Breaking News
ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ 19 ಗ್ರಾಮಗಳನ್ನು ಕೈಬಿಡಲು ಆಗ್ರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ! ಅವೈಜ್ಞಾನಿಕ ವಲಯ ವಿಂಗಡಣೆಯಿಂದ ಸ್ಥಳೀಯರ ಬದುಕಿಗೆ ಸಂಕಷ್ಟ: ಗ್ರಾಮಸ್ಥರ ಆಕ್ಷೇಪ ಅ. 25ರಂದು ಯುನೆಸ್ಕೋ ತಂಡದ ಭೇಟಿ ಹಿನ್ನೆಲೆ ಸಮಸ್ಯೆಗಳನ್ನು ಗಮನಕ್ಕೆ ತರಲು ನಿರ್ಧಾರ

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ(ಆನೆಗೊಂದಿ): ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನೆಗೊಂದಿ ಭಾಗದ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವ ಕ್ರಮ ಹಾಗೂ ಕೋರ್‌ ಜೋನ್‌, ಬಫರ್‌ ಜೋನ್‌ ಮತ್ತು ಯೆಲ್ಲೋ ಜೋನ್‌ ವಿಂಗಡಣೆಯ ನಿಯಮಗಳನ್ನು ಖಂಡಿಸಿರುವ ಆನೆಗೊಂದಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳ 19 ಗ್ರಾಮಗಳ ನಿವಾಸಿಗಳು, ತಮ್ಮ ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

2002 ರಲ್ಲಿ ಆನೆಗೊಂದಿ ಭಾಗದ ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾಧಿಕಾರದ ವಿವಿಧ ನಿಯಮಗಳು ಹಾಗೂ ನಿರ್ಬಂಧಗಳಿಂದ ಸ್ಥಳೀಯರ ದೈನಂದಿನ ಬದುಕು, ಜೀವನೋಪಾಯ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.

ಪಾರಂಪರಿಕ ತಾಣಗಳ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆನೆಗೊಂದಿ, ಕಿಷ್ಕಿಂಧಾ ಹಾಗೂ ಅಂಜನಾದ್ರಿ ಪ್ರದೇಶಗಳು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿವೆ. ಈ ಪ್ರದೇಶಗಳ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳ ಹಕ್ಕುಗಳಿಗೆ ಧಕ್ಕೆಯಾಗಬಾರದು.

ತಲೆತಲಾಂತರಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರ ಬದುಕು ಮತ್ತು ಜೀವನೋಪಾಯಕ್ಕೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಅಕ್ಟೋಬರ್ 25ರಂದು ವಿಶ್ವಸಂಸ್ಥೆಯ ಯುನೆಸ್ಕೋ ತಂಡವು ಆನೆಗೊಂದಿ, ಕಿಷ್ಕಿಂಧಾ ಅಂಜನಾದ್ರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಪಾಲುದಾರರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದ್ದು, ಆನೆಗೊಂದಿ ಭಾಗದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ತಂಡದ ಗಮನಕ್ಕೆ ತರಲು ಮುಂದಾಗಿದ್ದಾರೆ.

2002 ರಲ್ಲಿ ಹೊಸಪೇಟೆ ಭಾಗದ ಹೋಟೆಲ್ ಮಾಲೀಕರ ಹಿತಾಸಕ್ತಿಗೆ ಅನುಕೂಲವಾಗುವಂತೆ ಆನೆಗೊಂದಿ ಭಾಗದ 19 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಗ್ರಾಮಗಳ ಸೇರ್ಪಡೆಯ ನಿರ್ಧಾರವನ್ನು ಮರುಪರಿಶೀಲಿಸಿ, ಸ್ಥಳೀಯರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
19 ಗ್ರಾಮಗಳನ್ನು ಕೈಬಿಡಲು ಒತ್ತಾಯ
ಆನೆಗೊಂದಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಬರುವ 19 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕು. ಕೋರ್‌ ಜೋನ್‌, ಬಫರ್‌ ಜೋನ್‌ ಮತ್ತು ಯೆಲ್ಲೋ ಜೋನ್‌ ವಿಂಗಡಣೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು.

ಸ್ಥಳೀಯರ ಬದುಕುವ ಹಕ್ಕು, ಮನೆ ನಿರ್ಮಾಣ, ವ್ಯಾಪಾರ ಹಾಗೂ ಜೀವನೋಪಾಯಕ್ಕೆ ಅಡ್ಡಿಯಾಗದಂತೆ ನಿಯಮಗಳನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯುನೆಸ್ಕೋ ತಂಡದ ಭೇಟಿ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು. ಆನೆಗೊಂದಿ ಭಾಗದ ಜನರ ಹಿತಾಸಕ್ತಿಯನ್ನು ಪರಿಗಣಿಸಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!