*ಅಂಗಡಿಕಾರರ ಕಾರಣಕ್ಕಾಗಿ ಗ್ರಾಹಕರ ನಂಬಿಕೆ ಕಳೆದುಕೊಳ್ಳುತ್ತಿರುವ ಕೆಎಂಎಫ್ ಉತ್ಪನ್ನಗಳು.
*ಏನು ಮಾಡುತ್ತಿದ್ದಾರೆ ಹಾಲಿನ ಸೋಸಾಯಿಟಿಗಳಿಂದ ಗೆದ್ದಿರುವ ನಿರ್ದೇಶಕರು?
*ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ !
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ದೈನಂದಿನ ಬದುಕಿನಲ್ಲಿ ಹಾಲು ಮೊಸರು ತುಪ್ಪ ಆಹಾರದ ಒಂದು ಭಾಗವಾಗಿದ್ದು ಕರ್ನಾಟಕದಲ್ಲಿ ಹಾಲು, ಮೊಸರು, ತುಪ್ಪ ಎಂದರೆ ಕೂಡಲೇ ನೆನಪಿಗೆ ಬರುವುದು ಕೆಎಂಎಫ್ ನಂದಿನಿ ಆದರೆ ಇತ್ತೀಚಿಗೆ ಕೆಲ ಅಧಿಕಾರಿಗಳು ಮತ್ತು ಕೆಎಂಎಫ್ ಅಂಗಡಿ ಮಾಲೀಕರ ನಿರ್ಲಕ್ಷ್ಯದ ಪರಿಣಾಮ ದೇಶ ವಿದೇಶದಲ್ಲಿ ಬ್ರಾಂಡ್ ಆಗಿರುವ ಕೆಎಂಎಫ್ ನಂದಿನಿ ಗೆ ಕೆಟ್ಟ ಹೆಸರು ಬರುವಂತಾಗಿದೆ.
ಗಂಗಾವತಿ ಕೆಲ ಔಟ್ ಲೇಟ್ ಅಂಗಡಿಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಕಳೆಯುವ ಯತ್ನ ನಡೆದಿದೆ
ಗಂಗಾವತಿಯ ಪಿಎಲ್ ಡಿ ಬ್ಯಾಂಕ್ ಹಾಗೂ ಸರಕಾರಿ ಆಸ್ಪತ್ರೆಯ ಕೆಎಂಎಫ್ ಔಟ್ ಲೇಟ್ ಅಂಗಡಿಗಳಲ್ಲಿ ಸೋಮವಾರ ಬೆಳ್ಳಿಗ್ಗೆ ಸಣ್ಣ ಹಾಲಿನ ಪಾಕೇಟ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಒಲೆಯ ಮೇಲೆ ಚಹಾ ಮಾಡಲು ಇಟ್ಟಾಗ
ಹಾಲು ಒಡೆದು ಹೋಗಿದ್ದು ಪಾಕೇಟ್ ಗಮನಿಸಿದಾಗ ಸೆ.24 ಮತ್ತೊಂದರ ಮೇಲೆ ಸೆ.27 ಎಂದು ನಮೂದಿಸಲಾಗಿದೆ.
ಅಂದಿನ ಹಾಲನ್ನು ಅಂದೇ ಮಾರಾಟ ಮಾಡಬೇಕಿದ್ದು,ಉಳಿದಿರುವ ಹಾಲನ್ನು ವಾಪಸ್ ಕೆಎಂಎಫ್ ಗೆ ಮರಳಿಸಬೇಕಿದೆ.ಆದರೆ ಔಟ್ ಲೇಟ್ ಮಾರಾಟಗಾರರು ಅವಧಿ ಮೀರಿದ ಹಾಲು,ಮೊಸರು ಮಾರಾಟ ಮಾಡಿ ಗ್ರಾಹಕರ ಆರೋಗ್ಯ ಕೆಡಲು ಕಾರಣರಾಗುತ್ತಿದ್ದಾರೆ. ಚಿಕ್ಕಮಕ್ಕಳಿಗೆ ನಂದಿನಿ ಹಾಲನ್ನು ಬಹುತೇಕ ತಾಯಂದಿರು ಕುಡಿಸುತ್ತಾರೆ, ಎಲ್ಲರ ನಂಬಿಕೆಗೆ ಪಾತ್ರವಾಗಿರುವ ನಂದಿನಿ ಹಾಲಿನ ಗುಣಮಟ್ಟ ಮತ್ತು ನಿಗದಿತ ಅವಧಿ ಮಾರಾಟ ಅವಶ್ಯಕವಾಗಿದೆ.
ಕೆಎಂಎಫ್ ಹಾಗೂ ರೈತರ ಹಿತ ಕಾಯುವ ಭರವಸೆಯೊಂದಿಗೆ ಹಾಲಿನ ಸೊಸೈಟಿಗಳ ಮುಖಾಂತರ ನಿರ್ದೇಶಕರಾಗಿ ಗೆದ್ದು ಹೋಗಿರುವ ಪ್ರತಿನಿಧಿಗಳು ಒಂದು ದಿನವೂ ಅಂಗಡಿಗಳ ವ್ಯಾಪಾರ ಹಾಗೂ ಗ್ರಾಹಕರ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ, ಗಂಗಾವತಿಯಲ್ಲಿ ಅವಧಿ ಮುಗಿದ ಹಾಲಿನ ಮಾರಾಟವಾಗುತ್ತಿದ್ದರೂ, ಈ ಭಾಗದ ಕೆಎಂಎಫ್ ನಿರ್ದೇಶಕರು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.
***
ಆಹಾರ ಸುರಕ್ಷತಾ ಕ್ರಮಗಳನ್ನು ಅನುಷ್ಟಾನ ಮಾಡುವ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಯನ್ನು ಅವಧಿ ಮೀರಿದ ಕೆಎಂಎಫ್ ನಂದಿನಿ ಹಾಲಿನ ಕುರಿತು ಮಾತನಾಡಿಸಿದರೆ ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಅಂಗಡಿ ಮುಂಗಟ್ಟುಗಳಲ್ಲಿ ಆಹಾರ ಪದಾರ್ಥಗಳ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸುವ ಅಂಗಡಿ ಮುಂಗಟ್ಟುಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ.ಗಂಗಾವತಿಯಲ್ಲಿ ಕೆಎಂಎಫ್ ಔಟ್ ಲೇಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಪಾಕೇಟ್ ಮಾರಾಟ ಮಾಡುವ ಕುರಿತು ದೂರು ಬಂದಿದ್ದು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ.
-ನಾಗರಾಜ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ.
***
ಕೆಎಂಎಫ್ ಪಿ ಎಲ್ ಡಿ ಬ್ಯಾಂಕ್ ಹತ್ತಿರ ಇರುವ ಕೆಎಂಎಫ್ ಔಟ್ ಲೇಟ್ ಕೇಂದ್ರದಲ್ಲಿ ಹಾಲಿನ ಪಾಕೆಟ್ ಖರೀದಿ ಮಾಡಲಾಗಿದ್ದು, ಪದೇಪದೇ ಅವಧಿ ಮೀರಿದ ಹಾಲಿನ ಪಾಕೆಟ್ ಅನ್ನು ಔಟ್ ಲೇಟ್ ಅಂಗಡಿಯವರು ಕೊಡುತ್ತಿದ್ದಾರೆ. ಮನೆಗೆ ಒಯ್ದು ಒಲೆಯ ಮೇಲೆ ಕಾಯಿಸಿದ ನಂತರ ಈ ಹಾಲು ಒಡೆದು ಹೋಗುತ್ತಿದ್ದು ಮಕ್ಕಳಿಗೆ ಕುಡಿಸಲು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಆಹಾರ ಸುರಕ್ಷತಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರಸಭೆಯವರು ಕೂಡಲೇ ಹಾಲಿನ ಔಟ್ಲೆಟ್ ಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಪರವಾಗಿ ರದ್ದುಗೊಳಿಸಬೇಕು.
-ಚನ್ನಬಸವ ಹಿರೇಜಂತಗಲ್ ಗ್ರಾಹಕರು.
***
ಕೆಎಂಎಫ್ ನಂದಿನಿ ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು, ರೈತರು ರೈತರಿಗಾಗಿ ಇರುವಂತ ಈ ಸಂಸ್ಥೆಯಾಗಿದ್ದು,ಈ ಬಗ್ಗೆ ಎಲ್ಲರೂ ಕಾಳಜಿ ವ್ಯಕ್ತಪಡಿಸಬೇಕು. ಗಂಗಾವತಿಯ ಕೆಲವು ಔಟ್ಲೆಟ್ ಗಳಲ್ಲಿ ಅವಧಿ ಮೀರಿದ ಹಾಲಿನ ಮಾರಾಟ ಆಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ,ಔಟ್ಲೆಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಅವಧಿ ಮುಗಿದ ಹಾಲು ಸೇರಿದಂತೆ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವುದು ಕೆಎಂಎಫ್ ನಿಯಮದಲ್ಲಿ ವಿರುದ್ಧವಾಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಗ್ರಾಹಕರು ಸಹ ಕೂಡಲೇ ಕೆಎಂಎಫ್ ಗಮನಕ್ಕೆ ತಂದು ನ್ಯೂನ್ಯತೆಯನ್ನು ಸರಿಪಡಿಸಲು ಸಹಕರಿಸಬೇಕು.
-ಸತ್ಯನಾರಾಯಣ ಕೋಟಯ್ಯಕ್ಯಾಂಪ್ ನಿರ್ದೇಶಕರು ಕೆಎಂಎಫ್ ಬಳ್ಳಾರಿ.