ನಿಷೇಧಿತ ಹರಿಗೋಲುಗಳ ವಿರುದ್ಧ ಅಧಿಕಾರಿಗಳ ದಾಳಿ ಕಿಷ್ಕಿಂಧವಾಣಿ ವರದಿಗೆ ಎಚ್ಚೆತ್ತ ಆಡಳಿತ; 8 ಹರಿಗೋಲು ವಶಕ್ಕೆ. ಅಕ್ರಮ ನಡೆಸುವವರಿಗೆ ನೋಟಿಸ್ ನವವೃಂದಾವನ, ತಳವಾರಘಟ್ಟದಲ್ಲಿ ಜಂಟಿ ಕಾರ್ಯಾಚರಣೆ; ರಾಮಲಕ್ಷ್ಮಣ ಗುಡಿ–ಋಷಿಮುಖ ಪರ್ವತದ ಬಳಿ ಅಧಿಕಾರಿಗಳು ಬರುವ ಮುನ್ನವೇ ಹರಿಗೋಲು ಮಾಯ!


ಕಿಷ್ಕಿಂಧವಾಣಿ ವಿಶೇಷ
ಗಂಗಾವತಿ: ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ಸಾಗಿಸುವ ಹಾಗೂ ನದಿಯಲ್ಲಿ ಸುತ್ತಾಡಿಸುವ ಅಕ್ರಮ ಚಟುವಟಿಕೆಗಳ ವಿರುದ್ಧ ಕೊನೆಗೂ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕಿಷ್ಕಿಂಧವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಸರಣಿ ವರದಿಗಳಿಗೆ ಎಚ್ಚೆತ್ತ ಬುಕ್ಕಸಾಗರ ಮತ್ತು ಆನೆಗೊಂದಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಶನಿವಾರ ಬೆಳಗ್ಗೆ ಜಂಟಿ ದಾಳಿ ನಡೆಸಿ ಒಟ್ಟು ಎಂಟು ಹರಿಗೋಲುಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಹರಿಗೋಲು ನಡೆಸುತ್ತಿದ್ದವರಿಗೆ ನೋಟಿಸ್ ನೀಡಲಾಗಿದೆ.
ಹೊಸಪೇಟೆ ತಾಲೂಕಿನ ಬುಕ್ಕಸಾಗರ, ನವವೃಂದಾವನ ಹಾಗೂ ತಳವಾರಘಟ್ಟ ಮತ್ತು ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪುರ, ರಾಮಲಕ್ಷ್ಮಣ ಗುಡಿ ಹಾಗೂ ಋಷಿಮುಖ ಪರ್ವತದ ಸುತ್ತಮುತ್ತ ತುಂಗಭದ್ರಾ ನದಿಯಲ್ಲಿ ನಿಷೇಧಿತ ಹರಿಗೋಲುಗಳ ಮೂಲಕ ಪ್ರವಾಸಿಗರನ್ನು ಸಾಗಿಸುವ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಕಿಷ್ಕಿಂಧವಾಣಿ ಪತ್ರಿಕೆ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ನದಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಗಂಗಾವತಿ ಮತ್ತು ಹೊಸಪೇಟೆ ತಾಲೂಕು ಆಡಳಿತಗಳ ಗಮನ ಸೆಳೆಯಲಾಗಿತ್ತು.

ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಕಾರ್ಯಾಚರಣೆ
ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ಮನ್ನಿಕೇರಿ ಅವರು ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಪಂಚಾಯಿತಿಗಳ ಅಧಿಕಾರಿಗಳಿಗೆ ನಿಷೇಧಿತ ಹರಿಗೋಲುಗಳ ಬಳಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಬುಕ್ಕಸಾಗರ ಗ್ರಾಮ ಪಂಚಾಯಿತಿ ಪಿಡಿಒ ಬೀರಪ್ಪ ಹಾಗೂ ಆನೆಗೊಂದಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಿಕಾರ್ಜುನ ಕಡಿವಾಳ ಅವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವವೃಂದಾವನದ ಬಳಿ ಮೂರು ಹರಿಗೋಲುಗಳನ್ನು ಹಾಗೂ ಆನೆಗೊಂದಿ ವ್ಯಾಪ್ತಿಯ ತಳವಾರಘಟ್ಟದ ಬಳಿ ಐದು ಹರಿಗೋಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಹರಿಗೋಲುಗಳ ಮೂಲಕ ಪ್ರಯಾಣಿಕರನ್ನು ಸಾಗಿಸುತ್ತಿದ್ದವರಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.




