Breaking News
ತುಂಗಭದ್ರಾ ಅಣೆಕಟ್ಟಿನ 33 ಗೇಟ್‌ಗಳ ಯಶಸ್ವಿ ದುರಸ್ತಿ; ಮೇ 15ಕ್ಕೆ ಲೋಕಾರ್ಪಣೆ ಗುರಿ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕಿಷ್ಕಿಂಧವಾಣಿ ಸುದ್ದಿ

ಮುನಿರಾಬಾದ್: ತುಂಗಭದ್ರಾ ಅಣೆಕಟ್ಟಿನ 19ನೇ ಕ್ರೆಸ್ಟ್ ಗೇಟ್ 2024 ಆಗಸ್ಟ್ 10 ರಂದು ರಾತ್ರಿ ಅನಾಹುತದ ನಂತರ ತಾಂತ್ರಿಕ ತಂಡ ಕೈಗೊಳ್ಳಲಾದ ತುರ್ತು ದುರಸ್ತಿ ಕಾರ್ಯಗಳು ಈಗ ಅಂತಿಮ ಹಂತಕ್ಕೆ ತಲುಪಿವೆ. ಇಂದು ಅಣೆಕಟ್ಟಿನ ಕ್ರಸ್ಟಗೇಟ್ ಅಳವಡಿಕೆ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಮೇ 15ರೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕಾರ್ಯ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಹಿತಿ ನೀಡಿದರು.

ಅಣೆಕಟ್ಟಿನ ಒಟ್ಟು 33 ಗೇಟ್‌ಗಳ ಪೈಕಿ 22 ಗೇಟ್‌ಗಳಿಗೆ ಸ್ಲೈಸ್ ಪ್ಲೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ತಜ್ಞರ ವರದಿಯಂತೆ ಹಳೆಯ ಚೈನ್‌ಗಳು ಸದೃಢವಾಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಚೈನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಮೊದಲ ಸೆಟ್ ಹೊಸ ಚೈನ್‌ಗಳು ಮೇ 7 ರಂದು ಆಗಮಿಸಲಿದ್ದು, ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಮೇ 15 ರಂದು ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಾಖಲೆ ಸಮಯದಲ್ಲಿ 33 ಗೇಟ್‌ಗಳನ್ನು ದುರಸ್ತಿಗೊಳಿಸಿದ್ದು ಇಡೀ ದೇಶಕ್ಕೆ ಒಂದು ದೊಡ್ಡ ಸವಾಲು ಮತ್ತು ಮಾದರಿಯಾಗಿದೆ. ಕೇವಲ ಗೇಟ್‌ಗಳ ದುರಸ್ಥಿಗೆ ಸುಮಾರು 54 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದಲ್ಲದೆ, ಕಾಲುವೆಗಳ ದುರಸ್ತಿ ಮತ್ತು ಇತರೆ ಕೆಳಹಂತದ ಕಾಮಗಾರಿಗಳಿಗೆ ಒಟ್ಟು 315 ಕೋಟಿ ರೂಪಾಯಿ ವ್ಯಯಿಸಲಾಗಿದೆ. ತಜ್ಞರ ವರದಿಯಂತೆ ಈ ದುರಸ್ತಿ ಕಾರ್ಯದಿಂದಾಗಿ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳವರೆಗೆ ವೃದ್ಧಿಸಲಿದೆ ಎಂದು ತಿಳಿಸಿದರು.

ನವಲಿ ಸಮಾನಾಂತರ ಜಲಾಶಯ ಹಾಗೂ ಹೂಳು ತೆಗೆಯುವಿಕೆ

ನವಲಿ ಜಲಾಶಯದ ಯೋಜನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಹೂಳು ತುಂಬಿರುವ ಕಾರಣ ಅಣೆಕಟ್ಟಿನ ಸಾಮರ್ಥ್ಯ 105 ಟಿಎಂಸಿಯಿಂದ 100 ಟಿಎಂಸಿಗೆ ಇಳಿಕೆಯಾಗಿದೆ. ಆದ್ದರಿಂದ ಹೂಳು ತೆಗೆಯಲು ಚೀನಾ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಗ್ಲೋಬಲ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೂಳು ತೆಗೆಯುವಾಗ ರೈತರ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಜಾಗರೂಕತೆ ವಹಿಸಲಾಗುವುದು. ತುಂಗಭದ್ರಾ ಅಣೆಕಟ್ಟಿನ ಸುತ್ತಮುತ್ತಲ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿದರು. ಅಭಿವೃದ್ಧಿ ಮುಖ್ಯವಾದರೂ ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು 64:34 ಅನುಪಾತದಲ್ಲಿ ಬಂಡವಾಳ ಹೂಡುತ್ತಿದ್ದು, ಡ್ಯಾಂ ಮಂಡಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಈ ಇಡೀ ಕಾರ್ಯಾಚರಣೆಯು ದೇಶಕ್ಕೆ ಒಂದು ದೊಡ್ಡ ಸವಾಲು ಮತ್ತು ತಾಂತ್ರಿಕ ಮಾದರಿಯಾಗಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದ ಅವರು, ರಾಜಕೀಯ ಟೀಕೆಗಳಿಗೆ ಕಿವಿಗೊಡದೆ ರೈತರ ಹಿತರಕ್ಷಣೆ ಮತ್ತು ಜಲಾಶಯದ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಜಲಾಶಯದ 19ನೇ ಗೇಟ್ ಅನಾಹುತಕ್ಕೀಡಾದಾಗ ಸರ್ಕಾರವು ತಕ್ಷಣವೇ ಸ್ಪಂದಿಸಿತ್ತು. ಅಂದು ರಾತ್ರಿಯೇ ಅಧಿಕಾರಿಗಳು ಹಾಗೂ ಸಚಿವರು ಸ್ಥಳಕ್ಕೆ ಧಾವಿಸಿ ತುರ್ತು ಕ್ರಮಗಳನ್ನು ಕೈಗೊಂಡಿದ್ದರು. ಪ್ರಸ್ತುತ ಜಲಾಶಯದ ಎಲ್ಲಾ 33 ಗೇಟ್‌ಗಳ ಅಳವಡಿಕೆ ಕಾರ್ಯ ಮುಗಿದಿದ್ದು, ತಾಂತ್ರಿಕ ತಂಡದ ಸಲಹೆಯಂತೆ ಆಧುನೀಕರಣ ಪ್ರಕ್ರಿಯೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಜಲಾಶಯ ಕ್ರಸ್ಟ್ ಗೇಟ್ ಕಳಚಿದ್ದರಿಂದಾಗಿ ಮೂರು ಜಿಲ್ಲೆಯ ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿ ಗೇಟ್ ಅಳವಡಿಕೆ ಕಾರ್ಯಕ್ಕೆ ಸಹಕರಿಸಿದ್ದಾರೆ. ಆದ್ದರಿಂದ ಕಾಮಗಾರಿ ಪೂರ್ಣಗೊಂಡ ನಂತರ ರಾಯಚೂರು, ಬಳ್ಳಾರಿ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರನ್ನು ಆಹ್ವಾನಿಸಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮತ್ತು ಅಣೆಕಟ್ಟಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ. ಖಂಡ್ರೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬಳ್ಳಾರಿ ಸಂಸದರಾದ ಇ. ತುಕಾರಾಂ, ಶಾಸಕರುಗಳಾದ ಡಾ.ಎನ್.ಟಿ.ಶ್ರೀನಿವಾಸ, ಎಚ್.ಆರ್. ಗವಿಯಪ್ಪ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಕೊಪ್ಪಳ ಜಿ. ಪಂ.ಸಿಇಓ ವರ್ಣಿತ್ ನೇಗಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಆರ್.‌ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್.

ಅಧಿಕಾರಿಗಳಾದ ಟಿಬಿ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ ರೆಡ್ಡಿ, ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಸ್.ಇ ನಾರಾಯಣ ನಾಯ್ಕ,ಇಇ ನಾಗನಾಥ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಎಇಇ ಜಾನಕಾರ, ಶಾಖಾ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹದಗೆಟ್ಟ ಗಂಗಾವತಿ-ಆರಾಳ ರಾಜ್ಯ ಹೆದ್ದಾರಿ!

*ಕಳೆದ ಮೂರು ವರ್ಷಗಳಿಂದ ದುರಸ್ತಿಗೆ ಮನವಿ,ಅಧಿಕಾರಿಗಳ ನಿರ್ಲಕ್ಷ್ಯ

*ಶೀಘ್ರ ದುರಸ್ತಿಯಾಗದಿದ್ದರೆ ರಸ್ತೆ ತಡೆದು ಪ್ರತಿಭಟನೆ.

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ತಾಲೂಕಿನ ಗಂಗಾವತಿ-ಆರಾಳ ಗ್ರಾಮದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಕಳೆದ ಮೂರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹದಗೆಟ್ಟಿದ್ದು ವಾಹನಗಳು,ಬೈಕ್ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾಗಿದೆ. ಆರಾಳ,ಮಲಕನಮರಡಿ, ಉಡುಮಕಲ್ ಸೇರಿ ಸುತ್ತಲಿನ ಈ ರಸ್ತೆಗಳಲ್ಲಿ ಓಡಾಡುವ ಗ್ರಾಮಗಳ ಜನರು ಅಧಿಕಾರಿಗಳು ಹಾಗೂ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ವಡ್ಡರಹಟ್ಟಿಯಿಂದ ಕನಕಗಿರಿ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು ಈಗಾಗಲೇ ವಿವಿಧ ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಆರಾಳ ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾರ್ವಜನಿಕರ ವಾಹನಗಳ ಜತೆ ಆರಾಳ,ಮಲಕನಮರಡಿ ಸೇರಿ ಸುತ್ತಲಿನ ಗ್ರಾಮಗಳ ರೈತರು ಬೆಳೆಯುವ ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಇದೇ ಮಾರ್ಗದ ಮೂಲಕ ಗಂಗಾವತಿ ತಂದು ಮಾರಾಟ ಮಾಡಬೇಕಿದೆ.ಜತೆಗೆ ಶಾಲಾ,ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳಬೇಕಿದೆ. ಆಸ್ಪತ್ರೆಗೆ ಹೋಗುವವರ ಗೋಳು ಕೇಳುವವರು ಇಲ್ಲವಾಗಿದೆ.

ತುಂಗಭದ್ರಾ ಎಡದಂಡೆಯ ಕಾಲುವೆ ಆರಾಳ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಅವೈಜ್ಞಾನಿಕವಾಗಿದ್ದು ಪುನರ್ ನಿರ್ಮಾಣದ ಜತೆಗೆ ವಡ್ಡರಹಟ್ಟಿ ಯಿಂದ ಕನಕಗಿರಿ ರಸ್ತೆಯ ವರೆಗಿನ ರಸ್ತೆಯನ್ನು ದುರಸ್ತಿ ಮಾಡಲು ಅನೇಕ ವರ್ಷಗಳಿಂದ ಮನವಿ ಮಾಡಿದರೂ ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು ರಸ್ತೆ ಕಾಮಗಾರಿ ಆರಂಭವಾಗದಿದ್ದಾರೆ ವಡ್ಡರಹಟ್ಟಿ ಕನಕಗಿರಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಆರಾಳ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆರಾಳ ಗ್ರಾಮದ ರೈತರಾದ ಹನುಮಂತಪ್ಪ ಡಂಬರ್,ಈಶಪ್ಪ ಕೋರಿ,ಬೆಟ್ಟಪ್ಪ ಇಳಿಗೇರ್,ಮಡಿವಾಳಪ್ಪ, ಶರಣಪ್ಪ,ರುದ್ರಗೌಡ,ಗವಿಸಿದ್ದಪ್ಪ,ಪಂಪಾಪತಿ,ವೆಂಕಟೇಶ ತಬಾಲಿ,ಫಕೀರಪ್ಪ ಹರಿಜನ,ವಿರೇಶಪ್ಪ ಡ್ಯಾಗಿ,ಉಮೇಶ,ಪಂಪಾಪತಿ ಎಚ್,ಹನುಮಂತಪ್ಪ ನಾಯಕ,ಬಾಲಪ್ಪ ಭಜಂತ್ರಿ,ದುರುಗೇಶ,ಹನುಮಂತಪ್ಪ ಉಪ್ಪಾರ,ಬಸವಣ್ಣ ಮ್ಯಾಗೇರಿ ಸೇರಿ ಅನೇಕರಿದ್ದರು.

 

***

ಗಂಗಾವತಿ ಆರ್ ಆರ್ ರಸ್ತೆ ದುರಸ್ತೆ ಕುರಿತಂತೆ ಈ ವರ್ಷದ ಯೋಜನೆಯಲ್ಲೇ ಸೇರಿಸಲಾಗಿದೆ ಲೋಕೋಪಯೋಗಿ ಇಲಾಖೆಯ 50-54 ಯೋಜನೆ ಇಡೀ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೈಗೊಳ್ಳಲಾಗಿದೆ ಶೀಘ್ರದಲ್ಲಿ ಸರ್ಕಾರದಿಂದ ಕಾಮಗಾರಿ ಮಾಡುವಂತೆ ಟೆಂಡರ್ ಸೇರಿದಂತೆ ಅಗತ್ಯ ಹಣಕಾಸು ನಿಗದಿಯಾಗಲಿದೆ.

-ವಿಶ್ವನಾಥ ಎಇಇ ಲೋಕೋಪಯೋಗಿ ಇಲಾಖೆ.

 

***

ಆರಾಳ ಗ್ರಾಮಸ್ಥರು ತಮ್ಮನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದು ವಡ್ಡರಹಟ್ಟಿಯಿಂದ ಆರಾಳ ಗ್ರಾಮದವರೆಗೂ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರಸ್ತೆ ಮತ್ತು ಎಡದಂಡೆ ಕಾಲುವೆಗೆ ಇರುವ ಬೃಹತ್ ಗಾತ್ರದ ಸೇತುವೆ ಮತ್ತು ಸಣ್ಣಪುಟ್ಟ ಸೇತುವೆಗಳ ನಿರ್ಮಾಣ ಮಾಡಲು 10 ಕೋಟಿ ರೂಪಾಯಿ ಡಿಪಿಆರ್ ತಯಾರಿಸಲಾಗಿದೆ. ಸರಕಾರದಿಂದ ಅನುದಾನ ಬಂದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.

-ಗಾಲಿ ಜನಾರ್ದನ ರೆಡ್ಡಿ ಶಾಸಕ