ಅನಾಥರು ಹಾಗೂ ಅಂದರ ಬದುಕಿಗೆ ಆಶ್ರಯ ಮತ್ತು ಬೆಳಕಾಗಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಪೂಜ್ಯ ಕಲ್ಲಯ್ಯ ಅಜ್ಜನವರು ಗುರುವಾರ ಗಂಗಾವತಿಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿದರು.
ಕೆಲವು ತಿಂಗಳುಗಳ ಹಿಂದೆ ಕಲ್ಲಯ್ಯ ಅಜ್ಜನವರ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರಿಂದ ತೀವ್ರ ಬೇಸರಗೊಂಡಿದ್ದ ಶ್ರೀಗಳು, ಗಂಗಾವತಿಯಲ್ಲಿರುವ ತಮ್ಮ ಶಾಖಾ ಆಶ್ರಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೌನ ವ್ರತ ಕೈಗೊಂಡು ವಾಸ್ತವ್ಯ ಹೂಡಿದ್ದರು.
ಕಲ್ಲಯ್ಯ ಅಜ್ಜನವರು ಪುನಃ ಗದುಗಿನ ಆಶ್ರಮಕ್ಕೆ ಮರಳಬೇಕು ಎಂದು ಭಕ್ತರು ಹಾಗೂ ಶಿಷ್ಯರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಶ್ರೀಗಳು ಗದುಗಿಗೆ ತೆರಳಲು ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು, ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್, ವೀರೇಶ್ ಕಿತ್ತೂರು, ಕಲ್ಲಿನಾಥ ಶಾಸ್ತ್ರಿ ಸೇರಿದಂತೆ ಆಶ್ರಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಗಂಗಾವತಿಗೆ ಆಗಮಿಸಿ ಶ್ರೀಗಳನ್ನು ಮನವೊಲಿಸಿದರು.
ಭಕ್ತರ ಪ್ರೀತಿ–ವಿಶ್ವಾಸ ಹಾಗೂ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು ಮತ್ತು ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಕಲ್ಲಯ್ಯ ಅಜ್ಜನವರು, ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಲು ಒಪ್ಪಿಗೆ ಸೂಚಿಸಿದರು.
ಅದರಂತೆ ಗುರುವಾರ ಆಶ್ರಮದ ಹಿರಿಯರು ಹಾಗೂ ಭಕ್ತರು ಗೌರವಪೂರ್ವಕವಾಗಿ ಕಲ್ಲಯ್ಯ ಅಜ್ಜನವರನ್ನು ಗಂಗಾವತಿಯಿಂದ ಬೀಳ್ಕೊಟ್ಟು ಗದುಗಿಗೆ ಕರೆದೊಯ್ದರು. ಶ್ರೀಗಳು ಮರಳುತ್ತಿರುವ ಸುದ್ದಿ ತಿಳಿದು ಭಕ್ತರಲ್ಲಿ ಸಂತಸ ಮನೆಮಾಡಿತು.
ಈ ಸಂದರ್ಭದಲ್ಲಿ ಗಂಗಾವತಿ ನಗರದ ಹಿರಿಯ ಶಿಷ್ಯರಾದ ಕೆ.ಎಫ್. ಮುದ್ದಾಬಳ್ಳಿ, ವೆಂಕಟೇಶ್ ದಾಸನಾಳ್, ಮಲ್ಲಿಕಾರ್ಜುನ ಗೌಡ ಉಡಮಕಲ್ ಸೇರಿದಂತೆ ನೂರಾರು ಶಿಷ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಕಲ್ಲಯ್ಯ ಅಜ್ಜನವರಿಗೆ ಹೃದಯಪೂರ್ವಕವಾಗಿ ಬೀಳ್ಕೊಟ್ಟರು.
ಕಲ್ಲಯ್ಯ ಅಜ್ಜನವರ ಮರಳುವಿಕೆಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಭಕ್ತ ವಲಯದಲ್ಲಿ ಹೊಸ ಚೈತನ್ಯ ಮೂಡಿದ್ದು, ಶ್ರೀಗಳ ಸೇವೆ ಮತ್ತು ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ಗಂಗಾವತಿ: ತಾಲೂಕಿನ ಸಾಣಾಪೂರ ಗ್ರಾ.ಪಂ. ತಿರುಮಲಾಪೂರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್ಸೆಟ್ನ ಕೇಬಲ್ನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಪಂಪ್ಸೆಟ್ ಕೇಬಲ್ ಕಳ್ಳತನವಾಗಿರುವ ವಿಷಯವನ್ನು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಮೊಬೈಲ್ ಕರೆ ಮೂಲಕ ಮಾಹಿತಿ ನೀಡಲಾಗಿದ್ದರೂ, ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ನೀರು ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೇಬಲ್ನ್ನು ದುರಸ್ತಿ ಅಥವಾ ಬದಲಾಯಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯನಗರ ಕಾಲದ ಪುರಾತನ ಲಕ್ಷ್ಮೀ ಗುಡಿ ಕಳ್ಳತನ ಪ್ರಕರಣಕ್ಕೂ ಕ್ರಮವಿಲ್ಲ?
ಇದೇ ತಿರುಮಲಾಪೂರ ಗ್ರಾಮದಲ್ಲಿ ಕಳೆದೆರಡು ತಿಂಗಳ ಹಿಂದೆ ವಿಜಯನಗರ ಕಾಲದ ಪುರಾತನ ಲಕ್ಷ್ಮೀ ಗುಡಿ ಕಟ್ಟಡವನ್ನು ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿತ್ತು. ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಪುರಾತನ ದೇವಾಲಯದ ಕಳ್ಳತನ ಪ್ರಕರಣದ ಬೆನ್ನಲ್ಲೇ ಇದೀಗ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪಂಪ್ಸೆಟ್ನ ಕೇಬಲ್ ಕೂಡ ಕಳುವಾಗಿರುವುದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸತತವಾಗಿ ಕಳ್ಳತನದ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕೆ ಅಡ್ಡಿಯಾಗಿರುವ ಕೇಬಲ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕೇಬಲ್ ಅಳವಡಿಸಿ ನೀರು ಪೂರೈಕೆ ಪುನರಾರಂಭಿಸಬೇಕು. ಜೊತೆಗೆ ಹಿಂದಿನ ಲಕ್ಷ್ಮೀ ಗುಡಿ ಎರಡು ಕಳ್ಳತನ ಪ್ರಕರಣ ಹಾಗೂ ಪ್ರಸ್ತುತ ಪಂಪ್ಸೆಟ್ ಕೇಬಲ್ ಕಳ್ಳತನದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.