Breaking News
ಮಲ್ಲಾಪುರ ಕೆರೆ ಪ್ರದೇಶದಲ್ಲಿ ಕಾಡುಪ್ರಾಣಿ ದಾಳಿ ಶಂಕೆ, ಮಲ್ಲಾಪುರ ಕೆರೆ ಪ್ರದೇಶದಲ್ಲಿ ಕಾಡುಪ್ರಾಣಿ ದಾಳಿ ಶಂಕೆ!

“ಆಕಳ ಕರುವಿನ ಕೆಚ್ಚಲು, ಹಿಂಭಾಗ ಕಿತ್ತು ತಿಂದ ಪ್ರಾಣಿ; ಹುಲಿ–ಚಿರತೆ ದಾಳಿಯ ಆತಂಕ

*ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಸತ್ಯ ಬಯಲಿಗೆಳೆಯಲು ಗ್ರಾಮಸ್ಥರ ಆಗ್ರಹ

 

ಕಿಷ್ಕಿಂಧವಾಣಿ ಸುದ್ದಿ

 ಗಂಗಾವತಿ:

ಗಂಗಾವತಿ ತಾಲೂಕಿನ ಮಲ್ಲಾಪುರ ಸೀಮೆಯ ಕೆರೆ ಪ್ರದೇಶದಲ್ಲಿ ಆಕಳ ಕರುವೊಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕಾಡುಪ್ರಾಣಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕರುವಿನ ಕೆಚ್ಚಲು ಹಾಗೂ ಹಿಂಭಾಗದ ಮಾಂಸವನ್ನು ಕಿತ್ತು ತಿಂದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಇದು ಹುಲಿ ಅಥವಾ ಚಿರತೆಯ ದಾಳಿಯಾಗಿರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಮಲ್ಲಾಪುರ ಕೆರೆ ಪ್ರದೇಶದಲ್ಲಿ ಆನೆಗೊಂದಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಜೀರಾಮ್ ಜಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕೆಲಸಕ್ಕೆ ತೆರಳಿದ್ದ ಕೂಲಿಕಾರರು ಮೃತಪಟ್ಟಿದ್ದ ಆಕಳ ಕರುವನ್ನು ಗಮನಿಸಿದ್ದಾರೆ.

ಕರುವಿನ ದೇಹದ ಹಿಂಭಾಗ ಹಾಗೂ ಕೆಚ್ಚಲು ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಮಾಂಸವನ್ನು ಯಾವುದೋ ಕಾಡುಪ್ರಾಣಿ ಕಿತ್ತು ತಿಂದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹುಲಿಯೋ… ಚಿರತೆಯೋ?:

ಮಲ್ಲಾಪುರ ಸೀಮೆಯ ಬೆಟ್ಟ ಹಾಗೂ ಕೆರೆ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಸಂಚಾರದ ಕುರಿತು ಹಿಂದಿನಿಂದಲೂ ಸ್ಥಳೀಯರಲ್ಲಿ ಆತಂಕವಿದೆ. ಇದೀಗ ಆಕಳ ಕರುವಿನ ಮೇಲೆ ದಾಳಿ ನಡೆದಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದು ಹುಲಿಯ ದಾಳಿಯೋ, ಚಿರತೆಯ ದಾಳಿಯೋ ಅಥವಾ ಬೇರೆ ಯಾವುದೇ ಕಾಡುಪ್ರಾಣಿಯ ದಾಳಿಯೋ ಎಂಬುದನ್ನು ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಆಗ್ರಹ:

ಮಲ್ಲಾಪುರ ಸೀಮೆಯಲ್ಲಿನ ಕಾಡುಪ್ರಾಣಿಗಳ ಚಲನವಲನ ಪತ್ತೆಹಚ್ಚಲು ಕೂಡಲೇ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ವಿಶೇಷವಾಗಿ ರೈತರು, ದನಗಾಯಿಗಳು, ಕುರಿಗಾಹಿಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಅಗತ್ಯ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಏಳು ಗುಡ್ಡ ಭಾಗದಲ್ಲೂ ಆತಂಕ

ಈಗಾಗಲೇ ಏಳು ಗುಡ್ಡ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಕುರಿತು ಮಾಹಿತಿ ಇದ್ದು, ತೆಂಬಾ ಹಾಗೂ ಉಪ್ಪಾರ ತಿಮ್ಮಪ್ಪನ ಬಯಲು ಪ್ರದೇಶಗಳಲ್ಲಿ ಆಕಳು ಮತ್ತು ಕೋಣದ ಮೇಲೆ ದಾಳಿ ನಡೆದಿರುವ ಘಟನೆಗಳನ್ನು ಸ್ಥಳೀಯರು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಲ್ಲಾಪುರ ಸೀಮೆಯ ಬೆಟ್ಟ ಪ್ರದೇಶದಲ್ಲೂ ಹುಲಿ ಅಥವಾ ಚಿರತೆ ಸಂಚಾರವಿದೆಯೇ ಎಂಬುದನ್ನು ಅರಣ್ಯ ಇಲಾಖೆ ಪರಿಶೀಲಿಸಬೇಕಾಗಿದೆ.

ಕಾಡುಪ್ರಾಣಿಗಳ ದಾಳಿ ಕುರಿತು ವದಂತಿಗಳಿಗೆ ಅವಕಾಶ ನೀಡದೆ, ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಖರ ಮಾಹಿತಿ ನೀಡಬೇಕು. ಜೊತೆಗೆ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

***

“ಮಲ್ಲಾಪುರ ಸೀಮೆಯ ಬೆಟ್ಟ ಪ್ರದೇಶಗಳಲ್ಲಿ ಹುಲಿ ಇರುವ ಕುರಿತು ಮಾಹಿತಿ ಇದೆ. ಇದೀಗ ಆಕಳ ಕರುವಿನ ಮೇಲೆ ಕಾಡುಪ್ರಾಣಿ ದಾಳಿ ನಡೆಸಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಯಾವ ಪ್ರಾಣಿ ದಾಳಿ ನಡೆಸಿದೆ ಎಂಬುದನ್ನು ಖಚಿತಪಡಿಸಬೇಕು.”

— ಹೊನ್ನಪ್ಪ ನಾಯಕ, ಉದ್ಯೋಗ ಖಾತ್ರಿ ಕೂಲಿಕಾರರು.

ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ.

 

*ಪುತ್ಥಳಿ ಮರುಸ್ಥಾಪನೆಗೆ ಆಗ್ರಹ; ಬೇಡಿಕೆ ಈಡೇರದಿದ್ದರೆ ‘ಕಲಬುರಗಿ ಚಲೋ’ ಎಚ್ಚರಿಕೆ.

ಕಿಷ್ಕಿಂಧವಾಣಿ ಸುದ್ದಿ

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿ ತೆರವುಗೊಳಿಸಿರುವುದನ್ನು ಖಂಡಿಸಿ ಕುರುಬ ಸಮುದಾಯದ ಮುಖಂಡರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಕಲಬುರಗಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಗತ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

 ಪುತ್ಥಳಿ ತೆರವುಗೊಳಿಸಿರುವ ಮಹಾನಗರ ಪಾಲಿಕೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ರಾತ್ರೋರಾತ್ರಿ ಪ್ರತಿಷ್ಠಾಪನೆ, ಬಳಿಕ ತೆರವು

ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಸೆ. 17ರಂದು ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಸಿದ್ದರಾಮಯ್ಯ ಅವರ ಸುಮಾರು 9 ಅಡಿ ಎತ್ತರದ ಪುತ್ಥಳಿಯನ್ನು ಅಭಿಮಾನಿಗಳು ಪ್ರತಿಷ್ಠಾಪಿಸಿದ್ದರು. ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ ಎಂದು ತಿಳಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್‌ನಲ್ಲಿ ಪುತ್ಥಳಿಯನ್ನು ತೆರವುಗೊಳಿಸಿದ್ದರು.

ಈ ಕ್ರಮದ ಬಳಿಕ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕುರುಬ ಸಮುದಾಯದ ಸಂಘಟನೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಇದೀಗ ಪ್ರತಿಭಟನೆಯ ರೂಪದಲ್ಲಿ ಆಕ್ರೋಶ ಹೊರಹೊಮ್ಮಿದೆ.

‘ಪುತ್ಥಳಿ ಮರುಸ್ಥಾಪಿಸಬೇಕು’

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಸಿದ್ದರಾಮಯ್ಯ ಅವರ ಹೆಸರಿನಲ್ಲಿ ವೃತ್ತ ಘೋಷಣೆ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಪುತ್ಥಳಿಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಪುತ್ಥಳಿ ತೆರವುಗೊಳಿಸಿರುವ ಕ್ರಮವನ್ನು ಮರುಪರಿಶೀಲಿಸಿ, ಗೌರವಯುತವಾಗಿ ಪುನಃ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ 2023ರಲ್ಲಿ ಹೈಕೋರ್ಟ್ ವೃತ್ತಕ್ಕೆ ‘ಸಿದ್ದರಾಮಯ್ಯ ವೃತ್ತ’ ಎಂದು ಹೆಸರಿಡಲಾಗಿದೆ ಎಂದು ಸಂಘಟನೆಯ ಮುಖಂಡರು ಹೇಳಿಕೊಂಡಿದ್ದು, ಆ ಹೆಸರಿನ ಫಲಕವನ್ನೂ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

‘ಕಲಬುರಗಿ ಚಲೋ’ ಎಚ್ಚರಿಕೆ

ಪುತ್ಥಳಿಯನ್ನು ಶೀಘ್ರವಾಗಿ ಮರುಸ್ಥಾಪಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಅಗತ್ಯ ಬಿದ್ದರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಸಮುದಾಯದ ಮುಖಂಡರನ್ನು ಒಗ್ಗೂಡಿಸಿ ‘ಕಲಬುರಗಿ ಚಲೋ’ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಸಂಘಟನೆಗಳ ಮುಖಂಡರು ನೀಡಿದ್ದಾರೆ.

ಆಡಳಿತದ ಮುಂದಿರುವ ಪ್ರಶ್ನೆ

ಒಂದೆಡೆ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿರುವುದು ತೆರವಿಗೆ ಕಾರಣ ಎಂದು ಪಾಲಿಕೆ ಅಧಿಕಾರಿಗಳ ವಾದವಿದ್ದರೆ, ಮತ್ತೊಂದೆಡೆ ಪುತ್ಥಳಿ ತೆರವುಗೊಳಿಸಿರುವ ಕ್ರಮವನ್ನು ವಿರೋಧಿಸಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಹೀಗಾಗಿ ಪುತ್ಥಳಿ ಸ್ಥಾಪನೆಗೆ ಅಗತ್ಯವಿರುವ ಅನುಮತಿ, ಸಾರ್ವಜನಿಕ ಸ್ಥಳದ ಬಳಕೆ ಹಾಗೂ ಮುಂದಿನ ಕಾನೂನುಬದ್ಧ ಕ್ರಮಗಳ ಕುರಿತು ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಅಗ್ನಿವೀರ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹನುಮೇಶ್‌ಗೆ ಸನ್ಮಾನ: 

*ಶ್ರೀ ವಿದ್ಯಾನಿಕೇತನ ಸೈನಿಕ ಅಕಾಡೆಮಿಯಿಂದ ಉಚಿತ ದೈಹಿಕ ತರಬೇತಿ ಘೋಷಣೆ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದೇಶಸೇವೆಯ ಕನಸು ಹೊತ್ತ ಗಂಗಾವತಿಯ ಯುವಕನೊಬ್ಬ ಅಗ್ನಿವೀರ್ ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು, ಆತನ ಮುಂದಿನ ಯಶಸ್ಸಿಗಾಗಿ ಶ್ರೀ ವಿದ್ಯಾನಿಕೇತನ ಸೈನಿಕ ಅಕಾಡೆಮಿಯು ಉಚಿತ ತರಬೇತಿಯ ನೆರವು ಘೋಷಿಸಿದೆ.

ತಾಲೂಕಿನ ಕೇಸರಹಟ್ಟಿ ಗ್ರಾ ಪಂ. ವ್ಯಾಪ್ತಿಯ ಮಲಕನಮರಡಿ ಗ್ರಾಮದ ನಿವಾಸಿಯಾದ ಹನುಮೇಶ್, ಸದ್ಯ ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವ-ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಇತ್ತೀಚೆಗೆ ನಡೆದ ಅಗ್ನಿವೀರ್ ಲಿಖಿತ ಪರೀಕ್ಷೆಯಲ್ಲಿ ಇವರು ಉತ್ತೀರ್ಣರಾಗಿದ್ದಾರೆ.

ಫಿಸಿಕಲ್ ಫಿಟ್ನೆಸ್ ಕಿಟ್ ವಿತರಣೆ:

ಹನುಮೇಶ್ ಅವರ ಸಾಧನೆಯನ್ನು ಮೆಚ್ಚಿ, ಗಂಗಾವತಿಯ ಶ್ರೀ ವಿದ್ಯಾನಿಕೇತನ ಸೈನಿಕ ಅಕಾಡೆಮಿಯ ವತಿಯಿಂದ ಮುಂಬರುವ ದೈಹಿಕ ಪರೀಕ್ಷೆಯ (Physical Test) ಸಿದ್ಧತೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಒಳಗೊಂಡ ‘ಫಿಸಿಕಲ್ ಫಿಟ್ನೆಸ್ ಕಿಟ್’ ಅನ್ನು ಇಂದು ಉಚಿತವಾಗಿ ವಿತರಿಸಿ ಸನ್ಮಾನಿಸಲಾಯಿತು. ಅಷ್ಟೇ ಅಲ್ಲದೆ, ಮುಂದಿನ ನಾಲ್ಕು ತಿಂಗಳುಗಳ ಕಾಲ ಈ ವಿದ್ಯಾರ್ಥಿಗೆ ಅಕಾಡೆಮಿಯಿಂದ ಉಚಿತವಾಗಿ ದೈಹಿಕ ಸದೃಢತೆ ಮತ್ತು ಕಲಿಕಾ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.

ವಿಜಯದಶಮಿಯಿಂದ ಉಚಿತ ತರಬೇತಿ ಶಿಬಿರ ಆರಂಭ:

ಇದೇ ಸಂದರ್ಭದಲ್ಲಿ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು ಮಾತನಾಡಿ, “ನಮ್ಮ ಭಾಗದ ಯಾವುದೇ ವಿದ್ಯಾರ್ಥಿಗಳು ಅಗ್ನಿವೀರ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಅಂತಹವರಿಗೆ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿ ಸೇರಿದಂತೆ ಒಟ್ಟು ನಾಲ್ಕು ತಿಂಗಳುಗಳ ಕಾಲ ಉಚಿತ ತರಬೇತಿ ನೀಡಲಾಗುವುದು,” ಎಂದರು.

ಬರುವ ಅಕ್ಟೋಬರ್ 20, 2026ರ ವಿಜಯದಶಮಿಯ ಶುಭ ದಿನದಂದು ಈ ಉಚಿತ ತರಬೇತಿ ಶಿಬಿರ ಆರಂಭವಾಗಲಿದೆ. ಗಂಗಾವತಿಯ ರಾಯಲ್ ಜಿಮ್‌ನಲ್ಲಿ, ಪ್ರಸಿದ್ಧ ಫಿಟ್ನೆಸ್ ಕೋಚ್ ಹೈದರ್ ಅಲಿ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಉಚಿತ ಫಿಟ್ನೆಸ್ ಕಿಟ್ ಕೂಡ ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಯುವಕರು ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಬೇಕಾಗಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

ಸಂಗಾಪೂರ ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ತೀವ್ರ ಪೈಪೋಟಿ

*ಸಾಮಾನ್ಯ,ಎಸ್ಟಿ, ಮಹಿಳಾ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ.

*ಎಸ್ಸಿ ಹಾಗೂ ಬಿಸಿಎ ಕ್ಷೇತ್ರಗಳಿಗೆ ಅ.04 ರಂದು ಮತದಾನ.

*ಹಳೆಯ ಆಡಳಿತ ಮಂಡಳಿಯಿಂದ ಲಕ್ಷಾಂತರ ರೂ.ಗಳ ಅಕ್ರಮ ಬಿಲ್ ಎತ್ತುವಳಿ ಆರೋಪ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಸಂಗಾಪೂರ ಗ್ರಾಮದ ನೀರು ಬಳಕೆದಾರರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದ್ದು ಸಾಮಾನ್ಯ, ಎಸ್ಟಿ ಹಾಗೂ ಮಹಿಳಾ ಕ್ಷೇತ್ರದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಬಿಸಿಎ ಹಾಗೂ ಎಸ್ಸಿ ಕ್ಷೇತ್ರದ ಮೂರು ನಿರ್ದೇಶಕರ ಆಯ್ಕೆಗಾಗಿ ಅ.04 ರಂದು ಮತದಾನ ಜರುಗಲಿದೆ.

ನೀರು ಬಳಕೆದಾರರ ಸಹಕಾರಿ ಸಂಘದಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು ಸಾಮಾನ್ಯ 06, ಎಸ್ಸಿ 01, ಎಸ್ಟಿ0 1, ಬಿಸಿಎ 02, ಮಹಿಳಾ ಕ್ಷೇತ್ರದಲ್ಲಿ 02 ನಿರ್ದೇಶಕರ ಹುದ್ದೆಗಳಿದ್ದು, ಇವುಗಳ ಆಯ್ಕೆಗಾಗಿ ಸೆ.19 ರಿಂದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಸೆ.28 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 13 ಜನರ ಪೈಕಿ 07 ಜನ ನಾಮಪತ್ರ ವಾಪಸ್ ಪಡೆದಿದ್ದರಿಂದ ಕಣದಲ್ಲಿ ಉಳಿದಿದ್ದ ಸರಗಳ್ಳ ಸೂರ್ಯನಾರಾಯಣರಾವ್,ಎಸ್.ಹೇಮಸುಂದರ ರೆಡ್ಡಿ, ರಾಮಮಕೃಷ್ಣ, ಎನ್.ಶ್ರೀನಿವಾಸ, ಎನ್.ಸುರೇಶ ಹಾಗೂ ಜನಾದ್ರಿ ಸತ್ಯನಾರಾಯಣ ಆರು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್ಟಿ ಕ್ಷೇತ್ರದಲ್ಲಿ ಮಹಾದೇವಪ್ಪ ಹಾಗೂ ಮಹಿಳಾ ಕ್ಷೇತ್ರದಲ್ಲಿ ಹೆಚ್.ಎಂ.ಸುಮAಗಲಾ ಹಾಗೂ ಎಲಿಚೆಟ್ಟಿ ಸೀತರತ್ನಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್ಸಿ ಕ್ಷೇತ್ರದ ಒಂದು ಸ್ಥಾನಕ್ಕೆ ಡಿ.ಬಾಬು ದೊರೆಸ್ವಾಮಿ ಹಾಗೂ ತಿಮ್ಮಪ್ಪ, ಬಿಸಿಎ ಕ್ಷೇತ್ರದ ಎರಡು ಸ್ಥಾನಕ್ಕೆ ಜಯಪ್ರಕಾಶ ನಾರಾಯಣಗೌಡ, ಪಿ.ವೆಂಕಟೇಶ್ವರರಾವ್ ಮತ್ತು ಮೋದಿನಾಬಿ ಸ್ಪರ್ಧಿಸಿದ್ದು ಅ,04 ರಂದು ಮತದಾನ ಜರುಗಲಿದೆ.

ಕಳೆದ ಆಡಳಿತ ಮಂಡಳಿಯ ಅವಧಿಯಲ್ಲಿ ವಿತರಣಾ ಕಾಲುವೆಗಳ ದುರಸ್ತಿ ನೆಪದಲ್ಲಿ ಲಕ್ಷಾಂತರ ರೂ,ಗಳ ಭ್ರಷ್ಠಾಚಾರ ನಡೆದಿದೆ ಎಂದು ಕೆಲ ರೈತರು ಹಾಗೂ ನಿರ್ದೇಶಕರು ಹಿಂದಿನ ಅಧ್ಯಕ್ಷರು, ನಿರ್ದೇಶಕರು ಹಾಗೂ ಜಲಸಂಪನ್ಮೂಲ ಇಲಾಖೆಯ ಅಭಿಯಂತರ ಅಮರೇಶ ಸಿಂಧನೂರು ಇವರ ವಿರುದ್ಧ ಲೋಕಾಯುಕ್ತ, ಜಿಲ್ಲಾಡಳಿತ ಹಾಗೂ ಜಲಸಂಪನ್ಮೂಲ ಇಲಾಖೆ ಮತ್ತು ತುಂಗಭದ್ರಾ ಕಾಡಾ ಇಲಾಖೆಗಳಿಗೆ ದಾಖಲೆ ಸಮೇತ ದೂರು ನೀಡಿದ್ದರಿಂದ ಸಂಗಾಪೂರ ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು.

ಗಂಗಾವತಿ: ಕೆಎಂಎಫ್ ಹಾಲಿನ ಕೇಂದ್ರಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೇಟ್ ಮಾರಾಟ!

*ಗ್ರಾಹಕರು ಪ್ರಶ್ನಿಸಿದರೆ ವ್ಯಾಪಾರಿಗಳಿಂದ ನಿರ್ಲಕ್ಷ್ಯದ ಉತ್ತರ.

*ಅಂಗಡಿಕಾರರ ಕಾರಣಕ್ಕಾಗಿ ಗ್ರಾಹಕರ ನಂಬಿಕೆ ಕಳೆದುಕೊಳ್ಳುತ್ತಿರುವ ಕೆಎಂಎಫ್ ಉತ್ಪನ್ನಗಳು.

*ಏನು ಮಾಡುತ್ತಿದ್ದಾರೆ ಹಾಲಿನ ಸೋಸಾಯಿಟಿಗಳಿಂದ ಗೆದ್ದಿರುವ ನಿರ್ದೇಶಕರು?

*ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ !

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದೈನಂದಿನ ಬದುಕಿನಲ್ಲಿ ಹಾಲು ಮೊಸರು ತುಪ್ಪ ಆಹಾರದ ಒಂದು ಭಾಗವಾಗಿದ್ದು ಕರ್ನಾಟಕದಲ್ಲಿ ಹಾಲು, ಮೊಸರು, ತುಪ್ಪ ಎಂದರೆ ಕೂಡಲೇ ನೆನಪಿಗೆ ಬರುವುದು ಕೆಎಂಎಫ್ ನಂದಿನಿ ಆದರೆ ಇತ್ತೀಚಿಗೆ ಕೆಲ ಅಧಿಕಾರಿಗಳು ಮತ್ತು ಕೆಎಂಎಫ್ ಅಂಗಡಿ ಮಾಲೀಕರ ನಿರ್ಲಕ್ಷ್ಯದ ಪರಿಣಾಮ ದೇಶ ವಿದೇಶದಲ್ಲಿ ಬ್ರಾಂಡ್ ಆಗಿರುವ ಕೆಎಂಎಫ್ ನಂದಿನಿ ಗೆ ಕೆಟ್ಟ ಹೆಸರು ಬರುವಂತಾಗಿದೆ.

ಗಂಗಾವತಿ ಕೆಲ ಔಟ್ ಲೇಟ್ ಅಂಗಡಿಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಕಳೆಯುವ ಯತ್ನ ನಡೆದಿದೆ

ಗಂಗಾವತಿಯ ಪಿಎಲ್ ಡಿ ಬ್ಯಾಂಕ್ ಹಾಗೂ ಸರಕಾರಿ ಆಸ್ಪತ್ರೆಯ ಕೆಎಂಎಫ್ ಔಟ್ ಲೇಟ್ ಅಂಗಡಿಗಳಲ್ಲಿ ಸೋಮವಾರ ಬೆಳ್ಳಿಗ್ಗೆ ಸಣ್ಣ ಹಾಲಿನ ಪಾಕೇಟ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಒಲೆಯ ಮೇಲೆ ಚಹಾ ಮಾಡಲು ಇಟ್ಟಾಗ

ಹಾಲು ಒಡೆದು ಹೋಗಿದ್ದು ಪಾಕೇಟ್ ಗಮನಿಸಿದಾಗ ಸೆ.24 ಮತ್ತೊಂದರ ಮೇಲೆ ಸೆ.27 ಎಂದು ನಮೂದಿಸಲಾಗಿದೆ.

ಅಂದಿನ ಹಾಲನ್ನು ಅಂದೇ ಮಾರಾಟ ಮಾಡಬೇಕಿದ್ದು,ಉಳಿದಿರುವ ಹಾಲನ್ನು ವಾಪಸ್ ಕೆಎಂಎಫ್ ಗೆ ಮರಳಿಸಬೇಕಿದೆ.ಆದರೆ ಔಟ್ ಲೇಟ್ ಮಾರಾಟಗಾರರು ಅವಧಿ ಮೀರಿದ ಹಾಲು,ಮೊಸರು ಮಾರಾಟ ಮಾಡಿ ಗ್ರಾಹಕರ ಆರೋಗ್ಯ ಕೆಡಲು ಕಾರಣರಾಗುತ್ತಿದ್ದಾರೆ. ಚಿಕ್ಕಮಕ್ಕಳಿಗೆ ನಂದಿನಿ ಹಾಲನ್ನು ಬಹುತೇಕ ತಾಯಂದಿರು ಕುಡಿಸುತ್ತಾರೆ, ಎಲ್ಲರ ನಂಬಿಕೆಗೆ ಪಾತ್ರವಾಗಿರುವ ನಂದಿನಿ ಹಾಲಿನ ಗುಣಮಟ್ಟ ಮತ್ತು ನಿಗದಿತ ಅವಧಿ ಮಾರಾಟ ಅವಶ್ಯಕವಾಗಿದೆ.

ಕೆಎಂಎಫ್ ಹಾಗೂ ರೈತರ ಹಿತ ಕಾಯುವ ಭರವಸೆಯೊಂದಿಗೆ ಹಾಲಿನ ಸೊಸೈಟಿಗಳ ಮುಖಾಂತರ ನಿರ್ದೇಶಕರಾಗಿ ಗೆದ್ದು ಹೋಗಿರುವ ಪ್ರತಿನಿಧಿಗಳು ಒಂದು ದಿನವೂ ಅಂಗಡಿಗಳ ವ್ಯಾಪಾರ ಹಾಗೂ ಗ್ರಾಹಕರ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ, ಗಂಗಾವತಿಯಲ್ಲಿ ಅವಧಿ ಮುಗಿದ ಹಾಲಿನ ಮಾರಾಟವಾಗುತ್ತಿದ್ದರೂ, ಈ ಭಾಗದ ಕೆಎಂಎಫ್ ನಿರ್ದೇಶಕರು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

***

ಆಹಾರ ಸುರಕ್ಷತಾ ಕ್ರಮಗಳನ್ನು ಅನುಷ್ಟಾನ ಮಾಡುವ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಯನ್ನು ಅವಧಿ ಮೀರಿದ ಕೆಎಂಎಫ್ ನಂದಿನಿ ಹಾಲಿನ ಕುರಿತು ಮಾತನಾಡಿಸಿದರೆ ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಅಂಗಡಿ ಮುಂಗಟ್ಟುಗಳಲ್ಲಿ ಆಹಾರ ಪದಾರ್ಥಗಳ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸುವ ಅಂಗಡಿ ಮುಂಗಟ್ಟುಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ.ಗಂಗಾವತಿಯಲ್ಲಿ ಕೆಎಂಎಫ್ ಔಟ್ ಲೇಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಕುರಿತು ದೂರು ಬಂದಿದ್ದು ಪರಿಶೀಲಿಸಿ ಕ್ರಮ‌ಕೈಗೊಳ್ಳಲಾಗುತ್ತದೆ.

-ನಾಗರಾಜ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ.

***

 ಕೆಎಂಎಫ್ ಪಿ ಎಲ್ ಡಿ ಬ್ಯಾಂಕ್ ಹತ್ತಿರ ಇರುವ ಕೆಎಂಎಫ್ ಔಟ್ ಲೇಟ್ ಕೇಂದ್ರದಲ್ಲಿ ಹಾಲಿನ ಪಾಕೆಟ್ ಖರೀದಿ ಮಾಡಲಾಗಿದ್ದು, ಪದೇಪದೇ ಅವಧಿ ಮೀರಿದ ಹಾಲಿನ ಪಾಕೆಟ್ ಅನ್ನು ಔಟ್ ಲೇಟ್ ಅಂಗಡಿಯವರು ಕೊಡುತ್ತಿದ್ದಾರೆ. ಮನೆಗೆ ಒಯ್ದು ಒಲೆಯ ಮೇಲೆ ಕಾಯಿಸಿದ ನಂತರ ಈ ಹಾಲು ಒಡೆದು ಹೋಗುತ್ತಿದ್ದು ಮಕ್ಕಳಿಗೆ ಕುಡಿಸಲು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಆಹಾರ ಸುರಕ್ಷತಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರಸಭೆಯವರು ಕೂಡಲೇ ಹಾಲಿನ ಔಟ್ಲೆಟ್ ಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಪರವಾಗಿ ರದ್ದುಗೊಳಿಸಬೇಕು.

-ಚನ್ನಬಸವ ಹಿರೇಜಂತಗಲ್ ಗ್ರಾಹಕರು.

***

ಕೆಎಂಎಫ್ ನಂದಿನಿ ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು, ರೈತರು ರೈತರಿಗಾಗಿ ಇರುವಂತ ಈ ಸಂಸ್ಥೆಯಾಗಿದ್ದು,ಈ ಬಗ್ಗೆ ಎಲ್ಲರೂ ಕಾಳಜಿ ವ್ಯಕ್ತಪಡಿಸಬೇಕು. ಗಂಗಾವತಿಯ ಕೆಲವು ಔಟ್ಲೆಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಮಾರಾಟ ಆಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ,ಔಟ್ಲೆಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಅವಧಿ ಮುಗಿದ ಹಾಲು ಸೇರಿದಂತೆ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವುದು ಕೆಎಂಎಫ್ ನಿಯಮದಲ್ಲಿ ವಿರುದ್ಧವಾಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಗ್ರಾಹಕರು ಸಹ ಕೂಡಲೇ ಕೆಎಂಎಫ್ ಗಮನಕ್ಕೆ ತಂದು ನ್ಯೂನ್ಯತೆಯನ್ನು ಸರಿಪಡಿಸಲು ಸಹಕರಿಸಬೇಕು.

-ಸತ್ಯನಾರಾಯಣ ಕೋಟಯ್ಯಕ್ಯಾಂಪ್ ನಿರ್ದೇಶಕರು ಕೆಎಂಎಫ್ ಬಳ್ಳಾರಿ.

ಟಿಬಿ ಡ್ಯಾಂ ನಿಂದ ಅಕ್ರಮವಾಗಿ ಕಾರ್ಖಾನೆಗಳಿಗೆ ನೀರು ಪೂರೈಕೆ, ರೈತರಿಂದ ವಿಡಿಯೋ ಸಮೇತ ಅಕ್ರಮ ಬಯಲು.

 

*ಕೂಡಲೇ ಕಾರ್ಖಾನೆಗಳಿಗೆ ನೀರು ಪೂರೈಕೆ ತಡೆಯುವಂತೆ ಆಗ್ರಹ

*ಐಸಿಸಿ ಸಭೆಯಲ್ಲಿ ಕಾರ್ಖಾನೆಯಲ್ಲಿ ನೀರು ನಿರ್ಧಾರವಾಗಿಲ್ಲ:ರೈತರ ಆಕ್ರೋಶ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯ ಪರಿಣಾಮವಾಗಿ ಡ್ಯಾಂ ಒಳಹರಿವು ಶೂನ್ಯಕ್ಕೆ ಇಳಿದಿದೆ. ಈ ಮಧ್ಯೆ ತುಂಗಭದ್ರಾ ಡ್ಯಾಂ ಸುತ್ತಲಿರುವ ಕಾರ್ಖಾನೆಗಳು ಅಕ್ರಮವಾಗಿ ಬೃಹತ್ ಗಾತ್ರದ ಪಂಪ್ ಸೆಟ್ ಗಳ ಮೂಲಕ ನೀರನ್ನು ಪಡೆಯುತ್ತಿದ್ದು, ರವಿವಾರ ಸ್ಥಳಕ್ಕೆ ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ಅಕ್ರಮವನ್ನು ಬಯಲಿಗೆಳೆದು ವಿಡಿಯೋ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟಿಬಿ ಡ್ಯಾಂ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ, ಸಂಸದರು ಮೌನ ವಹಿಸಿರುವುದನ್ನು ಖಂಡಿಸಿದ್ದಾರೆ.

ಕಾಲುವೆಗಳಿಗೆ ನೀರು ಹರಿಸಿ ಎರಡು ತಿಂಗಳು ಕಳೆಯುತ್ತಾ ಬಂದರೂ ಕಾರಟಗಿ, ಸಿಂಧನೂರು, ಮಾನ್ವಿ, ರಾಯಚೂರು ಭಾಗದ ರೈತರ ಗದ್ದೆ ಗಳಿಗೆ ಇನ್ನೂ ನೀರು ತಲುಪಿಲ್ಲ. ಈ ಮಧ್ಯೆ ಎಡದಂಡೆ ಕಾಲುವೆಯ ಎಡಭಾಗದಲ್ಲಿ ಅಕ್ರಮವಾಗಿ ಪೈಪ್ಗಳನ್ನು ಹಾಕಿ ನೀರು ಹರಿಸಲಾಗುತ್ತಿದ್ದು ಇದನ್ನು ಪೊಲೀಸ್ ಕ್ರಮದ ಮೂಲಕ ತಡೆಹಿಡಿಯಲಾಗಿದೆ.

ಜೊತೆಗೆ ತುಂಗಭದ್ರಾ ಡ್ಯಾಂನ ಸುತ್ತಲಿರುವ ಕಾರ್ಖಾನೆಗಳ ಮಾಲೀಕರು ಅಕ್ರಮವಾಗಿ ಬೃಹತ್ ಗಾತ್ರದ ಪಂಪ್ಸೆಟ್ಟುಗಳ ಮೂಲಕ ನೀರನ್ನು ಕಾರ್ಖಾನೆಗಳಿಗೆ ಪಡೆಯುತ್ತಿರುವುದು ರೈತರು ಗಮನಿಸಿ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಈ ಅಕ್ರಮವನ್ನು ಖಂಡಿಸಿದ್ದಾರೆ.

ಟಿ ಬಿ ಡ್ಯಾಂ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಕಾರ್ಖಾನೆಗಳಿಗೆ ನೀರನ್ನು ಬಿಡಲು ಆಗುವುದಿಲ್ಲ ಎನ್ನುವ ನಿಯಮವನ್ನು ಮಾಡಿ,

ಇದೀಗ ಅಕ್ರಮವಾಗಿ ಕಾರ್ಖಾನೆಗಳಿಗೆ ನೀರನ್ನು ಬೃಹತ್ ಗಾತ್ರದ ಪಂಪ್ಸೆಟ್ಟುಗಳ ಮೂಲಕ ಪೂರೈಕೆ ಮಾಡುತ್ತಿರುವುದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಲ್ಲಾ ಪಂಪ್ ಸೆಟ್ ಗಳನ್ನು ವಶಪಡಿಸಿಕೊಂಡು ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸುವಂತೆ ಮತ್ತು ಇದಕ್ಕೆ ಸಹಕರಿಸಿದ ನೀರಾವರಿ ಇಲಾಖೆ ಮತ್ತು ಟಿವಿ ಡ್ಯಾಂ ಅಧಿಕಾರಿಗಳ ವಿರುದ್ಧವು ಕೆ ಎಸ್ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಅ.15ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: ನಟ ಪ್ರಕಾಶ್ ರೈ.

 

ಕಿಷ್ಕಿಂಧವಾಣಿ ಸುದ್ದಿ

ಕಾರಟಗಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅ. 15ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಗುರುವಾರ ಹೇಳಿದರು.

ಸಿಂಧನೂರಿನಿಂದ ಕೊಪ್ಪಳಕ್ಕೆ ತೆರಳುವ ಮಾರ್ಗ ಮಧ್ಯೆ ಕಾರಟಗಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು, ಯುವಕರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ (ಎಸ್ ಐ ಆರ್ ) ಲೋಪಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

‘ಮತದಾನದ ಹಕ್ಕು ಕಸಿಯುವ ಹುನ್ನಾರ:

ಎಸ್‌ಐಆರ್‌ ಪ್ರಕ್ರಿಯೆಯಿಂದ ದೇಶದಾದ್ಯಂತ ಮತದಾರರ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಕರ್ನಾಟಕದಲ್ಲಿ ಸರಿಸುಮಾರು ಒಂದೂವರೆ ಕೋಟಿ ಜನರ ಹೆಸರುಗಳನ್ನು ಯಾವ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟತೆ ಬೇಕಿದೆ ಎಂದು ಪ್ರಶ್ನಿಸಿದರು. ಬೂತ್ ಮಟ್ಟದಲ್ಲಿ ಎಸ್‌ಐಆರ್‌ನಿಂದ ಉಂಟಾಗಿರುವ ಸಮಸ್ಯೆಗಳನ್ನು ದಾಖಲಿಸಲು ರಾಜ್ಯದ ನಾನಾ ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತಿದೆ. ಸೆ.30ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಗ್ರಹಿಸಿರುವ ದಾಖಲೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಬೂತ್ ಮಟ್ಟದಲ್ಲಿ ಅರ್ಹ ಮತದಾರರ ಪರವಾಗಿ ಸರಕಾರ ಸಹಕರಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು. ನಂತರ ಅ.1ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅ.15ರಿಂದ ಮತದಾರರ ಸಮಸ್ಯೆಗಳಿಗೆ ನ್ಯಾಯ ಸಿಗುವವರೆಗೆ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

‘ಬದುಕಿದ್ದವರನ್ನೇ ಸತ್ತವರೆಂದು ತೋರಿಸಲಾಗಿದೆ:

ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ಜನರ ಬಳಿ ತೆರಳಿ ಮತ ಕೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇದೀಗ ಜನರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹಲವು ಬಿಎಲ್‌ಒಗಳಿಂದ ತಪ್ಪುಗಳಾಗಿವೆ. ಬದುಕಿರುವವರನ್ನು ಮೃತಪಟ್ಟವರು ಎಂದು ದಾಖಲಿಸಿರುವುದು, ದಿನಗೂಲಿ ಕೆಲಸಕ್ಕಾಗಿ ಹೊರಗೆ ತೆರಳಿದವರನ್ನು ಮನೆಯಲ್ಲಿ ಇಲ್ಲವೆಂಬ ಕಾರಣಕ್ಕೆ ಪಟ್ಟಿಯಿಂದ ಕೈಬಿಟ್ಟಿರುವುದು, ಮನೆ ಬದಲಾಯಿಸಿದವರ ಹೆಸರುಗಳನ್ನು ತೆಗೆದುಹಾಕಿರುವುದು ಸೇರಿದಂತೆ ಹಲವು ದೂರುಗಳು ತಮ್ಮ ಗಮನಕ್ಕೆ ಬಂದಿವೆ. ಈ ಎಲ್ಲ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳ ಮುಂದಿಡಲಾಗುವುದು. ಮತದಾರರ ಹಕ್ಕುಗಳ ರಕ್ಷಣೆಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಈ ಮಧ್ಯೆ, ಎಸ್‌ಐಆರ್‌ ಕುರಿತು ಕರ್ನಾಟಕದಲ್ಲಿ ನಾನಾ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ವರದಿಯಾಗಿದೆ. ಬೆಂಗಳೂರಿನ ಯಲಹಂಕ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಿದೆ ಎಂದು ಕೆಪಿಸಿಸಿ ಆರೋಪಿಸಿರುವ ಕುರಿತು ವರದಿಯಾಗಿದೆ; ಈ ಆರೋಪಗಳ ಕುರಿತು ಪರಿಶೀಲನೆ ಮತ್ತು ಮಾಹಿತಿ ನೀಡುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

**

ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈ ಮೊದಲು ಸುಪ್ರೀಂಕೋರ್ಟಿನ ಸಿಜೆ ಅವರನ್ನು ಒಳಗೊಂಡಿತ್ತು, ಆದರೆ ಬಿಜೆಪಿ ಸರ್ಕಾರ ಆ ಪದ್ಧತಿಯನ್ನು ಕೈ ಬಿಟ್ಟು ರಾಜಕೀಯ ವ್ಯಕ್ತಿಗಳು ಸೂಚಿಸುವ ವ್ಯಕ್ತಿಗಳನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡುವ ಪದ್ಧತಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶವಾಗುತ್ತಿದೆ.ಆದ್ದರಿಂದ ಮೊದಲಿದ್ದಂತೆ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಇರಬೇಕು.

-ಪ್ರಕಾಶ ರೈ ಚಿತ್ರನಟ

ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಸ್ನಾನಗೃಹ, ಶೌಚಾಲಯದ ನೀರು ವಾರ್ಡ್ ರಸ್ತೆಗೆ.

*ಚರಂಡಿ ದುರಸ್ತಿ ಮಾಡಿಸದ ಕಟ್ಟಡ ಮಾಲೀಕರು!

*ಗಣಪತಿ ಟೆಂಟ್ ಗೂ ನುಗ್ಗಿದ ಹೊಲಸು ನೀರು.

*ಆರು ತಿಂಗಳಿಂದ ಸಮಸ್ಯೆ ಇದ್ದರೂ ತಲೆ ಕೆಡಿಸಿಕೊಳ್ಳದ ನಗರಸಭೆ ಮತ್ತು ಬಿಸಿಎಂ ಇಲಾಖೆ.

 

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ 19 ನೇ ವಾರ್ಡ್ ವಡ್ಡರ ಓಣಿ ಮತ್ತು ಜೋಗೇರ ಓಣಿ ಮಧ್ಯದಲ್ಲಿರುವ ಬಿಸಿಎಂ ಇಲಾಖೆಯ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಸುತ್ತಲಿನ ವಾತಾವರಣ ಗಲೀಜು ನೀರಿನಿಂದ ಕೂಡಿದ್ದು ಸ್ಥಳೀಯ ನಿವಾಸಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಇದರಿಂದ ಓಣಿಯಲ್ಲಿ ಸೊಳ್ಳೆ, ಹಂದಿಗಳ ಕಾಟ ಹೆಚ್ಚಾಗಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತಿದೆ. ಕಳೆದ ಆರು ತಿಂಗಳಿಂದ ಹಾಸ್ಟೆಲ್ ಸುತ್ತಲೂ ಚರಂಡಿ ನೀರು ತುಂಬಿ ಓಣಿಯಲಗಲಿ ಹರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆ ಹಾಸ್ಟೆಲ್ ಹಿಂದೆ ಪ್ರತಿಷ್ಠಾಪಿಸಿದ ಗಣೇಶನ ಮಂಟಪದ ಒಳಗೆ ಸ್ನಾನ ಗೃಹ ಹಾಗೂ ಶೌಚಾಲಯದ ನೀರು ನುಗ್ಗಿ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಬಿಸಿಎಂ ಇಲಾಖೆಯ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಗೆ ಸ್ಥಳೀಯರು ಕಟ್ಟಡವನ್ನು ಬಾಡಿಗೆ ನೀಡಿದ್ದು ಸುತ್ತಲೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ, ಆದ್ದರಿಂದ ಹಾಸ್ಟೆಲ್ ಸ್ಥಾನ ಗೃಹದ ನೀರು ಮತ್ತು ಶೌಚಾಲಯದ ನೀರು ನೇರವಾಗಿ ವಡ್ಡರ ಓಣಿಯ ಹಿಂಭಾಗದಲ್ಲಿರುವ ಓಣಿಯ ದಾರಿಯಲ್ಲಿ ಹರಿಯುತ್ತಿದ್ದು, ಕಟ್ಟಡ ಮಾಲೀಕರಿಗೆ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಗರಸಭೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಹರಿಯುತ್ತಿರುವ ಸ್ನಾನಗೃಹ ಮತ್ತು ಶೌಚಾಲಯದ ನೀರನ್ನು ಸೂಕ್ತ ವ್ಯವಸ್ಥೆ ಮಾಡಿ ಚರಂಡಿಗೆ ಬಿಡಿಸಬೇಕು. ಜೊತೆಗೆ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇಲ್ಲಿರುವ ಹಾಸ್ಟೆಲ್ ನ್ನು ಬೇರಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರಾದ ಅಂಬಿಕಾ, ಅನಿಲ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ

ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಪ್ರತಿಭಟನೆ

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿ ತೆರವುಗೊಳಿಸಿದ ಕ್ರಮ ಖಂಡಿಸಿ ಸೆ.23 ರಂದು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಗಂಗಾವತಿ ತಾಲೂಕು ಕುರುಬ ಸಮಾಜದ ನೇತೃತ್ವದಲ್ಲಿ ಸೆ.23 ರಂದು ಗಂಗಾವತಿ ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪುನಹ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ನವರ ಪುತ್ಥಳಿಯನ್ನು ಪಾಲಿಕೆಯ ಅಧಿಕಾರಿಗಳು ಮರು ಸ್ಥಾಪಿಸಲು ಆದೇಶ ನೀಡುವಂತೆ ಸಿಎಂ‌ ಡಿಕೆ ಶಿವಕುಮಾರ್ ಅವರಿಗೆ ತಹಸೀಲ್ದಾರ್ ಮೂಲಕ ಮನವಿ‌ ಸಲ್ಲಿಸಲಾಗುತ್ತದೆ ಎಂದು ಶ್ರೀ ಕನಕದಾಸ ಕುರುಬ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ ತಿಳಿಸಿದರು.

ಈ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 14 ಬಾರಿ ಬಜೆಟ್ ಮಂಡಿಸಿ ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ಜಾತಿಭೇದ ಮಾಡದೆ ನಾಡಿನ ಎಲ್ಲಾ ಜನರ ಏಳಿಗೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮುಖಾಂತರ ಜನಮನದಲ್ಲಿ ಉಳಿದ ಸಿದ್ದರಾಮಯ್ಯನವರ ಅಭಿಮಾನಿಗಳು ಕಲಬುರ್ಗಿಯ ವೃತ್ತ ಒಂದರದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪುತ್ಥಳಿ ನಿರ್ಮಿಸಿ ಅನಾವರಣ ಮಾಡಿದ್ದಾರೆ. ಈಗಾಗಲೇ ಕಲಬುರ್ಗಿಯ ಮಹಾನಗರದಲ್ಲಿ ಹಲವು ಮಹನೀಯರ ಪುತ್ಥಳಿ ಇದ್ದು, ಅವುಗಳು ಸಹ ಯಾವುದೇ ಪರವಾನಿಗೆ ಇಲ್ಲದೆ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಕೆಲವು ಪಟ್ಟ ಭದ್ರದ ಮಾತು ಕೇಳಿ ಅಧಿಕಾರಿಗಳು ಸಿದ್ದರಾಮಯ್ಯನವರ ಪುತ್ಥಳಿಯನ್ನು ತೆರವುಗೊಳಿಸಿರುವುದು ಖಂಡನೀಯ. ಅಹಿಂದ ವರ್ಗ ಸಿದ್ದರಾಮಯ್ಯನವರ ಶಕ್ತಿಯಾಗಿದ್ದು ಇಡೀ ರಾಜ್ಯಾದ್ಯಂತ ಹೋರಾಟ ಮಾಡುವ ಮೊದಲು ಕಲಬುರ್ಗಿ ಮಹಾನಗರ ಪಾಲಿಕೆಯವರು ಕೂಡಲೇ ಪುತ್ಥಳಿಯನ್ನು ಮರುಸ್ಥಾಪಿಸುವಂತೆ ಅವರು ಒತ್ತಾಯಿಸಿದರು.

ಸಭೆಯಲ್ಲಿ ಮುಖಂಡರಾದ ಸಣ್ಣಕ್ಕಿ ನೀಲಪ್ಪ, ಮೋರಿ‌ ದುರುಗಪ್ಪ, ವಿರೂಪಾಕ್ಷಪ್ಪ, ಅಶೋಕ ಗೌಡ, ಶರಣಪ್ಪ, ಬಸವರಾಜ ಉಣ್ಣಿ, ಪರಶುರಾಮ ಇಟಗಿ, ಗಡ್ಡಿ ಹನುಮಂತಪ್ಪ, ಸಿದ್ದಲಿಂಗನಗೌಡ, ಬಿ.ವೆಂಕಟೇಶ್, ಬಕ್ಕಂಡಿ‌ ಬಸವರಾಜ, ಗಿಡ್ಡಿ ಹನುಮಂತಪ್ಪ, ಕೆ.ನಾಗೇಶಪ್ಪ, ಬಿ.ಫಕೀರಯ್ಯ, ಅಡ್ಡಿ ಶಾಮಣ್ಣ, ತಿಪ್ಪಣ್ಣ ಗಿಡ್ಡಿ ಸೇರಿದಂತೆ ಹಾಲುಮತ ಕುರುಬ ಸಮಾಜದ ಮುಖಂಡರು, ಯುವಕರಿದ್ದರು.

ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಓದುವ ಎಸ್ಸಿ ಎಸ್ಟಿ ಹಾಗೂ ಒಬಿಸಿ ಮಕ್ಕಳಿಗಿಲ್ಲ ಪೌಷ್ಠಿಕ ಆಹಾರ, ಮೂಲಸೌಕರ್ಯಗಳ ವ್ಯವಸ್ಥೆ ! ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ನಿರ್ಲಕ್ಷ್ಯ  ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ.

*ಮೂಲಭೂತ ಸೌಲಭ್ಯ ಕಲ್ಪಿಸಿ, ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ*

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಎಸ್ಸಿ,ಎಸ್ಟಿ ಹಾಗೂ ಒಬಿಸಿ ಗ್ರಾಮೀಣ ಬಡ ಮಕ್ಕಳು ಮತ್ತು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುವ

 ಗಂಗಾವತಿ ನಗರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಅಪೌಷ್ಠಿಕ ಆಹಾರ ಪೂರೈಕೆ, ಮೆನ್ಯೂ ಪ್ರಕಾರ ಆಹಾರ ಪೂರೈಸದಿರುವುದು ಸೇರಿ ಹಾಸ್ಟೆಲ್ ಗಳಲ್ಲಿ ದಿನ ಪತ್ರಿಕೆ ಪೂರೈಕೆ, ತರಕಾರಿ ಇತರೆ ಸಮಸ್ಯೆಗಳ ಕುರಿತು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ನಿರ್ದೇಶಕರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದನ್ನು ಖಂಡಿಸಿ ಎಸ್ಸಿ,ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಎಸ್ಎಫ್ಐ ನೇತೃತ್ವದಲ್ಲಿ ಹಾಸ್ಟೆಲ್ ನಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಾ.ಪಂ.ಕಚೇರಿ ವರೆಗೆ ಮೆರವಣಿಗೆ ನಡೆಸಿ ತಾ.ಪಂ.ಇಓ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಹಾಸ್ಟೆಲ್ ನಲ್ಲಿ ಪೌಷ್ಟಿಕ ಆಹಾರ,ದಿನಪತ್ರಿಕೆ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟು ವಿದ್ಯಾರ್ಥಿಗಳಿಗೆ ಕೇವಲ ಮೂರು ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ, ನೀರನ್ನು ಸಮರ್ಪಕವಾಗಿ ಶುದ್ಧೀಕರಿಸದಿರುವುದು ಹಾಗೂ ನೀರಿನಲ್ಲಿ ಹುಳು, ಪಾಚಿ ಕಾಣಿಸಿಕೊಳ್ಳುತ್ತಿರುವುದು ಗಂಭೀರ ಸಮಸ್ಯೆ ಇದ್ದರು ಸಹ ಅಧಿಕಾರಿಗಳು ಮೌನವಹಿಸಿರುವುದು ಖಂಡನಿಯ ವಿಷಯವಾಗಿದೆ ಅಲ್ಲದೆ ವಸತಿ ನಿಲಯದಲ್ಲಿ ಸುಸಜ್ಜಿತ ಗ್ರಂಥಾಲಯ, ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಮತ್ತು ದಿನಪತ್ರಿಕೆಗಳ ಕೊರತೆ, ಮೆನು ಚಾರ್ಟ್ ಪ್ರಕಾರ ಆಹಾರ ನೀಡದಿರುವುದು, ಶುಚಿ ಸಂಭ್ರಮ ಕಿಟ್ ನೀಡದಿರುವುದು, ಊಟದಲ್ಲಿ ಹುಳು–ಕಸ–ಕಡ್ಡಿ ಕಂಡುಬರುತ್ತಿರುವುದು, ಕಟ್ಟಡದ ಅಸ್ವಚ್ಛತೆ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ

ಅಡುಗೆ ಸಿಬ್ಬಂದಿ ಹಾಗೂ ನಿಲಯ ಪಾಲಕರು ವಿದ್ಯಾರ್ಥಿನಿಯರೊಂದಿಗೆ ಅವಾಚ್ಯ ಶಬ್ದ ಬಳಸಿ ಮಾತನಾಡುವುದು, ಸಮಸ್ಯೆ ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ವಸತಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು ಹಾಗೂ ಪೋಷಕರಿಗೂ ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ ಆರೋಪಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಸ್ಎಫ್ಐ ತಾಲೂಕು ಅಧ್ಯಕ್ಷ ನಾಗರಾಜು.ಯು ಮಾತನಾಡಿ, ಈ ಸಮಸ್ಯೆಗಳನ್ನು ಈಗಾಗಲೇ ನಿಲಯ ಪಾಲಕರು, ತಾಲೂಕು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮಧ್ಯಪ್ರವೇಶಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ನಿರ್ಲಕ್ಷ್ಯ ತೋರಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ. ಪಂ.ಇಓ ಅವರು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶರೀಫ್ ಎಂ., ಜಂಟಿ ಕಾರ್ಯದರ್ಶಿ ದರ್ಶನ್ ಹೋಸ್ಕೆರ, ಮುಖಂಡರಾದ ಮಾರುತಿ ವಿಠಲಪುರ, ವೆಂಕಟೇಶ್ ಹಾಗೂ ವಿದ್ಯಾರ್ಥಿನಿಯರಾದ ರಾಧಿಕಾ, ಲಕ್ಷ್ಮೀ, ಅಕ್ಷತಾ, ಭವಾನಿ, ಐಶ್ವರ್ಯ, ಅಂಬಿಕಾ ಇದ್ದರು.

error: Content is protected !!