Breaking News
ಕಿಷ್ಕಿಂಧಾ ಏಳುಗುಡ್ಡದಲ್ಲಿ ಪತ್ತೆಯಾದ ಹುಲಿಗೆ ರಾಷ್ಟ್ರೀಯ ಗುರುತಿನ ಐಡಿ? NTCAಗೆ ಕೊಪ್ಪಳ ಅರಣ್ಯ ಇಲಾಖೆಯಿಂದ ಪೂರಕ ಮಾಹಿತಿ ರವಾನೆ; ವೈಜ್ಞಾನಿಕ ಪರಿಶೀಲನೆ ಬಳಿಕ ಯುಟಿಐಡಿ ಸಾಧ್ಯತೆ

 

ಕಿಷ್ಕಿಂಧವಾಣಿ ವಿಶೇಷ |

ಕೆ. ನಿಂಗಜ್ಜ

ಗಂಗಾವತಿ: ಕಿಷ್ಕಿಂಧಾ ಏಳುಗುಡ್ಡ ಪ್ರದೇಶದಲ್ಲಿ ಕಳೆದ ಐದು ತಿಂಗಳ ಹಿಂದೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಪತ್ತೆಯಾದ ಹುಲಿಗೆ ರಾಷ್ಟ್ರೀಯ ಮಟ್ಟದ ವಿಶಿಷ್ಟ ಗುರುತಿನ ಸಂಖ್ಯೆ (Unique Tiger ID–UTID) ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಕೊಪ್ಪಳ ಜಿಲ್ಲಾ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA)ಗೆ ಅಗತ್ಯ ಪೂರಕ ಮಾಹಿತಿಯನ್ನು ರವಾನಿಸಲಾಗಿದೆ.

ಏಳುಗುಡ್ಡ ಪ್ರದೇಶದಲ್ಲಿ ಹುಲಿ ಸಂಚರಿಸುತ್ತಿರುವ ಕುರಿತು ಸ್ಥಳೀಯ ದನಗಾಹಿಗಳು ಹಾಗೂ ಕುರಿಗಾಹಿಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಿಷ್ಕಿಂಧವಾಣಿ ಈ ಕುರಿತು ನಿರಂತರವಾಗಿ ವರದಿ ಮಾಡಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹುಲಿಯ ಚಲನವಲನ ಪತ್ತೆಹಚ್ಚಲು ವಿವಿಧ ಆಯಕಟ್ಟಿನ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿದ್ದರು.

ಬಸಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಹುಲಿಯ ಫೋಟೋ ಹಾಗೂ ವಿಡಿಯೋಗಳು ಸೆರೆಯಾಗಿದ್ದು, ಏಳುಗುಡ್ಡ ಪ್ರದೇಶದಲ್ಲಿ ಹುಲಿಯ ಅಸ್ತಿತ್ವಕ್ಕೆ ಮತ್ತಷ್ಟು ಪುರಾವೆ ದೊರೆತಿತ್ತು.

ಪಟ್ಟೆಗಳೇ ಹುಲಿಯ ಗುರುತು

ಹುಲಿಯ ದೇಹದ ಮೇಲಿನ ಕಪ್ಪು ಪಟ್ಟೆಗಳ ವಿನ್ಯಾಸ ಪ್ರತಿಯೊಂದು ಹುಲಿಗೂ ವಿಶಿಷ್ಟವಾಗಿರುತ್ತದೆ. ಮನುಷ್ಯನ ಬೆರಳಚ್ಚಿನಂತೆ ಹುಲಿಯ ಪಟ್ಟೆಗಳ ವಿನ್ಯಾಸವನ್ನು ಆಧರಿಸಿ ಅದನ್ನು ಗುರುತಿಸಲಾಗುತ್ತದೆ.

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿರುವ ಹುಲಿಯ ಚಿತ್ರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಈಗಾಗಲೇ ದಾಖಲಾಗಿರುವ ಹುಲಿಗಳ ಚಿತ್ರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಹೊಂದಾಣಿಕೆ ಕಂಡುಬಂದರೆ ಅದು ಈಗಾಗಲೇ ದಾಖಲಾಗಿರುವ ಹುಲಿ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಹೊಂದಾಣಿಕೆ ಸಿಗದಿದ್ದರೆ ಹೊಸ ಹುಲಿ ಎಂದು ಪರಿಗಣಿಸಿ ಪ್ರತ್ಯೇಕ ರಾಷ್ಟ್ರೀಯ ಗುರುತಿನ ಸಂಖ್ಯೆ ನೀಡುವ ಪ್ರಕ್ರಿಯೆ ನಡೆಯುತ್ತದೆ.

ಏಳುಗುಡ್ಡದಲ್ಲಿ ಹುಲಿ ಪತ್ತೆ ಕುತೂಹಲ

ಸುಮಾರು ಐದು ತಿಂಗಳ ಹಿಂದೆ ಜಬ್ಬಲಗುಡ್ಡ ಸಮೀಪದ ಜೋಳದ ಹೊಲದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿದ್ದವು. ಸ್ಥಳೀಯರು ಈ ಕುರಿತು ಮಾಹಿತಿ ನೀಡಿದ ಬಳಿಕ ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು.

ಮುಂದುವರಿದ ಪರಿಶೀಲನೆಯಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಹುಲಿಯ ಚಲನವಲನ ದಾಖಲಾಗಿತ್ತು. ಈ ನಡುವೆ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿದ ಘಟನೆಗಳೂ ವರದಿಯಾಗಿದ್ದು, ಅರಣ್ಯ ಇಲಾಖೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡಿತ್ತು.

ಐಡಿ ಬಂದರೆ ‘ಕಿಷ್ಕಿಂಧಾ ಟೈಗರ್’ ಗುರುತು?

ಏಳುಗುಡ್ಡದಲ್ಲಿ ಪತ್ತೆಯಾಗಿರುವ ಹುಲಿ ಈಗಾಗಲೇ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ದಾಖಲಾಗಿರುವ ಹುಲಿಯೇ ಅಥವಾ ಹೊಸದಾಗಿ ಪತ್ತೆಯಾದ ಹುಲಿಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗುತ್ತಿದೆ. ಹೊಸ ಹುಲಿ ಎಂದು ದೃಢಪಟ್ಟರೆ ಅದಕ್ಕೆ ಪ್ರತ್ಯೇಕ ರಾಷ್ಟ್ರೀಯ ವಿಶಿಷ್ಟ ಗುರುತಿನ ಸಂಖ್ಯೆ ದೊರೆಯುವ ಸಾಧ್ಯತೆಯಿದೆ.

ಸ್ಥಳೀಯವಾಗಿ ‘ಕಿಷ್ಕಿಂಧಾ ಟೈಗರ್’ ಅಥವಾ ‘ಕೊಪ್ಪಳ ಟೈಗರ್’ ಎಂಬ ಹೆಸರಿನಿಂದ ಕರೆಯುವ ಸಾಧ್ಯತೆ ಇದ್ದರೂ, ರಾಷ್ಟ್ರೀಯ ಹುಲಿ ಗಣತಿ ಹಾಗೂ ಮೇಲ್ವಿಚಾರಣೆಯಲ್ಲಿ ಅಧಿಕೃತವಾಗಿ ನೀಡಲಾಗುವ Unique Tiger IDಯೇ ಪ್ರಮುಖವಾಗಲಿದೆ.

ಐದು ದಶಕಗಳ ಬಳಿಕ ಮತ್ತೆ ಹುಲಿ?

ಏಳುಗುಡ್ಡ ಪ್ರದೇಶದಲ್ಲಿ ಸುಮಾರು ಐದು ದಶಕಗಳ ಹಿಂದೆ ಹುಲಿಗಳ ಇರುವಿಕೆಯ ಬಗ್ಗೆ ಮಾಹಿತಿ ಇದ್ದು, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಹುಲಿ ಇರುವ ಬಗ್ಗೆ ದಾಖಲೆಗಳು ಇರಲಿಲ್ಲ. ಈ ಪ್ರದೇಶದಲ್ಲಿ ಮುಖ್ಯವಾಗಿ ಚಿರತೆ, ಕರಡಿ, ಕತ್ತೆಕಿರುಬ ಸೇರಿದಂತೆ ವಿವಿಧ ವನ್ಯಜೀವಿಗಳು ಕಂಡುಬರುತ್ತವೆ.

ಈ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದೆ ಮತ್ತೆ ಹುಲಿ ಪತ್ತೆಯಾಗಿರುವುದು ವನ್ಯಜೀವಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿರಂತರ ನಿಗಾ ವಹಿಸಿದೆ.

ಅರಣ್ಯ ಇಲಾಖೆ ಸ್ಪಷ್ಟನೆ

“ಕಿಷ್ಕಿಂಧಾ ಏಳುಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿರುವ ಹುಲಿಗೆ ವೈಜ್ಞಾನಿಕ ಗುರುತಿನ ಐಡಿ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. NTCA ಕೇಳಿರುವ ಮಾಹಿತಿಯನ್ನು ರವಾನಿಸಲಾಗಿದೆ. ಹೊಸದಾಗಿ ಹುಲಿ ಪತ್ತೆಯಾದರೆ ಅದರ ಪಟ್ಟೆಗಳ ಮಾದರಿ ಹಾಗೂ ಇತರ ವೈಜ್ಞಾನಿಕ ಮಾಹಿತಿಯನ್ನು ಪರಿಶೀಲಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿನ ಐಡಿ ನೀಡಲಾಗುತ್ತದೆ. ಪ್ರಸ್ತುತ ಪತ್ತೆಯಾಗಿರುವ ಹುಲಿಗೆ ಪ್ರತ್ಯೇಕ ರಾಷ್ಟ್ರೀಯ ಗುರುತಿನ ಐಡಿ ನೀಡುವ ಪ್ರಕ್ರಿಯೆ ಮುಂದುವರಿದಿದೆ.”

— ನಿರ್ಮಲ, ಡಿಸಿಎಫ್ (ಐಎಫ್‌ಎಸ್), ಕೊಪ್ಪಳ ಅರಣ್ಯ ಇಲಾಖೆ

Leave a Reply

Your email address will not be published. Required fields are marked *

error: Content is protected !!