Breaking News
ಅಧಿಕೃತ ಅಭ್ಯರ್ಥಿ ಬಿಟ್ಟು ಪಕ್ಷೇತರ ಶಿವರಾಜ್ ತಂಗಡಗಿಯವರನ್ನು ಗೆಲ್ಲಿಸಿದ್ದ ಬಿಜೆಪಿ ನಾಯಕರಿಗೆ ತಿಪ್ಪೇರುದ್ರಸ್ವಾಮಿ ಮಹಾಮಂಗಳಾರತಿ

*2008 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಮಣ್ಣ ನಾರಿನಾಳ ಅವರಿಗೆ ಬಿಜೆಪಿ ಮುಖಂಡರೇ ದ್ರೋಹ ಮಾಡಿದ್ದರು ಸ್ವಾಮಿ ಹೇಳಿಕೆ

*ರೈತರನ್ನು ಕಳ್ಳರು ಎನ್ನುವ ತಂಗಡಗಿಯವರನ್ನು ಗೆಲ್ಲಿಸಿದವರಿಗೆ “ಮಾಡಿದ್ದುಣೋ ಮಾರಾಯ” ಎನ್ನುವಂತಾಗಿದೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಪಕ್ಷದೊಳಗಿದ್ದು ಪಕ್ಷದ ಅಧಿಕೃತ ಅಭ್ಯರ್ಥಿ ಶಾಮಣ್ಣ ನಾರಿನಾಳ ಅವರನ್ನು ಗೆಲ್ಲಿಸದೇ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಿವರಾಜ್ ತಂಗಡಗಿಯವರನ್ನು ಬಿಜೆಪಿ ಕನಕಗಿರಿ ಕ್ಷೇತ್ರದ ಎಲ್ಲಾ ಮುಖಂಡರೇ ಗೆಲ್ಲಿಸಿ ಈಗ ಶಿವರಾಜ್ ತಂಗಡಗಿ ಅವರಿಂದ ಕಳ್ಳರು ಎನ್ನಿಸಿಕೊಳ್ಳುವ ಸ್ಥಿತಿ ಮಾಡಿದ್ದುಣೋ ಮಾರಾಯ ಎನ್ನುವ ಸ್ಥಿತಿ ಬಂದಿದೆ ಎಂದು ಬಿಜೆಪಿ ರೈತ ಮೋರ್ಚಾ ಹಿರಿಯ ಮುಖಂಡ ತಿಪ್ಪೇರುದ್ರಸ್ವಾಮಿ ಬಿಜೆಪಿ ಮುಖಂಡರಿಗೆ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಮಹಾಮಂಗಳಾರತಿ ಮಾಡಿದ ಪ್ರಸಂಗ ಇತ್ತೀಚೆಗೆ ಕಾರಟಗಿ ಪಟ್ಟಣದ ಕನಕದಾಸ ವೃತ್ತದಲ್ಲಿ ಜರುಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಮುಖಂಡರನ್ನು ಟೀಕಿಸಿದ ವಿಡಿಯೋ ಸದ್ದು ಮಾಡುತ್ತಿದೆ.

 ಬಿಜೆಪಿ ಕನಕಗಿರಿ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ತುಂಗಭದ್ರಾ ಕಾಲುವೆ ಮತ್ತು ನದಿಗೆ ಡಿಸೆಂಬರ್ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನಾ ಹೋರಾಟದಲ್ಲಿ ಪಾಲ್ಗೊಂಡಿದ್ದ ತಿಪ್ಪೇರುದ್ರಸ್ವಾಮಿ ತಮ್ಮ ಭಾಷಣದಲ್ಲಿ ಅಲ್ಲಿದ್ದ ಬಿಜೆಪಿ ಮುಖಂಡರ ಎದುರಿನಲ್ಲಿ ಮಾತನಾಡಿ 2008 ವಿಧಾನಸಭಾ ಚುನಾವಣೆಯ ವಾಸ್ತವ ಸತ್ಯವನ್ನು ಬಿಚ್ಚಿಟ್ಟರು.

2008 ರಲ್ಲಿ ಹೈದ್ರಬಾದ ಕರ್ನಾಟಕದಲ್ಲಿ ಎಸ್ಸಿ ಕ್ಷೇತ್ರಗಳಿಗೆ ಬಿಜೆಪಿ ಟಿಕೇಟ್ ನೀಡಿದ್ದು ಎಲ್ಲಾ ಕಡೆ ಮಾದಿಗೇತರ ಮುಖಂಡರಿಗೆ ಟಿಕೇಟ್ ನೀಡಿತ್ತು. ಇದನ್ನು ಪ್ರತಿಭಟಿಸಿ ಬಿಜೆಪಿ ಹಿರಿಯ ಮುಖಂಡ ಗೋವಿಂದ ಕಾರಜೋಳ ಕ್ಷೇತ್ರದ ಬಹುತೇಕ ಮುಖಂಡರನ್ನು ಎದುರು ಹಾಕಿಕೊಂಡು ಮಾದಿಗ ಸಮಾಜದ ಶಾಮಣ್ಣ ನಾರಿನಾಳ ಎನ್ನುವರಿಗೆ ಬಿಜೆಪಿ ಟಿಕೇಟ್ ಕೊಡಿಸಿದ್ದರು. ಇದು ಸ್ಥಳೀಯ ಮುಖಂಡರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಅವರೆಲ್ಲಾ ಕಾರಟಗಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಾಮಣ್ಣ ನಾರಿನಾಳ ಬದಲಿಗೆ ಬಿಜೆಪಿ ಟಿಕೇಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶಿವರಾಜ್ ತಂಗಡಗಿ ಅವರನ್ನು ಬೆಂಬಲಿಸಿದ್ದರು. ನಾನು ಮಾತ್ರ ಬಿಜೆಪಿ ಅಧಿಕೃತ ಅಭ್ಯರ್ಥಿ ಪರವಾಗಿ ಹೋರಾಟ ಮಾಡಿದೆ, ಆದರೆ ಗೆದ್ದ ನಂತರ ಸತತವಾಗಿ ಸಚಿವ ಸ್ಥಾನ ಪಡೆದ ತಂಗಡಗಿಯವರು ತಮ್ಮನ್ನು ಗೆಲ್ಲಿಸಿದ ಬಿಜೆಪಿ ಎಲ್ಲಾ ಮುಖಂಡರನ್ನು ಕಳ್ಳರು ಎಂದು ಸಂಭೋದಿಸುವ ಮಟ್ಟಕ್ಕೆ ಬೆಳೆದಿದ್ದು ಬಿಜೆಪಿಗೆ ಈ ಹಿಂದೆ ದ್ರೋಹ ಮಾಡಿದ ಎಲ್ಲಾ ಮುಖಂಡರಿಂದಾಗಿ ಎಂದು ಹಳೆಯ ಸಿಟ್ಟನ್ನು ಹೊರ ಹಾಕಿದರು.

ಪಕ್ಷ ದ್ರೋಹ ಮಾಡಿದವರಿಗೆ ಸಚಿವ ತಂಗಡಗಿ ಸರಿಯಾಗಿ ಚಾಟಿ ಬೀಸಿದ್ದಾರೆನ್ನುವ ರೀತಿಯಲ್ಲಿ ಮಾತನಾಡುತ್ತಲೇ ತಂಗಡಗಿಯವರನ್ನು ಕಳ್ಳ ಎಂದು ತಿಪ್ಪೇರುದ್ರಸ್ವಾಮಿ ಟೀಕಿಸಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದ್ದು ಕನಕಗಿರಿ ಬಿಜೆಪಿಯ ಮೇಲೆ ಯಾವ ರೀತಿ ಪರಿಣಾಮವುಂಟಾಗುತ್ತದೆ ಮತ್ತು ತಿಪ್ಪೇರುದ್ರಸ್ವಾಮಿ ಅವರು ಮತ್ತಷ್ಟು ವಿರೋಧಿಗಳನ್ನು ಬಹಿರಂಗ ಭಾಷಣದ ಮೂಲಕ ಸೃಷ್ಠಿ ಮಾಡಿಕೊಂಡಿದ್ದಾರಾ ಎನ್ನುವುದನ್ನು ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!