ಪಂಡಿತ ವೆಂಕಟೇಶ್ ಕುಮಾರ್ ಮನವಿಗೆ ಸ್ಪಂದನೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದ ಕಲ್ಲಯ್ಯ ಅಜ್ಜನವರು
ಕಿಷ್ಕಿಂಧವಾಣಿ ಸುದ್ದಿ
| ಗಂಗಾವತಿ:
ಅನಾಥರು ಹಾಗೂ ಅಂದರ ಬದುಕಿಗೆ ಆಶ್ರಯ ಮತ್ತು ಬೆಳಕಾಗಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಪೂಜ್ಯ ಕಲ್ಲಯ್ಯ ಅಜ್ಜನವರು ಗುರುವಾರ ಗಂಗಾವತಿಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದರು.
ಕೆಲವು ತಿಂಗಳುಗಳ ಹಿಂದೆ ಕಲ್ಲಯ್ಯ ಅಜ್ಜನವರ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರಿಂದ ತೀವ್ರ ಬೇಸರಗೊಂಡಿದ್ದ ಶ್ರೀಗಳು, ಗಂಗಾವತಿಯಲ್ಲಿರುವ ತಮ್ಮ ಶಾಖಾ ಆಶ್ರಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೌನ ವ್ರತ ಕೈಗೊಂಡು ವಾಸ್ತವ್ಯ ಹೂಡಿದ್ದರು.
ಕಲ್ಲಯ್ಯ ಅಜ್ಜನವರು ಪುನಃ ಗದುಗಿನ ಆಶ್ರಮಕ್ಕೆ ಮರಳಬೇಕು ಎಂದು ಭಕ್ತರು ಹಾಗೂ ಶಿಷ್ಯರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಶ್ರೀಗಳು ಗದುಗಿಗೆ ತೆರಳಲು ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು, ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್, ವೀರೇಶ್ ಕಿತ್ತೂರು, ಕಲ್ಲಿನಾಥ ಶಾಸ್ತ್ರಿ ಸೇರಿದಂತೆ ಆಶ್ರಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಗಂಗಾವತಿಗೆ ಆಗಮಿಸಿ ಶ್ರೀಗಳನ್ನು ಮನವೊಲಿಸಿದರು.
ಭಕ್ತರ ಪ್ರೀತಿ–ವಿಶ್ವಾಸ ಹಾಗೂ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು ಮತ್ತು ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಕಲ್ಲಯ್ಯ ಅಜ್ಜನವರು, ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಲು ಒಪ್ಪಿಗೆ ಸೂಚಿಸಿದರು.
ಅದರಂತೆ ಗುರುವಾರ ಆಶ್ರಮದ ಹಿರಿಯರು ಹಾಗೂ ಭಕ್ತರು ಗೌರವಪೂರ್ವಕವಾಗಿ ಕಲ್ಲಯ್ಯ ಅಜ್ಜನವರನ್ನು ಗಂಗಾವತಿಯಿಂದ ಬೀಳ್ಕೊಟ್ಟು ಗದುಗಿಗೆ ಕರೆದೊಯ್ದರು. ಶ್ರೀಗಳು ಮರಳುತ್ತಿರುವ ಸುದ್ದಿ ತಿಳಿದು ಭಕ್ತರಲ್ಲಿ ಸಂತಸ ಮನೆಮಾಡಿತು.
ಈ ಸಂದರ್ಭದಲ್ಲಿ ಗಂಗಾವತಿ ನಗರದ ಹಿರಿಯ ಶಿಷ್ಯರಾದ ಕೆ.ಎಫ್. ಮುದ್ದಾಬಳ್ಳಿ, ವೆಂಕಟೇಶ್ ದಾಸನಾಳ್, ಮಲ್ಲಿಕಾರ್ಜುನ ಗೌಡ ಉಡಮಕಲ್ ಸೇರಿದಂತೆ ನೂರಾರು ಶಿಷ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಕಲ್ಲಯ್ಯ ಅಜ್ಜನವರಿಗೆ ಹೃದಯಪೂರ್ವಕವಾಗಿ ಬೀಳ್ಕೊಟ್ಟರು.
ಕಲ್ಲಯ್ಯ ಅಜ್ಜನವರ ಮರಳುವಿಕೆಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಭಕ್ತ ವಲಯದಲ್ಲಿ ಹೊಸ ಚೈತನ್ಯ ಮೂಡಿದ್ದು, ಶ್ರೀಗಳ ಸೇವೆ ಮತ್ತು ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.