ಏಳುಗುಡ್ಡಪ್ರದೇಶದಲ್ಲಿ ಹುಲಿ ಪತ್ತೆ !,ಸಾಣಾಪೂರ, ಬಸಾಪೂರ ಭಾಗದಲ್ಲಿ ಬೆಟ್ಟಗಳತ್ತ ಹೋಗಲು ಭಯಗೊಂಡ ಜನರು !!

*ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆಯಿಂದ ಸಿಸಿ ಕ್ಯಾಮರಾಗಳ ಅಳವಡಿಕೆ
*ಹುಲಿ ಇರುವ ಪೊಟೋ, ವಿಡಿಯೋ ನೈಜತೆ ಪರೀಕ್ಷೆಯ ನಂತರ ಅಗತ್ಯ ಕ್ರಮಕ್ಕೆ ಇಲಾಖೆ ಸಿದ್ದತೆ
*ಮತ್ತಷ್ಟು ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
*ಬೆಟ್ಟಗಳತ್ತ ತೆರಳದಂತೆ ಬೆಟ್ಟಗಳಂಚಿನ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ
ಕೆ.ನಿಂಗಜ್ಜ
ಕಿಷ್ಕಿಂಧವಣಿ ವಿಶೇಷ

ಗಂಗಾವತಿ: ಕಳೆದ ಎರಡು ತಿಂಗಳಿಂದ ಏಳುಗುಡ್ಡ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿ ಆತಂಕ ವ್ಯಕ್ತಪಡಿಸುತ್ತಿರುವ ಕುರಿತು ಕಿಷ್ಕಿಂಧವಾಣಿ ದಿನ ಪತ್ರಿಕೆ ಸರಣಿ ವಿಸ್ತೃತ ವರದಿ ಪ್ರಕಟಿಸಿ ಏಳು ಬೆಟ್ಟಪ್ರದೇಶದಂಚಿನ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡುವ ಜತೆಗೆ ನಿರಂತರವಾಗಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರಣವಾಗಿತ್ತು. ಇದೀಗ ಶುಕ್ರವಾರ ತಾಲೂಕಿನ ಸಾಣಾಪೂರ, ಬಸಾಪೂರ ಪ್ರದೇಶದ ಬೆಟ್ಟ ಪ್ರದೇಶದಲ್ಲಿ ಹುಲಿ ಸಂಚಾರ ಮಾಡಿರುವ ಕುರಿತು ಸಿಸಿ ಕ್ಯಾಮರಗಳಲ್ಲಿ ಹುಲಿಯ ಪೊಟೋ ಸೆರೆಯಾಗಿದ್ದು ಕೆಲ ವ್ಯಕ್ತಿಗಳ ಸೊಶೀಯಲ್ ಮೀಡಿಯಾಗಳಲ್ಲಿ ಹುಲಿಯ ಪೊಟೋಗಳು ವೈರಲ್ ಆಗಿರುವ ಕುರಿತು ಮಾಹಿತಿ ಇದ್ದು ಈ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಎನ್.ಕೆ. ಅವರು ಪೋಟೋ ನೈಜತೆ ಬಗ್ಗೆ ಪರಿಶೀಲನೆಯ ನಂತರ ಹುಲಿ ಇರುವ ಕುರಿತು ದೃಢಪಡಿಸಲಾಗುವುದು ಎಂದು ಕಿಷ್ಕಿಂಧವಾಣಿಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ಸಮೀಪದ ಜಬ್ಬಲಗುಡ್ಡ ಹಾಗೂ ಕುಮಾರರಾಮನ ಬೆಟ್ಟ ಪ್ರದೇಶದಲ್ಲಿ ಹುಲಿ ಇರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ಕಿಷ್ಕಿಂಧವಾಣಿಗೆ ಹುಲಿ ಸಂಚಾರ ಮಾಡಿದ ಜಾಗದಲ್ಲಿ ಬೃಹತ್ ಗಾತ್ರದ ಹೆಜ್ಜೆಗಳ ಪೊಟೋಗಳನ್ನು ತೆಗೆದು ಕಳಿಸಿ ಅರಣ್ಯ ಇಲಾಖೆಯವರು ಕೂಡಲೇ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ಈ ಕುರಿತು ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ ನಂತರ ಅರಣ್ಯ ಇಲಾಖೆಯವರು ಹುಲಿ ಹೆಜ್ಜೆ ಮೂಡಿದ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದರು.ನಂತರ ಇಡೀ ಏಳುಗುಡ್ಡ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿ ಅರಣ್ಯ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಜೋಡಣೆ ಮಾಡಿತ್ತು. ನಂತರ ರಂಗಾಪೂರ ಜಂಗ್ಲಿ, ಬಸಾಪೂರ ಈ ಭಾಗದಲ್ಲಿ ಕೋಣ,ದನ, ಕುರಿ ಮತ್ತು ಇತರೆ ಪ್ರಾಣಿಗಳನ್ನು ಹೊತ್ತುಕೊಂಡು ಹೋಗಿರುವ ಕುರಿತು ದನಗಾಯಿಗಳು ಮತ್ತು ಕುರಿಗಾಯಿಗಳು ದೃಢಪಡಿಸಿದ್ದರೂ ಅರಣ್ಯ ಇಲಾಖೆಯವರು ಬೃಹತ್ ಗಾತ್ರದ ಚಿರತೆ ಬೇರೆಡೆಯಿಂದ ಬಂದಿರಬಹುದು ಹುಲಿ ಇಲ್ಲ ಎಂದು ಜನರಿಗೆ ಮಾಹಿತಿ ನೀಡಿದ್ದರು.
ಶುಕ್ರವಾರ ಬೆಳ್ಳಿಗ್ಗೆ ಬಸಾಪೂರ ಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಹುಲಿ ಸಂಚಾರ ಮಾಡಿರುವ ಕುರಿತು ಚಿತ್ರ ಮೂಡಿದ್ದು ಹುಲಿ ಇರುವ ಕುರಿತು ಇದೀಗ ಅಧಿಕೃತಗೊಂಡಂತಾಗಿದೆ. ಆದರೂ ಅರಣ್ಯ ಇಲಾಖೆಯವರು ಇದನ್ನು ಇನ್ನೂ ದೃಢಪಡಿಸಿಲ್ಲವಾದರೂ ಏಳುಗುಡ್ಡ ಪ್ರದೇಶ ವ್ಯಾಪ್ತಿಯ ಗ್ರಾಮಮಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆಯಾಗಿ ಜನರು ಜಾಗೃತಿಯಿಂದ ಇರುವಂತೆ ಮಾಹಿತಿ ನೀಡಲಾಗಿದೆ. ಮತ್ತಷ್ಟು ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಹುಲಿಗಳಿರುವ ಅರಣ್ಯ ಸಮೃದ್ಧಿಯ ಸಂಕೇತ: ಒಂದು ಮೂಲದ ಪ್ರಕಾರ ಹುಲಿಗಳಿರುವ ಅರಣ್ಯ ಪ್ರದೇಶವು ಸಮೃದ್ದಿಯ ಸಂಕೇತವಾಗಿದ್ದು ಅರಣ್ಯ ಪ್ರದೇಶದಲ್ಲಿ ಗುಡಮರಗಳ ಸಂರಕ್ಷಣೆ ಜತೆಗೆ ಇತರೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಮನುಷ್ಯರ ಪ್ರದೇಶ ಗಿಡ,ಮರ ಕಲ್ಲುಗಳ ನಾಶ ಕಮ್ಮಿಯಾಗಿ ಸಸ್ಯರಾಶಿ ಹೆಚ್ಚಾಗುತ್ತದೆ. ಆದ್ದರಿಂದ ಹುಲಿ ಇರುವ ಕಾಡು ಸಮೃದ್ಧಿಗೆ ಪೂರಕ ಎನ್ನುವ ಮಾತು ವನ್ಯಜೀವ ಪ್ರಪಂಚದಲ್ಲಿ ವ್ಯಾಪಕವಾಗಿದೆ.
**
ಏಳುಗುಡ್ಡ ಪ್ರದೇಶದ ಅರಣ್ಯದಲ್ಲಿ ಹುಲಿ ಇರುವ ಕುರಿತು ಹಲವು ಗ್ರಾಮಗಳ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರಿಂದ ಈಗಾಗಲೇ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶುಕ್ರವಾರ ಸೊಶೀಯಲ್ ಮೀಡಿಯಾದಲ್ಲಿ ಹುಲಿಯ ಪೊಟೋ ಜತೆ ಬಸಾಪೂರ ಅರಣ್ಯದಲ್ಲಿ ಹುಲಿ ಇದೆ ಎನ್ನುವ ಮಾಹಿತಿಯನ್ನು ಕೆಲವರು ತಮಗೆ ಕಳಿಸಿದ್ದು, ಈ ಕುರಿತು ಪೊಟೋಗಳ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಜತೆಗೆ ಮತ್ತಷ್ಟು ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಏಳುಗುಡ್ಡ ಪ್ರದೇಶದ ಅರಣದಯದಂಚಿನಲ್ಲಿರುವ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆಯ ಮಾಹಿತಿಯನ್ನು ಅರಣ್ಯ ಇಲಾಖೆ ವತಿಯಿಂದ ತಿಳಿಸಲಾಗಿದೆ. ಮತ್ತಷ್ಟು ಪರಿಶೀಲನೆ ಮತ್ತು ಈಗ ಹರಿದಾಡುತ್ತಿರುವ ಪೊಟೋ ನೈಜತೆ ಬಂದ ನಂತರ ಹುಲಿ ಇರುವ ಕುರಿತು ಮುನ್ನೆಚ್ಚರಿಕೆಯ ಮಾಹಿತಿಯನ್ನು ನೀಡಲಾಗಿದ್ದು, 20 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ.
*ನಿರ್ಮಲಾ ಎನ್.ಕೆ.ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು (ಐಎಫ್ಎಸ್) ಕೊಪ್ಪಳ.

