Breaking News
ಎಸ್‌ಐಆರ್ ಅಕ್ರಮ ಖಂಡಿಸಿ ಗಂಗಾವತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ. ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ;  ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಆಗ್ರಹ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದು, ಕೋಟ್ಯಂತರ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿ, ಗಂಗಾವತಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಖಂಡಿಸಿದ ಪ್ರತಿಭಟನಾಕಾರರು, ಮತದಾರರ ಹಕ್ಕುಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಅಲ್ಲದೆ, ಫಾರಂ-6 ಮತ್ತು ಫಾರಂ-7 ವಿತರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ದೂರಿ, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅರಸಿನಕೇರಿ ಹನುಮಂತಪ್ಪ, ಎಂ. ಸರ್ವೇಶ ಮಾಂತಗೊಂಡ ಹಾಗೂ ಎಮ್ಮಿ ಫಕೀರಪ್ಪ, ನಂದಾಪುರ ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಡಿ. ಅಸೀಫ್, ಕೆ. ವೆಂಕಟೇಶ್, ಸುರೇಶ ಗೌರಪ್ಪ, ಶಾಮಣ್ಣ ಅಡ್ಡಿ, ರಾಜೋಳ್ಳಿ ಶ್ರೀನಿವಾಸ, ಮಹೇಶ ಸಾಗರ, ಮೇದಾರ ಗೋವಿಂದಪ್ಪ, ವಿಷ್ಣು ಜೋಶಿ ಆದಾಪೂರ,ನೀಲಕಂಠ, ಬರಗೂರು ಮರಿಸ್ವಾಮಿ, ಯುವರಾಜ ಕಡೆಬಾಗಿಲು, ಕೊಜ್ಜಿ ಹುಲುಗೇಶ, ಶೋಭಾಸಿಂಗ್, ರಾಚಪ್ಪ ಗುಂಜಳ್ಳಿ, ಅಜಗರ ಅಲಿ ಇದ್ಲಿ, ಬೆಟ್ಟಪ್ಪ ಬೆಣಕಲ್, ಅಶೋಕ ಜುಲೈನಗರ, ರಾಜು ಗಿಳಿಮೋತಿ, ಶಂಕರ ಐಲಿ, ಶೇಖರಗೌಡ ತಲೇಖಾನ್ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಗ್ರಾಮೀಣ ಮತ್ತು ನಗರ ಬ್ಲಾಕ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಅಳವಡಿಕೆಗೆ ಆಗ್ರಹ ಹಗರಿಬೊಮ್ಮನಹಳ್ಳಿ ಪುರಸಭೆ ಮುಖ್ಯಾಧಿಕಾರಿಗೆ ಕನ್ನಡಪರ ಹೋರಾಟಗಾರರಿಂದ ಮನವಿ

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ಖಾಸಗಿ ಶಾಲೆಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳಲ್ಲಿ ಸರ್ಕಾರದ ನಿಯಮದಂತೆ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಹಗರಿಬೊಮ್ಮನಹಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ ಭಾಷೆ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದೆ. ಕನ್ನಡ ನಾಡಿನಲ್ಲಿ ವ್ಯಾಪಾರ-ವಹಿವಾಟು ನಡೆಸುವ ಪ್ರತಿಯೊಂದು ಸಂಸ್ಥೆಯೂ ಕನ್ನಡ ಭಾಷೆಗೆ ಗೌರವ ನೀಡಬೇಕು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಿ, ಉಳಿದ ಶೇ.40ರಷ್ಟು ಇತರ ಭಾಷೆಗಳಿಗೆ ಅವಕಾಶ ಕಲ್ಪಿಸುವ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಕಾಣಿಸಬೇಕು. ಇದರಿಂದ ಸ್ಥಳೀಯ ಜನರಿಗೆ ಅನುಕೂಲವಾಗುವುದರ ಜೊತೆಗೆ ಕನ್ನಡ ಭಾಷೆಯ ಗೌರವವೂ ಹೆಚ್ಚಲಿದೆ ಎಂದು ತಿಳಿಸಿದರು.

ಸರ್ಕಾರದ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗದೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಪಟ್ಟಣದಾದ್ಯಂತ ಪರಿಶೀಲನೆ ನಡೆಸಿ, ನಿಯಮ ಪಾಲಿಸದ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವ್ಯಾಪಾರಸ್ಥರು ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ಕನ್ನಡವೇ ಮೊದಲು, ಕನ್ನಡವೇ ಪ್ರಧಾನ ಎಂಬ ಆಶಯದೊಂದಿಗೆ ಕನ್ನಡ ಭಾಷೆಯ ಅಸ್ತಿತ್ವ ಮತ್ತು ಗೌರವವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಕೋಟ್ರೇಶ್ ತಳವಾರ, ಸಮಾಜಸೇವಕಿ ಹಾಗೂ ಚಿತ್ರಕಲಾವಿದೆ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಉಮೇಶ್ ಪಾಳೆಗಾರ್, ಸೋಮಶೇಖರ್ ಒಬಳಾಪುರ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ದೇವೇಂದ್ರಪ್ಪ ಉಪಸ್ಥಿತರಿದ್ದರು.

error: Content is protected !!