Breaking News
ಎಸ್‌ಐಆರ್ ಅಕ್ರಮ ಖಂಡಿಸಿ ಗಂಗಾವತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ. ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ;  ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಆಗ್ರಹ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದು, ಕೋಟ್ಯಂತರ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿ, ಗಂಗಾವತಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಖಂಡಿಸಿದ ಪ್ರತಿಭಟನಾಕಾರರು, ಮತದಾರರ ಹಕ್ಕುಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಅಲ್ಲದೆ, ಫಾರಂ-6 ಮತ್ತು ಫಾರಂ-7 ವಿತರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ದೂರಿ, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅರಸಿನಕೇರಿ ಹನುಮಂತಪ್ಪ, ಎಂ. ಸರ್ವೇಶ ಮಾಂತಗೊಂಡ ಹಾಗೂ ಎಮ್ಮಿ ಫಕೀರಪ್ಪ, ನಂದಾಪುರ ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಡಿ. ಅಸೀಫ್, ಕೆ. ವೆಂಕಟೇಶ್, ಸುರೇಶ ಗೌರಪ್ಪ, ಶಾಮಣ್ಣ ಅಡ್ಡಿ, ರಾಜೋಳ್ಳಿ ಶ್ರೀನಿವಾಸ, ಮಹೇಶ ಸಾಗರ, ಮೇದಾರ ಗೋವಿಂದಪ್ಪ, ವಿಷ್ಣು ಜೋಶಿ ಆದಾಪೂರ,ನೀಲಕಂಠ, ಬರಗೂರು ಮರಿಸ್ವಾಮಿ, ಯುವರಾಜ ಕಡೆಬಾಗಿಲು, ಕೊಜ್ಜಿ ಹುಲುಗೇಶ, ಶೋಭಾಸಿಂಗ್, ರಾಚಪ್ಪ ಗುಂಜಳ್ಳಿ, ಅಜಗರ ಅಲಿ ಇದ್ಲಿ, ಬೆಟ್ಟಪ್ಪ ಬೆಣಕಲ್, ಅಶೋಕ ಜುಲೈನಗರ, ರಾಜು ಗಿಳಿಮೋತಿ, ಶಂಕರ ಐಲಿ, ಶೇಖರಗೌಡ ತಲೇಖಾನ್ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಗ್ರಾಮೀಣ ಮತ್ತು ನಗರ ಬ್ಲಾಕ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಅಳವಡಿಕೆಗೆ ಆಗ್ರಹ ಹಗರಿಬೊಮ್ಮನಹಳ್ಳಿ ಪುರಸಭೆ ಮುಖ್ಯಾಧಿಕಾರಿಗೆ ಕನ್ನಡಪರ ಹೋರಾಟಗಾರರಿಂದ ಮನವಿ

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ಖಾಸಗಿ ಶಾಲೆಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳಲ್ಲಿ ಸರ್ಕಾರದ ನಿಯಮದಂತೆ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಹಗರಿಬೊಮ್ಮನಹಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ ಭಾಷೆ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದೆ. ಕನ್ನಡ ನಾಡಿನಲ್ಲಿ ವ್ಯಾಪಾರ-ವಹಿವಾಟು ನಡೆಸುವ ಪ್ರತಿಯೊಂದು ಸಂಸ್ಥೆಯೂ ಕನ್ನಡ ಭಾಷೆಗೆ ಗೌರವ ನೀಡಬೇಕು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಿ, ಉಳಿದ ಶೇ.40ರಷ್ಟು ಇತರ ಭಾಷೆಗಳಿಗೆ ಅವಕಾಶ ಕಲ್ಪಿಸುವ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಕಾಣಿಸಬೇಕು. ಇದರಿಂದ ಸ್ಥಳೀಯ ಜನರಿಗೆ ಅನುಕೂಲವಾಗುವುದರ ಜೊತೆಗೆ ಕನ್ನಡ ಭಾಷೆಯ ಗೌರವವೂ ಹೆಚ್ಚಲಿದೆ ಎಂದು ತಿಳಿಸಿದರು.

ಸರ್ಕಾರದ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗದೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಪಟ್ಟಣದಾದ್ಯಂತ ಪರಿಶೀಲನೆ ನಡೆಸಿ, ನಿಯಮ ಪಾಲಿಸದ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವ್ಯಾಪಾರಸ್ಥರು ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ಕನ್ನಡವೇ ಮೊದಲು, ಕನ್ನಡವೇ ಪ್ರಧಾನ ಎಂಬ ಆಶಯದೊಂದಿಗೆ ಕನ್ನಡ ಭಾಷೆಯ ಅಸ್ತಿತ್ವ ಮತ್ತು ಗೌರವವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಕೋಟ್ರೇಶ್ ತಳವಾರ, ಸಮಾಜಸೇವಕಿ ಹಾಗೂ ಚಿತ್ರಕಲಾವಿದೆ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಉಮೇಶ್ ಪಾಳೆಗಾರ್, ಸೋಮಶೇಖರ್ ಒಬಳಾಪುರ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ದೇವೇಂದ್ರಪ್ಪ ಉಪಸ್ಥಿತರಿದ್ದರು.

ಹಳಿ ದಾಟುವಾಗ ರೈಲಿಗೆ ಸಿಲುಕಿ ಲಾರಿ ಚಾಲಕ ಸಾವು.

 

ಕಿಷ್ಕಿಂಧವಾಣಿ ಸುದ್ದಿ

 

ಹಗರಿಬೊಮ್ಮನಹಳ್ಳಿ:

ರೈಲ್ವೆ ಹಳಿ ದಾಟುವಾಗ ವ್ಯಕ್ತಿಯೊರ್ವನ ಮೇಲೆ ರೈಲು ಹರಿದು ಮೃತಪಟ್ಟ ಘಟನೆ ಪಟ್ಟಣದ ಕೆವಿಆರ್ ಕಾಲೋನಿ ಹಾಗೂ ಹಳೆಯ ಬಸ್ ನಿಲ್ದಾಣ ಮಧ್ಯೆ ಇರುವ ರೈಲ್ವೇ ಹಳಿಯ ಬಳಿ ಜರುಗಿದೆ.

ಮೃತಪಟ್ಟ ವ್ಯಕ್ತಿಯನ್ನು ರವಿ ರೆಡ್ಡಿ (40) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ. ಮೃತ ರವಿ ರೆಡ್ಡಿ ಅವರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಅ.19ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ.

 

 

ಕಿಷ್ಕಿಂಧವಾಣಿ ಸುದ್ದಿ

 

ಬೆಂಗಳೂರು: 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಾಕಿ ಅವಧಿ ಹಾಗೂ ಹಿಂಗಾರು ಹಂಗಾಮಿನ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯನ್ನು ಅ. 19ರ ಸೋಮವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ತುಂಗಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

ಅಂದು ಪೂರ್ವಾಹ್ನ 10.30ಕ್ಕೆ ವಿಕಾಸ ಸೌಧದ ನಾಲ್ಕನೇ ಮಹಡಿಯ ಕೊಠಡಿ ಸಂಖ್ಯೆ 419ರಲ್ಲಿ ಸಭೆ ನಡೆಯಲಿದೆ. ಸಭೆಯು ಅಧ್ಯಕ್ಷರ ನೇತೃತ್ವದಲ್ಲಿ ಜರುಗಲಿದ್ದು, ಈ ಕುರಿತು ಅಗತ್ಯ ಸಭಾ ಸೂಚನಾ ಪತ್ರವನ್ನು ತಕ್ಷಣ ಹೊರಡಿಸುವಂತೆ ಹಾಗೂ ಸಭೆಗೆ ಸಂಬಂಧಿಸಿದ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂಗಾರು ಹಂಗಾಮಿನ ಉಳಿದ ಅವಧಿ ಹಾಗೂ ಹಿಂಗಾರು ಹಂಗಾಮಿನಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.

₹18 ಲಕ್ಷ ರೂ.ಸಾಲದ ಸುಳಿಯಲ್ಲಿ ಕುಟುಂಬ ಬಲಿ! ವಿಮಾ ಹಣದ ಆಸೆಗೆ ಪತಿಯನ್ನೇ ಕೊಂದ ಆರೋಪ; ಪತ್ನಿ ಸೇರಿ ಮೂವರು ಪೊಲೀಸ್ ವಶಕ್ಕೆ? ಸಾಲ ಮನ್ನಾ ಮಾಡಿಸಿಕೊಳ್ಳುವ ಆಸೆ, ಸ್ಕೂಟಿ ಕೊಡಿಸುವ ಆಮಿಷ — ಇಬ್ಬರು ಮಕ್ಕಳ ಭವಿಷ್ಯ ಅತಂತ್ರ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಬಡ ಕುಟುಂಬವೊಂದರಲ್ಲಿ ಸಾಲದ ಹೊರೆ ಎಷ್ಟು ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಗಂಗಾವತಿ ತಾಲೂಕಿನ ಮುಷ್ಟೂರು ಕ್ಯಾಂಪ್‌ನಲ್ಲಿ ನಡೆದಿರುವ ರಾಘವೇಂದ್ರ ಅವರ ಸಾವಿನ ಪ್ರಕರಣ ತೀವ್ರ ಕಳವಳ ಮೂಡಿಸಿದೆ. ಸುಮಾರು ₹18 ಲಕ್ಷ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದಲ್ಲಿ ಪತ್ನಿಯೇ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

   ವಿಮಾ ಹಣ ಸಿಗುತ್ತದೆ, ಸಾಲ ಮನ್ನಾ ಆಗುತ್ತದೆ ಎಂಬ ಆಸೆಗೆ ಬಿದ್ದು ಪತ್ನಿ ಉಮಾ, ಸಂಬಂಧಿ ಶಿವಾಜಿ ಹಾಗೂ ಆತನ ಸ್ನೇಹಿತ ಖಲೀಲ್ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಲಭ್ಯವಾದ ಮಾಹಿತಿ ತಿಳಿಸಿದೆ. ಆದರೆ, ಘಟನೆಯ ಹಿಂದಿನ ನಿಖರ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ಕೂಲಿ ಕೆಲಸದಿಂದ ಕಟ್ಟಿಕೊಂಡಿದ್ದ ಸುಂದರ ಮನೆ

ಮುಷ್ಟೂರು ಕ್ಯಾಂಪ್‌ನಲ್ಲಿ ವಾಸವಾಗಿದ್ದ ರಾಘವೇಂದ್ರ ಮತ್ತು ಅವರ ಪತ್ನಿ ಉಮಾ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾಘವೇಂದ್ರ ಅವರು ಮುಷ್ಟೂರು ಕ್ಯಾಂಪ್‌ನ ಸತೀಶ್ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಶಾಲೆಗೆ ಹೋಗುತ್ತಿದ್ದರು.

ಬಡತನದ ನಡುವೆಯೂ ದುಡಿದು ಮಕ್ಕಳನ್ನು ಬೆಳೆಸಬೇಕು, ಸ್ವಂತ ಮನೆಯೊಂದರಲ್ಲಿ ನೆಮ್ಮದಿಯಿಂದ ಬದುಕಬೇಕು ಎಂಬ ಕನಸಿನೊಂದಿಗೆ ದಂಪತಿ ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದರು. ಆದರೆ, ಮನೆ ನಿರ್ಮಾಣಕ್ಕಾಗಿ ವಿವಿಧ ಗುಂಪುಗಳಲ್ಲಿ ಸಾಲ ಹಾಗೂ ವೈಯಕ್ತಿಕ ಸಾಲ ಮಾಡಿದ್ದರಿಂದ ಕುಟುಂಬದ ಮೇಲೆ ಸಾಲದ ಹೊರೆ ಹೆಚ್ಚಾಗಿತ್ತು ಎನ್ನಲಾಗಿದೆ.

ದುಡಿಮೆಯಿಂದ ಬಂದ ಹಣ ಸಾಲದ ಕಂತು ಕಟ್ಟಲು ಸಾಲದಾಗುತ್ತಿದ್ದಂತೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆರ್ಥಿಕ ಸಂಕಷ್ಟದಿಂದ ನೆಮ್ಮದಿಯ ಬದುಕು ಅಶಾಂತಿಯ ಗೂಡಾಗಿತ್ತು ಎನ್ನಲಾಗಿದೆ.

ವಿಮಾ ಹಣದಿಂದ ಸಾಲ ಮನ್ನಾ ಆಗುತ್ತದೆ ಎಂಬ ಆಸೆ!

ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಗಾವತಿ ನಗರಕ್ಕೆ ಬಂದಿದ್ದ ಉಮಾ ಅವರಿಗೆ ಯಾರೋ ವಿಮಾ ಕಂಪನಿಯವರು ಎಂದು ಹೇಳಿಕೊಂಡವರು, ಪತಿ ಮೃತಪಟ್ಟರೆ ವಿಮಾ ಹಣ ದೊರೆಯುತ್ತದೆ ಮತ್ತು ಗುಂಪು ಸಾಲ ಮನ್ನಾ ಆಗುತ್ತದೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಈ ಮಾತುಗಳನ್ನು ನಂಬಿದ ಉಮಾ, ಪತಿಯ ಸಾವಿನಿಂದ ಸಾಲದ ಸಮಸ್ಯೆ ಬಗೆಹರಿಯಬಹುದು ಎಂಬ ತಪ್ಪು ಆಲೋಚನೆಗೆ ಬಿದ್ದಿದ್ದರು ಎನ್ನುವ ಆರೋಪವಿದೆ. ಆದರೆ, ವಿಮಾ ಹಣ ಅಥವಾ ಸಾಲ ಮನ್ನಾ ಕುರಿತು ಯಾರಾದರೂ ನಿಜವಾಗಿಯೂ ಇಂತಹ ಮಾಹಿತಿ ನೀಡಿದ್ದಾರೆಯೇ ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ.

ಪತಿಯನ್ನೇ ಕೊಲೆ ಮಾಡಲು ಉಮಾ ಸಂಚು ರೂಪಿಸಿದ್ದರು ಎಂಬುದು ಪ್ರಕರಣದ ಅತ್ಯಂತ ಗಂಭೀರ ಆರೋಪವಾಗಿದೆ.

ಅನ್ನದಲ್ಲಿ ಮಾತ್ರೆ ಬೆರೆಸಿದರೂ ಸಾಯದ ಪತಿ!

ತನಿಖೆಯ ಮಾಹಿತಿಯ ಪ್ರಕಾರ, ರಾಘವೇಂದ್ರ ಅವರನ್ನು ಕೊಲ್ಲುವ ಉದ್ದೇಶದಿಂದ ಉಮಾ ಸುಮಾರು ಒಂದು ವಾರದಿಂದ ಪತಿ ಊಟ ಮಾಡುವ ಅನ್ನದಲ್ಲಿ ನಿದ್ರಾಜನಕ ಮಾತ್ರೆ ಬೆರೆಸುತ್ತಿದ್ದರು ಎನ್ನಲಾಗಿದೆ. ಆದರೆ, ಇದರಿಂದ ರಾಘವೇಂದ್ರ ಮೃತಪಟ್ಟಿರಲಿಲ್ಲ ಎಂದು ತಿಳಿದುಬಂದಿದೆ.

ನಂತರ ಉಮಾ ಅವರು ಗಂಗಾವತಿಯಲ್ಲಿದ್ದ ಸಂಬಂಧಿ ಶಿವಾಜಿಯನ್ನು ಸಂಪರ್ಕಿಸಿ, ತನ್ನ ಕುಟುಂಬದ ಮೇಲೆ ಸುಮಾರು ₹18 ಲಕ್ಷ ಸಾಲವಿದೆ. ರಾಘವೇಂದ್ರ ಅವರನ್ನು ಕೊಂದರೆ ಸಾಲ ಮನ್ನಾ ಆಗುತ್ತದೆ ಎಂದು ವಿಮಾ ಕಂಪನಿಯವರು ಹೇಳಿದ್ದಾರೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಅಲ್ಲದೆ, ಸಾಲ ಮನ್ನಾ ಆದರೆ ಶಿವಾಜಿಗೆ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಶಿವಾಜಿಗೆ ಮದ್ಯ ಸೇವಿಸಲು ಹಣವನ್ನೂ ನೀಡಿದ್ದರು ಎನ್ನಲಾಗಿದೆ.

ಅಕ್ಟೋಬರ್ 6ರ ರಾತ್ರಿ ನಡೆದಿದ್ದೇನು?

ಪೊಲೀಸರಿಗೆ ಲಭ್ಯವಾದ ಮಾಹಿತಿಯ ಪ್ರಕಾರ, 2026ರ ಅಕ್ಟೋಬರ್ 6ರಂದು ಶಿವಾಜಿ ಮತ್ತು ಆತನ ಸ್ನೇಹಿತ ಖಲೀಲ್ ಗಂಗಾವತಿಯ ಎಂ.ಎಸ್. ಲಿಕ್ಕರ್ ಅಂಗಡಿಯಿಂದ ಮದ್ಯ ಹಾಗೂ ಬಿಯರ್ ಖರೀದಿಸಿ, ಸಮೀಪದ ಸರ್ಕಾರಿ ಬಾರ್ ಪಕ್ಕದಲ್ಲಿ ಕುಡಿದ ಬಳಿಕ ಮುಷ್ಟೂರು ಕ್ಯಾಂಪ್‌ಗೆ ತೆರಳಿದ್ದರು ಎನ್ನಲಾಗಿದೆ.

ಅಂದು ರಾತ್ರಿ ಸುಮಾರು 10 ಗಂಟೆಗೆ ರಾಘವೇಂದ್ರ, ಉಮಾ, ಅವರ ಇಬ್ಬರು ಮಕ್ಕಳು, ಶಿವಾಜಿ ಹಾಗೂ ಖಲೀಲ್ ಒಟ್ಟಿಗೆ ಊಟ ಮಾಡಿದ್ದರು. ಊಟಕ್ಕೂ ಮುನ್ನ ರಾಘವೇಂದ್ರ ಅವರ ಅನ್ನದಲ್ಲಿ ಮಾತ್ರೆ ಬೆರೆಸಲಾಗಿತ್ತು ಎಂಬ ಆರೋಪವಿದೆ. ಆದರೆ, ಎರಡು ತುತ್ತು ಊಟ ಮಾಡಿದ ರಾಘವೇಂದ್ರ ಎದ್ದು ಹೋಗಿದ್ದರು ಎನ್ನಲಾಗಿದೆ.

ಬಳಿಕ ಎಲ್ಲರೂ ಒಂದೇ ಮನೆಯಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ.

ಮಧ್ಯರಾತ್ರಿ ಕುತ್ತಿಗೆ ಬಿಗಿದು ಹಲ್ಲೆ ನಡೆಸಿದ ಆರೋಪ

ಅಂದು ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಉಮಾ ಮತ್ತು ಶಿವಾಜಿ ಸೇರಿಕೊಂಡು ರಾಘವೇಂದ್ರ ಅವರ ಕುತ್ತಿಗೆಗೆ ಹಗ್ಗ ಅಥವಾ ವೆಲ್‌ನಂತಹ ವಸ್ತುವನ್ನು ಬಿಗಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ಶಿವಾಜಿ ಅಲ್ಲಿದ್ದ ಕಟ್ಟಿಗೆಯಿಂದ ರಾಘವೇಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಘಟನೆಯನ್ನು ನೋಡಿದ ಮಕ್ಕಳು ಭಯಭೀತರಾಗಿದ್ದು, ಅವರಿಗೆ ಬೆದರಿಸಿ ಮಲಗುವಂತೆ ಹೇಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿಯೇ ಮಲಗಿದ್ದ ಖಲೀಲ್ ಎಚ್ಚರಗೊಂಡಾಗ ಆತನಿಗೂ ಸುಮ್ಮನೆ ಮಲಗುವಂತೆ ಹೇಳಲಾಗಿತ್ತು ಎನ್ನಲಾಗಿದೆ.

ನಂತರ ರಾಘವೇಂದ್ರ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಹಾಕಲಾಗಿತ್ತು. ಆದರೆ, ಆಗಲೂ ಅವರು ಮೃತಪಟ್ಟಿರಲಿಲ್ಲ ಎಂಬುದು ತನಿಖೆಯಲ್ಲಿನ ಆರೋಪಿತ ವಿವರವಾಗಿದೆ.

ಬೈಕ್‌ನಲ್ಲಿ ಕರೆದೊಯ್ದು ರಸ್ತೆ ಬದಿಯಲ್ಲಿ ಬಿಸಾಡಿದ ಆರೋಪ

ಮನೆಯಿಂದ ಹೊರಗೆ ತಂದ ಬಳಿಕ ಶಿವಾಜಿ ಮತ್ತು ಇತರರು ರಾಘವೇಂದ್ರ ಅವರನ್ನು ಬೈಕ್‌ನಲ್ಲಿ ಕರೆದೊಯ್ದು ಮುಷ್ಟೂರು ಕ್ಯಾಂಪ್ ದಾಟಿ ಸುಮಾರು ಐದು ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ.

ಅಲ್ಲಿಯೂ ರಾಘವೇಂದ್ರ ಜೀವಂತವಾಗಿದ್ದರು ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಬಳಿಕ ಹೊಲಗಳಿಗೆ ಬಳಸುವ ಕೀಟನಾಶಕ ಅಥವಾ ಇತರ ರಾಸಾಯನಿಕ ದ್ರವವನ್ನು ಅವರ ಬಾಯಿಗೆ ಹಾಕಿ, ಯಾರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವಂತೆ ಘಟನೆಯನ್ನು ಬಿಂಬಿಸಲು ಯತ್ನಿಸಲಾಗಿತ್ತು ಎಂಬ ಆರೋಪವೂ ಇದೆ.

ಈ ಆರೋಪಗಳ ಸತ್ಯಾಸತ್ಯತೆ, ಸಾವಿಗೆ ನಿಖರ ಕಾರಣ ಹಾಗೂ ಬಳಸಲಾದ ವಸ್ತುಗಳ ಕುರಿತು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಮುಂಜಾನೆ ರೈತರ ಕಣ್ಣಿಗೆ ಬಿದ್ದ ರಾಘವೇಂದ್ರ

ಅಕ್ಟೋಬರ್ 8ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಹೊಲಕ್ಕೆ ತೆರಳುತ್ತಿದ್ದ ರೈತರು ರಸ್ತೆ ಬದಿಯಲ್ಲಿ ರಾಘವೇಂದ್ರ ಅವರನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಸಂತೋಷ ಎಂಬ ವ್ಯಕ್ತಿ ಈ ವಿಷಯವನ್ನು ಉಮಾ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದರು ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಂದ ಉಮಾ, ರಾಘವೇಂದ್ರ ಅವರಿಗೆ ಯಾರೋ ವಾಹನ ಡಿಕ್ಕಿ ಹೊಡೆದಿರಬಹುದು ಅಥವಾ ಅವರಿಗೆ ಫಿಟ್ಸ್ ಬಂದಿರಬಹುದು ಎಂಬ ರೀತಿಯಲ್ಲಿ ಹೇಳಿ ಫಕೀರಪ್ಪ ಅವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ.

ನಂತರ ಫಕೀರಪ್ಪ ಅವರು ರಾಘವೇಂದ್ರ ಅವರನ್ನು ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಬಂದಾಗ ಅವರು ಮೃತಪಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ಆರಂಭದಿಂದ ಕೊನೆಯವರೆಗಿನ ನಿಖರ ಸಮಯ, ಮೃತದೇಹವನ್ನು ಸ್ಥಳಾಂತರಿಸಿದ ಸಂದರ್ಭ ಹಾಗೂ ಆರೋಪಿಗಳ ಪಾತ್ರದ ಕುರಿತು ತನಿಖೆಯಿಂದ ಮತ್ತಷ್ಟು ವಿವರಗಳು ಹೊರಬರಬೇಕಿವೆ.

ಸಾಲವೂ ಉಳಿಯಿತು; ಕುಟುಂಬವೂ ನಾಶವಾಯಿತು!

ಮನೆ ಕಟ್ಟುವ ಕನಸಿಗಾಗಿ ಸಾಲ ಮಾಡಿದ್ದ ಕುಟುಂಬದಲ್ಲಿ ಕೊನೆಗೆ ದುಡಿದು ಬದುಕುತ್ತಿದ್ದ ರಾಘವೇಂದ್ರ ಜೀವ ಕಳೆದುಕೊಂಡಿದ್ದಾರೆ. ಪತಿಯ ಸಾವಿನಿಂದ ಸಾಲದ ಸಮಸ್ಯೆ ಬಗೆಹರಿಯುತ್ತದೆ ಎಂಬ ತಪ್ಪು ಲೆಕ್ಕಾಚಾರಕ್ಕೆ ಬಿದ್ದಿದ್ದರೆನ್ನಲಾದ ಉಮಾ ಈಗ ಕೊಲೆ ಪ್ರಕರಣದ ಆರೋಪ ಎದುರಿಸುವಂತಾಗಿದೆ.

ಸ್ಕೂಟಿ ಕೊಡಿಸುವ ಆಮಿಷಕ್ಕೆ ಒಳಗಾದನೆನ್ನಲಾದ ಶಿವಾಜಿ ಹಾಗೂ ಆತನ ಸ್ನೇಹಿತ ಖಲೀಲ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯ ಪ್ರಗತಿಯ ಬಗ್ಗೆ ಅಧಿಕೃತ ಪೊಲೀಸ್ ಮಾಹಿತಿ ಅಗತ್ಯವಿದೆ.

ಇತ್ತ ತಂದೆಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕುಟುಂಬದ ಸಾಲದ ಹೊರೆ ಒಂದೆಡೆಯಾದರೆ, ತಂದೆಯ ಸಾವಿನ ಆಘಾತ ಮತ್ತೊಂದೆಡೆ. ತಾಯಿಯ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.

ಜನರಿಗೆ ಎಚ್ಚರಿಕೆಯ ಸಂದೇಶ:

ಸಾಲದ ಒತ್ತಡ, ಆರ್ಥಿಕ ಸಂಕಷ್ಟ ಮತ್ತು ಕುಟುಂಬದ ಕಲಹಗಳಿಗೆ ಕೊಲೆ ಎಂದಿಗೂ ಪರಿಹಾರವಲ್ಲ. ವಿಮಾ ಹಣ ಸಿಗುತ್ತದೆ ಅಥವಾ ಸಾಲ ಮನ್ನಾ ಆಗುತ್ತದೆ ಎಂಬ ಪರಿಶೀಲಿಸದ ಮಾತುಗಳನ್ನು ನಂಬಿ ಇಂತಹ ಅಪರಾಧಕ್ಕೆ ಮುಂದಾದರೆ, ಒಂದು ಕುಟುಂಬದ ಬದುಕೇ ನಾಶವಾಗಬಹುದು.

ವಿಮಾ ಪಾಲಿಸಿ ಮತ್ತು ಸಾಲ ಮನ್ನಾ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಅಧಿಕೃತ ಸಂಸ್ಥೆಗಳ ಮೂಲಕ ಪರಿಶೀಲಿಸಬೇಕು. ಸಾಲದ ಸಮಸ್ಯೆ ಎದುರಾದಾಗ ಬ್ಯಾಂಕ್‌ಗಳು, ಸಹಕಾರಿ ಸಂಸ್ಥೆಗಳು, ಕಾನೂನು ನೆರವು ಕೇಂದ್ರಗಳು ಅಥವಾ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಸಹಾಯ ಪಡೆಯಬೇಕು.

ಒಂದು ಮನೆ ಕಟ್ಟಲು ಮಾಡಿದ ಸಾಲದ ಹೊರೆ, ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡು ಕೊನೆಗೆ ಜೀವಹಾನಿಯ ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪದ ಈ ಪ್ರಕರಣ, ಸಮಾಜದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುವ ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ತುಂಗಭದ್ರಾ ಜಲಾಶಯದ ನೀರಿನ ಬಣ್ಣ ಬದಲಾವಣೆ, ಬರಗಾಲದ ಬಗ್ಗೆ ಯುವ ಸಂಸತ್ತಿನಲ್ಲಿ ಚರ್ಚೆ

 

 

 

 

ಗಂಗಾವತಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ನಗರದ ಐಎಂಎ ಭವನದಲ್ಲಿ ಆಯೋಜಿಸಿದ್ದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು, ಎಲ್‌ನಿನೋ ಪರಿಣಾಮದಿಂದ ಮಳೆ ಕೊರತೆ ಉಂಟಾಗುವ ಆತಂಕ, ಕುಡಿಯುವ ನೀರಿನ ಅಭಾವ ಹಾಗೂ ಬರಗಾಲದಿಂದ ಜನರು ಗುಳೆ ಹೋಗುತ್ತಿರುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಚರ್ಚೆ ನಡೆಸಿದರು.

ಎಸ್.ಕೆ.ಎನ್.ಜಿ. ಕಾಲೇಜಿನ ವಿದ್ಯಾರ್ಥಿ ಶಿವಶರಣ ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಮುಖ್ಯಮಂತ್ರಿಯಾಗಿ, ರೇಣುಕಾ ಉಪಮುಖ್ಯಮಂತ್ರಿಯಾಗಿ, ಎಂ.ಡಿ. ಗೌಸ್ ವಿರೋಧ ಪಕ್ಷದ ನಾಯಕರಾಗಿ ಹಾಗೂ ಇಮಾಂಬೀ ವಿರೋಧ ಪಕ್ಷದ ಉಪನಾಯಕರಾಗಿ ಭಾಗವಹಿಸಿ ವಿವಿಧ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ, ಪಾಚಿಯ ಬಣ್ಣಕ್ಕೆ ತಿರುಗುತ್ತಿರುವ ವಿಚಾರ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿತು. ಜಲಾಶಯದ ನೀರಿನ ಗುಣಮಟ್ಟ, ಅದರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳು ಗಮನ ಸೆಳೆದರು.

ಎಲ್‌ನಿನೋ ಪರಿಣಾಮದಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಮತ್ತು ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕಡಿಮೆಯಾಗುವ ಆತಂಕದ ಬಗ್ಗೆಯೂ ಚರ್ಚಿಸಲಾಯಿತು. ಮಳೆ ಕೊರತೆ ಮುಂದುವರಿದರೆ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಕುರಿತು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು.

ಇದೇ ವೇಳೆ ತೀವ್ರ ಬರಗಾಲದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುವುದು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುವುದು ಹಾಗೂ ಜೀವನೋಪಾಯಕ್ಕಾಗಿ ಜನರು ತಮ್ಮ ಊರುಗಳನ್ನು ತೊರೆದು ಬೇರೆಡೆಗೆ ಗುಳೆ ಹೋಗುತ್ತಿರುವ ಸಮಸ್ಯೆಯ ಬಗ್ಗೆಯೂ ಚರ್ಚೆ ನಡೆಯಿತು. ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ಒದಗಿಸುವ ಅಗತ್ಯವನ್ನು ಪ್ರಸ್ತಾಪಿಸಲಾಯಿತು.

ಯುವ ಸಂಸತ್ತು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಂಸದೀಯ ಕಾರ್ಯವೈಖರಿಯನ್ನು ಪ್ರಾಯೋಗಿಕವಾಗಿ ಅರಿತುಕೊಂಡರು. ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ನಿರ್ವಹಿಸುವ ಮೂಲಕ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವುದು, ಅಭಿಪ್ರಾಯಗಳನ್ನು ಮಂಡಿಸುವುದು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶ ಪಡೆದರು.

ಪಂಡಿತ ವೆಂಕಟೇಶ್ ಕುಮಾರ್ ಮನವಿಗೆ ಸ್ಪಂದನೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದ ಕಲ್ಲಯ್ಯ ಅಜ್ಜನವರು

 

ಕಿಷ್ಕಿಂಧವಾಣಿ ಸುದ್ದಿ

| ಗಂಗಾವತಿ:

ಅನಾಥರು ಹಾಗೂ ಅಂದರ ಬದುಕಿಗೆ ಆಶ್ರಯ ಮತ್ತು ಬೆಳಕಾಗಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಪೂಜ್ಯ ಕಲ್ಲಯ್ಯ ಅಜ್ಜನವರು ಗುರುವಾರ ಗಂಗಾವತಿಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದರು.

ಕೆಲವು ತಿಂಗಳುಗಳ ಹಿಂದೆ ಕಲ್ಲಯ್ಯ ಅಜ್ಜನವರ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರಿಂದ ತೀವ್ರ ಬೇಸರಗೊಂಡಿದ್ದ ಶ್ರೀಗಳು, ಗಂಗಾವತಿಯಲ್ಲಿರುವ ತಮ್ಮ ಶಾಖಾ ಆಶ್ರಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೌನ ವ್ರತ ಕೈಗೊಂಡು ವಾಸ್ತವ್ಯ ಹೂಡಿದ್ದರು.

ಕಲ್ಲಯ್ಯ ಅಜ್ಜನವರು ಪುನಃ ಗದುಗಿನ ಆಶ್ರಮಕ್ಕೆ ಮರಳಬೇಕು ಎಂದು ಭಕ್ತರು ಹಾಗೂ ಶಿಷ್ಯರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಶ್ರೀಗಳು ಗದುಗಿಗೆ ತೆರಳಲು ಒಪ್ಪಿರಲಿಲ್ಲ.

 ಈ ಹಿನ್ನೆಲೆಯಲ್ಲಿ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು, ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್, ವೀರೇಶ್ ಕಿತ್ತೂರು, ಕಲ್ಲಿನಾಥ ಶಾಸ್ತ್ರಿ ಸೇರಿದಂತೆ ಆಶ್ರಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಗಂಗಾವತಿಗೆ ಆಗಮಿಸಿ ಶ್ರೀಗಳನ್ನು ಮನವೊಲಿಸಿದರು.

ಭಕ್ತರ ಪ್ರೀತಿ–ವಿಶ್ವಾಸ ಹಾಗೂ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು ಮತ್ತು ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಕಲ್ಲಯ್ಯ ಅಜ್ಜನವರು, ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಲು ಒಪ್ಪಿಗೆ ಸೂಚಿಸಿದರು.

ಅದರಂತೆ ಗುರುವಾರ ಆಶ್ರಮದ ಹಿರಿಯರು ಹಾಗೂ ಭಕ್ತರು ಗೌರವಪೂರ್ವಕವಾಗಿ ಕಲ್ಲಯ್ಯ ಅಜ್ಜನವರನ್ನು ಗಂಗಾವತಿಯಿಂದ ಬೀಳ್ಕೊಟ್ಟು ಗದುಗಿಗೆ ಕರೆದೊಯ್ದರು. ಶ್ರೀಗಳು ಮರಳುತ್ತಿರುವ ಸುದ್ದಿ ತಿಳಿದು ಭಕ್ತರಲ್ಲಿ ಸಂತಸ ಮನೆಮಾಡಿತು.

ಈ ಸಂದರ್ಭದಲ್ಲಿ ಗಂಗಾವತಿ ನಗರದ ಹಿರಿಯ ಶಿಷ್ಯರಾದ ಕೆ.ಎಫ್. ಮುದ್ದಾಬಳ್ಳಿ, ವೆಂಕಟೇಶ್ ದಾಸನಾಳ್, ಮಲ್ಲಿಕಾರ್ಜುನ ಗೌಡ ಉಡಮಕಲ್ ಸೇರಿದಂತೆ ನೂರಾರು ಶಿಷ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಕಲ್ಲಯ್ಯ ಅಜ್ಜನವರಿಗೆ ಹೃದಯಪೂರ್ವಕವಾಗಿ ಬೀಳ್ಕೊಟ್ಟರು.

ಕಲ್ಲಯ್ಯ ಅಜ್ಜನವರ ಮರಳುವಿಕೆಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಭಕ್ತ ವಲಯದಲ್ಲಿ ಹೊಸ ಚೈತನ್ಯ ಮೂಡಿದ್ದು, ಶ್ರೀಗಳ ಸೇವೆ ಮತ್ತು ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

ತಿರುಮಲಾಪೂರದಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್ ಕೇಬಲ್ ಕಳ್ಳತನ ಪಿಡಿಓಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ಆರೋಪ; ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಸಾಣಾಪೂರ ಗ್ರಾ.ಪಂ. ತಿರುಮಲಾಪೂರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್‌ಸೆಟ್‌ನ ಕೇಬಲ್‌ನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಪಂಪ್‌ಸೆಟ್ ಕೇಬಲ್ ಕಳ್ಳತನವಾಗಿರುವ ವಿಷಯವನ್ನು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಮೊಬೈಲ್ ಕರೆ ಮೂಲಕ ಮಾಹಿತಿ ನೀಡಲಾಗಿದ್ದರೂ, ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

  ನೀರು ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೇಬಲ್‌ನ್ನು ದುರಸ್ತಿ ಅಥವಾ ಬದಲಾಯಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯನಗರ ಕಾಲದ ಪುರಾತನ ಲಕ್ಷ್ಮೀ ಗುಡಿ ಕಳ್ಳತನ ಪ್ರಕರಣಕ್ಕೂ ಕ್ರಮವಿಲ್ಲ?

ಇದೇ ತಿರುಮಲಾಪೂರ ಗ್ರಾಮದಲ್ಲಿ ಕಳೆದೆರಡು ತಿಂಗಳ ಹಿಂದೆ ವಿಜಯನಗರ ಕಾಲದ ಪುರಾತನ ಲಕ್ಷ್ಮೀ ಗುಡಿ ಕಟ್ಟಡವನ್ನು ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿತ್ತು. ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಪುರಾತನ ದೇವಾಲಯದ ಕಳ್ಳತನ ಪ್ರಕರಣದ ಬೆನ್ನಲ್ಲೇ ಇದೀಗ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪಂಪ್‌ಸೆಟ್‌ನ ಕೇಬಲ್ ಕೂಡ ಕಳುವಾಗಿರುವುದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸತತವಾಗಿ ಕಳ್ಳತನದ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕೆ ಅಡ್ಡಿಯಾಗಿರುವ ಕೇಬಲ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕೇಬಲ್ ಅಳವಡಿಸಿ ನೀರು ಪೂರೈಕೆ ಪುನರಾರಂಭಿಸಬೇಕು. ಜೊತೆಗೆ ಹಿಂದಿನ ಲಕ್ಷ್ಮೀ ಗುಡಿ ಎರಡು ಕಳ್ಳತನ ಪ್ರಕರಣ ಹಾಗೂ ಪ್ರಸ್ತುತ ಪಂಪ್‌ಸೆಟ್ ಕೇಬಲ್ ಕಳ್ಳತನದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತುಂಗಭದ್ರಾ ನದಿಯಲ್ಲಿ ಅಕ್ರಮ ತೆಪ್ಪ ಸಂಚಾರ! ಸುರಕ್ಷತೆ ಇಲ್ಲದೆ ಮಕ್ಕಳ ಸಾಗಾಟ; ಗಂಗಾವತಿಯಲ್ಲಿ ಕ್ರಮ, ಹೊಸಪೇಟೆಯಲ್ಲಿ ನಿರ್ಲಕ್ಷ್ಯ ಆರೋಪ ವೆಂಕಟಾಪುರ–ಹಂಪಿ ಭಾಗದಲ್ಲೂ ಅಕ್ರಮ ತೆಪ್ಪಗಳಿಗೆ ಕಡಿವಾಣ ಹಾಕಲು ಆಗ್ರಹ

 

 

 

 

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಹೊಸಪೇಟೆ/ಗಂಗಾವತಿ: ತುಂಗಭದ್ರಾ ನದಿಯಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದೆ ಅಕ್ರಮವಾಗಿ ತೆಪ್ಪಗಳನ್ನು ನಡೆಸಲಾಗುತ್ತಿದ್ದು, ಮಕ್ಕಳನ್ನು,ಪ್ರವಾಸಿಗರನ್ನು ಅಪಾಯಕಾರಿ ರೀತಿಯಲ್ಲಿ ನದಿಯಲ್ಲಿ ಸಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹೊಸಪೇಟೆ ತಾಲೂಕಿನ ವೆಂಕಟಾಪುರ ಹಾಗೂ ಹಂಪಿ ಭಾಗದಲ್ಲಿ ತೆಪ್ಪಗಳ ಮೂಲಕ ಜನರನ್ನು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳಿಲ್ಲದೆ ಮಕ್ಕಳನ್ನೂ ತೆಪ್ಪದಲ್ಲಿ ಕರೆದೊಯ್ಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನದಿಯಲ್ಲಿ ನೀರಿನ ಹರಿವು ಹಾಗೂ ಆಳ ಹೆಚ್ಚಿರುವ ಸಂದರ್ಭದಲ್ಲಿ ತೆಪ್ಪದ ಸಮತೋಲನ ತಪ್ಪಿದರೆ ಅಥವಾ ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸಿದರೆ ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಜನರ ಸಾಗಾಟ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಗಂಗಾವತಿಯಲ್ಲಿ ಈಗಾಗಲೇ ಕ್ರಮ ಇದೇ ತುಂಗಭದ್ರಾ ನದಿಯ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಆಡಳಿತವು ಅಕ್ರಮ ತೆಪ್ಪ ಸಂಚಾರದ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ. ಅಕ್ರಮವಾಗಿ ತೆಪ್ಪ ನಡೆಸುವವರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಗಂಗಾವತಿ ಭಾಗದಲ್ಲಿ ಅಕ್ರಮ ತೆಪ್ಪಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವಾಗ, ತುಂಗಭದ್ರಾ ನದಿಯ ಇನ್ನೊಂದು ಭಾಗವಾದ ಹೊಸಪೇಟೆ ತಾಲೂಕಿನ ವೆಂಕಟಾಪುರ–ಹಂಪಿ ಪ್ರದೇಶದಲ್ಲಿ ಇದೇ ರೀತಿಯ ತೆಪ್ಪ ಸಂಚಾರ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿರುವುದು ಪ್ರಶ್ನೆ ಮೂಡಿಸಿದೆ.

 

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ:

ಅಕ್ರಮ ತೆಪ್ಪ ಸಂಚಾರದ ಬಗ್ಗೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಪ್ರವಾಸಿಗರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಂಪಿ ವಿಶ್ವಪಾರಂಪರಿಕ ಪ್ರವಾಸಿ ತಾಣವಾಗಿರುವುದರಿಂದ ಪ್ರತಿನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆಯಿಲ್ಲದೆ ತೆಪ್ಪಗಳಲ್ಲಿ ಜನರನ್ನು ಸಾಗಿಸುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಸಾರ್ವಜನಿಕರು ಹೇಳಿದ್ದಾರೆ.

ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲಿ

ನದಿಯಲ್ಲಿ ಜನರ ಸಾಗಾಟಕ್ಕೆ ಅನುಮತಿ, ತೆಪ್ಪದ ಸುರಕ್ಷತಾ ಮಾನದಂಡಗಳು, ಪ್ರಯಾಣಿಕರ ಸಂಖ್ಯೆಯ ಮಿತಿ, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ನಿಯಮಬಾಹಿರವಾಗಿ ತೆಪ್ಪ ನಡೆಸುತ್ತಿರುವುದು ಕಂಡುಬಂದರೆ ಅಂತಹ ತೆಪ್ಪಗಳನ್ನು ತಕ್ಷಣ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈಗಾಗಲೇ ಗಂಗಾವತಿ ತಾಲೂಕು ಆಡಳಿತ ಅಕ್ರಮ ತೆಪ್ಪಗಳ ವಿರುದ್ಧ ಕ್ರಮ ಕೈಗೊಂಡಿರುವ ಮಾದರಿಯಲ್ಲಿ, ಹೊಸಪೇಟೆ ತಾಲೂಕು ಆಡಳಿತ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಕೂಡ ವೆಂಕಟಾಪುರ–ಹಂಪಿ ಭಾಗದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿ ಅಕ್ರಮ ತೆಪ್ಪ ಸಂಚಾರಕ್ಕೆ ಕಡಿವಾಣ ಹಾಕಬೇಕು.

ಅವಘಡ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮವಾಗಿ ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳ ಹಾಗೂ ಪ್ರವಾಸಿಗರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ.

ಬೆಣಕಲ್,ಹೇಮಗುಡ್ಡ ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಖಂಡಿಸಿ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಪ್ರತಿಭಟನೆ.

 

*ಲಿಂಗದಹಳ್ಳಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎದುರು ರೈತರ ಧರಣಿ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ರೈತರ ಬೆಳೆಗಳು ಒಣಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಬೆಣಕಲ್,ಹೇಮಗುಡ್ಡ,ಮುಕ್ಕುಂಪಿ ವೆಂಕಟಗಿರಿ ಹೋಬಳಿಯ ವಿವಿಧ ಗ್ರಾಮಗಳ ನೂರಾರು ರೈತರು ಮಂಗಳವಾರ ಲಿಂಗದಹಳ್ಳಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ

 ಪ್ರತಿಭಟನೆ ನಡೆಸಿದರು.

ವೆಂಕಟಗಿರಿ ಹೋಬಳಿಯ ಚಿಕ್ಕಬೆಣಕಲ್, ಹಿರೇಬೆಣಕಲ್, ಹೇಮಗುಡ್ಡ, ಲಿಂಗದಹಳ್ಳಿ, ಮುಕ್ಕುಂಪಿ, ಎಚ್.ಜಿ. ರಾಮುಲುನಗರ ಹಾಗೂ ಜಬ್ಬಲಗುಡ್ಡ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ ಏಳು ಗಂಟೆಗಳ ಕಾಲ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ಅವಲಂಬಿತ ಬೆಳೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ದಿನಗಳಿಂದ ಸಮರ್ಪಕ ವಿದ್ಯುತ್ ದೊರೆಯದ ಕಾರಣ ಜಮೀನುಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ವಿದ್ಯುತ್ ಕೊರತೆಯಿಂದ ಬೆಳೆ ಹಾನಿಯಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು

ಜೆಸ್ಕಾಂನ ಮುಖ್ಯ ಎಂಜಿನಿಯರ್ (C.E.) ಹಾಗೂ ಅಧೀಕ್ಷಕ ಎಂಜಿನಿಯರ್ (S.E.) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರೈತರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿದರು.

ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಂತೆ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪರಣ್ಣ ಮುನವಳ್ಳಿ ಅವರು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೈತರ ಸಮಸ್ಯೆ ಗಂಭೀರವಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಬೆಳೆಗಳನ್ನು ರಕ್ಷಿಸುವುದು ಅಧಿಕಾರಿಗಳು ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ನಾಳೆಯೊಳಗೆ ಸಮಸ್ಯೆ ಪರಿಹರಿಸುವ ಭರವಸೆ

ರೈತರ ಆಕ್ರೋಶ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಜೆಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಒಂದು ದಿನದ ಕಾಲಾವಕಾಶ ಕೋರಿದರು. ನಾಳೆಯೊಳಗೆ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು. ಆದರೆ ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹನುಮಂತಪ್ಪ ಮುಕ್ಕುಂಪಿ, ಆನಂದಗೌಡ, ಸಿದ್ದನಗೌಡ, ಪ್ರಹ್ಲಾದ್ ರಾವ್ ಹೇರೂರು, ಮದ್ಯಾನೆಪ್ಪ ಜಲ್ಲಿ, ದುರಗಪ್ಪ ಜಲ್ಲಿ, ರುದ್ರಪ್ಪ ಹಿರೇಬೆಣಕಲ್, ಭೂಪತಿ ಸುಬೇದಾರ್, ಪಂಪಾಪತಿ ಬಳ್ಳಾರಿ, ಶರಣಪ್ಪ ಕಟಗಿ, ಮಹೇಂದ್ರ ಕುಮಾರ್, ಮಲ್ಲೇಶಪ್ಪ ದಾಸರ, ನಾಗರಾಜ್ ನಾಯಕ್, ಮಲ್ಲಿಕಾರ್ಜುನ ಗೌಡ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್, ಡಿವೈಎಸ್ಪಿ ನ್ಯಾಮನಗೌಡ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದರು.

error: Content is protected !!