Breaking News
ಪುಟ್ ಪಾತ್ ತೆರವು ಕಾರ್ಯಾಚರಣೆ ತಾರತಮ್ಯದಿಂದ ಕೂಡಿದೆ ಮ್ಯಾಗಳ ಮನಿ‌ ಆರೋಪ.

*ನಗರಸಭೆ ಹಾಗೂ ರಸ್ತೆ ಜಾಗ ಒತ್ತುವರಿ ಮಾಡಿದ ಪ್ರಬಲರ ಡಬ್ಬಾ ಅಂಗಡಿ,ಮಳಿಗೆ ಹಾಗೆ ಉಳಿಸಿದ ನಗರಸಭೆಯವರು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ನಗರದ ರಸ್ತೆಯ ಜಾಗ ಮತ್ತು ನಗರಸಭೆಯ ಜಾಗವನ್ನು ಒತ್ತುವರಿ ಮಾಡಿ ಡಬ್ಬಾ ಅಂಗಡಿಗಳು ಮತ್ತು ಕಟ್ಟಡಗಳನ್ನು ನಿರ್ಮಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೋರ್ಟ್ ನಲ್ಲಿ ಸು-ಮೋಟೋ ಕೇಸ್ ಹಿನ್ನೆಲೆಯಲ್ಲಿ ನಗರ ಸಭೆಯ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಕಳೆದ ಒಂದು ವಾರದಿಂದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಬರದಿಂದ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೀಯವಾದ ಮಾತುಗಳು ಕೇಳಿ ಬರುತ್ತಿವೆ. ಸಂಘ ಸಂಸ್ಥೆಯವರು ಹಾಗೂ ರಾಜಕಾರಣಿಗಳು ಒತ್ತೂವರೆ ತೆರವು ಕಾರ್ಯಚರಣೆಯನ್ನು ಸ್ವಾಗತಿಸಿದ್ದಾರೆ.

ಆದರೆ ನಗರಸಭೆಯವರು ಕೆಲವೆಡೆ ಕೆಲವರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ ಮತ್ತು ರಸ್ತೆ ಬದಿಯಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಬಹಿರಂಗವಾಗಿ ಕಳೆದ 30-40 ವರ್ಷಗಳಿಂದ ವ್ಯಾಪಾರ ಉದ್ಯೋಗವನ್ನು ಮಾಡುತ್ತಿರುವವರ ಮೇಲೆ ಯಾಕೋ ಕರುಣೆ ತೋರಿದಂತೆ ಕಾಣುತ್ತಿದೆ. ಪ್ರಮುಖವಾಗಿ ಪಂಪಾನಗರ ಸರ್ಕಲ್(ಮಳೆಮಲ್ಲೇಶ್ವರ ಸರ್ಕಲ್) ಬಸವಣ್ಣ ಸರ್ಕಲ್,ಜುಲೈನಗರ,ಕಿಲ್ಲಾ ಏರಿಯಾ,ಬಸ್ ನಿಲ್ದಾಣ ಸುತ್ತ ,ಆನೆಗೊಂದಿ ರಸ್ತೆ ,ನೀಲಕಂಠೇಶ್ವರ ಸರ್ಕಲ್‌ ನಿಂದ ಎಲ್ ಐಸಿ ಕಚೇರಿ ವರೆಗೆ

ಮತ್ತು ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂದಿನ ರಸ್ತೆಯಿಂದ ಆದಿಜಾಂಬವ ಸರ್ಕಲ್ ವರೆಗೆ ಹೋಗುವ ರಸ್ತೆಯಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದರೂ ತೆರವು ಕಾರ್ಯಾಚರಣೆ ಸರಿಯಾಗಿ ಆಗಿಲ್ಲ. ಪ್ರಭಾವಿಗಳಿಗೆ ಒಂದು ನ್ಯಾಯ ಜನಸಾಮಾನ್ಯರಿಗೆ ಮತ್ತೊಂದು ನ್ಯಾಯ ಮಾಡುತ್ತಿರುವುದು ಕಂಡುಬರುತ್ತಿದೆ.

ಈ ಮಧ್ಯೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಅವರು ನಗರಸಭೆ ಕಾರ್ಯಾಚರಣೆ ತಾರತಮ್ಯ ಖಂಡಿಸಿ ರಸ್ತೆ ಪುಟ್ ಪಾತ್ ಒತ್ತುವರಿ ಮಾತ್ರ ನಡೆದಿದ್ದು ಸರಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸುವಂತೆ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಅವರಿಗೆ ಒತ್ತಾಯಿಸಿದ್ದಾರೆ