Breaking News
ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಓದುವ ಎಸ್ಸಿ ಎಸ್ಟಿ ಹಾಗೂ ಒಬಿಸಿ ಮಕ್ಕಳಿಗಿಲ್ಲ ಪೌಷ್ಠಿಕ ಆಹಾರ, ಮೂಲಸೌಕರ್ಯಗಳ ವ್ಯವಸ್ಥೆ ! ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ನಿರ್ಲಕ್ಷ್ಯ  ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ.

*ಮೂಲಭೂತ ಸೌಲಭ್ಯ ಕಲ್ಪಿಸಿ, ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ*

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಎಸ್ಸಿ,ಎಸ್ಟಿ ಹಾಗೂ ಒಬಿಸಿ ಗ್ರಾಮೀಣ ಬಡ ಮಕ್ಕಳು ಮತ್ತು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುವ

 ಗಂಗಾವತಿ ನಗರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಅಪೌಷ್ಠಿಕ ಆಹಾರ ಪೂರೈಕೆ, ಮೆನ್ಯೂ ಪ್ರಕಾರ ಆಹಾರ ಪೂರೈಸದಿರುವುದು ಸೇರಿ ಹಾಸ್ಟೆಲ್ ಗಳಲ್ಲಿ ದಿನ ಪತ್ರಿಕೆ ಪೂರೈಕೆ, ತರಕಾರಿ ಇತರೆ ಸಮಸ್ಯೆಗಳ ಕುರಿತು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ನಿರ್ದೇಶಕರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದನ್ನು ಖಂಡಿಸಿ ಎಸ್ಸಿ,ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಎಸ್ಎಫ್ಐ ನೇತೃತ್ವದಲ್ಲಿ ಹಾಸ್ಟೆಲ್ ನಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಾ.ಪಂ.ಕಚೇರಿ ವರೆಗೆ ಮೆರವಣಿಗೆ ನಡೆಸಿ ತಾ.ಪಂ.ಇಓ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಹಾಸ್ಟೆಲ್ ನಲ್ಲಿ ಪೌಷ್ಟಿಕ ಆಹಾರ,ದಿನಪತ್ರಿಕೆ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟು ವಿದ್ಯಾರ್ಥಿಗಳಿಗೆ ಕೇವಲ ಮೂರು ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ, ನೀರನ್ನು ಸಮರ್ಪಕವಾಗಿ ಶುದ್ಧೀಕರಿಸದಿರುವುದು ಹಾಗೂ ನೀರಿನಲ್ಲಿ ಹುಳು, ಪಾಚಿ ಕಾಣಿಸಿಕೊಳ್ಳುತ್ತಿರುವುದು ಗಂಭೀರ ಸಮಸ್ಯೆ ಇದ್ದರು ಸಹ ಅಧಿಕಾರಿಗಳು ಮೌನವಹಿಸಿರುವುದು ಖಂಡನಿಯ ವಿಷಯವಾಗಿದೆ ಅಲ್ಲದೆ ವಸತಿ ನಿಲಯದಲ್ಲಿ ಸುಸಜ್ಜಿತ ಗ್ರಂಥಾಲಯ, ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಮತ್ತು ದಿನಪತ್ರಿಕೆಗಳ ಕೊರತೆ, ಮೆನು ಚಾರ್ಟ್ ಪ್ರಕಾರ ಆಹಾರ ನೀಡದಿರುವುದು, ಶುಚಿ ಸಂಭ್ರಮ ಕಿಟ್ ನೀಡದಿರುವುದು, ಊಟದಲ್ಲಿ ಹುಳು–ಕಸ–ಕಡ್ಡಿ ಕಂಡುಬರುತ್ತಿರುವುದು, ಕಟ್ಟಡದ ಅಸ್ವಚ್ಛತೆ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ

ಅಡುಗೆ ಸಿಬ್ಬಂದಿ ಹಾಗೂ ನಿಲಯ ಪಾಲಕರು ವಿದ್ಯಾರ್ಥಿನಿಯರೊಂದಿಗೆ ಅವಾಚ್ಯ ಶಬ್ದ ಬಳಸಿ ಮಾತನಾಡುವುದು, ಸಮಸ್ಯೆ ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ವಸತಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು ಹಾಗೂ ಪೋಷಕರಿಗೂ ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ ಆರೋಪಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಸ್ಎಫ್ಐ ತಾಲೂಕು ಅಧ್ಯಕ್ಷ ನಾಗರಾಜು.ಯು ಮಾತನಾಡಿ, ಈ ಸಮಸ್ಯೆಗಳನ್ನು ಈಗಾಗಲೇ ನಿಲಯ ಪಾಲಕರು, ತಾಲೂಕು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮಧ್ಯಪ್ರವೇಶಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ನಿರ್ಲಕ್ಷ್ಯ ತೋರಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ. ಪಂ.ಇಓ ಅವರು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶರೀಫ್ ಎಂ., ಜಂಟಿ ಕಾರ್ಯದರ್ಶಿ ದರ್ಶನ್ ಹೋಸ್ಕೆರ, ಮುಖಂಡರಾದ ಮಾರುತಿ ವಿಠಲಪುರ, ವೆಂಕಟೇಶ್ ಹಾಗೂ ವಿದ್ಯಾರ್ಥಿನಿಯರಾದ ರಾಧಿಕಾ, ಲಕ್ಷ್ಮೀ, ಅಕ್ಷತಾ, ಭವಾನಿ, ಐಶ್ವರ್ಯ, ಅಂಬಿಕಾ ಇದ್ದರು.

Leave a Reply

Your email address will not be published. Required fields are marked *

error: Content is protected !!