Breaking News
ಬಾಗಲಕೋಟೆ ಉಪಚುನಾವಣೆ: ಗಡ್ಡದವರನ್ನು ಹಾಗೂ ಟೂರ್ ನವರನ್ನು ಹಣಿಯಬೇಕು ಸಿಸಿ ಪಾಟೀಲ್ ಆಕ್ಷೇಪಾರ್ಹ ಹೇಳಿಕೆ.ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್!

 

*ವೀರಶೈವ ಲಿಂಗಾಯತರು ಒಳಪಂಗಡ ಮರೆತು ಚರಂತಿಮಠ ಅವರನ್ನು ಬೆಂಬಲಿಸಲು ಪಾಟೀಲ್ ಕರೆ.

ಕಿಷ್ಕಿಂಧವಾಣಿ ಸುದ್ದಿ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಅವರು ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಹೇಳಿರುವ ಆಕ್ಷೇಪಾರ್ಹ ಮಾತುಗಳನ್ನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು ವ್ಯಾಪಕ ಟೀಕೆಗಳು ಕೇಳಿಬಂದಿವೆ. ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡುವಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸದೃಢ ಅಭ್ಯರ್ಥಿಯಾಗಿದ್ದು ವೀರಶೈವ ಲಿಂಗಾಯತ ಸಮಾಜದ ಒಳಪಂಗಡ ಮರೆತು ಎಲ್ಲರೂ ಅವರನ್ನು ಬೆಂಬಲಿಸಬೇಕು. ಜೊತೆಗೆ ಗಡ್ಡದವರನ್ನು ಮತ್ತು ಟೂರ್
ನವರನ್ನು ಹಣೆಯಲು ಅಥವಾ ತಡೆಹಿಡಿಯುವ ಶಕ್ತಿ ವೀರಣ್ಣ ಚರಂತಿ ಮಠ ಅವರಿಗಿದೆ. ಆದ್ದರಿಂದ ಇವರನ್ನು ಹಣೆಯಲು ಸರ್ವರೂ ಬಿಜೆಪಿ ಅಭ್ಯರ್ಥಿಯನ್ನು ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ಬೆಂಬಲಿಸಬೇಕು. ನಾನು ದಾವಣಗೆರೆಯ ಬಿಜೆಪಿ ಉಸ್ತುವಾರಿಯಾಗಿದ್ದರೂ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಹಿರಿಯರಾದ ಬಸವರಾಜ ಪಾಟೀಲ್ ಯತ್ನಾಳ್ ಸೂಚನೆ ಮೇರೆಗೆ ದಾವಣಗೆರೆಯಿಂದ ಇಲ್ಲಿಗೆ ಬಂದು ವೀರಶೈವ ಲಿಂಗಾಯತ ಸಮಾಜದ ಸಭೆಯನ್ನು ನಡೆಸುತ್ತಿದ್ದೇನೆ, ಆದ್ದರಿಂದ ಈ ಉಪಚುನಾವಣೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸಲು ಭ್ರಷ್ಟ ಸರ್ಕಾರವನ್ನು ಕಿತ್ತುಹೊಗೆಯಲು
ಒಳ್ಳೆಯ ಅವಕಾಶವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸ
ಬೇಕು ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಸಿ ಸಿ ಪಾಟೀಲ್ ಅವರ ವಿಡಿಯೋ ಹಾಕಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಂಸರನ್ನು ಮತ್ತು ಕುರುಬ ಸಮಾಜದವರನ್ನು ಪಾಟೀಲರು ಟೀಕೆ ಮಾಡಿದ್ದಾರೆ ಅವರಿಗೆ ಧಿಕ್ಕಾರ ಎನ್ನುವ ಸ್ಟೇಟಸ್ಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಬಿಸಿಎಂ‌ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಪುಂಡರ ಹಾಳಿ ತಡೆಯುವಂತೆ ತಾ.ಪಂ.ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ.

* ಕಳಪೆ ಆಹಾರ ಪೂರೈಕೆ ಆಸ್ವಚ್ಛತೆ ಸೇರಿದತೆ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಪ್ರಶಾಂತ ನಗರದಲ್ಲಿರುವ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ನಲ್ಲಿ ಪ್ರತಿನಿತ್ಯವೂ ಪುಂಡರ ಹಾವಳಿ ಹೆಚ್ಚಾಗಿದ್ದು ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದು ವಿದ್ಯಾಭ್ಯಾಸ ಮಾಡಬೇಕಾಗಿದೆ. ಆದ್ದರಿಂದ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತಿದ್ದು ತರಕಾರಿ ಸೇರಿದಂತೆ ಪೌಷ್ಟಿಕಾಂಶ ಇರುವ ಆಹಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಬಿ ಸಿ ಎಂ ಇಲಾಖೆಯ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಎಸ್ ಎಫ್ ಐ ನೇತೃತ್ವದಲ್ಲಿ ತಾಲೂಕ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡ ಬಾಲಾಜಿ ಮಾತನಾಡಿ, ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಅತ್ಯಂತ ಚಿಕ್ಕ ಬಿಲ್ಡಿಂಗ್ ನಲ್ಲಿ ಇದ್ದು ವಿದ್ಯಾರ್ಥಿನಿಯರು ಗಾಳಿ, ಬೆಳಕು ಇಲ್ಲದಂತ ಸ್ಥಿತಿಯಲ್ಲಿ ಅ ನೈರ್ಮಲ್ಯಯುತ ಜೀವನ‌‌ ನಡೆಸಬೇಕಿದೆ. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ರಾತ್ರಿ ಊಟ ಕಳಪೆ ಮಟ್ಟದ್ದಾಗಿರುತ್ತದೆ. ಸೂಕ್ತ ತರಕಾರಿ ಇರುವುದಿಲ್ಲ, ಅಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತೆ, ಹಣ್ಣುಗಳನ್ನು ನೀಡುತ್ತಿಲ್ಲ, ದಿನಪತ್ರಿಕೆ ತರಿಸುತ್ತಿಲ್ಲ, ಹೀಗೆ ಹಲವು ಸಮಸ್ಯೆಗಳ ಮಧ್ಯೆ ನಿತ್ಯವೂ ಹಾಸ್ಟೆಲ್ ಗೆ ಪುಂಡರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಅಥವಾ ಅರಿಶಿನವನ್ನು ಹಚ್ಚಿಕೊಂಡು ವಿದ್ಯಾರ್ಥಿನಿಯರ ರೂಮುಗಳನ್ನು ಮತ್ತು ಮಳಿಗೆಯ ಮೇಲೆ ನಿತ್ಯವೂ ರಾತ್ರಿ ಸಂದರ್ಭದಲ್ಲಿ ಕೆಲ ಯುವಕರು ಆಗಮಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ವಾರ್ಡನ್ ಹಾಗೂ ಸೆಕ್ಯೂರಿಟಿಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ಪ್ರಶಾಂತ್ ನಗರದಲ್ಲಿರುವ ಹಾಸ್ಟೆಲ್ ನ್ನು ಬಸ್ ನಿಲ್ದಾಣದ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು. ಪೌಷ್ಟಿಕವುಳ್ಳ ಆಹಾರವನ್ನು ವಿತರಣೆ ಮಾಡಬೇಕು.ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಹಣ್ಣು ಸೇರಿದಂತೆ ಸರ್ಕಾರದ ನಿಯಮದಂತೆ ಆಹಾರ ಪದಾರ್ಥಗಳನ್ನು ನಿರ್ಧರಿಸಬೇಕು. ರವಿವಾರ ಬೆಳಗ್ಗೆ ಇಡ್ಲಿ ಚಟ್ನಿಯನ್ನು ಉಪಾರಕ್ಕಾಗಿ ವಿತರಿಸಿದ್ದು ಇವು ವಾಸನೆಯಿಂದ ಕೂಡಿವೆ, ನಿತ್ಯವೂ ಇಂತಹ ಆಹಾರವನ್ನು ಸೇವನೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಕೂಡಲೇ ವಾರ್ಡನ್ ಅವರನ್ನು ವರ್ಗಾವಣೆ ಮಾಡಿ ಸರಿಯಾಗಿ ಆಹಾರ ಪದಾರ್ಥಗಳನ್ನು ವಿತರಿಸುವ ವಾರ್ಡನ್ ಅವರನ್ನು ನೇಮಿಸುವಂತೆ ವಿದ್ಯಾರ್ಥಿಗಳು ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಯರ ಬೇಡಿಕೆಯನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಮತ್ತು ಎಸ್ಎಫ್ಐ ನ ವಿವಿಧ ಪದಾಧಿಕಾರಿಗಳು ಉಪಸ್ಥಿತಮಾತನಾಡಿ,

ಹಗರಿಬೊಮ್ಮನಹಳ್ಳಿಯ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

*ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಸ್ಪಂದನೆ.
*ಶೀಘ್ರವಾಗಿ ಕಾಮಗಾರಿ ಆರಂಭ ಸಾಧ್ಯತೆ

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಬಳಿಯ ರೈಲ್ವೆ ಗೇಟ್ ನಂಬರ್ 37 ರಲ್ಲಿ ಮೇಲ್ಸೇತುವೆ ಹಾಗೂ ಪಟ್ಟಣದ ನೇತಾಜಿ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಹತ್ತೀರದ ರೈಲ್ವೆ ಗೇಟ್ ನಂಬರ್ 38ರ ಬಳಿ ಕೆಳ ಸೇತುವೆ(ಅಂಡರ್ ಪಾಸ್) ನಿರ್ಮಾಣದ ಕಾಮಗಾರಿಗೆ ಭಾರತೀಯ ರೈಲ್ವೆ ಇಲಾಖೆ ಟೆಂಡರ್ ಕರೆದಿದ್ದು ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಅವರ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ. ರೂ, 43.24 ಕೋಟಿ ವೆಚ್ಚದ ಮೇಲ್ಸೇತುವೆ, ಅಂಡರ್ ಪಾಸ್ ಕಾಮಗಾರಿಗಳ ಮಂಜೂರಾತಿ ಪಡೆದು ಟೆಂಡರ್ ಸಹ ಆಗಿದೆ.
ಕಳೆದ ನಾಲ್ಕೈದು ದಶಕಗಳಿಂದ ರಾಮನಗರ ಮತ್ತು ಈಶ್ವರಿ ವಿವಿ ಹತ್ತಿರ ಕೆಓಆರ್ ಕಾಲೋನಿ ಹತ್ತಿರ ರೈಲ್ವೆ ಬಂದಾಗೆಲ್ಲ ತಾಸು ಗಟ್ಟಲೆ ವಾಹನಗಳು,ಜನರು ನಿಲ್ಲಬೇಕಾಗಿತ್ತು. ಹಲವು ಅಪಘಾತಗಳು ಸಂಭವಿಸಿ ಹಲವು ಜನ ಹಾಗೂ ಜಾನುವಾರುಗಳು ಸಹ ಮೃತಪಟ್ಟ ಘಟನೆಗಳು ಜರುಗಿದ್ದವು. ಸಂಘ ಸಂಸ್ಥೆಗಳು ನೂರಾರು ಪ್ರತಿಭಟನೆ ನಡೆಸಿದರೂ ಮೇಲ್ಸೇತುವೆ ನಿರ್ಮಾಣ ಆಗಿರಲಿಲ್ಲ.
ಇದೀಗ ಜನರ ದಶಕಗಳ ಬೇಡಿಕೆಯನ್ನು ಸಂಸದ ಈ ತುಕಾರಾಂ ಈಡೇರಿಸಿದ್ದಾರೆ.
ಕೊಟ್ಟೂರು-ವ್ಯಾಸ್ ಕಾಲೋನಿ ಮಾರ್ಗದಲ್ಲಿ ಹಗರಿಬೊಮ್ಮನಹಳ್ಳಿ ಹೊರತು ಪಡಿಸಿ ಇತರೆ ನಿಲ್ದಾಣಗಳಲ್ಲಿ ಕ್ರಾಸಿಂಗ್ ಸೌಲಭ್ಯ ಇಲ್ಲದ ಕಾರಣಕ್ಕೆ ರೈಲು ಬಂದಗೊಮ್ಮೆ ಈ ಎರಡು ಗೇಟ್ ಗಳನ್ನು ಬಂದ್ ಮಾಡಿದಾಗ ಇಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನಿಂದ ಜನತೆ ಮತ್ತು ಸವಾರರು, ಚಾಲಕರು ರೋಸಿಹೋಗಿದ್ದರು.
ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎನ್ನುವುದು ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ಈ ತಾಲೂಕಿನ ಜನತೆ ಹಾಗು ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಮೇಲೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ದಶಕಗಳ ಬೇಡಿಕೆ ಆಗಿತ್ತು.
ಹಲವು ದಶಕಗಳಿಂದಲೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನೆನಗುದಿಗೆ ಬಿದ್ದಿದ್ದ ಈ ಎರಡು ಕಾಮಗಾರಿಗಳು ಪ್ರಸ್ತುತ ತ್ವರಿತಗತಿಯಲ್ಲಿ ಮೇಲೆದ್ದು ನಿಲ್ಲಲು ಸಾಧ್ಯವಾಗಿದೆ.

ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಹಳೆಯ ಚೈನ್ ಗಳಲ್ಲಿ ಮರುಜೋಡಣೆಗೆ ಆಕ್ಷೇಪ, ರೈತರಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿಗೆ ಮನವಿ!

*ಸಿಂಧನೂರು ಕಾರ್ಯಕ್ರಮಕ್ಕೆ ತೆರಳಿದ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಅದ್ಧೂರಿ ಸ್ವಾಗತ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಡ್ಯಾಂ ನ ಕ್ರಸ್ಟ್ ಗೇಟ್ಗಳನ್ನು ಹಳೆಯ ಚೈನುಗಳಲ್ಲಿ ಮರುಜೋಡಣೆ ಮಾಡುತ್ತಿದ್ದು ಇದರಿಂದ ಶಾಶ್ವತ ದುರಸ್ತಿ ಅನುಮಾನವಾಗಿದೆ. ಕೂಡಲೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಹೊಸ ಚೈನುಗಳ ಮೂಲಕ ಕ್ರಸ್ಟ್ ಗೇಟ್ಗಳನ್ನು ಮರುಜೊಡಣೆ ಮಾಡುವಂತೆ ಆದೇಶ ಮಾಡಬೇಕೆಂದು ರೈತರು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿಯವರು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಹೊಸಚೈನ್ ಹಾಕಲು ಸೂಚನೆ ನೀಡಲಾಗುತ್ತದೆ.

ಜೊತೆಗೆ ಎಲ್ಲಾ 32 ಕ್ರಸ್ಟ್‌ ಗೇಟ್ಗಳನ್ನು ಮರುಜೊಡನೆ ಮಾಡುವ ಸಂದರ್ಭದಲ್ಲಿ ಚೈನ್ ಗಳನ್ನು ಹೊಸದಾಗಿ ಅಳವಡಿಸಲು ಟೆಂಡರ್ ನಲ್ಲಿ ಅವಕಾಶವಿದ್ದರೆ ಕೂಡಲೇ ಅದನ್ನು ಮಾಡುವಂತೆ ತಿಳಿಸುವುದಾಗಿ ಅವರು ಹೇಳಿದರು.

ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಂಧನೂರಿಗೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಗಂಗಾವತಿಯಲ್ಲಿ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ

ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಸೇರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ.ಜೆಡಿಎಸ್ ಮುಖಂಡ ರಾಜುನಾಯಕ,ವೆಂಕಟೇಶ ಚಲುವಾದಿ,

ಬಿಜೆಪಿಯ ಮಾಜಿ ನಗರಸಭೆ ಸದಸ್ಯರಾದ ವಾಸುದೇವ ನವಲಿ,ನೀಲಕಂಠಪ್ಪ ಕಟ್ಟಿಮನಿ ಸೇರಿದಂತೆ ಸ್ಥಳೀಯ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು. ಉಪಸ್ಥಿತರಿದ್ದರು.

ತರಕಾರಿ ಅಂಗಡಿಯೊಳಗಿದ್ದ ಹಾವನ್ನು ಸೆರೆ ಹಿಡಿದ ಉರಗ ಪ್ರೇಮಿ ರವಿ ಗೌಳಿ!

*ಆರು ಅಡಿ ಉದ್ದದ ಕೆರೆಹಾವು ಸಂರಕ್ಷಣೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಆನೆಗುಂದಿ ರಸ್ತೆಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದ ಪಕ್ಕದ ಸಣ್ಣ ತರಕಾರಿ ಅಂಗಡಿಯೊಳಗಿದ್ದ ಆರು ಅಡಿ ಉದ್ದದ ಬೃಹತ್ ಕೆರೆಹಾವೊಂದನ್ನು ಸೆರೆ ಹಿಡಿದು ಸಂರಕ್ಷಣೆ ಮಾಡಲಾಗಿದೆ.

ತರಕಾರಿ ಅಂಗಡಿಯಲ್ಲಿದ್ದ ಹಾವನ್ನು ಕಂಡು

ಸಾರ್ವಜನಿಕರು ಭಯಭೀತರಾಗಿದ್ದರು. ಶುಕ್ರವಾರ ಸಂಜೆ 6:30 ರ ಸುಮಾರಿನಲ್ಲಿ ಸೀತಾರಾಮ ಕಲ್ಯಾಣ ಮಂಟಪದ ಬಳಿಯಿರುವ ಉಮೇಶ ಅಯ್ಯಾ ಎಂಬುವವರು ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ದಿಢೀರನೆ ಸುಮಾರು ಆರು ಅಡಿ ಉದ್ದದ ಕೆರೆಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ತಕ್ಷಣ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಗಾಬರಿಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಜನನಿಬಿಡ ರಸ್ತೆಯಾಗಿರುವುದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣವೇ ಹಾವಿನ ಸಂರಕ್ಷಕ ಪರಿಸರಪ್ರೇಮಿ ರವಿ ಗೌಳಿ ನಗರದ (ಲಕ್ಷ್ಮಿ ಕ್ಯಾಂಪ್)ರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪರಿಣಿತರು ಬಹಳ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ, ಯಾವುದೇ ಅನಾಹುತವಾಗದಂತೆ ತರಕಾರಿ ಬುಟ್ಟಿಗಳ ನಡುವೆ ಅವಿತು ಕುಳಿತಿದ್ದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.ಹಿಡಿದ ಹಾವನ್ನು ಸುರಕ್ಷಿತವಾಗಿ ಚೀಲದಲ್ಲಿ ತುಂಬಿಕೊಂಡು ಜನವಸತಿ ಇಲ್ಲದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ರಕ್ಷಕರು ತಿಳಿಸಿದ್ದಾರೆ. ಕೆರೆಹಾವು ವಿಷಕಾರಿಯಲ್ಲದಿದ್ದರೂ, ಅದರ ಬೃಹತ್ ಗಾತ್ರವು ಜನರಲ್ಲಿ ಭೀತಿ ಹುಟ್ಟಿಸಿತ್ತು. ಹಾವು ಸೆರೆಯಾದ ನಂತರ ಅಂಗಡಿ ಮಾಲೀಕರು ಹಾಗೂ ಆ ಭಾಗದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬೇಸಿಗೆಯಲ್ಲಿ ಹಾವು ಕಾಣಿಸುವುದು ಸಹಜ,ಕೊಲ್ಲಬೇಡಿ: ಬೇಸಿಗೆಯಲ್ಲಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚು ಇರುತ್ತದೆ ಆದ್ದರಿಂದ ಹಾವು,ಚೇಳು ಸೇರಿದಂತೆ ಇತರೆ ಕೆಲವು ವಿಷ ಜಂತುಗಳು ಹೊರಗೆ ಬರುವುದು ಸಹಜವಾಗಿದೆ. ಆದ್ದರಿಂದ ಹಾವು ಸೇರಿದಂತೆ ವಿಷಕಾರಿ ಜಂತುಗಳನ್ನು ಹೊಡೆದು ಸಾಯಿಸದಂತೆ ಉರಗ ಪ್ರೇಮಿ ರವಿ ಗೌಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

ಅಂತರ ವಿಶ್ವ ವಿದ್ಯಾಲಯ ಖೋ-ಖೋ ತಂಡಕ್ಕೆ ಹೆ.ಆರ್.ಶ್ರೀರಾಮುಲು ಕಾಲೇಜು ವಿದ್ಯಾರ್ಥಿ ಬಸವರಾಜ ಆಯ್ಕೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ಅಂತ‌ರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ತಂಡಕ್ಕೆ ಕೊಪ್ಪಳ ವಿವಿಯಿಂದ ಗಂಗಾವತಿಯ ಹೆಚ್.ಆರ್.ಶ್ರೀರಾಮುಲು ಮಹಾವಿದ್ಯಾಲಯದ ವಿದ್ಯಾರ್ಥಿ ಬಸವರಾಜ್.ಬಿ ಆಯ್ಕೆಯಾಗಿದ್ದಾನೆ. ದಾವಣಗೆರೆಯಲ್ಲಿ ನಡೆಯುವ ದಕ್ಷಿಣ ವಲಯದ ಅಂತ‌ರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಕೊಪ್ಪಳ ವಿವಿಯನ್ನು ಪ್ರತಿನಿಧಿಸಲಿದ್ದರೆ. ಕ್ರೀಡಾಪಟು ಬಸವರಾಜ ಅವರಿಗೆ ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎ. ಸೋಮರಾಜು, ಪ್ರಾಚಾರ್ಯ ಡಾ. ವಿಜಯಾನಂದ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮೋಹನ್ ಹೊಸಕೋಟಿ ಅವರು ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.

ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ತುಂಬಾ ಕೇಸರಿ ಕಲಿಗಳ ಕಲರವ!

*ಹನುಮಜಯಂತಿಯಂದು ಹನುಮಮಾಲಾಧಾರಿಗಳಿಂದ ಇರುಮುಡಿ ವಿಸರ್ಜನೆ.

* ಅಂಜನಾದ್ರಿಯಲ್ಲಿ ಹನುಮ ಜಯಂತಿ: ಪವಮಾನ ಹೋಮ, ಯಶಸ್ವಿ ಧಾರ್ಮಿಕ ಕಾರ್ಯಕ್ರಮಗಳು

* ರಾಜ್ಯದ ವಿವಿಧತೆಗಳಿಂದ ಹನುಮ ಮಾಲಾಧಾರಿಗಳಿಂದ ಅಂಜನಾದ್ರಿಯ ದರ್ಶನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಶ್ರೀ ರಾಮನ ಬಂಟ ಹನುಮಂತ ಜನಿಸಿನ ದಿನ ಹನುಮ ಜಯಂತಿ ಆಚರಣೆಯನ್ನು ದೇಶಾದ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಲಾಗುತ್ತದೆ. ಹನುಮ ಭಕ್ತರು ವಿಶೇಷವಾಗಿ ಹನುಮಮಾಲೆ ಧರಿಸಿ ಹನುಮ ಜಯಂತಿಯಂದು ಇರುಮುಡಿ ವಿಸರ್ಜನೆ ಮತ್ತುಮಾಲಾ ವಿಸರ್ಜನೆಯನ್ನು ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಮಾಡುವುದು ಸಾಂಪ್ರದಾಯವಾಗಿದೆ. ಗುರುವಾರ ಹನುಮ ಜಯಂತಿಯಂದು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರು ತಮ್ಮ ಹನುಮ ಮಾಲೆಯನ್ನು ಇರುಮುಡಿಯನ್ನು ಅಂಜನಾದ್ರಿಯಲ್ಲಿ ವಿಸರ್ಜಿಸಿ ಹೋಮ,ಹವನದಲ್ಲಿ ಪಾಲ್ಗೊಂಡು ಪುನೀತರಾದರು. ಪೊಲೀಸ್ ಇಲಾಖೆಯ ಮಾಹಿತಿಯಂತೆ50,000 ಕ್ಕೂ ಹೆಚ್ಚು ಹನುಮ ಭಕ್ತರು ಅಂಜನಾದ್ರಿಯಲ್ಲಿ ಸೇರಿ ಧಾರ್ಮಿಕ ಆಚರಣೆಯ ಮೂಲಕ ಹನುಮ ಮಾಲೆಯ ವೃತಾಚರಣೆ ಅಂತಿಮಗೊಳಿಸಿದರು. ದೇವಸ್ಥಾನ ಕಮಿಟಿಯವರು ಹನುಮ ಮಾಲೆ ವಿಸರ್ಜನೆ ಮತ್ತು ಇರುಮುಡಿ ವಿಸರ್ಜನೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಗಳನ್ನು ವ್ಯವಸ್ಥೆ ಮಾಡಿ ಪವಮಾನ ಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದ್ದರು.

ಹನುಮ ಜಯಂತಿಯಂದು ಶ್ರೀ ಆಂಜನೇಯನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಶ್ರೀ ಆಂಜನೇಯನ ದೇವಸ್ಥಾನ ಹಾಗೂ ಬೆಟ್ಟಕ್ಕೆ ದೀಪಾಲಂಕಾರದ ಮೂಲಕ ಶೃಂಗರಿಸಲಾಗಿತ್ತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರ ವಾಹನಗಳ ನಿಲುಗಡೆಗೆ ಮತ್ತು ಸಂಚಾರಿ ವ್ಯವಸ್ಥೆಯನ್ನು ಗ್ರಾಮೀಣ ಪೊಲೀಸರು ವ್ಯವಸ್ಥಿತವಾಗಿ ಮಾಡಿದ್ದರು.

ಹನುಮ ಜಯಂತಿಯಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಹನುಮ ಭಕ್ತರು ಅಂಜನಾದ್ರಿಯನ್ನ ಹತ್ತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕೊಲೆ ಪ್ರಕರಣ:20ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿಗೆ ಜೀವವಾಧಿ ಶಿಕ್ಷೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ;ಕೊಲೆ ಮತ್ತು ಮರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಮಾರು ೨೦ ವರ್ಷಗಳಿಂದಲೂ ತಲೆ ಕರೆಸಿಕೊಂಡಿದ್ದ ಕನಕಗಿರಿ ತಾಲೂಕಿನ ಬೈಲ್ ಲಖಂಪೂರದ ನಿವಾಸಿ ಪರಶುರಾಮ ಅಲಿಯಾಸ್ ರಾಮಣ್ಣ ತಾಯಿ ದುರುಗಮ್ಮ

(49) ಈತನಿಗೆ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಜ ಇವರು ತೀರ್ಪು ನೀಡಿ‌ ಜೀವಾವಧಿ ಶಿಕ್ಷೆ ಮತ್ತು 35 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ.

ಪ್ರಕರಣ:ದಿನಾಂಕ 15-01-2004 ರ ಮಧ್ಯಾನ್ಹ 3 ಗಂಟೆ ಸುಮಾರಿಗೆ ದುರುಗಪ್ಪ ನಾಯಕ ಹಾಗೂ ಆರೋಪಿತನ ಹೆಂಡತಿ ದುರುಗಪ್ಪ ನಾಯಕ ಮೇಲೆ ಬಲವಾಗಿ ಚಾಕುವಿನಿಂದ ಬಲ ಪಕ್ಕೆಗೆ ಇರಿದು ತೀವ್ರ ಗಾಯಗೊಳಿಸಿ ಕೊಲೆ ಮಾಡಿ ನಂತರ ಸ್ಥಳದಲ್ಲಿದ್ದ ಆರೋಪಿತನ ಹೆಂಡತಿ ಗೆ ಹೊಟ್ಟೆ ಭಾಗದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ‌ ಘಟನೆಯ ಕುರಿತ ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಡಿ ಸಲ್ಲಿಸಲಾಗಿತ್ತು.ಪ್ರಕರಣ ವಿಚಾರಣಾ ಹಂತದಲ್ಲಿ ಇದ್ದ ಸಂದರ್ಭದಲ್ಲಿ ಸದ್ರಿ ಆರೋಪಿ ತಲೆ ಮರೆಸಿಕೊಂಡು ಬೇರೆ ಹೆಸರುಗಳಿಂದ ತನ್ನ ಇರುವಿಕೆಯನ್ನು ಮರೆಮಾಚಿ ಬೆಂಗಳೂರಿನಲ್ಲಿ ವಾಸವಾಗಿದ್ದ ಸದ್ರಿ ಆರೋಪಿತನ ಬಗ್ಗೆ ಕನಕಗಿರಿ ಪೊಲೀಸರು ಶೋಧ ನಡೆಸಿ ಆರೋಪಿತನನ್ನು 2025 ರಲ್ಲಿ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ನಾಗಲಕ್ಷ್ಮಿ ವಾದ ಮಂಡಿಸಿದ್ದಾರೆ. ಇದೀಗ ಆರೋಪಿ ಪರಶುರಾಮ ಅಲಿಯಾಸ್ ರಾಮಣ್ಣ ಇವರಿಗೆ‌ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ.

ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ಗೆ ಆಗ್ರಹಿಸಿ ಸಾಣಾಪೂರ ಗ್ರಾ.ಪಂ.ಎದುರು ಗ್ರಾಮಸ್ಥರ ಪ್ರತಿಭಟನೆ

https://youtu.be/iVl7XmdYS5U?si=oQW6r1y1DWEjUNvf

https://youtu.be/iVl7XmdYS5U?si=oQW6r1y1DWEjUNvf

 

*ಚಹಾದಂಗಡಿ, ಸೇರಿ ವ್ಯಾಪಾರ ಮತ್ತು ವಿದ್ಯುತ್ ಸಂಪರ್ಕಕ್ಕೆ ಪ್ರಾಧಿಕಾರದ ಎನ್‌ಓಸಿ ಬೇಡ

*ಸಾಣಾಪೂರ ಭಾಗದಲ್ಲಿಲ್ಲ ಪುರಾತತ್ವ ಇಲಾಖೆಯ ಸ್ಮಾರಕಗಳು ಸ್ಥಳೀಯರ ಪ್ರತಿಪಾದನೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಸಾಣಾಪೂರದಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಟ್ರೇಡ್ ಲೈಸೆನ್ ಕೊಡದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮವನ್ನು ರೂಪಿಸಿದ್ದು ಇದರಿಂದ ಕೂಡಲೇ ಟ್ರೇಡ್ ಲೈಸೆನ್ಸ್ ಕೊಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸಾಣಾಪೂರ ಗ್ರಾಮಸ್ಥರು, ಮಹಿಳೆಯರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿ ಪಿಡಿಓ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಾಣಾಪೂರ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಚಹಾದಂಗಡಿ, ತಂಪುಪಾನೀಯ, ಕಿರಾಣಿ, ಎಳೇನೀರು,ಕಾರಕುಟ್ಟುವ ಮಿಷನ್ ಸೇರಿ ಸಣ್ಣಪುಟ್ಟ ವ್ಯಾಪಾರ ಮಾಡಲು ಗ್ರಾ.ಪಂ.ಹಾಗೂ ಜೆಸ್ಕಾಂ ಅಧಿಕಾರಿಗಳು ನೋಟೀಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಲಕ್ಷಾಂತ ರೂ.ಗಳ ದಂಡ ವಿಧಿಸಿ ನೋಟೀಸ್ ನೀಡುತ್ತಿದ್ದು ಮಾನಸೀಕ ಹಿಂಸೆಯಾಗಿದೆ. ಮನೆಯ ಮುಂದೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರಾಧಿಕಾರದ ಎನ್‌ಓಸಿ ಕಡ್ಡಾಯ ಎಂದು ಗ್ರಾ.ಪಂ. ಪಿಡಿಓ ಅವರು ನಿರ್ಮಾಣ ಕಾರ್ಯ ನಿಲ್ಲಿಸುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದ್ದು ಕೂಡಲೇ ಗ್ರಾಮದ ಪ್ರತಿ ಕಾರ್ಯಕ್ಕೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಎನ್‌ಓಸಿ ಬೇಕೆನ್ನುವ ಗ್ರಾ.ಪಂ ಜೆಸ್ಕಾಂ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಾಣಾಪೂರ ಭಾಗದ ಜನರನ್ನು ಅವಮಾನಿಸುತ್ತಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಟ್ರೇಡ್ ಲೈಸೆನ್ಸ್ ಇಲ್ಲದೇ ಇನ್ಸೂರೆನ್ಸ್ ಕ್ಲೆöÊಮ್ ಕೂಡ ಆಗುತ್ತಿಲ್ಲ. ಇಲ್ಲಿಯ ಭೂಮಿ, ಮನೆ ಖರೀದಿಗೂ ಕ್ವಾರಿ ಬಿದ್ದಿದ್ದು ಸಾಣಾಪೂರ ಭಾಗದ ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಸಾಣಾಪೂರ ಜನಸಾಮಾನ್ಯರು ಸ್ವಾವಲಂಭಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ಕೋಡಿ ನಾಗೇಶ, ಶೇರಖಾನ್ ಸೇರಿ ಗ್ರಾಮದ ಮಹಿಳೆಯರು, ರೈತರು ಕೂಲಿಕಾರರು ಪಾಲ್ಗೊಂಡಿದ್ದರು.

**

ಸಾಣಾಪೂರ ಗ್ರಾಮವನ್ನು ಅವ್ಶೆಜ್ಞಾನಿಕವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿದ್ದು ಇದರಿಂದ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಯಿಂದ ಟ್ರೇಡ್ ಲೈಸೆನ್ಸ್ ಪಡೆಯಲು ಪ್ರಾಧಿಕಾರದ ಎನ್‌ಓಸಿ ಪಡೆಯುವುದು ಕಡ್ಡಾಯವಾಗಿದೆ. ಗ್ರಾಮದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಕ್ರಮಬದ್ದವಲ್ಲದ ಆಸ್ತಿ(11ಬಿ) ಇದ್ದು ಇದಕ್ಕೆ ಪ್ರಾಧಿಕಾರ ಎನ್‌ಓಸಿ ಕೊಡುವುಲ್ಲ. ಇದರಿಂದ ಗ್ರಾಮದ ಸಣ್ಣ ಪುಟ್ಟ ವ್ಯಾಪಾರಸ್ಥರು ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಆಗುತ್ತಿಲ್ಲ. ಚಹಾದಂಗಡಿ, ಪಂಚರ ಅಂಗಡಿ ಸೇರಿ ಇತರೆ ವ್ಯಾಪಾರ ಮಾಡಲು ಜೆಸ್ಕಾಂ ನವರು ಪ್ರಾಧಿಕಾರದ ಎನ್‌ಓಸಿ ಕೇಳುತ್ತಿದ್ದು ಕಳ್ಳತನದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಡೆಸಿಕೊಳ್ಳಬೇಕಿದೆ. ಇದರಿಂದ ಜೆಸ್ಕಾಂನವರು ದಾಳಿ ಮಾಡಿ ಲಕ್ಷಾಂತರ ರೂ.ಗಳ ದಂಡ ಹಾಕುತ್ತಿದ್ದಾರೆ.ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹಾರ ಮಾಡಬೇಕು

-ಕೋಡಿ ನಾಗೇಶ ಗ್ರಾ.ಪಂ. ಮಾಜಿ ಸದಸ್ಯ.

ತುಂಗಭದ್ರಾ ಮಂಡಳಿ ಆಸ್ತಿ ಅತಿಕ್ರಮಣ: ಕಾನೂನು ಕ್ರಮದ ಎಚ್ಚರಿಕೆ: ಕಾರ್ಯದರ್ಶಿ ಓಆರ್.ವಿ. ರೆಡ್ಡ

*ಮೇ ಅಂತ್ಯಕ್ಕೆ 33 ಕ್ರಸ್ಟಗೇಟುಗಳ ಜೋಡಣೆ ಪೂರ್ಣ

ಕಿಷ್ಕಿಂಧವಾಣಿ ಸುದ್ದಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆ ಪ್ರದೇಶವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಜಂಟಿ ಆಸ್ತಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಯಾವುದೇ ಅನಧಿಕೃತ ಅತಿಕ್ರಮಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಓ.ಆರ್. ವಿ. ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಭಾರತೀಯ ಅಧಿಕೃತ ರಹಸ್ಯಗಳ ಕಾಯ್ದೆ 1923 ರ ಅನ್ವಯ ಜಲಾಶಯದ ಪ್ರದೇಶ, ಪವರ್ ಹೌಸ್ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ‘ನಿಷೇಧಿತ ಪ್ರದೇಶ’ ಎಂದು ಘೋಷಿಸಲಾಗಿದೆ. ಹೊಸಪೇಟೆ ವ್ಯಾಪ್ತಿಯ 207.41 ಎಕರೆ ಹಾಗೂ ಅಮರಾವತಿ ವ್ಯಾಪ್ತಿಯ 488.74 ಎಕರೆ ಸೇರಿದಂತೆ ಒಟ್ಟು 696.15 ಎಕರೆ ಪ್ರದೇಶವು ಮಂಡಳಿಯ ಸ್ವಾಧೀನದಲ್ಲಿದೆ. ಇದರಲ್ಲಿ ಗಾರ್ಡನ್, ಹಿನ್ನೀರು, ನಿಶಾನಿ ಕ್ಯಾಂಪ್, ಅಮರಾವತಿ ಕಾಲೋನಿ ಹಾಗೂ ಹೆಚ್.ಇ.ಎಸ್ ಕಾಲೋನಿ ಪ್ರದೇಶಗಳು ಸಹ ಸೇರಿವೆ. ಪ್ರಸ್ತುತ ಮಂಡಳಿಯ ಜಾಗಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇದರಲ್ಲಿ ಧಾರವಾಡ ಹೈಕೋರ್ಟ್ ಪೀಠ ಮತ್ತು ಹೊಸಪೇಟೆಯ ಸಿವಿಲ್ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಉಲ್ಲಂಘನೆಯ ಪ್ರಕರಣಗಳೂ ಸಹ ಸೇರಿವೆ. ಜಲಾಶಯದ ಸುರಕ್ಷತೆ ಮತ್ತು ಮಂಡಳಿಯ ಆಸ್ತಿಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅದರಂತೆ ಮಂಡಳಿಯ ಜಾಗವನ್ನು ಅತಿಕ್ರಮಣ ಕುರಿತ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣ ಇತ್ಯರ್ಥವಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಧೀಶೆ ಜಯಶ್ರೀ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಜೆ ಎಂ ಎಫ್ ಸಿ ನ್ಯಾಯಾಲಯ ಮಾರ್ಚ್ 28ರಂದು ಮಂಡಳಿಯ ಪರ ಆದೇಶ ನೀಡಿ, ತುಂಗಭದ್ರಾ ಯೋಜನಾ ಪ್ರದೇಶದ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮಂಡಳಿಯು ತನ್ನ ವಶಕ್ಕೆ ಪಡೆಯಲು ಹಸಿರು ನಿಶಾನೆ ತೋರಿದೆ. ಆದ್ದರಿಂದ ಮಂಡಳಿಯ ಅನುಮತಿ ಇಲ್ಲದೆ ಈ ಜಾಗಗಳಲ್ಲಿ ಕಟ್ಟಡ ನಿರ್ಮಾಣ ಅಥವಾ ಇನ್ನಿತರೆ ಯಾವುದೇ ಚಟುವಟಿಕೆ ನಡೆಸುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಅಕ್ರಮ ಅತಿಕ್ರಮಣದಾರರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಅವರು ಮನವಿ ಮಾಡಿದರು.

ಮೇ ಅಂತ್ಯಕ್ಕೆ ಎಲ್ಲಾ ಕ್ರಸ್ಟ್ ಗೇಟ್ ಅಳವಡಿಕೆ ಪೂರ್ಣ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ 22 ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದವು ಇದೇ ತಿಂಗಳಲ್ಲಿ ಮುಕ್ತಾಯವಾಗುವ ಭರವಸೆ ಕೂಡ ಇದೆ. ಅದರ ಜೊತೆಗೆ ಚೈನ್ ಅಳವಡಿಕೆ ಕಾರ್ಯವು ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಂಡು ಜೂನ್ ನಲ್ಲಿ ಬರುವ ಮುಂಗಾರು ಮಳೆ ವೇಳೆಗೆ ಡ್ಯಾಮ್ ಸಂಪೂರ್ಣ ಸಿದ್ಧವಾಗಿರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಇತರರು ಇದ್ದರು