ಫಿಕ್ಸ್ ಆಯ್ತು ಗೌಳಿಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ!

*ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ನೀಲಕಂಠೇಶ್ವರ ಸರ್ಕಲ್ ವರೆಗಿನ ಕಾಮಗಾರಿಗೆ ಮರು ಜೀವ!
*ರಸ್ತೆ ಅಗಲೀಕರಣ ಮಾಡಲು ನಗರಸಭೆ ಅಧಿಕಾರಿಗಳಿಂದ ಮೂಲ ದಾಖಲಾತಿಯಂತೆ ಅಳತೆ.
*80 ಪೀಟ್ ಅಳತೆಯ ದ್ವಿಮುಖ ರಸ್ತೆ,ಒತ್ತುವರಿ ತೆರವು ಶೀಘ್ರ
ಕಿಷ್ಕಿಂಧವಾಣಿ ಕೊಪ್ಪಳ
ಗಂಗಾವತಿ: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಈ ಮಧ್ಯೆ ನಗರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಜುಲೈ ನಗರದಿಂದ ನೀಲಕಂಠೇಶ್ವರ ನಗರದ ಸರ್ಕಲ್ ವರೆಗಿನ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ ನಿಗದಿಯಾಗಿದ್ದು ಶೀಘ್ರದಲ್ಲೇ ಬೈಪಾಸ್ ರಸ್ತೆಯ ಒತ್ತುವರಿ ಕಾಮಗಾರಿ ಕಾರ್ಯಾಚರಣೆ ಜರುಗಲಿದೆ.
ಜುಲೈನಗರದ ಇಂದಿರಾಗಾಂಧಿ ಸರ್ಕಲ್ ನಿಂದ ಕನಕದಾಸ ಸರ್ಕಲ್ ವರೆಗೆ 80 ಪೀಟ್ ರಸ್ತೆ ಇದ್ದು ಇದರಲ್ಲಿ ಎಡ ಬಲ ಎರಡು ಭಾಗದಲ್ಲಿ 5-10 ಪೀಟ್ ರಸ್ತೆಯ ಒತ್ತುವರಿ ಮಾಡಿರುವುದರಿಂದ ಪುಟ್ ಪಾತ್ ಇಲ್ಲವಾಗಿದೆ. ರಸ್ತೆಗೆ ಬೈಕ್ ಸೇರಿ ವಾಹನಗಳು ಹಾಗೂ ಪಾದಚಾರಿಗಳು ನಿಲ್ಲುವುದರಿಂದ ಕೇಂದ್ರ ಬಸ್ ನಿಲ್ದಾಣ ಹಾಗೂ ಹೊಸಪೇಟೆ, ಆನೆಗೊಂದಿ ಮತ್ತು ಹುಲಿಗಿ ಕಡೆ ಹೋಗುವ ಬಸ್,ಲಾರಿ ಇತರೆ ವಾಹನಗಳು ಹೋಗಲು ತೊಂದರೆ ಆಗುತ್ತಿದೆ.ಜತೆಗೆ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿದೆ.ಕಳೆದ ಹತ್ತು ವರ್ಷಗಳಿಂದ ಬೈಪಾಸ್ ರಸ್ತೆ ಅಗಲೀಕರಣ ಮಾಡಲು ನಗರಸಭೆಯವರು ಯತ್ನಿಸಿದರೂ ಕೆಲವರು ಕೋರ್ಟ್ ಮೂಲಕ ತಡೆಯಾಜ್ಞೆ ತಂದು ಕಾಮಗಾರಿ ನಡೆಯದಂತೆ ತಡೆಯುತ್ತಿದ್ದಾರೆ. ಪರಣ್ಣ ಮುನವಳ್ಳಿ ಮುನವಳ್ಳಿ ಶಾಸಕರಾಗಿದ್ದ ವೇಳೆ ನಗರೋತ್ಥಾನ ವಿಶೇಷ ಅನುದಾನದಲ್ಲಿ ಅಗಲೀಕರಣ ವಿದ್ಯುತ್ ದೀಪ ಅಳವಡಿಸಲು ಟೆಂಡರ್ ಕರೆದ ಸಂದರ್ಭದಲ್ಲಿ ನ್ಯಾಯಾಲಯದಿಂದ ಕೆಲವರು ತಡೆಯಾಜ್ಞೆ ತಂದಿದ್ದರು.ಇದೀಗ ಕಳೆದ ಮೂರು ವರ್ಷಗಳಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೋರ್ಟ್ ಗೆ ಹೋಗಿದ್ದವರ ಸ್ಥಳೀಯರು ಹಾಗೂ ಕಾಂಟ್ರಾಕ್ಟರ್ ಅವರೊಂದಿಗೆ ಸಂಧಾನದ ಮಾತುಕತೆ ನಡೆಸಿ ರಸ್ತೆ ಅಗಲೀಕರಣ ಮಾಡಲು ಆರಂಭಿಸಿದ್ದು ಕಳೆದ ಮೂರು ದಿನಗಳಿಂದ ಒತ್ತುವರಿ ಮಾಡಿದ ಮನೆ,ವಾಣಿಜ್ಯ ಸಂಕೀರ್ಣಗಳ ಮಾರ್ಕ್ ಮಾಡುವ ಕಾರ್ಯ ನಡೆದಿದೆ.ನಗರದ ಸೌಂದರ್ಯ ಮತ್ತು ವಿಶಾಲ ರಸ್ತೆಗಳ ಸಲುವಾಗಿ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ.ಈಗಾಗಲೇ ನಗರದಲ್ಲಿ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಕುರಿತು ಚರ್ಚೆಗಳು ಆರಂಭವಾಗಿವೆ.
***
ನಗರದ ಸೌಂದರ್ಯದ ದೃಷ್ಟಿಯಿಂದ ಮತ್ತು ನಗರಕ್ಕೆ ದೇಶ ವಿದೇಶದ ಪ್ರವಾಸಿಗರು, ವಾಣಿಜ್ಯೋದ್ಯಮಗಳು ಆಗಮಿಸುವುದರಿಂದ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ತಿರುಮಲಾಪುರದ ವರೆಗೆ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗಕ್ಕೆ ಬಹಳ ಅನುಕೂಲವಾಗಲಿದೆ. ಪ್ರವಾಸೋದ್ಯಮ ಬೆಳೆದು ನೇರ ಪರೋಕ್ಷ ಉದ್ಯೋಗ ದೊರಕಲಿವೆ. ಆದ್ದರಿಂದ ಗಂಗಾವತಿಯ ಜನರು ಮತ್ತು ಗ್ರಾಮೀಣ ಭಾಗದ ಜನರು ರಸ್ತೆಯ ಅಗಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ನಗರಸಭೆ ಅಧಿಕಾರಿಗಳು ಬೈಪಾಸ್ ರಸ್ತೆಯ ಸರ್ವೆ ಮಾಡಿ ಒತ್ತುವರಿ ಮಾರ್ಕಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಬೈಪಾಸ್ ರಸ್ತೆಯಲ್ಲಿ ಒತ್ತುವರಿ ಮಾಡಿದ ರಸ್ತೆಯನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಯಂ ಪ್ರೇರಣೆಯಿಂದ ಸರ್ಕಾರಿ ಜಾಗವನ್ನು ಬಿಟ್ಟು ಕೊಡಬೇಕು, ಇಲ್ಲದಿದ್ದರೆ ನಗರಸಭೆಯ ಜೆಸಿಬಿ ಗಳಿಂದ ತೆರವು ಮಾಡಿಸಲಾಗುತ್ತದೆ.
-ಗಾಲಿ ಜನಾರ್ದನ ರೆಡ್ಡಿ ಶಾಸಕರು.
***
ನಗರದಲ್ಲಿರುವ ಫುಟ್ಪಾತ್ಗಳ ಒತ್ತುವರಿ ಮತ್ತು ರಸ್ತೆಯ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮೂಲಕ ಬಿಡಿಸಿಕೊಳ್ಳಲಾಗುತ್ತದೆ. ಅದರಂತೆ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯು ಸಹ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಈಗಾಗಲೇ ಸರ್ವೇ ಮಾಡಿ ಮಾರ್ಕಿಂಗ್ ಮಾಡಿದ ಜಾಗದಲ್ಲಿ ಶೀಘ್ರದಲ್ಲೇ ಅಗಲೀಕರಣ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ತೆರವು ಮಾಡಲಾಗುತ್ತದೆ.
-ಆರ್.ವಿರೂಪಾಕ್ಷ ಮೂರ್ತಿ ಪೌರಾಯುಕ್ತರು.ನಗರಸಭೆ

