರೆಗೆ 650 ಕ್ಯೂಸೆಕ್ಸ್. ರಾಯ ಬಸವಣ್ಣ ಕಾಲುವೆಗೆ 01.01.2026 ರಿಂದ 10.12.2026 ರವರೆಗೆ 180 ಕ್ಯೂಸೆಕ್ಸ್. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನ. 10 ರವರೆಗೆ ಜಲಾಶಯದ ಮಟ್ಟ 1585 ಅಡಿ ತಲುಪುವವರೆಗೆ 25 ಕ್ಯೂಸೆಕ್ಸ್. ನದಿ ಪೂರಕ ಕೆರೆಗಳಿಗೆ ಆ. 11 ರಿಂದ ಆ. 17ರವರೆಗೆ 500 ಕ್ಯೂಸೆಕ್ಸ್ ನೀರು ಬಿಡುಗಡೆ ನಿರ್ಧಾರಿಸಲಾಗಿದ್ದು, ನೀರು ಲಭ್ಯತೆ ಅಥವಾ 90 ದಿನಗಳ ಕಾಲಾವಧಿ, ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.

ರೈತರಿಗೆ ಮಿತ ಬೆಳೆ ಬೆಳೆಯಲು ಮನವಿ: ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹಾಗೂ ‘ಎಲ್ ನಿನೊ’ ಪರಿಣಾಮದಿಂದ ಉಂಟಾಗಲಿರುವ ಬರ ಪರಿಸ್ಥಿತಿ ಅವಲೋಕಿಸಿ ಮಳೆಯ ಅಭಾವದಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಪ್ರಸ್ತುತ ಲಭ್ಯವಿರುವ ನೀರಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಹಾಗೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಮತ್ತು ಇತರೆ ಉಪಯೋಗಕ್ಕಾಗಿ ನೀರನ್ನು ಕಾಯ್ದಿರಿಸುವುದು ಅವಶ್ಯವಾಗಿದ್ದು, ಆದ್ದರಿಂದ ರೈತ ಭಾಂದವರು ಮಿತ ಬೆಳೆಗಳನ್ನು ಮಾತ್ರ ಬೆಳೆದು ಇಲಾಖೆಯೊಡನೆ ಸಹಕಾರಿಸಲು ಕೋರಲಾಗಿದೆ. ಪ್ರಸ್ತುತ ಜಲಾಶಯದ ಒಳಹರಿವಿನ ಲಭ್ಯತೆ ಅನುಸಾರ ಹಾಗೂ ಮುಂಬರುವ ಒಳಹರಿವು ವ್ಯತಿರಿಕ್ತವಾದಲ್ಲಿ (ಕಡಿಮೆ/ಹೆಚ್ಚು) ದಿನಾಂಕ:10.09.2026 ರಂದು ನೀರಾವರಿ ಸಲಹಾ ಸಮಿತಿಯನ್ನು ಆಯೋಜಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಎಸ್.ಬಿ ಮಲ್ಲಿಗವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ

 

 

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ತುಂಗಭದ್ರಾ ಜಲಾಶಯದಲ್ಲಿ ಸದ್ಯ 82 ಟಿಎಂಸಿ ನೀರು ಶೇಖರಣೆಯಾಗಿದ್ಧು, ಈ ಲಭ್ಯತೆ ಆಧರಿಸಿ ಕಾಲುವೆಗಳಿಗೆ

90 ದಿನಗಳ ಅವಧಿವರೆಗೆ ಮಾತ್ರ ನೀರು ಹರಿಸಲು ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಆಗಸ್ಟ್ 11ರಂದು ನಡೆದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸದ್ಯ ಈಗ ಜಲಾಶಯದಲ್ಲಿ 82 ಟಿಎಂಸಿ ನೀರು ಇದೆ.

120 ದಿನಗಳವರೆಗೆ ನೀರು ಹರಿಸಲು ಜಲಾಶಯದಲ್ಲಿ 16 ಟಿಎಂಸಿ ನೀರಿನ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇನ್ನು

16 ಟಿಎಂಸಿ ನೀರು ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕುಡಿಯುವ ನೀರಿಗಾಗಿ ಜಲಾಶಯದಲ್ಲಿ 10 ಟಿಎಂಸಿ ನೀರು ಇಟ್ಟುಕೊಳ್ಳಲೇಬೇಕಾಗುತ್ತದೆಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರೈತರ ಬೇಡಿಕೆಯಂತೆ 120 ಗಳವರೆಗಾದರು ಸದ್ಯ ಕಾಲುವೆಗಳಿಗೆ ನೀರು ಹರಿಸುವುದು ತುಂಬಾ ಅಗತ್ಯವಿದೆ ಎಂದು ಸಚಿವರಾದ ಬಿ ನಾಗೇಂದ್ರ ಹಾಗೂ ಶಾಸಕರಾದ ಜೆ ಎನ್ ಗಣೇಶ ಮತ್ತು ಬಿ ಎಂ ನಾಗರಾಜ ಅವರು ಸಲಹೆ ಮಾಡಿದರು.

ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ಶಾಸಕರು ಸಹ ಕಾಲುವೆಗಳಿಗೆ ತುರ್ತಾಗಿ

ನೀರು ಬಿಡಲು ಸಲಹೆ ಮಾಡಿದ್ದಾರೆ. ಕಾಲುವೆಗಳಿಗೆ ಸದ್ಯ ನೀರು ಹರಿಸಲೇಬೇಕು ಎಂದು ಬೆಳಗ್ಗೆ ರೈತ ಮುಖಂಡರು ಸಹ ಹಕ್ಕೋತ್ತಾಯ ಮಾಡಿದ್ದಾರೆ. ಎಲ್ಲರ ಸಲಹೆಯಂತೆ

ನೀರಿನ ಲಭ್ಯತೆ ಆಧರಿಸಿ ಸದ್ಯ 90 ದಿನಗಳ ಅವಧಿವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸುವುದು ಸೂಕ್ತ ಎಂದು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಯಿತು.

*ಸೆಪ್ಟೆಂಬರ್ 11ಕ್ಕೆ ಪುನಃ ಸಭೆ:* ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,

ಕಾಲುವೆಗೆ ನೀರು ಹರಿಸುವ ಸಂಬಂಧ ಬೆಳಗ್ಗೆ ರೈತರ ಸಲಹೆ ಪಡೆಯಲಾಗಿದೆ. ಬಳಿಕ ಈ ಭಾಗದ ಎಲ್ಲ ಜನ ಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಪಡೆಯಲಾಗಿದೆ. ಎಲ್ಲರ ಸಲಹೆ ಪಡೆದುಕೊಂಡೇ ಸದ್ಯ 90 ದಿನಗಳವರೆಗೆ ಮಾತ್ರ ಕಾಲುವೆ ನೀರು ಹರಿಸಲು ನಿರ್ಣಯಿಸಲಾಗಿದೆ. ಸದ್ಯ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಆಧರಿಸಿಯೇ ಈಗ 90 ದಿನಗಳಿಗೆ ಮಾತ್ರ ನೀರು ಹರಿಸಲು ರೈತರಿಗೆ ಗ್ಯಾರಂಟಿ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ನೀರು ಹರಿಸುವುದನ್ನು

ಮಳೆ ಆಧರಿಸಿಯೇ ನಿರ್ಧರಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ಸೆಪ್ಟೆಂಬರ್ 11ಕ್ಕೆ ಪುನಃ ಸಭೆ ನಡೆಸಿ

ಚರ್ಚಿಸುತ್ತೇವೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಚಿವ ಬಿ ನಾಗೇಂದ್ರ, ಕಾಡಾ ಅಧ್ಯಕ್ಷ ಹಸನಸಾಬ ನಬಿಸಾಬ ದೋಟಿಹಾಳ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಕವಿತಾ,

ಜಿಲ್ಲಾ ‌ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಜಾಹ್ನವಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರರಾದ ಎಸ್ ಬಿ ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ

ಸತ್ಯ ನಾರಾಯಾಣ ಶೆಟ್ಟಿ ಹಾಗೂ ಇನ್ನೀತರರು ಇದ್ದರು.

ಹಿರಿಯ ಮುತ್ಸದ್ದಿ ಹೆಚ್.ಜಿ.ರಾಮುಲು ಕ್ಷೇಮ‌ ವಿಚಾರಿಸಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹೆಚ್.ಜಿ. ರಾಮುಲು ರಾಜಕೀಯ ಸೇವೆ ಸಲ್ಲಿಸಿದ್ದಾರೆ: ಕೆ ವಿರೂಪಾಕ್ಷಪ್ಪ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮಾಜಿ ಸಂಸದ ಹಿರಿಯ ಮುಖಂಡ ಹೆಚ್‍.ಜಿ. ರಾಮುಲು ಅವರು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ತಮ್ಮ ರಾಜಕೀಯ ಸೇವೆಯನ್ನು ಮಾಡಿದ್ದಾರೆ.ಅವರ ಆರೋಗ್ಯವನ್ನು ಭಗವಂತ ಇನ್ನಷ್ಟು ಸುಧಾರಿಸುವ ಜೊತೆಗೆ ಹೆಚ್ಚಿನ ಆಯುಷ್ಯ ನೀಡಲಿ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ದೇವರಲ್ಲಿ ಪ್ರಾರ್ಥಿಸಿದರು.
ಅವರು ಸೋಮವಾರ ಹೆಚ್.ಜಿ ರಾಮುಲು ನಿವಾಸಕ್ಕೆ ತೆರಳಿ ರಾಮುಲು ಅವರ ಯೋಗಕ್ಷೇಮವನ್ನು ವಿಚಾರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಖಂಡ ರಾಯಚೂರು ಕೊಪ್ಪಳ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಾಗಿ ಹಿಂದುಳಿದ ವರ್ಗದ ನಾಯಕರು ಬೆಳೆಯಲು ಹೆಚ್.ಜಿ. ರಾಮುಲು ಕಾರಣರಾಗಿದ್ದಾರೆ.ಅವರ ಕುಟುಂಬಕ್ಕೆ ಇನ್ನಷ್ಟು ರಾಜಕೀಯ ಸ್ಥಾನಮಾನ ಸಿಗಬೇಕು. ಪ್ರಸ್ತುತ ರಾಜಕೀಯದಲ್ಲಿ ಜಾತಿ, ಧರ್ಮ, ಸ್ವಜನ ಪಕ್ಷಪಾತ ಹೆಚ್ಚಾಗಿದ್ದು, ಹೆಚ್‍.ಜಿ ರಾಮುಲು ಅವರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ ಅವರಂತಹ ರಾಜಕಾರಣಿಗಳು ಪ್ರಸ್ತುತ ಬೇಕಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೆಚ್.ಆರ್.ಶ್ರೀನಾಥ,
ಹಿರಿಯ ಮುಖಂಡರಾದ ಅಪ್ಸಾನಿ ನಾರಾಯಣ ರಾವ್,ಮೋರಿ ದುರುಗಪ್ಪ,ಬಸಾಪಟ್ಟಣ ಶರಣೆಗೌಡ,ವೀರನಗೌಡ,ಶಿವು ಹೊಸಳ್ಳಿ, ವಿರೂಪಾಕ್ಷಪ್ಪ ರೇಷ್ಮೆ,ಅಯ್ಯಪ್ಪ ಹೊಸಳ್ಳಿ, ಭಾಗಣ್ಣ,
ರಾಮನಾಯಕ ಸೇರಿದಂತೆ ಅನೇಕರಿದ್ದರು.

ಆ.11,ರಂದು ಟಿಬಿ ಡ್ಯಾಂ ನೀರಾವರಿ ಸಲಹಾ ಸಮಿತಿ ಸಭೆ

 

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: 2026-27ನೇ ಸಾಲಿನ ತುಂಗಭದ್ರಾ ಜಲಾಶಯದ ಮುಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಒದಗಿಸುವ ಕುರಿತು ನಿರ್ಣಯಿಸಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆಯನ್ನು ಮುನಿರಾಬಾದ ಕಾಡಾ ಕಚೇರಿ ಸಭಾಂಗಣದಲ್ಲಿ ಆ.11 ರಂದು ಮಧ್ಯಾನ್ಹ 3.30.ಕ್ಕೆ ಸಂಪುಟದರ್ಜೆ ಸಚಿವರಾದ ಶಿವರಾಜ ಎಸ್. ತಂಗಡಗಿ ನೇತೃತ್ವದಲ್ಲಿ

ಕರೆಯಲಾಗಿದೆ.

ಅಚ್ಚುಕಟ್ಟು ಪ್ರದೇಶದ

ಸಚಿವರುಗಳು, ಲೋಕಸಭಾ,ರಾಜ್ಯಸಭಾ ಸದಸ್ಯರುಗಳು, ವಿಧಾನಸಭಾ ಸದಸ್ಯರುಗಳು, ವಿಧಾನ ಪರಿಷತ್ ಸದಸ್ಯರುಗಳು, ಹಾಗೂ ನೀರಾವರಿ ಸಲಹಾ ಸಮಿತಿಯ ಸದಸ್ಯರುಗಳು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಮತ್ತು ಅಧೀಕ್ಷಕ ಅಭಿಯಂತರ ಹಾಗೂ ಸದಸ್ಯ ಕಾರ್ಯದರ್ಶಿ ಎಸ್.ಬಿ.ಮಲ್ಲಿಗವಾಡ ಕೋರಿದ್ದಾರೆ.

ಅನ್ಸಾರಿಯವರು ಮೊದಲು ತಾವು ಗೆದ್ದು ತೋರಿಸಲಿ, ನಂತರ ಮತ್ತೊಬ್ಬರನ್ನು ಸೋಲಿಸಲಿ:ಸಚಿವ ಶಿವರಾಜ್ ತಂಗಡಗಿ

*ನಾನು ಸೇರಿ ಹಿಟ್ನಾಳಫ್ಯಾಮಿಲಿ ಹಾಗೂ ರಾಯರೆಡ್ಡಿಯವರು ಯಾರನ್ನು ಸೋಲಿಸಲು ಯತ್ನಿಸಿಲ್ಲ

*ಸಚಿವ ತಂಗಡಗಿಯವರಿಗೆ ಶಾಮೀದ್ ಮನಿಯಾರ್ ಹಾಗೂ ಆಸೀಫ್ ನೇತೃತ್ವದಲ್ಲಿ ಭವ್ಯ ಸ್ವಾಗತ

*ಕರ್ನೂಲ್‌ಬಾಬಾದರ್ಗಾ, ದುರುಗಮ್ಮನಗುಡಿ ಹಾಗೂ ತಾತನಮಠದಲ್ಲಿ ಮಳೆಗಾಗಿ ಪ್ರಾರ್ಥಿಸಿದ ತಂಗಡಗಿ

*ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ತಂಗಡಗಿಯವರಿಗೆ ಹಾಕಿ ಖುಷಿಪಟ್ಟ ಕಾರ್ಯಕರ್ತರು.

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ತಾವು ಮೊದಲು ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಪ್ರಚಾರಕ್ಕೆ ಹೋಗಿ ಗೆದ್ದು ತೋರಿಸಬೇಕು. ಅದು ಬಿಟ್ಟು ಎರಡು ನಿಮಿಷದಲ್ಲಿ ತಂಗಡಗಿ, ಹಿಟ್ನಾಳ ಫ್ಯಾಮಿಲಿ ಹಾಗೂ ರಾಯರೆಡ್ಡಿಯವರನ್ನು ಸೋಲಿಸುವ ಚಾಲೆಂಜ್ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.

ಅವರು ಸಚಿವರಾದ ನಂತರ ಗಂಗಾವತಿಯ ಗ್ರಾಮದೇವತೆ ಶ್ರೀದುರುಗಮ್ಮ, ಶ್ರೀಚನ್ನಬಸವತಾತಾನ ಮಠ ಹಾಗೂ ಭಾವೈಕ್ಯತೆಯ ಕೇಂದ್ರ ಕರ್ನೂಲ್ ಬಾಬಾ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಹತ್ತಿರ ಬಂದು ಮಾತನಾಡಿದೇ ಮೊಬೈಲ್ ಗಳಲ್ಲಿ ರಿಕಾರ್ಡ್ ಮಾಡಿ ಹಾಕುವುದು ಮತ್ತು ಆಡಿಯೋ ಮೂಲಕ ಹಲವರನ್ನು ಟೀಕಿಸುವ ಅನ್ಸಾರಿಯವರು ಕಾಂಗ್ರೆಸ್ ಮುಂಡರು ಹಾಗೂ ಕಾರ್ಯಕರ್ತರ ಜತೆ ಹೇಗೆ ವರ್ತಿಸಿದ್ದಾರೆ ನೋಡಿ ಕೊಳ್ಳಲಿ,

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿಯವರಿಗೆ ಟಿಕೇಟ್ ನೀಡಿತ್ತು. ನಾನು ಹಾಗೂ ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ ಸೇರಿ ಕಾಂಗ್ರೆಸ್ ಹಿರಿಯ ಮುಖಂಡರು ಗಂಗಾವತಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಅನ್ಸಾರಿಯವರ ಮನೆಯಲ್ಲಿ ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇತ್ತು. ಪ್ರಚಾರದ ಕೊರತೆ ಕುರಿತು ಅನ್ಸಾರಿಯವರಿಗೆ ಕಿವಿ ಮಾತು ಹೇಳಿದರೆ ನನ್ನ ಚಿಂತೆ ಬೇಡ ತಂಗಡಗಿಯವರೇ ನಿಮ್ಮ ಗೆಲುವಿನ ಬಗ್ಗೆ ಯೋಚಿಸಿ ಎಂದು ಹೇಳುವ ಮೂಲಕ ನಮಗೆ ಬುದ್ಧಿವಾದ ಹೇಳುತ್ತಿದ್ದರು. ಈಗ ನನ್ನ ಸೋಲಿಗೆ ತಂಗಡಗಿ ಕಾರಣ ಎನ್ನುವುದು ಸರಿಯಲ್ಲ. ನನ್ನನ್ನೂ ಜನರು ಸೋಲಿಸಿದ್ದರು, ಸೋಲಿನ ಕುರಿತು ನಾನು ಯಾರನ್ನೂ ಹೊಣೆ ಮಾಡಲಿಲ್ಲ. ಸೋಲು ಗೆಲುವು ಕೊಡುವವರು ಮತದರಾರರಾಗಿದ್ದು ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡಬೇಕು. ಅನ್ಸಾರಿಯವರು ಮನೆ ಬಿಟ್ಟು ಪ್ರಚಾರಕ್ಕೆ ಹೋಗದೇ ಇನ್ನೊಬ್ಬರ ಮೇಲೆ ಹರಿಹಾಯುವುದು ಸರಿಯಲ್ಲ.

ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ ಹಾಗೂ ನಾನು ಆತ್ಮೀಯರಾಗಿದ್ದು ರಾಯರೆಡ್ಡಿ ಹಾಗೂ ನನಗೆ ಮಂತ್ರಿ ಸ್ಥಾನ ಲಭಿಸಿದ್ದು ರಾಘವೇಂದ್ರ ಅವರಿಗೆ ಬೇರೆ ಸ್ಥಾನಮಾನಗಳು ಸಿಗುವ ಭರವಸೆ ಇದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆಪತ್ಯಕ್ಕೆ ಸರಿಯಲು ಸಾಧ್ಯವಿಲ್ಲ, ರಾಜ್ಯದ ಸಿಎಂ ಆಗಿ ಎರಡು ಭಾರಿ ಅತ್ಯುತ್ತಮ ಆಡಳಿತ ನೀಡಿ ಶೋಷಿತ ಸಮುದಾಯದ ಶಕ್ತಿಯಾಗಿದ್ದರು. ನಾವೆಲ್ಲರೂ ಅವರ ಆಶೀರ್ವಾದದಿಂದ ಸ್ಥಾನಮಾನಗಳನ್ನು ಕಂಡಿದ್ದೇವೆ, ಮುಂದೆಯೂ ಅವರ ಮಾರ್ಗದರ್ಶನ ಈ ಸರಕಾರಕ್ಕೆ ಇರುತ್ತದೆ.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಕ್ಷೇತ್ರಗಳ ಜನರ ಆಶೀರ್ವಾದಿಂದ ನಾಲ್ಕನೇಯ ಸಲ ಮಂತ್ರಿಯಾಗಿದ್ದು ಗಂಗಾವತಿಯಲ್ಲಿ ಶಾಮೀದ್ ಮನಿಯಾರ್ ಹಾಗೂ ಯುವಕಾಂಗ್ರೆಸ್ ಮುಖಂಡ ಆಸೀಫ್ ಹುಸೇನ್ ಸೇರಿ ನಿಷ್ಠಾವಂತ ಕಾಂಗ್ರೆಸ್ಸಿಗರು ಸದಾ ನನ್ನ ಶ್ರೇಯಸ್ಸನ್ನು ಬಯಸಿದ್ದಾರೆ. ಮಂತ್ರಿ ಸ್ಥಾನ ಸಿಗಲೆಂದು ಕಿಷ್ಕಿಂಧಾ ಅಂಜನಾದ್ರಿ, ಕರ್ನೂಲ್ ಬಾಬಾ ದರ್ಗಾ, ಶ್ರೀದುರುಗಮ್ಮ, ಶ್ರೀಚನ್ನಬಸವಸ್ವಾಮಿ ಹಾಗೂ ತಿರುಪತಿಗೂ ತೆರಳಿ ಪೂಜೆ ಮಾಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದ್ದು ಜನಸಾಮಾಮನ್ಯರಿಗೆ ಒಳಿಗಾಗುವಂತೆ ಯಾವುದೇ ದ್ವೇಷ ಭಾವನೆ ಇಲ್ಲದೇ ಜಾತಿ, ಪಕ್ಷ ಬೇಧ ಮರೆತು ಬಡವರ ಕೆಲಸ ಕಾರ್ಯ ಮಾಡುತ್ತೇನೆ ಎಂದರು.

ಕರ್ನೂಲ್‌ಬಾಬಾ ದರ್ಗಾ ಹತ್ತಿರ ಸಾವಿರಾರು ಅಭಿಮಾನಿಗಳ ಮಧ್ಯೆ ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ಸಚಿವ ಶಿವರಾಜ್ ತಂಗಡಗಿಯವರಿಗೆ ಹಾಕಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡಪ್ಪ ದೇಸಾಯಿ, ಶಾಮೀದ ಮನಿಯಾರ್,ಅಸೀಫ್ ಹುಸೇನ್, ಅಜಗರಲಿ ಇದ್ಲಿ, ಮಲ್ಲಿಕಾರ್ಜುನ ದೇವರಮನಿ,ರೆಡ್ಡಿ ಶ್ರೀನಿವಾಸ, ಶರಣೇಗೌಡ, ಸಿದ್ದಪ್ಪ ನೀರಲೂಟಿ, ರೇಣುಕನಗೌಡ, ಅಮರೇಶ ಗೋನಾಳ, ಮಹಮದ್ ರಫಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಶಿವರಾಜ್ ತಂಗಡಗಿ ಅಭಿಮಾನಿಗಳಿದ್ದರು.

***

ಬಿ.ನಾಗೇಂದ್ರ ಅವರು ಬೇಲ್ ಮೇಲೆ ಇದ್ದು ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಚಿವ ಸ್ಥಾನ ಕೊಟ್ಟಿದೆ ಎಂದು ಕೇಳುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಎಷ್ಟು ಕೇಸ್ ಗಳಿವೆ ಎನ್ನುವುದನ್ನು ನೋಡಿಕೊಳ್ಳಲಿ,ಒಂದು ಬೆರಳು ಬಿ.ನಾಗೇಂದ್ರ ಅವರನ್ನು ತೋರಿಸಿದರೆ ಉಳಿದ ಮೂರು ಬೆರಳುಗಳು ರೆಡ್ಡಿ ಅವರನ್ನು ತೋರಿಸುತ್ತವೆ. ಬಿಜೆಪಿಯವರು ಟೀಕೆಗಾಗಿ ಟೀಕೆ ಮಾಡದೇ ಜನರ ಸಮಸ್ಯೆಗಳನ್ನು ಸರಕಾರಕ್ಕೆ ತೋರಿಸಿ ಕೆಲಸ ಮಾಡಿಸಬೇಕು.

-ಶಿವರಾಜ್ ಎಸ್ ತಂಗಡಗಿ ಸಚಿವರು.

error: Content is protected !!