
*ಶಾಮೀದ್ ಮನಿಯಾರ್ ಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನದ ಭರವಸೆ
*ತೀವ್ರ ಯತ್ನದ ಮಧ್ಯೆ
ಅನ್ಸಾರಿ ಬಣದ ಹುಸೇನಪ್ಪ ಹಂಚಿನಾಳ ಗೆ ತಪ್ಪಿದ ಅಧ್ಯಕ್ಷ ಸ್ಥಾನ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊನೆಗೂ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಾಗರಾಜ ನಂದಾಪೂರ ಅವರಿಗೆ ಲಭಿಸಿದ್ದು, ಕಳೆದ 8 ವರ್ಷ 3 ತಿಂಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಅವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ನಾಗರಾಜ ನಂದಾಪೂರ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಮೇ,05 ರಂದು ನೇಮಕ ಮಾಡಿ ಆದೇಶ ಹೊರಡಿಸಿ ಪಕ್ಷ ಸಂಘಟನೆಯನ್ನು ಎಲ್ಲರ ಜತೆಗೂಡಿ ಮಾಡುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ.
ಚಲುವಾದಿ ಸಮಾಜದ (ದಲಿತ ಬಲಗೈ) ಸಮುದಾಯದವರಾಗಿರುವ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಾಗರಾಜ ನಂದಾಪುರ ಅವರು ಈ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಣದಲ್ಲಿ ಗುರುತಿಸಿಕೊಂಡು ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ನಂತರ ಅನ್ಸಾರಿ ಬಣದಿಂದ ಹೊರ ಬಂದಿದ್ದ ನಂದಾಪುರ ನಾಗರಾಜ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.
****
ಕಾಂಗ್ರೆಸ್ ಹೈಕಮಾಂಡ್ ನನಗೆ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದೆ. ನಾನು ಗಂಗಾವತಿಯಲ್ಲಿ ಯಾವುದೇ ಬಣ ರಾಜಕಾರಣ ಮಾಡಿದವನಲ್ಲ. ಎಲ್ಲಾ ಮುಖಂಡರೊಂದಿಗೆ ಆತ್ಮೀಯದಿಂದ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಹೈಕಮಾಂಡ್ ನನಗೆ ಈ ಜವಬ್ದಾರಿ ನೀಡಿದೆ. ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ವಿಶ್ವಾಸದಿಂದ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ. ಬಣ ರಾಜಕಾರಣಕ್ಕೆ ಮುಕ್ತಿ ಹಾಡಿ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಗಟ್ಟಿ ನೆಲೆ ತಂದುಕೊಡುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಬ್ದಾರಿ ನೀಡಿರುವ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೂ, ಕಾರ್ಯಕರ್ತರಿಗೂ ಅಭಿನಂದಿಸುತ್ತೇನೆ. ಪಕ್ಷದ ಸೂಚನೆಯಂತೆ ನಾನು ಕೆಲಸ ಮಾಡುತ್ತೇನೆ.
-ನಾಗರಾಜ ನಂದಾಪೂರ ನಗರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ
***
ಕಾಂಗ್ರೆಸ್ ಪಕ್ಷ ನನಗೆ ಗಂಗಾವತಿ ನಗರ ಬ್ಲಾಕ್ ಅಧ್ಯಕ್ಷನಾಗಿ ಎಂಟು ವರ್ಷಗಳ ಮೂರು ತಿಂಗಳ ಕಾಲ ಕೆಲಸ ಮಾಡುವ ಅವಕಾಶ ನೀಡಿತ್ತು. ಪಕ್ಷದ ಸಿದ್ಧಾಂತದಂತೆ ನಾನು ಇಲ್ಲಿವರೆಗೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ನಾಗರಾಜ ನಂದಾಪುರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ನಾನು ಸ್ವಾಗತಿಸುತ್ತೇನೆ. ಇಷ್ಟು ವರ್ಷ ಸುದೀರ್ಘವಾಗಿ ಪಕ್ಷದ ಸಂಘಟನೆ ಮಾಡಿರುವುದು ಮತ್ತು ಮೂರು ಅವಧಿ ನಗರಸಭೆ ಸದಸ್ಯನಾಗಿ ಅನುಭವ ಹೊಂದಿರುವ ನನಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯಮಟ್ಟದ ನಿಗಮ ಮಂಡಳಿಯ ಹೆಚ್ಚಿನ ಜವಬ್ದಾರಿ ನೀಡುತ್ತದೆ ಎಂಬ ವಿಶ್ವಾಸವಿದೆ. ನೂತನ ಬ್ಲಾಕ್ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.
-ಶ್ಯಾಮೀದ್ ಮನಿಯಾರ್, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು.