ಗಂಗಾವತಿ; ಕಿಷ್ಕಿಂಧಾ ಅಂಜನಾದ್ರಿ ಹಾಗೂ ಆನೆಗೊಂದಿ ಭೇಟಿ ನೀಡಲಿರುವ ಯುನೆಸ್ಕೋ ಮೇಲ್ವಿಚಾರಣೆ ತಂಡಕ್ಕೆ ಅಗತ್ಯ ಮಾಹಿತಿ ನೀಡಲು ಅ.25ರಂದು ಕಿಷ್ಕಿಂಧಾ ಅಂಜನಾದ್ರಿ ಬಳಿ ಆಯೋಜನೆ ಮಾಡಿರುವ ಸಭೆಗೆ ಆನೆಗೊಂದಿ ರಾಜಮನೆತನದ ಲಲಿತರಾಣಿ ಶ್ರೀರಂಗದೇವರಾಯಲು, ರಾಮದೇವರಾಯಲು,ಹರಿಹರದೇವರಾಯಲು, ಕುಪ್ಪರಾಜು ಹಾಗೂ ಆನೆಗೊಂದಿ ಭಾಗದ ಪ್ರವಾಸೋದ್ಯಮ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದಿ ಕಿಷ್ಕಿಂಧಾ ಟ್ರಸ್ಟ್ ಮುಖ್ಯಸ್ಥೆ ಶಮಾ ಪವಾರ್ ಸೇರಿ ಗ್ರಾ.ಪಂ.ಗಳ ಮಾಜಿ ಅಧ್ಯಕ್ಷರುಗಳು,ಉಪಾಧ್ಯಕ್ಷರುಗಳು, ಹಿರಿಯರನ್ನು, ಆನೆಗೊಂದಿ, ಸಾಣಾಪೂರ ಭಾಗದ ಹೊಟೇಲ್ ಮಾಲೀಕರನ್ನು, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸದೇ ಗಂಗಾವತಿ, ಸೇರಿ ಬೇರೆ ಊರುಗಳ ವಾಸಿಗಳನ್ನು ಸಭೆ ಕೊಪ್ಪಳ ಜಿಲ್ಲಾಡಳಿತ ಆಹ್ವಾನಿರುವುದಕ್ಜೆ ರಾಜವಂಶಸ್ಥರಾದ ಹರಿಹರದೇವರಾಯಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳಿಂದ ಆನೆಗೊಂದಿ ಭಾಗದ ಸ್ಮಾರಕಗಳು ಮತ್ತು ದೇವಸ್ಥಾನಗಳು ಮತ್ತು ಪರಿಸರವನ್ನು ಕಾಪಾಡುವಲ್ಲಿ ರಾಜ ಮನೆತನದವರು ಮತ್ತು ಪ್ರಮುಖವಾಗಿ ಬೇರೆ ಬೇರೆ ಊರುಗಳ ಮುಖಂಡರು ರೈತರು, ಕೃಷಿಕಾರ್ಮಿಕರು ಮತ್ತು ಗೈಡ್ಗಳು ಅರ್ಚಕರು ಕಾರಣರಾಗಿದ್ದಾರೆ. ಇವರೆಲ್ಲರನ್ನು ಬಿಟ್ಟು ಜಿಲ್ಲಾಡಳಿತವು ಕೆಲವರಿಗೆ ಮಾತ್ರ ಆಹ್ವಾನ ನೀಡಿದೆ. ಜೊತೆಗೆ ಗಂಗಾವತಿಯ ಸಂಘ, ಸಂಸ್ಥೆ ಅವರಿಗೆ ಆಹ್ವಾನ ನೀಡುವ ಅವಶ್ಯಕತೆ ಇರಲಿಲ್ಲ. ಆನೆಗೊಂದಿ, ಸಾಣಾಪೂರ, ಮಲ್ಲಾಪುರ ಮತ್ತು ಸಂಗಾಪುರ ಈ ಭಾಗದವರನ್ನು ಆಹ್ವಾನಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಜೊತೆಗೆ ಈಗಿರುವ ಸ್ಮಾರಕಗಳು, ಪರಿಸರವನ್ನು ಸಂರಕ್ಷಣೆ ಮಾಡುವ ಸಲಹೆ ನೀಡಬೇಕಿತ್ತು. ಕೂಡಲೇ ಜಿಲ್ಲಾಡಳಿತದವರು ಪುನಃ ಮತ್ತೊಂದು ಬಾರಿ ಸ್ಥಳೀಯರನ್ನು ಸಭೆಗೆ ಕರೆಯುವಂತೆ ಹರಿಹರದೇವರಾಯಲು ಒತ್ತಾಯಿಸಿದ್ದಾರೆ.
*ತಪ್ಪೇ ಮಾಡದ ನನಗೆ ಬೇಸರವೂ ಇಲ್ಲ, ಭಯವೂ ಇಲ್ಲ. ನ್ಯಾಯಯುತ ತನಿಖೆ ನಡೆಯಲಿ ಎಂದಷ್ಟೇ ಒತ್ತಾಯಿಸುತ್ತೇನೆ
*ನನ್ನ ಬಳಿ ಅಧಿಕಾರ ಇಲ್ಲದಾಗ ಷಡ್ಯಂತ್ರ ಮಾಡಿದ್ದಾರೆ. ಅವರ ಉದ್ದೇಶ ಸಫಲವಾಗಲ್ಲ – ಸಿದ್ದರಾಮಯ್ಯ.
ಕಿಷ್ಕಿಂಧವಾಣಿ ಸುದ್ದಿ
ಮೈಸೂರು:
ಮೈಸೂರು ದಸರಾ ಉಸ್ತುವಾರಿಯನ್ನು ಹಲವು ಮಂದಿ ಸಚಿವರಿಗೆ ಹಂಚಿಕೆ ಮಾಡಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾ ಆಚರಣೆಗಾಗಿ ಪ್ರತಿ ನಿತ್ಯವೂ 3 ಮಂದಿ ಸಚಿವರಿಗೆ ಉಸ್ತುವಾರಿ ವಹಿಸಲಾಗಿತ್ತು, ಆದರೆ ಈ ಸಚಿವರೇ ಸರಿಯಾಗಿ ಬಂದಿರಲಿಲ್ಲ. ನನ್ನ ಪ್ರಕಾರ ಈ ರೀತಿ ಜವಾಬ್ದಾರಿ ಹಂಚಿಕೆ ಮಾಡುವ ಅಗತ್ಯವಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿ ಮಾಡಿದ್ದರು. ಈಗ ಸರ್ಕಾರವು ಬೇರೆ, ಮುಖ್ಯಮಂತ್ರಿಗಳು ಬೇರೆ ಎಂದು ಮಾಜಿ ಸಿಎಂ ಹಾಗೂ ಸಿಡ್ಲೂಸಿ ಸದಸ್ಯ ಸಿದ್ದರಾಮಯ್ಯ ತಿಳಿಸಿದರು.
ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ವಿರುದ್ಧ ನಡೆದ ನಕಲಿ ಸ್ಟಿಂಗ್ ಆಪರೇಷನ್ ವೀಡಿಯೋಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಸುಳ್ಳು ಕೇಸ್. ನನ್ನನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಮಾಡಿದ್ದ ಪ್ರಕರಣವಿದು. ಆದ್ದರಿಂದ ಸತ್ಯ ಹೊರಗೆ ಬರಲಿ ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು ಜೊತೆಗೆ ಇದರ ಹಿಂದೆ ಯಾರಿದ್ದಾರೆ ಎಂದು ಸಹ ಗೊತ್ತಾಬೇಕು. ಇದೊಂದು ಸುಳ್ಳು ಸೃಷ್ಟಿ ಎಂಬುದು ಗೊತ್ತಿರುವುದಕ್ಕೆ ನಾನು ದೂರು ನೀಡಿದ್ದೇನೆ ಹಾಗೂ ಈ ಸುಳ್ಳು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದೇನೆ. ನಾನು 8 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದೆ, ಆಗ ನನ್ನ ಮೇಲೆ ಬ್ಲಾಕ್ ಮೇಲ್ ಮಾಡುವ ಯಾವುದೇ ಘಟನೆಗಳು ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರವಿಲ್ಲ.
ದಕ್ಷಿಣ ಕನ್ನಡದ ಕೃಪಾ ಆಳ್ವಾ ಎನ್ನುವ ಮಹಿಳೆ ಹಾಗೂ ರಾಕೇಶ್ ಶೆಟ್ಟಿ ಈ ಇಬ್ಬರೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ತಾವೇ ಮಾಡಿದ್ದು ಎಂದು ರಾಕೇಶ್ ಶೆಟ್ಟಿ ಸಹ ಒಪ್ಪಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ತಾವು ಸಿದ್ದರಾಮಯ್ಯ ಅವರ ಪರ ನಿಲ್ಲುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ಜಾರಿಯಲ್ಲಿದೆ. ಈ ವಿಚಾರದಲ್ಲಿ ಯಾರೂ ನನ್ನ ಪರ ನಿಲ್ಲಬೇಕಾದ ಅಗತ್ಯವಿಲ್ಲ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು, ಇಷ್ಟು ಮಾತ್ರ ಆಗಬೇಕಿರುವುದು. ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಜನ ಅದನ್ನು ಒಪ್ಪುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ತನಿಖೆಯ ಬಗ್ಗೆ ನಿಮಗೆ ವಿಶ್ವಾಸವಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ತನಿಖೆಯ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನ್ಯಾಯಯುತವಾಗಿ ನಡೆಯಬೇಕು ಎನ್ನುವುದು ನನ್ನ ಒತ್ತಾಯವೆಂದು ತಿಳಿಸಿದರು. ಈ ಪ್ರಕರಣದ ತನಿಖೆಗೆ ಎಸ್ ಐ ಟಿ ರಚಿಸುವ ಅಗತ್ಯವೇನೂ ಇಲ್ಲ. ಈಗ ನಡೆಯುತ್ತಿರುವ ತನಿಖೆಯನ್ನೇ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಈ ಸ್ಟಿಂಗ್ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಯಾರಿದ್ದಾರೆ, ನಮ್ಮ ಪಕ್ಷದವರು ಇದ್ದಾರಾ? ಬೇರೆ ಪಕ್ಷದವರು ಇದ್ದಾರ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕು ಎಂದು ಅವರು ತಿಳಿಸಿದರು.
ಈ ವಿಚಾರ ಯಾವಾಗ ನಿಮ್ಮ ಗಮನಕ್ಕೆ ಬಂದಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಗಮನಕ್ಕೆ ಬಂದಿದ್ದು ಸೆಪ್ಟಂಬರ್ 26ರಂದು. ನಾನು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದಮೇಲೆ ನನಗೆ ಬೇಸರವಾಗುವ ಪ್ರಶ್ನೆಯಿಲ್ಲ. ತೇಜೋವಧೆ ಮಾಡಲು ಯಾರೇ ಹೊರಟರೂ ಸತ್ಯ ಏನೆಂದು ನನಗೆ ಗೊತ್ತಿರುತ್ತದೆ. ನಾನು ಬೇಜಾರಾಗುವ ಅಥವಾ ಹೆದರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈ ಪ್ರಕರಣವಂತೂ ನೂರಕ್ಕೆ ನೂರು ಸೃಷ್ಟಿ ಮಾಡಿರುವುದು. ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದುದ್ದು. ಅಂದಿನಿಂದ ಇಂದಿನ ವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ಆಗಲೂ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ ಎಂಬುದಂತು ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.