Breaking News
ಆನೆಗೊಂದಿಯಲ್ಲಿ ಕೇಳೋರಿಲ್ಲ, ಹೇಳೋರಿಲ್ಲ, ಎಎಸ್‌ಐ ಸ್ಮಾರಕ ಗಗನ ಮಹಲ್ ಮರೆ ಮಾಚಿ ಕಟ್ಟಡ ನಿರ್ಮಾಣ!

*ಕ್ರಮಕೈಗೊಳ್ಳದ ಹಂಪಿ ಅಭಿವೃದ್ಧಿ ಪ್ರಾಧಿಕಾರ,ಪುರಾತತ್ವ ಇಲಾಖೆ

*ಗ್ರಾ.ಪಂ. ಪರವಾನಿಗೆ ಇಲ್ಲದ ಅಕ್ರಮ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡ ಪಿಡಿಓ

*ದುರಸ್ತಿಗೆ ಅರ್ಜಿ ಸಲ್ಲಿಸಿ ನೂತನ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರು

*ಅಕ್ರಮ ಹೊಟೇಲ್, ರೆಸಾರ್ಟ್ ಮೇಲಿನ ಕ್ರಮ, ಗಗನ ಮಹಲ್ ಮರೆ ಮಾಚಿದ ಕಟ್ಟಡ ಮಾಲೀಕರಿಗೆ ಯಾಕಿಲ್ಲ?

*ಆನೆಗೊಂದಿ ಭಾಗದಲ್ಲಿ ಶ್ರೀಮಂತರು,ರಾಜಕೀಯ ಬೆಂಬಲ ಇರುವವರಿಗೆ ಅನ್ವಯಿಸಲ್ಲ ಪ್ರಾಧಿಕಾರದ ನಿಯಮಗಳು.

 

ಕಿಷ್ಕಿಂಧವಾಣಿ ವಿಶೇಷ

 

ಕೆ.ನಿಂಗಜ್ಜ

 

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಡುವ ಆನೆಗೊಂದಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕೇಂದ್ರ ಪ್ರಾಚ್ಯವಸ್ತು ಇಲಾಖೆಯಿಂದ (ಎಎಸ್‌ಐ) ಗುರುತಿಸಲ್ಪಟ್ಟ ಗಗನ ಮಹಲ್ ಸ್ಮಾರಕದ ಎದುರು ಗ್ರಾಮದ ಪ್ರಭಾವಿಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಮತ್ತು ಆನೆಗೊಂದಿ ಗ್ರಾ.ಪಂ.ಯ ಪರವಾನಿಗೆ ಇಲ್ಲದೇ ಎರಡು ಅಂತಸ್ತಿನ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದು ಇದರಿಂದ ಗಗನ ಮಹಲ್ ಸ್ಮಾರಕ ಸಂಪೂರ್ಣವಾಗಿ ಮರೆ ಮಾಚಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗಳು ಮತ್ತು ಇತಿಹಾಸ ತಜ್ಞರಿಗೆ ಕಾಣದಂತಹ ಸ್ಥಿತಿ ಇದ್ದು

ಈ ಬಗ್ಗೆ ಸಾರ್ವನಿಕ ವಲಯದಿಂದ ಆಕ್ಷೇಪ ಕೇಳಿ ಬಂದಿದೆ.

ಈಗಾಗಲೇ ಕಿಷ್ಕಿಂಧವಾಣಿ ಕನ್ನಡ ದಿನಪತ್ರಿಕೆ ಸರಣಿ ಸುದ್ದಿ ಮಾಡಿ ಈ ಕುರಿತು ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಂಡು ಅಕ್ರಮ ಕಟ್ಟಡ ತೆರವಿಗೆ ಮುಂದಾಗಿಲ್ಲ. ಬದಲಿಗೆ ಆನೆಗೊಂದಿ ಗ್ರಾ.ಪಂ. ಪಿಡಿಓ ಅವರು ನಾಮಕಾವಸ್ತೆ ಎನ್ನುವಂತೆ ಅಕ್ರಮ ಕಟ್ಡಡ ಮಾಲೀಕರಿಗೆ ನೋಟೀಸ್ ನೀಡಿ ಕೈತೊಳೆದುಕೊಂಡಿದ್ದಾರೆ. ಗ್ರಾ.ಪಂ. ನೋಟೀಸ್ ಗೆ ಕ್ಯಾರೇ ಎನ್ನದ ಕಟ್ಟಡ ಮಾಲೀಕರು ನಿರಂತರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ನಿಯಮಗಳು ಬಡವರಿಗೆ ಮತ್ತು ರಾಜಕೀಯ ಬೆಂಬಲ ಇಲ್ಲದವರಿಗೆ ಶ್ರೀಮಂತರು ಮತ್ತು ರಾಜಕೀಯ ಪ್ರಭಾವ ಇರುವವರಿಗೆ ಈ ನಿಯಮಗಳು ಅನ್ವಯಿಸಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಎಎಸ್‌ಐ ನಿಯಮದ ಪ್ರಕಾರ ಸ್ಮಾರಕಗಳ ಸುತ್ತಲಿನ ಇಂತಿಷ್ಟು ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಬಾರದು ಎನ್ನುವ ನಿಯಮ ಗಗನಮಹಲ್ ಸ್ಮಾರಕದ ಸುತ್ತಲು ಪಾಲನೆಯಾಗಿಲ್ಲ. ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ 2023-24 ರಲ್ಲಿ ಗಗನಮಹಲ್ ಸ್ಮಾರಕವನ್ನು ಕೇಂದ್ರ ಸರಕಾರದ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಿದ್ದು ಗಗನಮಹಲ್ ಮೊದಲಿನ ಕಳೆ ಪಡೆದಿದ್ದು ಸ್ಮಾರಕದ ಎದುರು ಅಕ್ರಮ ಎರಡು ಅಂತಸ್ತಿನ ಕಟ್ಟಡ ಮತ್ತು ಎತ್ತರದ ಕಲ್ಲಿನ ಕಾಂಪೌಂಡ್ ಗೋಡೆ ನಿರ್ಮಾಣದಿಂದಾಗಿ ಗಗನಮಹಲ್ ಸಂಪೂರ್ಣ ಮರೆಯಾಗಿದೆ.

ಆನೆಗೊಂದಿ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಹೊಲ, ಗದ್ದೆ ಮತ್ತು ಖಾಲಿ ಜಾಗದಲ್ಲಿ ಸಣ್ಣಪುಟ್ಟ ಮನೆ, ಅಂಗಡಿ ನಿರ್ಮಿಸಿದರೂ ಆಕ್ಷೇಪವೆತ್ತುವ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪುರಾತತ್ವ ಇಲಾಖೆ, ಗ್ರಾ.ಪಂ.ಗಳು ಮತ್ತು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಆನೆಗೊಂದಿ ಕೇಂದ್ರ ಸ್ಥಳದಲ್ಲಿ ವಿಶ್ವವಿಖ್ಯಾತ ವಿಜಯನಗರ ಕಾಲದಲ್ಲಿ ಅರಸರು ನಿರ್ಮಿಸಿದ ಗಗನಮಹಲ್ ಎಎಸ್‌ಐ ಸ್ಮಾರಕ ಎದುರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಎರಡು ಅಂತಸ್ತಿನ ಕಟ್ಟಡ ಮತ್ತು ಕಾಂಪೌAಡ್ ಗೋಡೆ ನಿರ್ಮಿಸಿದರೂ ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ಮಾಡದೇ ಇರುವುದು ಅಧಿಕಾರಿಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

 

**

 

ಆನೆಗೊಂದಿ ಕೇಂದ್ರ ಸ್ಥಳದಲ್ಲಿ ನಿಯಮ ಮೀರಿ ಗಗನಮಹಲ್ ಪುರಾತನ ಎಎಸ್‌ಐ ಸ್ಮಾರಕದ ಎದುರು ಅಕ್ರಮ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಇದರಿಂದ ಸ್ಮಾರಕ ಸಂಪೂರ್ಣವಾಗಿ ಮರೆಯಾಗಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗೆ ಕಾಣದಂತಾಗಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದು ರಾಜಕೀಯ ಪ್ರಭಾವದಿಂದ ಎನ್ನುವ ಮಾತು ವ್ಯಾಪಕವಾಗಿದೆ. ಆನೆಗೊಂದಿ ಸೇರಿ ಈ ಭಾಗದಲ್ಲಿ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಮಾಡಲು ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ನಿರಾಪೇಕ್ಷಣಾ ಪತ್ರ, ಒಪ್ಪಿತ ವಿನ್ಯಾಸದ ಜತೆಗೆ ಗ್ರಾ.ಪಂ. ಪರವಾನಿಗೆ ಅಗತ್ಯವಾಗಿದೆ. ಪರವಾನಿಗೆ ದೊರೆತ ನಂತರವೂ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕಟ್ಟಡ ನಿಮಾಣ ಮತ್ತು ದುರಸ್ತಿ ಕಾಮಗಾರಿ ನಡೆಯಬೇಕಿದ್ದು ಗಗನಮಹಲ್ ಎದುರು ಯಾವುದೇ ಪರವಾನಿಗೆ ಇಲ್ಲದೇ ದುರಸ್ತಿ ನೆಪದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿದರೂ ಅಧಿಕಾರಿಗಳು ಮೌನ ವಹಿಸಿದ್ದು, ಬಡವರಿಗೆ ಒಂದು ನ್ಯಾಯ ಶ್ರೀಮಂತರು ಮತ್ತು ರಾಜಕೀಯ ಬೆಂಬಲ ಇರುವವರಿಗೆ ಮತ್ತೊಂದು ನ್ಯಾಯ ಎನ್ನುವ ಸ್ಥಿತಿ ಆನೆಗೊಂದಿ ಭಾಗದಲ್ಲಿ ನಡೆಯುತ್ತಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ಬಡವರು, ಜನಸಾಮಾನ್ಯರು ತಕ್ಕ ಶಾಸ್ತಿ ಮಾಡಲಿದ್ದಾರೆ.

-ಬಸವರಾಜ ಮ್ಯಾಗಳಮನಿ ಜಿಲ್ಲಾಧ್ಯಕ್ಷರು ಸಾರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ.

error: Content is protected !!