Breaking News
ಸಂಗಾಪೂರ ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ತೀವ್ರ ಪೈಪೋಟಿ

*ಸಾಮಾನ್ಯ,ಎಸ್ಟಿ, ಮಹಿಳಾ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ.

*ಎಸ್ಸಿ ಹಾಗೂ ಬಿಸಿಎ ಕ್ಷೇತ್ರಗಳಿಗೆ ಅ.04 ರಂದು ಮತದಾನ.

*ಹಳೆಯ ಆಡಳಿತ ಮಂಡಳಿಯಿಂದ ಲಕ್ಷಾಂತರ ರೂ.ಗಳ ಅಕ್ರಮ ಬಿಲ್ ಎತ್ತುವಳಿ ಆರೋಪ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಸಂಗಾಪೂರ ಗ್ರಾಮದ ನೀರು ಬಳಕೆದಾರರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದ್ದು ಸಾಮಾನ್ಯ, ಎಸ್ಟಿ ಹಾಗೂ ಮಹಿಳಾ ಕ್ಷೇತ್ರದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಬಿಸಿಎ ಹಾಗೂ ಎಸ್ಸಿ ಕ್ಷೇತ್ರದ ಮೂರು ನಿರ್ದೇಶಕರ ಆಯ್ಕೆಗಾಗಿ ಅ.04 ರಂದು ಮತದಾನ ಜರುಗಲಿದೆ.

ನೀರು ಬಳಕೆದಾರರ ಸಹಕಾರಿ ಸಂಘದಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು ಸಾಮಾನ್ಯ 06, ಎಸ್ಸಿ 01, ಎಸ್ಟಿ0 1, ಬಿಸಿಎ 02, ಮಹಿಳಾ ಕ್ಷೇತ್ರದಲ್ಲಿ 02 ನಿರ್ದೇಶಕರ ಹುದ್ದೆಗಳಿದ್ದು, ಇವುಗಳ ಆಯ್ಕೆಗಾಗಿ ಸೆ.19 ರಿಂದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಸೆ.28 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 13 ಜನರ ಪೈಕಿ 07 ಜನ ನಾಮಪತ್ರ ವಾಪಸ್ ಪಡೆದಿದ್ದರಿಂದ ಕಣದಲ್ಲಿ ಉಳಿದಿದ್ದ ಸರಗಳ್ಳ ಸೂರ್ಯನಾರಾಯಣರಾವ್,ಎಸ್.ಹೇಮಸುಂದರ ರೆಡ್ಡಿ, ರಾಮಮಕೃಷ್ಣ, ಎನ್.ಶ್ರೀನಿವಾಸ, ಎನ್.ಸುರೇಶ ಹಾಗೂ ಜನಾದ್ರಿ ಸತ್ಯನಾರಾಯಣ ಆರು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್ಟಿ ಕ್ಷೇತ್ರದಲ್ಲಿ ಮಹಾದೇವಪ್ಪ ಹಾಗೂ ಮಹಿಳಾ ಕ್ಷೇತ್ರದಲ್ಲಿ ಹೆಚ್.ಎಂ.ಸುಮAಗಲಾ ಹಾಗೂ ಎಲಿಚೆಟ್ಟಿ ಸೀತರತ್ನಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್ಸಿ ಕ್ಷೇತ್ರದ ಒಂದು ಸ್ಥಾನಕ್ಕೆ ಡಿ.ಬಾಬು ದೊರೆಸ್ವಾಮಿ ಹಾಗೂ ತಿಮ್ಮಪ್ಪ, ಬಿಸಿಎ ಕ್ಷೇತ್ರದ ಎರಡು ಸ್ಥಾನಕ್ಕೆ ಜಯಪ್ರಕಾಶ ನಾರಾಯಣಗೌಡ, ಪಿ.ವೆಂಕಟೇಶ್ವರರಾವ್ ಮತ್ತು ಮೋದಿನಾಬಿ ಸ್ಪರ್ಧಿಸಿದ್ದು ಅ,04 ರಂದು ಮತದಾನ ಜರುಗಲಿದೆ.

ಕಳೆದ ಆಡಳಿತ ಮಂಡಳಿಯ ಅವಧಿಯಲ್ಲಿ ವಿತರಣಾ ಕಾಲುವೆಗಳ ದುರಸ್ತಿ ನೆಪದಲ್ಲಿ ಲಕ್ಷಾಂತರ ರೂ,ಗಳ ಭ್ರಷ್ಠಾಚಾರ ನಡೆದಿದೆ ಎಂದು ಕೆಲ ರೈತರು ಹಾಗೂ ನಿರ್ದೇಶಕರು ಹಿಂದಿನ ಅಧ್ಯಕ್ಷರು, ನಿರ್ದೇಶಕರು ಹಾಗೂ ಜಲಸಂಪನ್ಮೂಲ ಇಲಾಖೆಯ ಅಭಿಯಂತರ ಅಮರೇಶ ಸಿಂಧನೂರು ಇವರ ವಿರುದ್ಧ ಲೋಕಾಯುಕ್ತ, ಜಿಲ್ಲಾಡಳಿತ ಹಾಗೂ ಜಲಸಂಪನ್ಮೂಲ ಇಲಾಖೆ ಮತ್ತು ತುಂಗಭದ್ರಾ ಕಾಡಾ ಇಲಾಖೆಗಳಿಗೆ ದಾಖಲೆ ಸಮೇತ ದೂರು ನೀಡಿದ್ದರಿಂದ ಸಂಗಾಪೂರ ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು.

ಗಂಗಾವತಿ: ಕೆಎಂಎಫ್ ಹಾಲಿನ ಕೇಂದ್ರಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೇಟ್ ಮಾರಾಟ!

*ಗ್ರಾಹಕರು ಪ್ರಶ್ನಿಸಿದರೆ ವ್ಯಾಪಾರಿಗಳಿಂದ ನಿರ್ಲಕ್ಷ್ಯದ ಉತ್ತರ.

*ಅಂಗಡಿಕಾರರ ಕಾರಣಕ್ಕಾಗಿ ಗ್ರಾಹಕರ ನಂಬಿಕೆ ಕಳೆದುಕೊಳ್ಳುತ್ತಿರುವ ಕೆಎಂಎಫ್ ಉತ್ಪನ್ನಗಳು.

*ಏನು ಮಾಡುತ್ತಿದ್ದಾರೆ ಹಾಲಿನ ಸೋಸಾಯಿಟಿಗಳಿಂದ ಗೆದ್ದಿರುವ ನಿರ್ದೇಶಕರು?

*ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ !

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದೈನಂದಿನ ಬದುಕಿನಲ್ಲಿ ಹಾಲು ಮೊಸರು ತುಪ್ಪ ಆಹಾರದ ಒಂದು ಭಾಗವಾಗಿದ್ದು ಕರ್ನಾಟಕದಲ್ಲಿ ಹಾಲು, ಮೊಸರು, ತುಪ್ಪ ಎಂದರೆ ಕೂಡಲೇ ನೆನಪಿಗೆ ಬರುವುದು ಕೆಎಂಎಫ್ ನಂದಿನಿ ಆದರೆ ಇತ್ತೀಚಿಗೆ ಕೆಲ ಅಧಿಕಾರಿಗಳು ಮತ್ತು ಕೆಎಂಎಫ್ ಅಂಗಡಿ ಮಾಲೀಕರ ನಿರ್ಲಕ್ಷ್ಯದ ಪರಿಣಾಮ ದೇಶ ವಿದೇಶದಲ್ಲಿ ಬ್ರಾಂಡ್ ಆಗಿರುವ ಕೆಎಂಎಫ್ ನಂದಿನಿ ಗೆ ಕೆಟ್ಟ ಹೆಸರು ಬರುವಂತಾಗಿದೆ.

ಗಂಗಾವತಿ ಕೆಲ ಔಟ್ ಲೇಟ್ ಅಂಗಡಿಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಕಳೆಯುವ ಯತ್ನ ನಡೆದಿದೆ

ಗಂಗಾವತಿಯ ಪಿಎಲ್ ಡಿ ಬ್ಯಾಂಕ್ ಹಾಗೂ ಸರಕಾರಿ ಆಸ್ಪತ್ರೆಯ ಕೆಎಂಎಫ್ ಔಟ್ ಲೇಟ್ ಅಂಗಡಿಗಳಲ್ಲಿ ಸೋಮವಾರ ಬೆಳ್ಳಿಗ್ಗೆ ಸಣ್ಣ ಹಾಲಿನ ಪಾಕೇಟ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಒಲೆಯ ಮೇಲೆ ಚಹಾ ಮಾಡಲು ಇಟ್ಟಾಗ

ಹಾಲು ಒಡೆದು ಹೋಗಿದ್ದು ಪಾಕೇಟ್ ಗಮನಿಸಿದಾಗ ಸೆ.24 ಮತ್ತೊಂದರ ಮೇಲೆ ಸೆ.27 ಎಂದು ನಮೂದಿಸಲಾಗಿದೆ.

ಅಂದಿನ ಹಾಲನ್ನು ಅಂದೇ ಮಾರಾಟ ಮಾಡಬೇಕಿದ್ದು,ಉಳಿದಿರುವ ಹಾಲನ್ನು ವಾಪಸ್ ಕೆಎಂಎಫ್ ಗೆ ಮರಳಿಸಬೇಕಿದೆ.ಆದರೆ ಔಟ್ ಲೇಟ್ ಮಾರಾಟಗಾರರು ಅವಧಿ ಮೀರಿದ ಹಾಲು,ಮೊಸರು ಮಾರಾಟ ಮಾಡಿ ಗ್ರಾಹಕರ ಆರೋಗ್ಯ ಕೆಡಲು ಕಾರಣರಾಗುತ್ತಿದ್ದಾರೆ. ಚಿಕ್ಕಮಕ್ಕಳಿಗೆ ನಂದಿನಿ ಹಾಲನ್ನು ಬಹುತೇಕ ತಾಯಂದಿರು ಕುಡಿಸುತ್ತಾರೆ, ಎಲ್ಲರ ನಂಬಿಕೆಗೆ ಪಾತ್ರವಾಗಿರುವ ನಂದಿನಿ ಹಾಲಿನ ಗುಣಮಟ್ಟ ಮತ್ತು ನಿಗದಿತ ಅವಧಿ ಮಾರಾಟ ಅವಶ್ಯಕವಾಗಿದೆ.

ಕೆಎಂಎಫ್ ಹಾಗೂ ರೈತರ ಹಿತ ಕಾಯುವ ಭರವಸೆಯೊಂದಿಗೆ ಹಾಲಿನ ಸೊಸೈಟಿಗಳ ಮುಖಾಂತರ ನಿರ್ದೇಶಕರಾಗಿ ಗೆದ್ದು ಹೋಗಿರುವ ಪ್ರತಿನಿಧಿಗಳು ಒಂದು ದಿನವೂ ಅಂಗಡಿಗಳ ವ್ಯಾಪಾರ ಹಾಗೂ ಗ್ರಾಹಕರ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ, ಗಂಗಾವತಿಯಲ್ಲಿ ಅವಧಿ ಮುಗಿದ ಹಾಲಿನ ಮಾರಾಟವಾಗುತ್ತಿದ್ದರೂ, ಈ ಭಾಗದ ಕೆಎಂಎಫ್ ನಿರ್ದೇಶಕರು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

***

ಆಹಾರ ಸುರಕ್ಷತಾ ಕ್ರಮಗಳನ್ನು ಅನುಷ್ಟಾನ ಮಾಡುವ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಯನ್ನು ಅವಧಿ ಮೀರಿದ ಕೆಎಂಎಫ್ ನಂದಿನಿ ಹಾಲಿನ ಕುರಿತು ಮಾತನಾಡಿಸಿದರೆ ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಅಂಗಡಿ ಮುಂಗಟ್ಟುಗಳಲ್ಲಿ ಆಹಾರ ಪದಾರ್ಥಗಳ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸುವ ಅಂಗಡಿ ಮುಂಗಟ್ಟುಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ.ಗಂಗಾವತಿಯಲ್ಲಿ ಕೆಎಂಎಫ್ ಔಟ್ ಲೇಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಕುರಿತು ದೂರು ಬಂದಿದ್ದು ಪರಿಶೀಲಿಸಿ ಕ್ರಮ‌ಕೈಗೊಳ್ಳಲಾಗುತ್ತದೆ.

-ನಾಗರಾಜ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ.

***

 ಕೆಎಂಎಫ್ ಪಿ ಎಲ್ ಡಿ ಬ್ಯಾಂಕ್ ಹತ್ತಿರ ಇರುವ ಕೆಎಂಎಫ್ ಔಟ್ ಲೇಟ್ ಕೇಂದ್ರದಲ್ಲಿ ಹಾಲಿನ ಪಾಕೆಟ್ ಖರೀದಿ ಮಾಡಲಾಗಿದ್ದು, ಪದೇಪದೇ ಅವಧಿ ಮೀರಿದ ಹಾಲಿನ ಪಾಕೆಟ್ ಅನ್ನು ಔಟ್ ಲೇಟ್ ಅಂಗಡಿಯವರು ಕೊಡುತ್ತಿದ್ದಾರೆ. ಮನೆಗೆ ಒಯ್ದು ಒಲೆಯ ಮೇಲೆ ಕಾಯಿಸಿದ ನಂತರ ಈ ಹಾಲು ಒಡೆದು ಹೋಗುತ್ತಿದ್ದು ಮಕ್ಕಳಿಗೆ ಕುಡಿಸಲು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಆಹಾರ ಸುರಕ್ಷತಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರಸಭೆಯವರು ಕೂಡಲೇ ಹಾಲಿನ ಔಟ್ಲೆಟ್ ಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಪರವಾಗಿ ರದ್ದುಗೊಳಿಸಬೇಕು.

-ಚನ್ನಬಸವ ಹಿರೇಜಂತಗಲ್ ಗ್ರಾಹಕರು.

***

ಕೆಎಂಎಫ್ ನಂದಿನಿ ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು, ರೈತರು ರೈತರಿಗಾಗಿ ಇರುವಂತ ಈ ಸಂಸ್ಥೆಯಾಗಿದ್ದು,ಈ ಬಗ್ಗೆ ಎಲ್ಲರೂ ಕಾಳಜಿ ವ್ಯಕ್ತಪಡಿಸಬೇಕು. ಗಂಗಾವತಿಯ ಕೆಲವು ಔಟ್ಲೆಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಮಾರಾಟ ಆಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ,ಔಟ್ಲೆಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಅವಧಿ ಮುಗಿದ ಹಾಲು ಸೇರಿದಂತೆ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವುದು ಕೆಎಂಎಫ್ ನಿಯಮದಲ್ಲಿ ವಿರುದ್ಧವಾಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಗ್ರಾಹಕರು ಸಹ ಕೂಡಲೇ ಕೆಎಂಎಫ್ ಗಮನಕ್ಕೆ ತಂದು ನ್ಯೂನ್ಯತೆಯನ್ನು ಸರಿಪಡಿಸಲು ಸಹಕರಿಸಬೇಕು.

-ಸತ್ಯನಾರಾಯಣ ಕೋಟಯ್ಯಕ್ಯಾಂಪ್ ನಿರ್ದೇಶಕರು ಕೆಎಂಎಫ್ ಬಳ್ಳಾರಿ.

error: Content is protected !!