Breaking News
ಮಲ್ಲಾಪುರ ಕೆರೆ ಪ್ರದೇಶದಲ್ಲಿ ಕಾಡುಪ್ರಾಣಿ ದಾಳಿ ಶಂಕೆ, ಮಲ್ಲಾಪುರ ಕೆರೆ ಪ್ರದೇಶದಲ್ಲಿ ಕಾಡುಪ್ರಾಣಿ ದಾಳಿ ಶಂಕೆ!

“ಆಕಳ ಕರುವಿನ ಕೆಚ್ಚಲು, ಹಿಂಭಾಗ ಕಿತ್ತು ತಿಂದ ಪ್ರಾಣಿ; ಹುಲಿ–ಚಿರತೆ ದಾಳಿಯ ಆತಂಕ

*ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಸತ್ಯ ಬಯಲಿಗೆಳೆಯಲು ಗ್ರಾಮಸ್ಥರ ಆಗ್ರಹ

 

ಕಿಷ್ಕಿಂಧವಾಣಿ ಸುದ್ದಿ

 ಗಂಗಾವತಿ:

ಗಂಗಾವತಿ ತಾಲೂಕಿನ ಮಲ್ಲಾಪುರ ಸೀಮೆಯ ಕೆರೆ ಪ್ರದೇಶದಲ್ಲಿ ಆಕಳ ಕರುವೊಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕಾಡುಪ್ರಾಣಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕರುವಿನ ಕೆಚ್ಚಲು ಹಾಗೂ ಹಿಂಭಾಗದ ಮಾಂಸವನ್ನು ಕಿತ್ತು ತಿಂದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಇದು ಹುಲಿ ಅಥವಾ ಚಿರತೆಯ ದಾಳಿಯಾಗಿರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಮಲ್ಲಾಪುರ ಕೆರೆ ಪ್ರದೇಶದಲ್ಲಿ ಆನೆಗೊಂದಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಜೀರಾಮ್ ಜಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕೆಲಸಕ್ಕೆ ತೆರಳಿದ್ದ ಕೂಲಿಕಾರರು ಮೃತಪಟ್ಟಿದ್ದ ಆಕಳ ಕರುವನ್ನು ಗಮನಿಸಿದ್ದಾರೆ.

ಕರುವಿನ ದೇಹದ ಹಿಂಭಾಗ ಹಾಗೂ ಕೆಚ್ಚಲು ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಮಾಂಸವನ್ನು ಯಾವುದೋ ಕಾಡುಪ್ರಾಣಿ ಕಿತ್ತು ತಿಂದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹುಲಿಯೋ… ಚಿರತೆಯೋ?:

ಮಲ್ಲಾಪುರ ಸೀಮೆಯ ಬೆಟ್ಟ ಹಾಗೂ ಕೆರೆ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಸಂಚಾರದ ಕುರಿತು ಹಿಂದಿನಿಂದಲೂ ಸ್ಥಳೀಯರಲ್ಲಿ ಆತಂಕವಿದೆ. ಇದೀಗ ಆಕಳ ಕರುವಿನ ಮೇಲೆ ದಾಳಿ ನಡೆದಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದು ಹುಲಿಯ ದಾಳಿಯೋ, ಚಿರತೆಯ ದಾಳಿಯೋ ಅಥವಾ ಬೇರೆ ಯಾವುದೇ ಕಾಡುಪ್ರಾಣಿಯ ದಾಳಿಯೋ ಎಂಬುದನ್ನು ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಆಗ್ರಹ:

ಮಲ್ಲಾಪುರ ಸೀಮೆಯಲ್ಲಿನ ಕಾಡುಪ್ರಾಣಿಗಳ ಚಲನವಲನ ಪತ್ತೆಹಚ್ಚಲು ಕೂಡಲೇ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ವಿಶೇಷವಾಗಿ ರೈತರು, ದನಗಾಯಿಗಳು, ಕುರಿಗಾಹಿಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಅಗತ್ಯ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಏಳು ಗುಡ್ಡ ಭಾಗದಲ್ಲೂ ಆತಂಕ

ಈಗಾಗಲೇ ಏಳು ಗುಡ್ಡ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಕುರಿತು ಮಾಹಿತಿ ಇದ್ದು, ತೆಂಬಾ ಹಾಗೂ ಉಪ್ಪಾರ ತಿಮ್ಮಪ್ಪನ ಬಯಲು ಪ್ರದೇಶಗಳಲ್ಲಿ ಆಕಳು ಮತ್ತು ಕೋಣದ ಮೇಲೆ ದಾಳಿ ನಡೆದಿರುವ ಘಟನೆಗಳನ್ನು ಸ್ಥಳೀಯರು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಲ್ಲಾಪುರ ಸೀಮೆಯ ಬೆಟ್ಟ ಪ್ರದೇಶದಲ್ಲೂ ಹುಲಿ ಅಥವಾ ಚಿರತೆ ಸಂಚಾರವಿದೆಯೇ ಎಂಬುದನ್ನು ಅರಣ್ಯ ಇಲಾಖೆ ಪರಿಶೀಲಿಸಬೇಕಾಗಿದೆ.

ಕಾಡುಪ್ರಾಣಿಗಳ ದಾಳಿ ಕುರಿತು ವದಂತಿಗಳಿಗೆ ಅವಕಾಶ ನೀಡದೆ, ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಖರ ಮಾಹಿತಿ ನೀಡಬೇಕು. ಜೊತೆಗೆ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

***

“ಮಲ್ಲಾಪುರ ಸೀಮೆಯ ಬೆಟ್ಟ ಪ್ರದೇಶಗಳಲ್ಲಿ ಹುಲಿ ಇರುವ ಕುರಿತು ಮಾಹಿತಿ ಇದೆ. ಇದೀಗ ಆಕಳ ಕರುವಿನ ಮೇಲೆ ಕಾಡುಪ್ರಾಣಿ ದಾಳಿ ನಡೆಸಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಯಾವ ಪ್ರಾಣಿ ದಾಳಿ ನಡೆಸಿದೆ ಎಂಬುದನ್ನು ಖಚಿತಪಡಿಸಬೇಕು.”

— ಹೊನ್ನಪ್ಪ ನಾಯಕ, ಉದ್ಯೋಗ ಖಾತ್ರಿ ಕೂಲಿಕಾರರು.

error: Content is protected !!