Breaking News
ತುಂಗಭದ್ರಾ ನದಿಯಲ್ಲಿ ಅಕ್ರಮ ತೆಪ್ಪ ಸಂಚಾರ! ಸುರಕ್ಷತೆ ಇಲ್ಲದೆ ಮಕ್ಕಳ ಸಾಗಾಟ; ಗಂಗಾವತಿಯಲ್ಲಿ ಕ್ರಮ, ಹೊಸಪೇಟೆಯಲ್ಲಿ ನಿರ್ಲಕ್ಷ್ಯ ಆರೋಪ ವೆಂಕಟಾಪುರ–ಹಂಪಿ ಭಾಗದಲ್ಲೂ ಅಕ್ರಮ ತೆಪ್ಪಗಳಿಗೆ ಕಡಿವಾಣ ಹಾಕಲು ಆಗ್ರಹ

 

 

 

 

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಹೊಸಪೇಟೆ/ಗಂಗಾವತಿ: ತುಂಗಭದ್ರಾ ನದಿಯಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದೆ ಅಕ್ರಮವಾಗಿ ತೆಪ್ಪಗಳನ್ನು ನಡೆಸಲಾಗುತ್ತಿದ್ದು, ಮಕ್ಕಳನ್ನು,ಪ್ರವಾಸಿಗರನ್ನು ಅಪಾಯಕಾರಿ ರೀತಿಯಲ್ಲಿ ನದಿಯಲ್ಲಿ ಸಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹೊಸಪೇಟೆ ತಾಲೂಕಿನ ವೆಂಕಟಾಪುರ ಹಾಗೂ ಹಂಪಿ ಭಾಗದಲ್ಲಿ ತೆಪ್ಪಗಳ ಮೂಲಕ ಜನರನ್ನು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳಿಲ್ಲದೆ ಮಕ್ಕಳನ್ನೂ ತೆಪ್ಪದಲ್ಲಿ ಕರೆದೊಯ್ಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನದಿಯಲ್ಲಿ ನೀರಿನ ಹರಿವು ಹಾಗೂ ಆಳ ಹೆಚ್ಚಿರುವ ಸಂದರ್ಭದಲ್ಲಿ ತೆಪ್ಪದ ಸಮತೋಲನ ತಪ್ಪಿದರೆ ಅಥವಾ ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸಿದರೆ ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಜನರ ಸಾಗಾಟ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಗಂಗಾವತಿಯಲ್ಲಿ ಈಗಾಗಲೇ ಕ್ರಮ ಇದೇ ತುಂಗಭದ್ರಾ ನದಿಯ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಆಡಳಿತವು ಅಕ್ರಮ ತೆಪ್ಪ ಸಂಚಾರದ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ. ಅಕ್ರಮವಾಗಿ ತೆಪ್ಪ ನಡೆಸುವವರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಗಂಗಾವತಿ ಭಾಗದಲ್ಲಿ ಅಕ್ರಮ ತೆಪ್ಪಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವಾಗ, ತುಂಗಭದ್ರಾ ನದಿಯ ಇನ್ನೊಂದು ಭಾಗವಾದ ಹೊಸಪೇಟೆ ತಾಲೂಕಿನ ವೆಂಕಟಾಪುರ–ಹಂಪಿ ಪ್ರದೇಶದಲ್ಲಿ ಇದೇ ರೀತಿಯ ತೆಪ್ಪ ಸಂಚಾರ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿರುವುದು ಪ್ರಶ್ನೆ ಮೂಡಿಸಿದೆ.

 

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ:

ಅಕ್ರಮ ತೆಪ್ಪ ಸಂಚಾರದ ಬಗ್ಗೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಪ್ರವಾಸಿಗರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಂಪಿ ವಿಶ್ವಪಾರಂಪರಿಕ ಪ್ರವಾಸಿ ತಾಣವಾಗಿರುವುದರಿಂದ ಪ್ರತಿನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆಯಿಲ್ಲದೆ ತೆಪ್ಪಗಳಲ್ಲಿ ಜನರನ್ನು ಸಾಗಿಸುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಸಾರ್ವಜನಿಕರು ಹೇಳಿದ್ದಾರೆ.

ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲಿ

ನದಿಯಲ್ಲಿ ಜನರ ಸಾಗಾಟಕ್ಕೆ ಅನುಮತಿ, ತೆಪ್ಪದ ಸುರಕ್ಷತಾ ಮಾನದಂಡಗಳು, ಪ್ರಯಾಣಿಕರ ಸಂಖ್ಯೆಯ ಮಿತಿ, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ನಿಯಮಬಾಹಿರವಾಗಿ ತೆಪ್ಪ ನಡೆಸುತ್ತಿರುವುದು ಕಂಡುಬಂದರೆ ಅಂತಹ ತೆಪ್ಪಗಳನ್ನು ತಕ್ಷಣ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈಗಾಗಲೇ ಗಂಗಾವತಿ ತಾಲೂಕು ಆಡಳಿತ ಅಕ್ರಮ ತೆಪ್ಪಗಳ ವಿರುದ್ಧ ಕ್ರಮ ಕೈಗೊಂಡಿರುವ ಮಾದರಿಯಲ್ಲಿ, ಹೊಸಪೇಟೆ ತಾಲೂಕು ಆಡಳಿತ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಕೂಡ ವೆಂಕಟಾಪುರ–ಹಂಪಿ ಭಾಗದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿ ಅಕ್ರಮ ತೆಪ್ಪ ಸಂಚಾರಕ್ಕೆ ಕಡಿವಾಣ ಹಾಕಬೇಕು.

ಅವಘಡ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮವಾಗಿ ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳ ಹಾಗೂ ಪ್ರವಾಸಿಗರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ.

error: Content is protected !!