*ಲಿಂಗದಹಳ್ಳಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎದುರು ರೈತರ ಧರಣಿ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ರೈತರ ಬೆಳೆಗಳು ಒಣಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಬೆಣಕಲ್,ಹೇಮಗುಡ್ಡ,ಮುಕ್ಕುಂಪಿ ವೆಂಕಟಗಿರಿ ಹೋಬಳಿಯ ವಿವಿಧ ಗ್ರಾಮಗಳ ನೂರಾರು ರೈತರು ಮಂಗಳವಾರ ಲಿಂಗದಹಳ್ಳಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ
ಪ್ರತಿಭಟನೆ ನಡೆಸಿದರು.
ವೆಂಕಟಗಿರಿ ಹೋಬಳಿಯ ಚಿಕ್ಕಬೆಣಕಲ್, ಹಿರೇಬೆಣಕಲ್, ಹೇಮಗುಡ್ಡ, ಲಿಂಗದಹಳ್ಳಿ, ಮುಕ್ಕುಂಪಿ, ಎಚ್.ಜಿ. ರಾಮುಲುನಗರ ಹಾಗೂ ಜಬ್ಬಲಗುಡ್ಡ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೃಷಿ ಪಂಪ್ಸೆಟ್ಗಳಿಗೆ ಕನಿಷ್ಠ ಏಳು ಗಂಟೆಗಳ ಕಾಲ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ಅವಲಂಬಿತ ಬೆಳೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ದಿನಗಳಿಂದ ಸಮರ್ಪಕ ವಿದ್ಯುತ್ ದೊರೆಯದ ಕಾರಣ ಜಮೀನುಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ವಿದ್ಯುತ್ ಕೊರತೆಯಿಂದ ಬೆಳೆ ಹಾನಿಯಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು
ಜೆಸ್ಕಾಂನ ಮುಖ್ಯ ಎಂಜಿನಿಯರ್ (C.E.) ಹಾಗೂ ಅಧೀಕ್ಷಕ ಎಂಜಿನಿಯರ್ (S.E.) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರೈತರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿದರು.
ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಂತೆ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪರಣ್ಣ ಮುನವಳ್ಳಿ ಅವರು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತರ ಸಮಸ್ಯೆ ಗಂಭೀರವಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಬೆಳೆಗಳನ್ನು ರಕ್ಷಿಸುವುದು ಅಧಿಕಾರಿಗಳು ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ನಾಳೆಯೊಳಗೆ ಸಮಸ್ಯೆ ಪರಿಹರಿಸುವ ಭರವಸೆ
ರೈತರ ಆಕ್ರೋಶ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಜೆಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಒಂದು ದಿನದ ಕಾಲಾವಕಾಶ ಕೋರಿದರು. ನಾಳೆಯೊಳಗೆ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು. ಆದರೆ ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹನುಮಂತಪ್ಪ ಮುಕ್ಕುಂಪಿ, ಆನಂದಗೌಡ, ಸಿದ್ದನಗೌಡ, ಪ್ರಹ್ಲಾದ್ ರಾವ್ ಹೇರೂರು, ಮದ್ಯಾನೆಪ್ಪ ಜಲ್ಲಿ, ದುರಗಪ್ಪ ಜಲ್ಲಿ, ರುದ್ರಪ್ಪ ಹಿರೇಬೆಣಕಲ್, ಭೂಪತಿ ಸುಬೇದಾರ್, ಪಂಪಾಪತಿ ಬಳ್ಳಾರಿ, ಶರಣಪ್ಪ ಕಟಗಿ, ಮಹೇಂದ್ರ ಕುಮಾರ್, ಮಲ್ಲೇಶಪ್ಪ ದಾಸರ, ನಾಗರಾಜ್ ನಾಯಕ್, ಮಲ್ಲಿಕಾರ್ಜುನ ಗೌಡ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್, ಡಿವೈಎಸ್ಪಿ ನ್ಯಾಮನಗೌಡ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದರು.
*ಜಂಗ್ಲಿ ರಂಗಾಪೂರ ಸರ್ವೇ ನಂಬರ್ 03 ರಲ್ಲಿ ಒಂದು ಎಕರೆ ಭೂಮಿ.
*ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಖಾತೆ ಬದಲಿಸಲು ಲಂಚದ ಬೇಡಿಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪೋತಿ ಖಾತೆ ಹೆಸರು ಬದಲಾವಣೆ ಮಾಡಲು ಗ್ರಾಮ ಲೆಕ್ಕಾಧಿಕಾರಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಗ್ರಾಮಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಆನೆಗೊಂದಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯಾನ್ಹ ಜರುಗಿದೆ.
ತಾಲೂಕಿನ ಜಂಗ್ಲಿ ರಂಗಾಪುರ ಗ್ರಾಮದ ಸರ್ವೆ ನಂಬರ್ ಮೂರರಲ್ಲಿ ದಿವಂಗತ ಕುರುಬರ ಸತ್ಯಪ್ಪ ಇವರಿಗೆ ಸೇರಿದ ಒಂದು ಎಕರೆ ಭೂಮಿಯನ್ನು ಪೋತಿ ಖಾತೆ ಬದಲಾವಣೆ ಮಾಡುವಂತೆ ಮೃತ ಸತ್ಯಪ್ಪ ಇವರ ಕುಟುಂಬದವರು ಅರ್ಜಿ ಸಲ್ಲಿಸಿ ಬೇಡಿಕೆ ಇಟ್ಟಿದ್ದರು. ಈ ಮಧ್ಯೆ ವಿಲ್ ಪ್ರಕಾರ ನನ್ನ ಹೆಸರಿಗೆ ಭೂಮಿಯನ್ನು ಪೋತಿ ಖಾತೆ ಬದಲಿಸುವಂತೆ ರಾಮು ಎನ್ನುವ ವ್ಯಕ್ತಿ ತಹಸಿಲ್ದಾರರಿಗೆ ಅರ್ಜಿ ಸಲ್ಲಿಸಿದ್ದ, ಈ ಪ್ರಕರಣ ಧಾರವಾಡ ಹೈಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಯಥಾ ಸ್ಥಿತಿಯನ್ನು ಕಾಪಾಡುವಂತೆ ಗಂಗಾವತಿ ತಹಸೀಲ್ದಾರರು ಆದೇಶ ಹೊರಡಿಸಿದ್ದರು. ಆದರೆ ಮಲ್ಲಾಪುರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸೋಮನಾಥ ಎನ್ನುವವರು ರಾಮು ಎನ್ನುವರಿಂದ 40,000 ಹಣದ ಬೇಡಿಕೆ ಇಟ್ಟಿದ್ದ ಈ ಕುರಿತು ರಾಮು ಕೊಪ್ಪಳ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾನ ಆನೆಗೊಂದಿ ಹೊರ ವಲಯದಲ್ಲಿರುವ ಪೆಟ್ರೋಲ್ ಬಂಕ್ ಬಳಿ 40,000ಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು 40,000 ಹಣದ ಸಮೇತ ಗ್ರಾಮ ಲೆಕ್ಕಾಧಿಕಾರಿ ಸೋಮನಾಥ ಇವರನ್ನು ವಶಕ್ಕೆ ಪಡೆದು ಗಂಗಾವತಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.