ಹಿರೇಬೆಣಕಲ್ : ಮೊರೇರ್ ಶಿಲಾಯುಗದ ಜನಾಂಗ ಸಂಗ್ರಹಿಸಿದ್ದ ಕಬ್ಬಿಣದ ಅದಿರು ಪತ್ತೆ :

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಪ್ರಸಿದ್ಧ ಪ್ರಾಗೈತಿಹಾಸಿಕ ಶಿಲಾಯುಗದ ಶಿಲಾ ಸಮಾಧಿನೆಲೆ ಹಿರೇಬೆಣಕಲ್ ಗ್ರಾಮದ ಗುಡ್ಡದಲ್ಲಿ ಮೊರೇರ್ ಜನಾಂಗ ಸಂಗ್ರಹಿಸಿದ್ದ ಕಬ್ಬಿಣದ ಅದಿರನ್ನು ಹಿರೇಬೆಣಕಲ್ ಅನ್ವೇಷಣಾ ತಂಡ ಪತ್ತೆ ಹಚ್ಚಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ .
2000 ದಿಂದ 3000 ವರ್ಷಗಳ ಹಿಂದೆ ಕರ್ನಾಟಕ ಸಹಿತ ದಕ್ಷಿಣ ಭಾರತದಲ್ಲಿ ಬದುಕಿದ್ದ ಮೂರೇರ್ ಎಂಬ ಬುಡಕಟ್ಟು ಜನಾಂಗ ಮೊದಲ ಭಾರಿಗೆ ಕಬ್ಬಿಣದ ಅದಿರನ್ನು ಸಂಸ್ಕರಿಸಿ ಕಬ್ಬಿಣ ಲೋಹವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಕೊಂಡರು .
ಆ ಕಬ್ಬಿಣದಿಂದ ತಮ್ಮ ಪೂರ್ವಜರ ಸಮಾಧಿಗಳ ರಚನೆಗೆ ಬೇಕಾದ ಕಲ್ಲು ಚಪ್ಪಡಿಗಳನ್ನು ಸಿದ್ಧಪಡಿಸಲು ಸುತ್ತಿಗೆ, ಉಳಿ ಮತ್ತು ದಿನನಿತ್ಯ ಬಳಕೆಗೆ ಬೇಕಾದ ಕುಡುಗೋಲು,ಕತ್ತಿಗಳು ,ಬಾಣದ ಮೊನೆ,ಚಾಕು ,ಬಲ್ಲೆ ,ಚಪ್ಪಟೆ ಕೊಡಲಿ, ನೇಗಿಲಿನ ಕುಳ ಮುಂತಾದ ಉಪಕರಣಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಕಬ್ಬಿಣದ ಬಳಕೆ ಬಂದದ್ದಕ್ಕಾಗಿ ಇವರ ಕಾಲಾವಧಿಯನ್ನು ಕಬ್ಬಿಣ ಯುಗವೆಂದು ಜೊತೆಗೆ ಬೃಹತ್ ಬಂಡೆಗಳಿಂದ ಸಮಾಧಿ ನಿರ್ಮಿಸುತ್ತಿದ್ದರಿಂದ ಕಬ್ಬಿಣ ಯುಗದ ಬೃಹತ್ ಶಿಲಾಯುಗವೆಂದು ಕರೆಯಲಾಗಿದೆ. ಇವರು ಒಂದು ಕೆಜಿ ಅದಿರಿನಿಂದ 350 ಗ್ರಾಂ ಪರಿಶುದ್ಧ ಕಬ್ಬಿಣವನ್ನು ಪಡೆಯುವ ತಂತ್ರಜ್ಞಾನವನ್ನು ಸಾಧಿಸಿದ್ದರು ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ . ಹಿರೇಬೆಣಕಲ್ ಮೊರೇರ್ ಜನಾಂಗ ಕಬ್ಬಿಣ ಬಳಸಿದ್ದ ಬಗ್ಗೆ ಈವರೆಗೆ ಯಾವುದೇ ಕುರುಹು ದೊರೆತಿರಲಿಲ್ಲ.ಆದರೆ ಈಗ ಮೊರೇರ್ ಗುಡ್ಡದ ದುರ್ಗದದಡಿ ಎಂಬ ಭಾಗದಲ್ಲಿ ಸುಮಾರು 200 ಮೀಟರ್ ವಿಸ್ತಾರ ಪ್ರದೇಶದಲ್ಲಿ ಸಂಸ್ಕರಿಸಿದ ಕಬ್ಬಿಣದ ಅದಿರು ಚೆದುರಿದಂತೆ ಕಂಡು ಬಂದಿದೆ. ಪ್ರಾಯಶಃ ಈ ಅದಿರನ್ನು ಸಮೀಪದ ಸಂಡೂರು ಪ್ರದೇಶದಿಂದ ಸಂಗ್ರಹಿಸಿ ಇಲ್ಲಿ ಸಂಸ್ಕರಿಸಿದ್ದಾರೆ. ಸಂಸ್ಕರಿತ ರೂಪದ ಅಂದರೆ ಕಾಯಿಸಿದ ಕಬ್ಬಿಣದ ದ್ರವರೂಪದ ಘನೀಕೃತ ತುಂಡುಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಈ ಸಂಶೋಧನಾ ತಂಡದಲ್ಲಿ ಚಂದ್ರಶೇಖರ್ ಕುಂಬಾರ್ ,ಮಂಜುನಾಥ್ ದೊಡ್ಮನಿ ,ಹರನಾಯಕ ಮತ್ತು ಹುಸೇನ್ ಬಾಷಾ ಇದ್ದರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.

