ಗಂಗಾವತಿ ಬಸ್ ನಿಲ್ದಾಣದಲ್ಲಿ ನರಕ ದರ್ಶನ, ಪ್ರಯಾಣಿಕರಿಂದ ಕೆಕೆಆರ್‌ಟಿಸಿಗೆ ಶಾಪ !


*ಮಹಿಳಾ ಶೌಚಾಲಯಕ್ಕೆ ಬೀಗ ಬಯಲಲ್ಲೇ ಮಹಿಳೆಯಿಂದ ಶೌಚ, ನಾಚಿಕೆಗೇಡಿನ ಸಂಗತಿ
*ಬಸ್ ನಿಲ್ದಾಣದ ತುಂಬಾ ಕಸದ ರಾಶಿ, ಪ್ಲಾಟ್‌ಫಾರಂ ತುಂಬ ಹರಡಿದ ಕ್ಯಾಂಟೀನ್ ಹೊಲಸು ನೀರು
*ಶೌಚ ನೀರು ಹೋಗಲು ನಿಲ್ದಾಣದಲ್ಲಿಲ್ಲ ಚರಂಡಿ, ಗಂಗಾವತಿ ನಿಲ್ದಾಣ ಬಗ್ಗೆ ಮೇಲಾಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಪ್ರತಿ ನಿತ್ಯವೂ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಗಂಗಾವತಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅಕ್ಷರಶಹ ನರಕ ದರ್ಶನವಾಗುತ್ತಿದೆ. ಮಹಿಳೆಯರಂತೂ ಇಲ್ಲಿ ಮಾನ ಮರ್ಯಾದೆ ಕಳೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಪ್ರಮುಖವಾಗಿ ಮಹಿಳಾ ಶೌಚಾಲಯಕ್ಕೆ ಟೆಂಡರ್ ಪಡೆದ ವ್ಯಕ್ತಿ ಸ್ವಚ್ಛ ಮಾಡಲು ಆಗದೇ ಬೀಗ ಜಡಿದಿರುವುದರಿಂದ ಮಹಿಳಾ ಪ್ರಯಾಣಿಕರು ಶೌಚ ಹೋಗಲು ಮರೆ ಇಲ್ಲವಾಗಿದ್ದು ಬಹಿರಂಗವಾಗಿ ಎಲ್ಲಂದರಲ್ಲಿ ಶೌಚ ಹೋಗುತ್ತಿದ್ದು ಅವರ ಮಾನ ಮರ್ಯಾದೆಗೆ ಬೆಲೆ ಇಲ್ಲವಾಗಿದೆ. ನಿತ್ಯವೂ ಸಾವಿರಾರು ಮಹಿಳೆಯರು ಕಾರ್ಯ ನಿಮಿತ್ತ ಬಸ್ ನಿಲ್ದಾಣಕ್ಕೆ ಆಗಮಿಸಿ ಇಡೀ ವ್ಯವಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುವ ದೃಶ್ಯ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಕಸದ ತಿಪ್ಪೆಗುಂಡಿಯಾಗಿದ್ದು ನಿಲ್ದಾಣದಲ್ಲಿರುವ ಕ್ಯಾಂಟೀನ್ ಹೊಲಸು ನೀರು ಹೋಗುವ ಚೇಂಬರ್(ರಾಯಚೂರು ಬಸ್ ನಿಲ್ಲುವ ಪ್ಲಾಟ್‌ಫಾರಂ ಹತ್ತಿರ) ತುಂಬಿ ಬಸ್ ನಿಲ್ಲುವ ಪ್ಲಾಟ್‌ಫಾರಂನಲ್ಲಿ ಸತತವಾಗಿ ಚರಂಡಿ ನೀರು ಹರಿಯುತ್ತಿದ್ದು ಬಸ್ ಹತ್ತುವ ಮತ್ತು ಇಳಿಯುವವರು ಚರಂಡಿ ನೀರಿನಲ್ಲಿ ಹೋಗುವ ದುರ್ಗತಿ ಬಂದಿದಗಿದೆ.
ಇನ್ನೂ ಕಸ ಗುಡಿಸುವ ಮತ್ತು ಬಸ್ ನಿಲ್ದಾಣದಲ್ಲಿಯ ಶೌಚಾಲಯದ ಟೆಂಡರ್ ಪಡೆದ ವ್ಯಕ್ತಿಗಳು ನಾಪತ್ತೆಯಾಗಿದ್ದು ನಿಲ್ದಾಣದಲ್ಲಿ ಕಸದ ರಾಶಿ ಬಿದ್ದಿದೆ. ಜತೆಗೆ ಹಣ ನೀಡಿ ಶೌಚಾಲಯಕ್ಕೆ ಹೋಗುವವರು ಮೂಗು ಹಿಡಿದುಕೊಂಡು ಹೋಗಬೇಕಿದೆ. ಉಚಿತ ಮೂತ್ರಾಲಯದಲ್ಲಿ ಮೂತ್ರ, ಮಲ ದಾಟಿ ಹೋಗಿ ಮೂತ್ರ ಮಾಡಬೇಕಾದ ಸ್ಥಿತಿ ಇದ್ದು ಕೆಕೆಆರ್‌ಟಿಸಿ ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗಂಗಾವತಿ ಬಸ್ ನಿಲ್ದಾಣಕ್ಕೆ ಆಗಮಿಸಿ ಒಂದೂ ಭಾರಿಯೂ ವೀಕ್ಷಣೆ ಮಾಡುವ ಸಾಹಸ ಮಾಡಿಲ್ಲ. ಜತೆಗೆ ಕೆಕೆಆರ್‌ಟಿಸಿ ಲಾಭದಾಯಕ ಮಾರ್ಗವಾಗಿರುವ ಗಂಗಾವತಿ ಹುಲಿಗಿ ಮಾರ್ಗದಲ್ಲಿ ಹೆಚ್ಚುವರಿ ಬಸ್ ಗಳನ್ನು ಓಡಿಸುವಂತೆ ಪ್ರತಿ ನಿತ್ಯವೂ ಪ್ರಯಾಣಿಕರು ಮನವಿ ಮಾಡುತ್ತಾರೆ, ಆನೆಗೊಂದಿ, ಸಾಣಾಪೂರ, ಹರ್ಲಾಪೂರ ಜನರು ಮತ್ತು ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಹೋಗಲು ಬಸ್ ಗಳ ವ್ಯವಸ್ಥೆ ಇಲ್ಲ ಎನ್ನುವ ದೂರು ಸಾಮಾನ್ಯವಾಗಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೆಕೆಆರ್‌ಟಿಸಿ ಕೊಪ್ಪಳ ಗಂಗಾವತಿ ಘಟಕದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.

ಕುಡಿಯುವ ನೀರಿಲ್ಲ: ಪ್ರಸ್ತುತ ಗಂಗಾವತಿ ಸೇರಿ ಸುತ್ತಲಿನ ಊರುಗಳಲ್ಲಿ ಬೇಸಿಗೆಯನ್ನು ಮೀರಿಸುವಂತೆ ಬಿಸಿಲಿದ್ದು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಖಾಸಗಿ ಅಂಗಡಿಗಳಲ್ಲಿ ಹಣ ನೀಡಿ ಬಿಸಲರಿ ನೀರು ಕುಡಿಯುವ ಸ್ಥಿತಿ ಇದೆ. ಶ್ರೀಮಂತರು ಹಣ ನೀಡಿ ನೀರು ಕುಡಿದರೆ ಗ್ರಾಮೀಣ ಜನರು ಮತ್ತು ಬಡವರು ನೀರಿನ ದಾಹದಲ್ಲೆ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಇನ್ನೂ ನಿಲ್ದಾಣದಲ್ಲಿ ಕುಡಿಯುವ ನೀರಿನ ನಳಗಳಿದ್ದರೂ ನೀರು ಸಂಗ್ರಹಿಸುವ ಸಿಂಟೆಕ್ಸ್ ನಲ್ಲಿ ಪಾರಿವಾಳ ಸೇರಿ ಹಲವು ಪಕ್ಷಿಗಳ ರೆಕ್ಕೆ ಪುಕ್ಕಗಳು ಕೆಲವೊಮ್ಮೆ ಪಾರಿವಾಳ, ಕಾಗೆ ಸತ್ತು ಬಿದ್ದ ದೃಶ್ಯ ಕಂಡು ಬಂಡಿದೆ. ಗಂಗಾವತಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಂದರೆ ಅರೋಗ್ಯ ಕೆಡಿಸಿಕೊಂಡು ಹೋಗುವ ಸ್ಥಿತಿ ಇದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷö್ಯ ವಹಿಸಿರುವುದು ಕಂಡು ಬರುತ್ತಿದೆ.


