ಅಪೂರ್ಣವಾಗಿರುವ ವಾಲ್ಮೀಕಿ ಭವನಗಳಿಗೆ ೨ಕೋಟಿ ರೂ.ಅನುದಾನ ಕ್ಕೆ ಶಾಸಕ ರೆಡ್ಡಿ ಆಗ್ರಹ.
*ವಿಧಾನಸಭೆಯ ಅಧಿವೇಶನದಲ್ಲಿ ಸರಕಾರಕ್ಕೆ ಪ್ರಶ್ನೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2021-22 ಸಾಲಿನಲ್ಲಿ ಅಂದಿನ ಬಿಜೆಪಿ ಸರಕಾರ 10 ವಾಲ್ಮೀಕಿ ಭವನ ನಿರ್ಮಿಸಲು ಶೇ. 25ರಷ್ಟು ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತ್ತು.ಅನುದಾನದ ಕೊರತೆಯಿಂದಾಗಿ ಇಂದಿನವರೆಗೂ ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣವಾಗಿದೆ. ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನವನ್ನು ಸಹ ಬಿಡುಗಡೆ ಮಾಡಿಲ್ಲ,ಕೂಡಲೇ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಿ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿ ಈಗಾಗಲೇ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳಿಗೆ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವ ಭರವಸೆ ನೀಡಿದರು. ವಾಲ್ಮೀಕಿ ನಿಗಮದ ಹಗರಣದ ಎಲ್ಲಾ ಹಣವನ್ನು ಸರ್ಕಾರ ವಸೂಲಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಅಧವೇಶನದಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅನುದಾನದಲ್ಲೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲಾ ಅಪೂರ್ಣ ವಾಲ್ಮೀಕಿ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕೂಡಲೇ ಹಣ ಬಿಡುಗಡೆ ಮಾಡುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ಗಮನ ಸೆಳೆದರು.

