ಏಳುಗುಡ್ಡ ಪ್ರದೇಶದಲ್ಲಿ ಹುಲಿ ಸೆರೆಗಾಗಿ ತೀವ್ರಗೊಂಡ ಕಾರ್ಯಾಚರಣೆ.

*ಸಾರ್ವಜನಿಕರು ಸಹಕರಿಸಲು ಮನವಿ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊಪ್ಪಳ ತಾಲ್ಲೂಕಿನ ಗ್ರಾಮಗಳಾದ ಬಸಾಪುರ, ಬಂಡಿಹರ್ಲಾಪುರ, ಶಿವಪುರ, ಹಾಗೂ ಗಂಗಾವತಿ ತಾಲ್ಲೂಕಿನ ಲಕ್ಷ್ಮೀಪುರ, ಸಾಣಾಪುರ, ತೆಂಬಾ, ಮಲ್ಲಾಪುರ, ಅರಣ್ಯದಂಚಿನ ಪ್ರದೇಶಗಳಲ್ಲಿ ಹುಲಿ ಕಂಡುಬಂದಿರುವುದು ದೃಢಪಟ್ಟಿದ್ದು, ಹುಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಆ.28 ಶುಕ್ರವಾರ ರಂದು ರಕ್ಷಣಾ ಕಾರ್ಯಾಚರಣೆಯ ಅಂಗವಾಗಿ ಅರಣ್ಯ ಪ್ರದೇಶಗಳಲ್ಲಿ ಬೋನುಗಳನ್ನು ಹಾಗೂ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಲಾಗಿದೆ. ಥರ್ಮಲ್ ಡೋನ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಮೈಸೂರು ವಿಭಾಗದ ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆ ಸಿಬ್ಬಂದಿ ಮತ್ತು ಡೋನ್ ತಜ್ಞರ ತಂಡವು ಡೋನ್ ಮೂಲಕ ಹುಲಿ ಶೋಧನಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಹುಲಿಯ ಚಲನವಲನದ ಕುರಿತು ಯಾವುದೇ ಕುರುಹು ದೊರೆತಿರುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡಗಳು ನಿರಂತರವಾಗಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದು, ಮುಂಜಾಗೃತ ಕ್ರಮವಾಗಿ ಗದಗ ಬಿಂಕದಕಟ್ಟಿ ಝೂ ಮತ್ತು ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಝೂ ದಿಂದ ವೈದ್ಯಾಧಿಕಾರಿಗಳ ತಂಡವನ್ನು ಕಾರ್ಯಚರಣೆಯಲ್ಲಿ ಉಪಯೋಗಿಸಕೊಳ್ಳಲಾಗಿದೆ. ಸಾರ್ವಜನಿಕರು ರಾತ್ರಿ ಸಮಯದಲ್ಲಿ ಅರಣ್ಯ ಪ್ರದೇಶದ ಹತ್ತಿರದ ಹೊಲ/ಗದ್ದೆಗಳಿಗೆ ಹೋಗದಂತೆ ಮತ್ತು ಅರಣ್ಯ ಪ್ರದೇಶಗಳಿಗೆ ಪ್ರವೇಶಿಸದಂತೆ, ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡದಂತೆ ಹಾಗೂ ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಜಾಗೃತರಾಗಿರುವಂತೆ ತಿಳಿಸಲಾಗಿದೆ. ಹಾಗೂ ಹುಲಿಯ ಇರುವಿಕೆ ಕಂಡುಬಂದಲ್ಲಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆ: 7676790171, 9902794977 ಗಳಿಗೆ ಸಂಪರ್ಕಿಸಲು ತಿಳಿಸಿದೆ.

