Breaking News
ಗಂಗಾವತಿಯಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡದಂತೆ ವಿವಿಧ ಸಂಘಟನೆಗಳ ಆಗ್ರಹ ನ. 3ರಂದು ನಡೆಯಲಿರುವ ಸಮಾವೇಶದಿಂದ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗುವ ಆತಂಕ: ಜಿಲ್ಲಾಡಳಿತಕ್ಕೆ ಬಸಾಭಿಮಾನಿಗಳಿಂಸ ಮನವಿ ಸಲ್ಲಿಕೆ.

 

 

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದದಲ್ಲಿ ನವೆಂಬರ್ 3ರಂದು ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಸವಪರ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ನಗರದ ಶ್ರೀಕೃಷ್ಣದೇವರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಒತ್ತಾಯಿಸಿದರು.
ಬಸವಕೇಂದ್ರ ಗಂಗಾವತಿ ಅಧ್ಯಕ್ಷ ಕೆ. ಬಸವರಾಜ ಹಾಗೂ ಬಸವಾಭಿಮಾನಿಗಳಾದ ಶ್ರೀಶೈಲಪಟ್ಟಣಶೆಟ್ಟಿ,ವಿರೇಶ, ಎ.ಕೆ.ಮಹೇಶ
ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೀಡಿರುವ ಮನವಿಯಲ್ಲಿ, ಸಮಾವೇಶದಲ್ಲಿ ಭಾಗವಹಿಸಲಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಹಿಂದಿನ ಹೇಳಿಕೆಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿ, ಗಂಗಾವತಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಉಲ್ಲೇಖ
2025ರಲ್ಲಿ ಕರ್ನಾಟಕದಾದ್ಯಂತ ನಡೆದ ಬಸವ ಸಂಸ್ಕೃತಿ ಅಭಿಯಾನವು ಬಸವತತ್ವಗಳ ಪ್ರಸಾರ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ವಿವಿಧ ಸಮಾಜಗಳ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಬಸವಭಕ್ತರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆದರೆ, ಬಳಿಕ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಬಸವ ಸಂಸ್ಕೃತಿ ಅಭಿಯಾನದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪವಿದೆ. ಇಂತಹ ಹೇಳಿಕೆಗಳು ಬಸವಭಕ್ತರು ಹಾಗೂ ಮಠಾಧೀಶರ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಮನವಿದಾರರು ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳ ಘಟನೆಗಳ ಪ್ರಸ್ತಾಪ
ಧಾರವಾಡ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸ್ವಾಮೀಜಿಯವರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿರುವುದು ಹಾಗೂ ನ್ಯಾಯಾಲಯದ ಆದೇಶಗಳ ಕುರಿತು ವರದಿಯಾಗಿರುವ ಬೆಳವಣಿಗೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಸವಕಲ್ಯಾಣದಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಸ್ವಾಮೀಜಿಯವರ ಭಾಷಣಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು ಎಂಬುದನ್ನೂ ಪ್ರಸ್ತಾಪಿಸಿರುವ ಮುಖಂಡರು, ಗದಗದಲ್ಲಿ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರ ಕುರಿತು ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂಬ ಆರೋಪವನ್ನೂ ಮುಂದಿಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಗಂಗಾವತಿಯಲ್ಲಿ ನಡೆಯಲಿರುವ ಸಮಾವೇಶದಿಂದ ಅನಗತ್ಯ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾವೈಕ್ಯತೆಗೆ ಹೆಸರಾದ ಗಂಗಾವತಿ
ಗಂಗಾವತಿ ಹಿಂದಿನಿಂದಲೂ ಧಾರ್ಮಿಕ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರಾದ ನಗರವಾಗಿದೆ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿರುವುದನ್ನು ಮನವಿಯಲ್ಲಿ ಸ್ಮರಿಸಲಾಗಿದೆ.
ಪಂಚಪೀಠಾಧಿಪತಿಗಳ ಕಾರ್ಯಕ್ರಮಗಳು, ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ, ಈದ್ ಮಿಲಾದ್ ಆಚರಣೆ, ಗದುಗಿನ ಲಿಂ. ಪುಟ್ಟರಾಜ ಗವಾಯಿಗಳ ತುಲಾಭಾರ ಕಾರ್ಯಕ್ರಮ, ಕನ್ನಡದಲ್ಲಿ ಕುರಾನ್ ಪ್ರವಚನ ಹಾಗೂ ಮಹರ್ಷಿ ವಾಲ್ಮೀಕಿಯವರ ರಾಮಾಯಣದ ಕಿಷ್ಕಿಂಧಾ ಕಾಂಡದ ಪ್ರವಚನಗಳು ನಗರದ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿವೆ ಎಂದು ತಿಳಿಸಿದ್ದಾರೆ.
ಇಂತಹ ಭಾವೈಕ್ಯತೆಯ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೀಗಾಗಿ ಸಮಾಜದಲ್ಲಿ ಭಿನ್ನಾಭಿಪ್ರಾಯ ಹಾಗೂ ಉದ್ವಿಗ್ನತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ನವೆಂಬರ್ 3ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಮನವಿದಾರರು ಆಗ್ರಹಿಸಿದ್ದಾರೆ.
ವಿವಿಧ ಸಂಘಟನೆಗಳ ಮುಖಂಡರ ಸಹಿ
ಮನವಿ ಪತ್ರಕ್ಕೆ ಬಸವಕೇಂದ್ರ ಗಂಗಾವತಿ ಅಧ್ಯಕ್ಷ ಕೆ. ಬಸವರಾಜ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ದಿಲೀಪಕುಮಾರ ವಂದಾಲ, ಗಣಾಚಾರದಳದ ರಾಜ್ಯಾಧ್ಯಕ್ಷ ವಿದೇಶ ಅಸರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ. ನಾಗರಾಜ, ರಾಷ್ಟ್ರೀಯ ವೀರಗಣಾಚಾರ ಸಂಘದ ಎ.ಕೆ. ಮಹೇಶಕುಮಾರ, ಜಿಲ್ಲಾ ಲಿಂಗಾಯತ ಹಡಪದ ಸಮಾಜದ ಅಧ್ಯಕ್ಷ ಎಚ್. ಹನುಮಂತಪ್ಪ ಸರಿಗಮ, ನಿರುಪಾದಿ ಎಚ್. ಹಡಪದ, ಬಸವ ನೀಲಾಂಬಿಕಾ ಮಹಿಳಾ ಸಂಘದ ಅಧ್ಯಕ್ಷೆ ರತ್ನಮ್ಮ ಅರೆಗಾರ, ಲಿಂಗಾಯತ ಮಹಾಸಭಾದ ಓ.ಎಂ. ಬಳ್ಳೋಳ್ಳಿ, ಶಾಂತಿ ತತ್ವ ಬಳಗದ ಜಿ. ಭಾರತೀಜು, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಅಧ್ಯಕ್ಷೆ ಚನ್ನಬಸಮ್ಮ ಕಂಪ್ಲಿ ಹಾಗೂ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸಿ. ಮಹಾಲಕ್ಷ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಹಿ ಹಾಕಿದ್ದಾರೆ.

error: Content is protected !!