*ಗಂಗಾವತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗಿನ ವಾಕಿಂಗ್ ತಂಡದಿಂದ ಹಿರಿಯರಿಗೆ ಸನ್ಮಾನ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಹಿರಿಯರ ಅನುಭವ ಮತ್ತು ಜೀವನ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಪತ್ರಕರ್ತ ಕೆ. ನಿಂಗಜ್ಜ ಹೇಳಿದರು.
ಅವರು ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸೂರ್ಯೋದಯ ವಾಕಿಂಗ್ ತಂಡ ಹಾಗೂ ಬಿಜೆಪಿ ಮುಖಂಡ ಕಾಶಿನಾಥ ಇವರ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯರ ದಿನಾಚರಣೆ ನಿಮಿತ್ತ ವಾಕಿಂಗ್ ಬರುವ ಹಿರಿಯರಿಗೆ ಗುಲಾಬಿ ಹೂ ಗುಚ್ಛವನ್ನು ನೀಡಿ ಗೌರವಿಸಿ ಮಾತನಾಡಿದರು.
ಹಿರಿಯರ ದಿನದ ನಿಮಿತ್ತ
ಹಿರಿಯ ನಾಗರಿಕರ ಸೇವೆ, ಗೌರವ ಹಾಗೂ ಅವರ ಅನುಭವವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ನಗರದ ವಿವಿಧೆಡೆ ವಿಶ್ವ ಹಿರಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಎಲ್ಲೆಡೆ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಅವರ ಜೀವನಾನುಭವಗಳನ್ನು ಹಂಚಿಕೊಳ್ಳಲಾಗುತ್ತದೆ. ಹಿರಿಯರು ಕುಟುಂಬ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಜ್ಞಾನ, ಅನುಭವ ಮತ್ತು ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು.
ಹಿರಿಯ ನಾಗರಿಕರು ಕುಟುಂಬದ ಆಸ್ತಿಯಾಗಿದ್ದು, ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಯೋವೃದ್ಧರ ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರೀಕರಾದ ಕೆ.ಎನ್.ರಾಜು ಕಾಂಟ್ರಾಕ್ಟರ್,ಶೇಖ್ ಅಬ್ದುಲ್ ಜಿಲಾನ್,ಕೇಲೋಜಿ ತಿಮ್ಮಪ್ಪ ಶೇಷ್ಠಿ,ದರೋಜಿ ಶಾಂತಮ್ಮ ಹಾಗೂ ಕಾರ್ಯಕ್ರಮ ಆಯೋಜಕ ಕಾಶಿನಾಥ ಚಿತ್ರಗಾರ ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ್,ರಾಘವೇಂದ್ರ, ಛತ್ರಪ್ಪ ತಂಬೂರಿ,ರಾಮಣ್ಣ ಕುರಿ,ತಾಯಪ್ಪ ಮರ್ಚೇಡ್,ಸಿದ್ದುಗೌಳಿ ಸೇರಿದಂತೆ ಅನೇಕರಿದ್ದರು.
*ದನಗಾಯಿಗಳು ಕುರಿಗಾಹಿಗಳು ಹಾಗೂ ಸ್ಥಳೀಯರು ಮುನ್ನೆಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಮಲ್ಲಾಪುರ ಕೆರೆ ಸೀಮೆ ಪ್ರದೇಶದಲ್ಲಿ ಸೆ. 29ರಂದು ಆಕಳಕರುವಿನ ಮೇಲೆ ಕಾಡುಪ್ರಾಣಿಗಳು ದಾಳಿ ಮಾಡಿ ಕರುವಿನ ಸಾವಿಗೆ ಕಾರಣವಾಗಿದ್ದ ವಿಷಯದಲ್ಲಿ ಹುಲಿ ಅಥವಾ ಚಿರತೆ ಎನ್ನುವ ಗೊಂದಲಕ್ಕೆ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾ ಸ್ಪಷ್ಟನೆ ನೀಡಿದ್ದು ಚಿರತೆ ಕರುವಿನ ಮಾಂಸ ತಿನ್ನಲು ಸೆ.30 ರಂದು ರಾತ್ರಿ 8.25ಕ್ಕೆ ಆಗಮಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸೆ.29 ರಂದು ಆನೆಗೊಂದಿ ಗ್ರಾ.ಪಂ.ವ್ಯಾಪ್ತಿಯ ಬಸವನದುರ್ಗಾ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರು ಕೆರೆಯಲ್ಲಿ ಕೂಲಿಕೆಲಸ ಮಾಡುವಾಗ ಆಕಳು ಕರುವಿನ ಮೇಲೆ ದಾಳಿ ನಡೆಸಿ ಕೊಲ್ಲಿತ್ತು. ಸಾವನ್ನಪ್ಪಿದ ಆಕಳು ಕರುವಿನ ದೇಹದ ಹಿಂಭಾಗವನ್ನು ಗಾಯ ಮಾಡಿ ಕಾಡು ಪ್ರಾಣಿ ಮಾಂಸವನ್ನು ಕಿತ್ತು ತಿಂದಿತ್ತು.ಇದನ್ನು ಗಮನಿಸಿ ಕೂಲಿಕಾರರು ಅರಣ್ಯ ಇಲಾಖೆಯವರು ಗಮನಕ್ಕೆ ತಂದ ತಕ್ಷಣ ಅರಣ್ಯ ಇಲಾಖೆಯವರು ಸಿಸಿ ಕ್ಯಾಮರಾವನ್ನು ಆಕಳ ಕರು ಸಾವನ್ನಪ್ಪಿದ ಸ್ಥ ಸ್ಥಳದಲ್ಲಿ ಅಳವಡಿಸಿ ರಾತ್ರಿ ವೇಳೆ ಸತ್ತ ಕರುವಿನ ಹತ್ತಿರ ಯಾವ ಪ್ರಾಣಿಗಳು ಬರುತ್ತವೆ ಎನ್ನುವ ವಿಷಯವನ್ನು ಗಮನಿಸಿದ ಅರಣ್ಯ ಇಲಾಖೆಯವರು ಸ್ಪಷ್ಟ ನೀಡಿದ್ದು,ಮಲ್ಲಾಪುರ ಹತ್ತಿರ ಆಕಳ ಕರುವಿನ ಮೇಲೆ ದಾಳಿ ಮಾಡಿದ್ದು ಚಿರತೆಯಾಗಿದ್ದು ಹುಲಿಯಲ್ಲ.ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಮಾಹಿತಿ ನಿಜವಲ್ಲ ಎಂದು ಮಾಹಿತಿ ನೀಡಿದ್ದಾರೆ.