Breaking News
ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಸ್ನಾನಗೃಹ, ಶೌಚಾಲಯದ ನೀರು ವಾರ್ಡ್ ರಸ್ತೆಗೆ.

*ಚರಂಡಿ ದುರಸ್ತಿ ಮಾಡಿಸದ ಕಟ್ಟಡ ಮಾಲೀಕರು!

*ಗಣಪತಿ ಟೆಂಟ್ ಗೂ ನುಗ್ಗಿದ ಹೊಲಸು ನೀರು.

*ಆರು ತಿಂಗಳಿಂದ ಸಮಸ್ಯೆ ಇದ್ದರೂ ತಲೆ ಕೆಡಿಸಿಕೊಳ್ಳದ ನಗರಸಭೆ ಮತ್ತು ಬಿಸಿಎಂ ಇಲಾಖೆ.

 

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ 19 ನೇ ವಾರ್ಡ್ ವಡ್ಡರ ಓಣಿ ಮತ್ತು ಜೋಗೇರ ಓಣಿ ಮಧ್ಯದಲ್ಲಿರುವ ಬಿಸಿಎಂ ಇಲಾಖೆಯ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಸುತ್ತಲಿನ ವಾತಾವರಣ ಗಲೀಜು ನೀರಿನಿಂದ ಕೂಡಿದ್ದು ಸ್ಥಳೀಯ ನಿವಾಸಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಇದರಿಂದ ಓಣಿಯಲ್ಲಿ ಸೊಳ್ಳೆ, ಹಂದಿಗಳ ಕಾಟ ಹೆಚ್ಚಾಗಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತಿದೆ. ಕಳೆದ ಆರು ತಿಂಗಳಿಂದ ಹಾಸ್ಟೆಲ್ ಸುತ್ತಲೂ ಚರಂಡಿ ನೀರು ತುಂಬಿ ಓಣಿಯಲಗಲಿ ಹರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆ ಹಾಸ್ಟೆಲ್ ಹಿಂದೆ ಪ್ರತಿಷ್ಠಾಪಿಸಿದ ಗಣೇಶನ ಮಂಟಪದ ಒಳಗೆ ಸ್ನಾನ ಗೃಹ ಹಾಗೂ ಶೌಚಾಲಯದ ನೀರು ನುಗ್ಗಿ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಬಿಸಿಎಂ ಇಲಾಖೆಯ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಗೆ ಸ್ಥಳೀಯರು ಕಟ್ಟಡವನ್ನು ಬಾಡಿಗೆ ನೀಡಿದ್ದು ಸುತ್ತಲೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ, ಆದ್ದರಿಂದ ಹಾಸ್ಟೆಲ್ ಸ್ಥಾನ ಗೃಹದ ನೀರು ಮತ್ತು ಶೌಚಾಲಯದ ನೀರು ನೇರವಾಗಿ ವಡ್ಡರ ಓಣಿಯ ಹಿಂಭಾಗದಲ್ಲಿರುವ ಓಣಿಯ ದಾರಿಯಲ್ಲಿ ಹರಿಯುತ್ತಿದ್ದು, ಕಟ್ಟಡ ಮಾಲೀಕರಿಗೆ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಗರಸಭೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಹರಿಯುತ್ತಿರುವ ಸ್ನಾನಗೃಹ ಮತ್ತು ಶೌಚಾಲಯದ ನೀರನ್ನು ಸೂಕ್ತ ವ್ಯವಸ್ಥೆ ಮಾಡಿ ಚರಂಡಿಗೆ ಬಿಡಿಸಬೇಕು. ಜೊತೆಗೆ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇಲ್ಲಿರುವ ಹಾಸ್ಟೆಲ್ ನ್ನು ಬೇರಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರಾದ ಅಂಬಿಕಾ, ಅನಿಲ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ

error: Content is protected !!