Breaking News
ಪಿಒಪಿ ಗಣಪತಿ ಮಂಟಪಗಳಿಗೆ ಕರೆಯಬೇಡಿ:,ಸಚಿವ ರಾಮಲಿಂಗಾರೆಡ್ಡಿ. ಪಶ್ಚಿಮ ದ್ವಾರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿ ವಿತರಿಸಿದ ಸಚಿವರು.

 

 

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಪಿಒಪಿ ಗಣೇಶೋತ್ಸವಗಳಿಗೆ ಕರೆಯಬೇಡಿ, ಪಾಲ್ಗೊಳ್ಳುವುದೂ ಇಲ್ಲ ಎಂದು ಘೋಷಿಸಿರುವ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ, ಇಂದು ಬೆಳ್ಳಂ ಬೆಳಿಗ್ಗೆ ಲಾಲ್ ಬಾಗ್ ಗೆ ಭೇಟಿ ನೀಡಿ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿಗಳನ್ನು ವಿತರಿಸಿದರು. ಪ್ರತಿಯೊಬ್ಬರೂ ಪರಿಸರ ಉಳಿಸುವ ಮೂಲಕ ಅರ್ಥಪೂರ್ಣವಾಗಿ ಗಣೇಶ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದ್ದಾರೆ.

ಅವೆನ್ಯೂ ರಸ್ತೆಯ ಆರ್ಯ ವೈಷ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಬಾರಿಯೂ ಸಾರ್ವಜನಿಕರಿಗೆ 251 ಪರಿಸರ ಸ್ನೇಹಿ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ವಿತರಿಸಲಾಯಿತು, ಭಾನುವಾರ ಬೆಳಿಗ್ಗೆ ಲಾಲ್‌ ಬಾಗ್‌ ನ ಪಶ್ಚಿಮ ದ್ವಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಮಣ್ಣಿನ ಮೂರ್ತಿಗಳನ್ನು ವಿತರಿಸಿದರು

ಸ್ವತಃ ಸಚಿವ ರಾಮಲಿಂಗಾರೆಡ್ಡಿ ಸಾರ್ವಜನಿಕರಿಗೆ ಮೂರ್ತಿಗಳನ್ನು ವಿತರಿಸಿ ಮಾತನಾಡಿ, ವಾಸವಿ ಮಂಡಳಿ ಮತ್ತು ವಾಸವಿ ಯುವಜನ ಸಂಘದ ಸದಸ್ಯರು ನೈಜ ಪರಿಸರ ಪ್ರೇಮಿಗಳು. ಇದೇ ಮಾದರಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯೂ ಸಹ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದೆ. ದೀಪಾವಳಿ ಸಂದರ್ಭದಲ್ಲೂ ಪಟಾಕಿ ಬೇಡ ಎಂದು ಮನವಿ ಮಾಡುತ್ತೇವೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸರ್ಕಾರ ಮತ್ತು ಸಮಾಜದ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗಣೇಶ ಮೂರ್ತಿಗಳೊಂದಿಗೆ ಶಿಕ್ಷಣ ತಜ್ಞ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ಅವರು ರಚಿಸಿರುವ “ಎಜುಕೇಶ್ ಇಸ್ ಎ ಟೂಲ್ ಆಫ್ ಸೆಕ್ಸಸ್ ” (ಶಿಕ್ಷಣವು ಯಶಸ್ಸಿನ ಸಾಧನ) ಎಂಬ ಪುಸ್ತಕವನ್ನೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಬಳಿಕ ಮಾತನಾಡಿದ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ, ಹಬ್ಬವನ್ನು ಪರಿಸರ ಕ್ರಮಗಳ ಮೂಲಕ ಆಚರಿಸಲು ಸಚಿವರು ನಮೆಗೆ ಪ್ರೇರಣೆಯಾಗಿದ್ದಾರೆ. ಸಂಪ್ರದಾಯ ಮತ್ತು ಭಕ್ತಿಭಾವದಿಂದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಹಬ್ಬ ಆಚರಿಸೋಣ. ಜಲಮೂಲಗಳಿಗೆ ಮಾಲಿನ್ಯ ಉಂಟುಮಾಡುವುದು ಬೇಡ ಎಂದರು.

ವಾಸವಿ ಯುವ ಜನ ಸಂಘದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿರುವುದು ಅತ್ಯಂತ ಸ್ವಾಗತಾರ್ಹ ಎಂದು ಹೇಳಿದರು.

ವಾಸವಿ ಯುವ ಜನ ಸಂಘದ ಗೌರವಾಧ್ಯಕ್ಷರು ಆದ ಮುರಳಿಕೃಷ್ಣ, ಕಾರ್ಯದರ್ಶಿಗಳಾದ ರಾಜ ಅಂಜನ್, ಎಂ. ಆರ್. ಓ ಆದ ಬಾಲಾಜಿ. ಬಿ.ಪಿ ರವರು ಉಪಸ್ಥಿತರಿದ್ದರು

ಮುದಗಲ್: ರಸ್ತೆಯಲ್ಲಿ ಮಲೀನ ನೀರು, ಸಾರ್ವಜನಿಕರು,ವಾಹನ ಸಂಚಾರಕ್ಕೆ ತೊಂದರೆ ಆಕ್ರೋಶ.

 

*ಸ್ಥಳ ಪರಿಶೀಲನೆಗಾಗಿ ಅಧಿಕಾರಿಗಳೊಂದಿಗೆ ಶಾಸಕರು ದೌಡು

 

ಕಿಷ್ಕಿಂಧವಾಣಿ ಸುದ್ದಿ

ಮುದಗಲ್ ; ಪಟ್ಟಣ ಸಮೀಪದ ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ವ್ಯಾಕರನಾಳ ಗ್ರಾಮದಲ್ಲಿ ಚರಂಡಿ ನೀರು ಮುಖ್ಯ ರಸ್ತೆಯಲ್ಲಿ ನಿಂತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿ, ಗಬ್ಬೆದ್ದು ನಾರುತ್ತಿರುವದಕ್ಕೆ ಅಧಿಕಾರಿಗಳು ಹಾಗೂ ಶಾಸಕರು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.

ಲಿಂಗಸಗೂರು ಶಾಸಕ ಮಾನಪ್ಪ ಡಿ. ವಜ್ಜಲ್ ನಾಗಲಾಪುರ ಗ್ರಾಮಕ್ಕೆ ಶನಿವಾರ ಪ್ರಜಾ ಸೇವಾ ಆಂದೋಲನ ಸಭೆಗೆ ಆಗಮಿಸಿದಾಗ ಸಾರ್ವಜನಿಕರು ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರು ಶಾಸಕರೊಂದಿಗೆ ತರ್ಕಕ್ಕಿಳಿದಾಗ ಶಾಸಕರು ಕೂಡಲೇ ರಸ್ತೆ ಮೇಲೆ ಮಲಿನತೆ ನೀರಿನ ಸ್ಥಳ ಪರಿಶೀಲನೆ ಮಾಡಬೇಕು. ಕೂಡಲೇ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದರು. ಶಾಸಕರು ಅಧಿಕಾರಿಗಳೊಂದಿಗೆ ವ್ಯಾಕರನಾಳ ಗ್ರಾಮದಲ್ಲಿ ನಿಂತ ಮಲಿನತೆ ನೀರಿನ ಸ್ಥಳ ವಿಕ್ಷೀಸಿ ಅಧಿಕಾರಿಗಳಿಗೆ ಕೂಡಲೇ ತಗ್ಗು ಪ್ರದೇಶದ ರಸ್ತೆ ಮೇಲೆ ನಿಂತ ನೀರು ಸಾಗಲು ರಸ್ತೆಯನ್ನು ಸಮತಟ್ಟಾಗಿ ಮಾಡಲು ಸೂಚಿಸಿದರು. ಇನ್ನೆರಡು ದಿನದಲ್ಲಿ ತ್ವರಿತವಾಗಿ ರಸ್ತೆ ಕೆಲಸ ಸರಿಪಡಿಸಿ, ದಾರಿ ವಾಹಕರಿಗೆ ತಿರುಗಾಡಲು ಅನವು ಮಾಡಿಕೊಡಲು ಪಿಡಬ್ಲೂಡಿ ಅಧಿಕಾರಿ ಪ್ರಕಾಶ ಹಾಗೂ ಪಿಡಬ್ಲೂಡಿ ಇ.ಇ ಗಜಾನನ್ ಅವರಿಗೆ ತಿಳಿಸಿದರು.  

ಈ ವೇಳೆ ಗ್ರಾಮಸ್ಥರು ಸೇರಿದಂತೆ ದಾರಿ ವಾಹನಗಳ ಚಾಲಕರು ಇದ್ದರು.

ಗಂಗಾವತಿ ಬಸ್ ನಿಲ್ದಾಣದಲ್ಲಿ ನರಕ ದರ್ಶನ, ಪ್ರಯಾಣಿಕರಿಂದ ಕೆಕೆಆರ್‌ಟಿಸಿಗೆ ಶಾಪ !

 

*ಮಹಿಳಾ ಶೌಚಾಲಯಕ್ಕೆ ಬೀಗ ಬಯಲಲ್ಲೇ ಮಹಿಳೆಯಿಂದ ಶೌಚ, ನಾಚಿಕೆಗೇಡಿನ ಸಂಗತಿ

*ಬಸ್ ನಿಲ್ದಾಣದ ತುಂಬಾ ಕಸದ ರಾಶಿ, ಪ್ಲಾಟ್‌ಫಾರಂ ತುಂಬ ಹರಡಿದ ಕ್ಯಾಂಟೀನ್ ಹೊಲಸು ನೀರು

*ಶೌಚ ನೀರು ಹೋಗಲು ನಿಲ್ದಾಣದಲ್ಲಿಲ್ಲ ಚರಂಡಿ, ಗಂಗಾವತಿ ನಿಲ್ದಾಣ ಬಗ್ಗೆ ಮೇಲಾಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಪ್ರತಿ ನಿತ್ಯವೂ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಗಂಗಾವತಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅಕ್ಷರಶಹ ನರಕ ದರ್ಶನವಾಗುತ್ತಿದೆ. ಮಹಿಳೆಯರಂತೂ ಇಲ್ಲಿ ಮಾನ ಮರ್ಯಾದೆ ಕಳೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಪ್ರಮುಖವಾಗಿ ಮಹಿಳಾ ಶೌಚಾಲಯಕ್ಕೆ ಟೆಂಡರ್ ಪಡೆದ ವ್ಯಕ್ತಿ ಸ್ವಚ್ಛ ಮಾಡಲು ಆಗದೇ ಬೀಗ ಜಡಿದಿರುವುದರಿಂದ ಮಹಿಳಾ ಪ್ರಯಾಣಿಕರು ಶೌಚ ಹೋಗಲು ಮರೆ ಇಲ್ಲವಾಗಿದ್ದು ಬಹಿರಂಗವಾಗಿ ಎಲ್ಲಂದರಲ್ಲಿ ಶೌಚ ಹೋಗುತ್ತಿದ್ದು ಅವರ ಮಾನ ಮರ್ಯಾದೆಗೆ ಬೆಲೆ ಇಲ್ಲವಾಗಿದೆ. ನಿತ್ಯವೂ ಸಾವಿರಾರು ಮಹಿಳೆಯರು ಕಾರ್ಯ ನಿಮಿತ್ತ ಬಸ್ ನಿಲ್ದಾಣಕ್ಕೆ ಆಗಮಿಸಿ ಇಡೀ ವ್ಯವಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುವ ದೃಶ್ಯ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಕಸದ ತಿಪ್ಪೆಗುಂಡಿಯಾಗಿದ್ದು ನಿಲ್ದಾಣದಲ್ಲಿರುವ ಕ್ಯಾಂಟೀನ್ ಹೊಲಸು ನೀರು ಹೋಗುವ ಚೇಂಬರ್(ರಾಯಚೂರು ಬಸ್ ನಿಲ್ಲುವ ಪ್ಲಾಟ್‌ಫಾರಂ ಹತ್ತಿರ) ತುಂಬಿ ಬಸ್ ನಿಲ್ಲುವ ಪ್ಲಾಟ್‌ಫಾರಂನಲ್ಲಿ ಸತತವಾಗಿ ಚರಂಡಿ ನೀರು ಹರಿಯುತ್ತಿದ್ದು ಬಸ್ ಹತ್ತುವ ಮತ್ತು ಇಳಿಯುವವರು ಚರಂಡಿ ನೀರಿನಲ್ಲಿ ಹೋಗುವ ದುರ್ಗತಿ ಬಂದಿದಗಿದೆ.

 ಇನ್ನೂ ಕಸ ಗುಡಿಸುವ ಮತ್ತು ಬಸ್ ನಿಲ್ದಾಣದಲ್ಲಿಯ ಶೌಚಾಲಯದ ಟೆಂಡರ್ ಪಡೆದ ವ್ಯಕ್ತಿಗಳು ನಾಪತ್ತೆಯಾಗಿದ್ದು ನಿಲ್ದಾಣದಲ್ಲಿ ಕಸದ ರಾಶಿ ಬಿದ್ದಿದೆ. ಜತೆಗೆ ಹಣ ನೀಡಿ ಶೌಚಾಲಯಕ್ಕೆ ಹೋಗುವವರು ಮೂಗು ಹಿಡಿದುಕೊಂಡು ಹೋಗಬೇಕಿದೆ. ಉಚಿತ ಮೂತ್ರಾಲಯದಲ್ಲಿ ಮೂತ್ರ, ಮಲ ದಾಟಿ ಹೋಗಿ ಮೂತ್ರ ಮಾಡಬೇಕಾದ ಸ್ಥಿತಿ ಇದ್ದು ಕೆಕೆಆರ್‌ಟಿಸಿ ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗಂಗಾವತಿ ಬಸ್ ನಿಲ್ದಾಣಕ್ಕೆ ಆಗಮಿಸಿ ಒಂದೂ ಭಾರಿಯೂ ವೀಕ್ಷಣೆ ಮಾಡುವ ಸಾಹಸ ಮಾಡಿಲ್ಲ. ಜತೆಗೆ ಕೆಕೆಆರ್‌ಟಿಸಿ ಲಾಭದಾಯಕ ಮಾರ್ಗವಾಗಿರುವ ಗಂಗಾವತಿ ಹುಲಿಗಿ ಮಾರ್ಗದಲ್ಲಿ ಹೆಚ್ಚುವರಿ ಬಸ್ ಗಳನ್ನು ಓಡಿಸುವಂತೆ ಪ್ರತಿ ನಿತ್ಯವೂ ಪ್ರಯಾಣಿಕರು ಮನವಿ ಮಾಡುತ್ತಾರೆ, ಆನೆಗೊಂದಿ, ಸಾಣಾಪೂರ, ಹರ್ಲಾಪೂರ ಜನರು ಮತ್ತು ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಹೋಗಲು ಬಸ್ ಗಳ ವ್ಯವಸ್ಥೆ ಇಲ್ಲ ಎನ್ನುವ ದೂರು ಸಾಮಾನ್ಯವಾಗಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೆಕೆಆರ್‌ಟಿಸಿ ಕೊಪ್ಪಳ ಗಂಗಾವತಿ ಘಟಕದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.

ಕುಡಿಯುವ ನೀರಿಲ್ಲ: ಪ್ರಸ್ತುತ ಗಂಗಾವತಿ ಸೇರಿ ಸುತ್ತಲಿನ ಊರುಗಳಲ್ಲಿ ಬೇಸಿಗೆಯನ್ನು ಮೀರಿಸುವಂತೆ ಬಿಸಿಲಿದ್ದು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಖಾಸಗಿ ಅಂಗಡಿಗಳಲ್ಲಿ ಹಣ ನೀಡಿ ಬಿಸಲರಿ ನೀರು ಕುಡಿಯುವ ಸ್ಥಿತಿ ಇದೆ. ಶ್ರೀಮಂತರು ಹಣ ನೀಡಿ ನೀರು ಕುಡಿದರೆ ಗ್ರಾಮೀಣ ಜನರು ಮತ್ತು ಬಡವರು ನೀರಿನ ದಾಹದಲ್ಲೆ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಇನ್ನೂ ನಿಲ್ದಾಣದಲ್ಲಿ ಕುಡಿಯುವ ನೀರಿನ ನಳಗಳಿದ್ದರೂ ನೀರು ಸಂಗ್ರಹಿಸುವ ಸಿಂಟೆಕ್ಸ್ ನಲ್ಲಿ ಪಾರಿವಾಳ ಸೇರಿ ಹಲವು ಪಕ್ಷಿಗಳ ರೆಕ್ಕೆ ಪುಕ್ಕಗಳು ಕೆಲವೊಮ್ಮೆ ಪಾರಿವಾಳ, ಕಾಗೆ ಸತ್ತು ಬಿದ್ದ ದೃಶ್ಯ ಕಂಡು ಬಂಡಿದೆ. ಗಂಗಾವತಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಂದರೆ ಅರೋಗ್ಯ ಕೆಡಿಸಿಕೊಂಡು ಹೋಗುವ ಸ್ಥಿತಿ ಇದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷö್ಯ ವಹಿಸಿರುವುದು ಕಂಡು ಬರುತ್ತಿದೆ.

ಭದ್ರತೆ ಇಲ್ಲ, ಸಿಸಿ ಕ್ಯಾಮರಾ ಕೆಲಸ ಮಾಡಲ್ಲ: ನಿತ್ಯವೂ ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಗಂಗಾವತಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು, ಬೈಕ್ ಗಳು ಮುಲಾಜಿಲ್ಲದೇ ಒಳಗಡೆ ಬಂದು ಪಾರ್ಕಿಂಗ್ ಮಾಡಿ ನಿಲ್ಲುತ್ತವೆ, ಜತೆಗೆ ನಿತ್ಯವೂ ಮೊಬೈಲ್, ಬ್ಯಾಗ್ ಕಳ್ಳರ ಹಾವಳಿ ಹೆಚ್ಚಿದೆ. ಕಾಲೇಜು ಯುವತಿಯರನ್ನು ಚುಡಾಯಿಸುವ ಪುಂಡರ ಕಾಟ ವಿಪರೀತವಾಗಿದ್ದು, ಭದ್ರತೆಗಾಗಿ ಕೆಕೆಆರ್‌ಟಿಸಿ ಯಿಂದ ಸೆಕ್ಯೂರಿಟಿ ಗಾರ್ಡ್ಗಲ್ಲ, ಪೊಲೀಸ್ ಬಂದೋಬಸ್ತ್ ಇಲ್ಲ, ಕಳ್ಳತನ ಪತ್ತೆ ಮಾಡಲು ನೆರವಾಗುವ ಸಿಸಿ ಕ್ಯಾಮರಾಗಳಂತು ನಾಮಕಾವಸ್ತೆಗಾಗಿ ಇದ್ದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

 ಮಾರ್ಗ ಮತ್ತು ಬಸ್‌ಗಳ ಮಾಹಿತಿ ನೀಡುವ ಕೆಕೆಆರ್‌ಟಿಸಿ ಮತ್ತು ಸೀಟುಗಳನ್ನು ಕಾಯ್ದಿರಿಸುವ(ರಿಜರ್ವೆಷನ್) ಕೌಂಟರ್ ನಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ ಎಂದು ಪ್ರಯಾಣಿಕರು ಆರೋಪಿಸುತ್ತಾರೆ.

error: Content is protected !!