Breaking News
ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ: ಹಾಲಿ, ಮಾಜಿ ಜನಪ್ರತಿನಿಧಿಗಳು ಮೌನವಾಗಿರುವುದೇಕೆ,ಯುವ ಮುಖಂಡರ ಪ್ರಶ್ನೆ. ವಾಲ್ಮೀಕಿ ಸಮಾಜದ ಮೀಸಲಾತಿ ಹೋರಾಟದ ಮಾದರಿಯನ್ನು ಕುರುಬ ಸಮಾಜದ ನಾಯಕರು ಅನುಸರಿಸಲಿ.

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ದೊರಕಿಸಿಕೊಡುವ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದರೂ, ಈ ನಿಟ್ಟಿನಲ್ಲಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮತ್ತು ಇತರ ಜನಪ್ರತಿನಿಧಿಗಳು ಇನ್ನಷ್ಟು ಸಂಘಟಿತವಾಗಿ ಹೋರಾಟ ನಡೆಸದೇ ಮೌನ ವಹಿಸಿದ್ದು ಇಡೀ ಸಮಾಜವನ್ನು ಕತ್ತಲಿನಲ್ಲಿಸಿದೆ.ಕೂಡಲೇ ಕನಕ ಗುರು ಪೀಠದ ಪೂಜ್ಯ ಗುರುಗಳು ನೇತೃತ್ವ ವಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಣ್ಣು ತೆರೆಸುವ ಕಾರ್ಯ ಮಾಡಬೇಕಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಮುಖಂಡರಾದ ಪರಶುರಾಮ ಇಟಗಿ,ಕೆ.ಕೃಷ್ಣ ಹಾಗೂ ಮಲ್ಲಪ ಮಡ್ಲಿಗೇರಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಒಟ್ಟು ಮೀಸಲಾತಿಯನ್ನು ಶೇ.೫೬ಕ್ಕೆ ಹೆಚ್ಚಿಸಿದ ಕಾನೂನಿನ ರಕ್ಷಣೆಗೆ ವಾಲ್ಮೀಕಿ ಸಮಾಜದ ಮುಖಂಡರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವುದು, ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡುವುದು, ಕಾನೂನು ಹೋರಾಟಕ್ಕೆ ಒತ್ತಾಯಿಸುವುದು ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಅತ್ಯುತ್ತಮ ಕಾರ್ಯವಾಗಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನಿನ ಪ್ರಮುಖ ನಿಬಂಧನೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ನಿರ್ಧಾರ ಪ್ರಕಟಿಸಿದೆ. ಈ ಬೆಳವಣಿಗೆಯ ನಡುವೆಯೂ ಮೀಸಲಾತಿ ಹೆಚ್ಚಳದ ಪರವಾಗಿ ಕಾನೂನು ಹೋರಾಟವನ್ನು ಬಲಪಡಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಒತ್ತಾಯಿಸುತ್ತಿದ್ದಾರೆ.

ವಾಲ್ಮೀಕಿ ಸಮಾಜದ ಹೋರಾಟದಿಂದ ಪಾಠ ಕಲಿಯಬೇಕಿದೆ:ಮೀಸಲಾತಿಯಂತಹ ಮಹತ್ವದ ವಿಚಾರದಲ್ಲಿ ಸಮಾಜದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗಿ ಹೋರಾಡಬೇಕೆಂಬ ಸಂದೇಶವನ್ನು ವಾಲ್ಮೀಕಿ ಸಮಾಜದ ಮುಖಂಡರ ಪ್ರಯತ್ನಗಳು ಮುಂದಿಡುತ್ತಿವೆ. ಸರ್ಕಾರದ ಮಟ್ಟದಲ್ಲಿ ನಿರಂತರ ಮನವಿ ಸಲ್ಲಿಸುವುದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ಮೀಸಲಾತಿ ವಿಚಾರದಲ್ಲಿ ಜನಜಾಗೃತಿ ಮೂಡಿಸುವುದು ಮತ್ತು ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸುವುದು ಅಗತ್ಯವಾಗಿದೆ.

ಇದೇ ಮಾದರಿಯಲ್ಲಿ ಕುರುಬ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಕೇವಲ ಸಭೆ-ಸಮಾರಂಭಗಳಲ್ಲಿ ಭರವಸೆ ನೀಡುವುದಕ್ಕಿಂತ, ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಹೋರಾಟ ನಡೆಸುವುದು ಮುಖ್ಯವಾಗಿದೆ.

ಮೀಸಲಾತಿ ಬೇಡಿಕೆಗೆ ಸಂಘಟಿತ ಪ್ರಯತ್ನ ಅಗತ್ಯ

ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಅಧ್ಯಯನ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ದಾಖಲೆಗಳು ಮತ್ತು ಕಾನೂನುಬದ್ಧ ಮಾನದಂಡಗಳ ಆಧಾರದಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಿದೆ.ಸಮಾಜದ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯಬೇಕು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸೂಕ್ತ ಕ್ರಮಗಳು ಕೈಗೊಳ್ಳಬೇಕು. ಈ ಉದ್ದೇಶಗಳ ಸಾಧನೆಗಾಗಿ ಮೀಸಲಾತಿ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸುವ ಜವಾಬ್ದಾರಿ ಸಮಾಜದ ಮುಖಂಡರ ಮೇಲಿದೆ.

ಸಮಾಜದ ನಿರೀಕ್ಷೆಗೆ ಜನಪ್ರತಿನಿಧಿಗಳು ಸ್ಪಂದಿಸಲಿ:

ವಾಲ್ಮೀಕಿ ಸಮಾಜದ ಜನಪ್ರತಿನಿಧಿಗಳು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನಗಳಂತೆಯೇ, ಕುರುಬ ಸಮಾಜದ ಜನಪ್ರತಿನಿಧಿಗಳೂ ತಮ್ಮ ಸಮಾಜದ ಬೇಡಿಕೆಗೆ ಆದ್ಯತೆ ನೀಡಬೇಕಿದೆ.

ಕುರುಬ ಸಮಾಜದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಒಗ್ಗಟ್ಟಿನ ನಿಲುವು ರೂಪಿಸಬೇಕಿದೆ. ಸರ್ಕಾರದೊಂದಿಗೆ ನಿರಂತರ ಸಂವಾದ ನಡೆಸಿ, ಸಂಬಂಧಪಟ್ಟ ಆಯೋಗಗಳು ಹಾಗೂ ಕಾನೂನು ತಜ್ಞರ ಸಲಹೆ ಪಡೆದು, ಎಸ್‌ಟಿ ಮೀಸಲಾತಿ ಬೇಡಿಕೆಯ ಕುರಿತು ಕಾನೂನುಬದ್ಧವಾಗಿ ಮುಂದುವರಿಯಬೇಕಿದೆ.

ಸಮಾಜದ ಹಕ್ಕುಗಳಿಗಾಗಿ ಹೋರಾಡುವುದು ಜನಪ್ರತಿನಿಧಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ. ಕುರುಬ ಸಮಾಜದ ಎಸ್‌ಟಿ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸಂಘಟಿತ ಕ್ರಮ ಕೈಗೊಳ್ಳಲಿದೆ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!