Breaking News
ಹಗರಿಬೊಮ್ಮನಹಳ್ಳಿಯ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

*ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಸ್ಪಂದನೆ.
*ಶೀಘ್ರವಾಗಿ ಕಾಮಗಾರಿ ಆರಂಭ ಸಾಧ್ಯತೆ

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಬಳಿಯ ರೈಲ್ವೆ ಗೇಟ್ ನಂಬರ್ 37 ರಲ್ಲಿ ಮೇಲ್ಸೇತುವೆ ಹಾಗೂ ಪಟ್ಟಣದ ನೇತಾಜಿ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಹತ್ತೀರದ ರೈಲ್ವೆ ಗೇಟ್ ನಂಬರ್ 38ರ ಬಳಿ ಕೆಳ ಸೇತುವೆ(ಅಂಡರ್ ಪಾಸ್) ನಿರ್ಮಾಣದ ಕಾಮಗಾರಿಗೆ ಭಾರತೀಯ ರೈಲ್ವೆ ಇಲಾಖೆ ಟೆಂಡರ್ ಕರೆದಿದ್ದು ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಅವರ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ. ರೂ, 43.24 ಕೋಟಿ ವೆಚ್ಚದ ಮೇಲ್ಸೇತುವೆ, ಅಂಡರ್ ಪಾಸ್ ಕಾಮಗಾರಿಗಳ ಮಂಜೂರಾತಿ ಪಡೆದು ಟೆಂಡರ್ ಸಹ ಆಗಿದೆ.
ಕಳೆದ ನಾಲ್ಕೈದು ದಶಕಗಳಿಂದ ರಾಮನಗರ ಮತ್ತು ಈಶ್ವರಿ ವಿವಿ ಹತ್ತಿರ ಕೆಓಆರ್ ಕಾಲೋನಿ ಹತ್ತಿರ ರೈಲ್ವೆ ಬಂದಾಗೆಲ್ಲ ತಾಸು ಗಟ್ಟಲೆ ವಾಹನಗಳು,ಜನರು ನಿಲ್ಲಬೇಕಾಗಿತ್ತು. ಹಲವು ಅಪಘಾತಗಳು ಸಂಭವಿಸಿ ಹಲವು ಜನ ಹಾಗೂ ಜಾನುವಾರುಗಳು ಸಹ ಮೃತಪಟ್ಟ ಘಟನೆಗಳು ಜರುಗಿದ್ದವು. ಸಂಘ ಸಂಸ್ಥೆಗಳು ನೂರಾರು ಪ್ರತಿಭಟನೆ ನಡೆಸಿದರೂ ಮೇಲ್ಸೇತುವೆ ನಿರ್ಮಾಣ ಆಗಿರಲಿಲ್ಲ.
ಇದೀಗ ಜನರ ದಶಕಗಳ ಬೇಡಿಕೆಯನ್ನು ಸಂಸದ ಈ ತುಕಾರಾಂ ಈಡೇರಿಸಿದ್ದಾರೆ.
ಕೊಟ್ಟೂರು-ವ್ಯಾಸ್ ಕಾಲೋನಿ ಮಾರ್ಗದಲ್ಲಿ ಹಗರಿಬೊಮ್ಮನಹಳ್ಳಿ ಹೊರತು ಪಡಿಸಿ ಇತರೆ ನಿಲ್ದಾಣಗಳಲ್ಲಿ ಕ್ರಾಸಿಂಗ್ ಸೌಲಭ್ಯ ಇಲ್ಲದ ಕಾರಣಕ್ಕೆ ರೈಲು ಬಂದಗೊಮ್ಮೆ ಈ ಎರಡು ಗೇಟ್ ಗಳನ್ನು ಬಂದ್ ಮಾಡಿದಾಗ ಇಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನಿಂದ ಜನತೆ ಮತ್ತು ಸವಾರರು, ಚಾಲಕರು ರೋಸಿಹೋಗಿದ್ದರು.
ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎನ್ನುವುದು ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ಈ ತಾಲೂಕಿನ ಜನತೆ ಹಾಗು ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಮೇಲೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ದಶಕಗಳ ಬೇಡಿಕೆ ಆಗಿತ್ತು.
ಹಲವು ದಶಕಗಳಿಂದಲೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನೆನಗುದಿಗೆ ಬಿದ್ದಿದ್ದ ಈ ಎರಡು ಕಾಮಗಾರಿಗಳು ಪ್ರಸ್ತುತ ತ್ವರಿತಗತಿಯಲ್ಲಿ ಮೇಲೆದ್ದು ನಿಲ್ಲಲು ಸಾಧ್ಯವಾಗಿದೆ.