ತುಂಗಭದ್ರಾ ಎಡದಂಡೆ ಕಾಲುವೆ 22 ಮೈಲ್ ಹತ್ತಿರ ಎಡಭಾಗದಲ್ಲಿ ಸೋರಿಕೆ.ಸ್ಥಳಕ್ಕೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಭೇಟಿ.
*ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹರಿಸುವುದೇ ಕಾಲುವೆ ಸೋರಿಕೆ ಕಾರಣ ರೈತರ ಆರೋಪ.
*ಭತ್ತ ನಾಟಿ ಮಾಡುವ ಸಂದರ್ಭದಲ್ಲಿಯೇ ಕಾಲುವೆಯಲ್ಲಿ ಪದೇ ಪದೇ ಸೋರಿಕೆಯ ಆತಂಕ.
*ಮೊದಲಿನಿಂದಲೂ ಸೋರಿಕೆ ಇದ್ದು ಆತಂಕಪಡುವ ಅವಶ್ಯಕತೆ ಇಲ್ಲ.ಎಇ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ತಾಲೂಕಿನ ಕೇಸಕ್ಕಿ ಹಂಚಿನಾಳ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಯ 22 ಮೈಲ್ ನಲ್ಲಿ ಎಡಭಾಗದಲ್ಲಿ ಮಂಗಳವಾರ ಮಧ್ಯಾನ್ಹ ಸೋರಿಕೆ ಕಂಡು ಬಂದಿದ್ದು, ಭಾರಿ ಪ್ರಮಾಣದಲ್ಲಿ ನೀರಿನ ಸೋರಿಕೆಯಾಗುತ್ತಿದೆ. ಭತ್ತದ ಸಸಿ ನಾಟಿ ಮಾಡುತ್ತಿರುವ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ತೀವ್ರ ಆತಂಕವುಂಟಾಗಿದೆ.
ಕೇಸಕ್ಕಿ ಹಂಚಿನಾಳ ಹತ್ತಿರ ಕಳೆದ ವರ್ಷ ಇದೇ ಸ್ಥಳದಲ್ಲಿ ಬಲಭಾಗದಲ್ಲಿ ಅಕ್ವಾಡೆಟ್ ಸೋರಿಕೆಯಾಗಿ ಇಡೀ ಕಾಲುವೆ ಕುಸಿದು 15 ದಿನಗಳ ಕಾಲ ಕಾಲುವೆಯಲ್ಲಿ ನೀರು ನಿಲ್ಲಿಸಿ ಸಮರೋಪಾದಿಯಲ್ಲಿ ಕಾಲುವೆ ಕಾಮಗಾರಿ ನಡೆಸಿ ನೀರು ಹರಿಸಲಾಗಿತ್ತು.
ಇದೀಗ ಕಳೆದ ಜು.11ರಿಂದ ತುಂಗಭದ್ರಾ ಡ್ಯಾಂ ನಿಂದ ಎಡ,ಬಲ ಹಾಗೂ ರಾಯಬಸವ,ತುರ್ತುಕಾಲುವೆ ಹಾಗೂ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲಾಗಿದ್ದು, ಕಳೆದ ವಾರ ತಾಲೂಕಿ ಜಂಗ್ಲಿ ರಂಗಾಪೂರ ಹತ್ತಿರ ಎಡದಂಡೆ ಕಾಲುವೆ ಇ.ಎಸ್ 775 ಹತ್ತಿರ ನೀರಿನ ಸೋರಿಕೆಯಾಗಿತ್ತು.ಈ ಕುರಿತು ಕಿಷ್ಕಿಂಧವಾಣಿ ದಿನಪತ್ರಿಕೆ ರೈತರ ಮಾಹಿತಿ ಅನುಸರಿಸಿ ವಿಸ್ತೃತ ವರದಿ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನೀರು ಸೋರಿಕೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.

ಅವೈಜ್ಞಾನಿಕವಾಗಿ ಕಾಲುವೆ ನೀರು; ತುಂಗಭದ್ರಾ ಎಡದಂಡೆಯ ಕಾಲುವೆಯಲ್ಲಿ ಕೊನೆಯ ಭಾಗದ ರೈತರಿಗೆ ಗೇಜ್ ಕೊಡುವ ಉದ್ದೇಶದಿಂದ ಅವೈಜ್ಞಾನಿಕವಾಗಿ 4100 ಕ್ಯೂಸೆಕ್ಸ್ ಗೂ ಹೆಚ್ಚು
ನೀರು ಹರಿಸುತ್ತಿರುವುದರಿಂದ ಕಾಲುವೆ ಒತ್ತಡ ತಾಣದೇ ಕೆಲ ಅಕ್ವಾಡೆಕ್ಟ್ ಸೇರಿ ಇತರೆಡೆ ಕಾಲುವೆಯಲ್ಲಿ ನೀರಿನ ಸೋರಿಕೆ ಮತ್ತು ಬೋಂಗಾ ಬೀಳುತ್ತಿದ್ದು ಕಾಲುವೆಯ ಕೆಳಭಾಗದ ತಾಲೂಕಿನ ಕೆಲ ರಾಜಕೀಯ ಧುರೀಣರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದು ಹೆಚ್ಚು ನೀರು ಹರಿಸುತ್ತಿರುವುದರಿಂದ ಕಾಲುವೆ ಭದ್ರತೆಯ ಪ್ರಶ್ನೆ ಮೂಡಿದ್ದು ಕಾಲುವೆಯ ಸಾಮರ್ಥ್ಯಕ್ಕೆ ತಕ್ಕಂತೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.
***
ಕೇಸಕ್ಕಿ ಹಂಚಿನಾಳ ಹತ್ತಿರ
ಮೈಲ್ 22 ರಲ್ಲಿ ಎಡದಂಡೆ ಕಾಲುವೆ ಎಡಭಾಗದಲ್ಲಿ ನೀರಿನ ಸೋರಿಕೆ ಈ ಮೊದಲಿನಿಂದಲೂ ಇದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ಗಾಳಿ ಸುದ್ದಿ ನಂಬಬಾರದು, ಕಾಲುವೆಯಲ್ಲಿ ಪ್ರಸ್ತುತ 4100ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.
ಸಣ್ಣ ಪುಟ್ಟ ಸೋರಿಕೆ ನಿಲ್ಲಿಸಲು ಅಗತ್ಯ ಕ್ರಮ ವಹಿಸಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ.
ರೈತರು ಆತಂಕಪಡಬಾರದು.
-ನಾಗರಾಜ ಬರಗೂರು ಎಇ ಜಲಸಂಪನ್ಮೂಲ ಇಲಾಖೆ ವಡ್ಡರಹಟ್ಟಿ ವಿಭಾಗ.

