ಅನ್ಸಾರಿಯವರು ಮೊದಲು ತಾವು ಗೆದ್ದು ತೋರಿಸಲಿ, ನಂತರ ಮತ್ತೊಬ್ಬರನ್ನು ಸೋಲಿಸಲಿ:ಸಚಿವ ಶಿವರಾಜ್ ತಂಗಡಗಿ
*ನಾನು ಸೇರಿ ಹಿಟ್ನಾಳಫ್ಯಾಮಿಲಿ ಹಾಗೂ ರಾಯರೆಡ್ಡಿಯವರು ಯಾರನ್ನು ಸೋಲಿಸಲು ಯತ್ನಿಸಿಲ್ಲ
*ಸಚಿವ ತಂಗಡಗಿಯವರಿಗೆ ಶಾಮೀದ್ ಮನಿಯಾರ್ ಹಾಗೂ ಆಸೀಫ್ ನೇತೃತ್ವದಲ್ಲಿ ಭವ್ಯ ಸ್ವಾಗತ
*ಕರ್ನೂಲ್ಬಾಬಾದರ್ಗಾ, ದುರುಗಮ್ಮನಗುಡಿ ಹಾಗೂ ತಾತನಮಠದಲ್ಲಿ ಮಳೆಗಾಗಿ ಪ್ರಾರ್ಥಿಸಿದ ತಂಗಡಗಿ
*ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ತಂಗಡಗಿಯವರಿಗೆ ಹಾಕಿ ಖುಷಿಪಟ್ಟ ಕಾರ್ಯಕರ್ತರು.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ತಾವು ಮೊದಲು ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಪ್ರಚಾರಕ್ಕೆ ಹೋಗಿ ಗೆದ್ದು ತೋರಿಸಬೇಕು. ಅದು ಬಿಟ್ಟು ಎರಡು ನಿಮಿಷದಲ್ಲಿ ತಂಗಡಗಿ, ಹಿಟ್ನಾಳ ಫ್ಯಾಮಿಲಿ ಹಾಗೂ ರಾಯರೆಡ್ಡಿಯವರನ್ನು ಸೋಲಿಸುವ ಚಾಲೆಂಜ್ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.
ಅವರು ಸಚಿವರಾದ ನಂತರ ಗಂಗಾವತಿಯ ಗ್ರಾಮದೇವತೆ ಶ್ರೀದುರುಗಮ್ಮ, ಶ್ರೀಚನ್ನಬಸವತಾತಾನ ಮಠ ಹಾಗೂ ಭಾವೈಕ್ಯತೆಯ ಕೇಂದ್ರ ಕರ್ನೂಲ್ ಬಾಬಾ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಹತ್ತಿರ ಬಂದು ಮಾತನಾಡಿದೇ ಮೊಬೈಲ್ ಗಳಲ್ಲಿ ರಿಕಾರ್ಡ್ ಮಾಡಿ ಹಾಕುವುದು ಮತ್ತು ಆಡಿಯೋ ಮೂಲಕ ಹಲವರನ್ನು ಟೀಕಿಸುವ ಅನ್ಸಾರಿಯವರು ಕಾಂಗ್ರೆಸ್ ಮುಂಡರು ಹಾಗೂ ಕಾರ್ಯಕರ್ತರ ಜತೆ ಹೇಗೆ ವರ್ತಿಸಿದ್ದಾರೆ ನೋಡಿ ಕೊಳ್ಳಲಿ,
2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿಯವರಿಗೆ ಟಿಕೇಟ್ ನೀಡಿತ್ತು. ನಾನು ಹಾಗೂ ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ ಸೇರಿ ಕಾಂಗ್ರೆಸ್ ಹಿರಿಯ ಮುಖಂಡರು ಗಂಗಾವತಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಅನ್ಸಾರಿಯವರ ಮನೆಯಲ್ಲಿ ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇತ್ತು. ಪ್ರಚಾರದ ಕೊರತೆ ಕುರಿತು ಅನ್ಸಾರಿಯವರಿಗೆ ಕಿವಿ ಮಾತು ಹೇಳಿದರೆ ನನ್ನ ಚಿಂತೆ ಬೇಡ ತಂಗಡಗಿಯವರೇ ನಿಮ್ಮ ಗೆಲುವಿನ ಬಗ್ಗೆ ಯೋಚಿಸಿ ಎಂದು ಹೇಳುವ ಮೂಲಕ ನಮಗೆ ಬುದ್ಧಿವಾದ ಹೇಳುತ್ತಿದ್ದರು. ಈಗ ನನ್ನ ಸೋಲಿಗೆ ತಂಗಡಗಿ ಕಾರಣ ಎನ್ನುವುದು ಸರಿಯಲ್ಲ. ನನ್ನನ್ನೂ ಜನರು ಸೋಲಿಸಿದ್ದರು, ಸೋಲಿನ ಕುರಿತು ನಾನು ಯಾರನ್ನೂ ಹೊಣೆ ಮಾಡಲಿಲ್ಲ. ಸೋಲು ಗೆಲುವು ಕೊಡುವವರು ಮತದರಾರರಾಗಿದ್ದು ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡಬೇಕು. ಅನ್ಸಾರಿಯವರು ಮನೆ ಬಿಟ್ಟು ಪ್ರಚಾರಕ್ಕೆ ಹೋಗದೇ ಇನ್ನೊಬ್ಬರ ಮೇಲೆ ಹರಿಹಾಯುವುದು ಸರಿಯಲ್ಲ.
ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ ಹಾಗೂ ನಾನು ಆತ್ಮೀಯರಾಗಿದ್ದು ರಾಯರೆಡ್ಡಿ ಹಾಗೂ ನನಗೆ ಮಂತ್ರಿ ಸ್ಥಾನ ಲಭಿಸಿದ್ದು ರಾಘವೇಂದ್ರ ಅವರಿಗೆ ಬೇರೆ ಸ್ಥಾನಮಾನಗಳು ಸಿಗುವ ಭರವಸೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆಪತ್ಯಕ್ಕೆ ಸರಿಯಲು ಸಾಧ್ಯವಿಲ್ಲ, ರಾಜ್ಯದ ಸಿಎಂ ಆಗಿ ಎರಡು ಭಾರಿ ಅತ್ಯುತ್ತಮ ಆಡಳಿತ ನೀಡಿ ಶೋಷಿತ ಸಮುದಾಯದ ಶಕ್ತಿಯಾಗಿದ್ದರು. ನಾವೆಲ್ಲರೂ ಅವರ ಆಶೀರ್ವಾದದಿಂದ ಸ್ಥಾನಮಾನಗಳನ್ನು ಕಂಡಿದ್ದೇವೆ, ಮುಂದೆಯೂ ಅವರ ಮಾರ್ಗದರ್ಶನ ಈ ಸರಕಾರಕ್ಕೆ ಇರುತ್ತದೆ.
ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಕ್ಷೇತ್ರಗಳ ಜನರ ಆಶೀರ್ವಾದಿಂದ ನಾಲ್ಕನೇಯ ಸಲ ಮಂತ್ರಿಯಾಗಿದ್ದು ಗಂಗಾವತಿಯಲ್ಲಿ ಶಾಮೀದ್ ಮನಿಯಾರ್ ಹಾಗೂ ಯುವಕಾಂಗ್ರೆಸ್ ಮುಖಂಡ ಆಸೀಫ್ ಹುಸೇನ್ ಸೇರಿ ನಿಷ್ಠಾವಂತ ಕಾಂಗ್ರೆಸ್ಸಿಗರು ಸದಾ ನನ್ನ ಶ್ರೇಯಸ್ಸನ್ನು ಬಯಸಿದ್ದಾರೆ. ಮಂತ್ರಿ ಸ್ಥಾನ ಸಿಗಲೆಂದು ಕಿಷ್ಕಿಂಧಾ ಅಂಜನಾದ್ರಿ, ಕರ್ನೂಲ್ ಬಾಬಾ ದರ್ಗಾ, ಶ್ರೀದುರುಗಮ್ಮ, ಶ್ರೀಚನ್ನಬಸವಸ್ವಾಮಿ ಹಾಗೂ ತಿರುಪತಿಗೂ ತೆರಳಿ ಪೂಜೆ ಮಾಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದ್ದು ಜನಸಾಮಾಮನ್ಯರಿಗೆ ಒಳಿಗಾಗುವಂತೆ ಯಾವುದೇ ದ್ವೇಷ ಭಾವನೆ ಇಲ್ಲದೇ ಜಾತಿ, ಪಕ್ಷ ಬೇಧ ಮರೆತು ಬಡವರ ಕೆಲಸ ಕಾರ್ಯ ಮಾಡುತ್ತೇನೆ ಎಂದರು.
ಕರ್ನೂಲ್ಬಾಬಾ ದರ್ಗಾ ಹತ್ತಿರ ಸಾವಿರಾರು ಅಭಿಮಾನಿಗಳ ಮಧ್ಯೆ ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ಸಚಿವ ಶಿವರಾಜ್ ತಂಗಡಗಿಯವರಿಗೆ ಹಾಕಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡಪ್ಪ ದೇಸಾಯಿ, ಶಾಮೀದ ಮನಿಯಾರ್,ಅಸೀಫ್ ಹುಸೇನ್, ಅಜಗರಲಿ ಇದ್ಲಿ, ಮಲ್ಲಿಕಾರ್ಜುನ ದೇವರಮನಿ,ರೆಡ್ಡಿ ಶ್ರೀನಿವಾಸ, ಶರಣೇಗೌಡ, ಸಿದ್ದಪ್ಪ ನೀರಲೂಟಿ, ರೇಣುಕನಗೌಡ, ಅಮರೇಶ ಗೋನಾಳ, ಮಹಮದ್ ರಫಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಶಿವರಾಜ್ ತಂಗಡಗಿ ಅಭಿಮಾನಿಗಳಿದ್ದರು.

***
ಬಿ.ನಾಗೇಂದ್ರ ಅವರು ಬೇಲ್ ಮೇಲೆ ಇದ್ದು ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಚಿವ ಸ್ಥಾನ ಕೊಟ್ಟಿದೆ ಎಂದು ಕೇಳುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಎಷ್ಟು ಕೇಸ್ ಗಳಿವೆ ಎನ್ನುವುದನ್ನು ನೋಡಿಕೊಳ್ಳಲಿ,ಒಂದು ಬೆರಳು ಬಿ.ನಾಗೇಂದ್ರ ಅವರನ್ನು ತೋರಿಸಿದರೆ ಉಳಿದ ಮೂರು ಬೆರಳುಗಳು ರೆಡ್ಡಿ ಅವರನ್ನು ತೋರಿಸುತ್ತವೆ. ಬಿಜೆಪಿಯವರು ಟೀಕೆಗಾಗಿ ಟೀಕೆ ಮಾಡದೇ ಜನರ ಸಮಸ್ಯೆಗಳನ್ನು ಸರಕಾರಕ್ಕೆ ತೋರಿಸಿ ಕೆಲಸ ಮಾಡಿಸಬೇಕು.
-ಶಿವರಾಜ್ ಎಸ್ ತಂಗಡಗಿ ಸಚಿವರು.


